top of page

ಕಲ್ಲರಳಿ ಗಿಡವಾಗಿ [ ಚಿತ್ರಾಲೋಚನೆ...5]


ಕಲ್ಲನಲಿ ನೀರುಂಟು ಬಲ್ಲವರು ಹೇಳುವರು ಅಲ್ಲಿಯೇ ಅರಳಿದೆ ಅರಳಿ ಗಿಡವೊಂದು ಮಲ್ಲನಂತೆಯೆ ಬಿಗಿ ಪಟ್ಟು ಹಾಕಿ ಎಲ್ಲರೂ ನೋಡುವಂದದಿ ಬದುಕಿ ಬಂದಿಹುದು ಅಂದು ಕದಲದಂತಿರುವ ಕಲ್ಲ ಚಪ್ಪಡಿಯ ಸಂದಿಯಲಿ ಅಡಗಿ ಕುಳಿತಿಹ ಬೀಜ ಬಂಧನವ ಹರಿದುಕ್ಕಿ ಚಂದದಿ ಬೆಳದಿಹುದು ಮಂದಮಾರುತ ಬೀಸಲು ತಲೆ ಬಾಗುತ ಬೆಳೆದಂತೆ ಅಶ್ವತ್ಥ ಒಡೆಯುವುದು ಚಪ್ಪಡಿಯು ಕೀಳುವರು ಕಳೆಯಂತೆ ಅದು ಬದುಕದಂತೆ ಮಳೆಯ ನೀರನೆ ಕುಡಿದು ಬಾಡಿ ಎತ್ತರ ಬೆಳೆದು

ಬಾಳಿ ಬದುಕುವೆನೆಂದರೂ ನೋಯಿಸುವರು ಅತ್ತ ಬೇರೆ ಗಿಡವನು ಬೆಳೆಸಿ ಕಲ್ಲ ಕಟ್ಟೆಯ ಮಾಡಿ ಹೆತ್ತು ಮಕ್ಕಳನು ನಾಲ್ಕಾರು ಹೊತ್ತು ಸಾಕಲಿ ತಾನೆಂದು ಸುತ್ತು ಕಟ್ಟೆಯ ಕಟ್ಟಿ ಚಂದ ಮೆಟ್ಟಿಲನಿಟ್ಟು ಹತ್ತು ಸುತ್ತನು ಹೊಡೆದು ಕೈಮುಗಿವರು

✍ ಉಪಾಧ್ಯಾಯ, ಧಾರೇಶ್ವರ :


ಶ್ರೀ ಚಂದ್ರಶೇಖರ ಉಪಾಧ್ಯಾಯರು ಮೂಲತಃ ಕುಮಟಾ ತಾಲೂಕಿನ ಧಾರೇಶ್ವರದವರು. ಬ್ಯಾಂಕಿನಲ್ಲಿ ಹಿರಿಯ ಪ್ರಬಂಧಕರಾಗಿ ಸೇವೆ ಸಲ್ಲಸಿ ವಿಶ್ರಾಂತ ಜೀವನ ನಡೆಸುತ್ತಿರುವ ಇವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ವಿಶೇಷವಾಗಿ ಕಾವ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರ ಮೊದಲ ಕವನ ಸಂಕಲನ "ಅರವತ್ತರ ಅರಳು" 2019 ರಲ್ಲಿ ಪ್ರಕಟಗೊಂಡಿದೆ. ಅಂತರ್ಜಾಲದಲ್ಲಿ ಹಲವಾರು ಗ್ರೂಪ್ ಹಾಗೂ ಬ್ಲಾಗ್ ಗಳಿಗೆ ಕವನ ಬರೆಯುವುದು ಇವರ ಪ್ರಸ್ತುತ ಹವ್ಯಾಸ. 

29 views0 comments
bottom of page