top of page

ಕಬೀರ ಕಂಡಂತೆ... ೮೪

ಋಣ ಸಂದಾಯ ಬದುಕಿನ ಉಸಿರಾಗಲಿ..

ಕಬೀರ ಹರಿ ಸಬಕೂಂ ಭಜೆ, ಹರಿಕೂಂ ಭಜೆ ನ ಕೋಯಿ

ತಬತಕ ಆಸ ಶರೀರಕಿ, ತಬತಕ ದಾಸ ನ ಹೋಯಿ


ಈ ಭೂಮಿಯ ಮೇಲಿರುವ ಎಲ್ಲ ಜೀವಜಂತುಗಳ ಸಲುವಾಗಿ ಭಗವಂತ ನಿಸರ್ಗವನ್ನು ಸೃಷ್ಟಿಸಿದ್ದಾನೆ. ಮನುಷ್ಯನ ಹೊರತಾಗಿ ಇತರೆ ಎಲ್ಲ ಜೀವಿಗಳು ತಮ್ಮ ಅವಶ್ಯಕತೆ ಇದ್ದಷ್ಟೇ ನಿಸರ್ಗವನ್ನು ಉಪಯೋಗಿಸುತ್ತ ಒಂದು ರೀತಿಯಲ್ಲಿ ನಿಸರ್ಗದ ಕಾಳಜಿ ವಹಿಸುತ್ತವೆ ಎಂದರೆ ತಪ್ಪಲ್ಲ. ಆದರೆ ಭಗವಂತ ಸುಲಭವಾಗಿ ಕರುಣಿಸಿದ ನಿಸರ್ಗ ಸಂಪತ್ತನ್ನು ಮನುಷ್ಯ ಮನಬಂದಂತೆ ಸೂರೆಗೈಯುತ್ತ

ಪ್ರಕೃತಿಯ ವಿನಾಶಕ್ಕೆ ಕೈಹಾಕಿದ್ದಾನೆ. ಬದುಕಿನಲ್ಲಿ ಎಲ್ಲವನ್ನೂ ನೀಡುವ ದೇವರನ್ನು, ಜನ್ಮ ನೀಡಿದ ತಂದೆ-ತಾಯಿಯರನ್ನು ಮರೆತಂತೆ ವರ್ತಿಸುವ ಮನುಷ್ಯ, ತನ್ನ ಸ್ವಾರ್ಥ ಬುದ್ಧಿಯಿಂದ ವಿನಾಶದೆಡೆಗೆ ಹೆಜ್ಜೆ ಇಡುತ್ತಿದ್ದಾನೆ. ಕೃತಜ್ಞತಾ ಭಾವವಿಲ್ಲದೆ ಎಲ್ಲರನ್ನು ಎಲ್ಲವನ್ನು ಧಿಕ್ಕರಿಸುತ್ತ ನಡೆಯುವ ಮನುಷ್ಯನ ಸರ್ವಾಧಿಕಾರಿ ಮನೋಭಾವನೆ ಇಂದಿನ ಎಲ್ಲ ಅನಾಹುತ ಗಳಿಗೆ ಕಾರಣವಾಗಿದೆ.


ಸಂತ ಕಬೀರರು,

ಕಬೀರ ದೇವ ರಕ್ಷಿಸುವ ಎಲ್ಲರನು, ಯಾರೂ ದೇವನ ಭಜಿಸರು |

ಭೌತಿಕ ಆಸೆ ತೀರುವ ತನಕ, ದಾಸರು ಆಗರು ಯಾರು ||

ಎಂದಿದ್ದಾರೆ. ದೇವರು, ಎಲ್ಲರ ಬೇಕು, ಬೇಡಗಳ ಕಡೆಗೆ ಲಕ್ಷ ವಹಿಸುವದರ ಮೂಲಕ ಅನುಗ್ರಹಿಸಿದರೆ, ಮನುಷ್ಯ ಹುಟ್ಟಿಸಿ, ಸಲಹುವ ದೇವರನ್ನೇ ಮರೆತು ದಾನವನಂತೆ ವರ್ತಿಸುತ್ತಾನೆ.‌ ಲೌಕಿಕವಾದ ಸುಖೋಪಭೋಗಗಳಲ್ಲಿ ಮೈಮರೆಯುವ ಮನುಷ್ಯ ತ್ಯಾಗ ಮತ್ತು ಸಮರ್ಪಣಾ ಭಾವಗಳನ್ನೇ ಮರೆತು ನಡೆಯುತ್ತಿರುವದು ದುರದೃಷ್ಟಕರ ಎಂಬುದು ಸಂತ ಕಬೀರರ ಅಭಿಪ್ರಾಯ.


ಸ್ವಂತದ ಜೀವನದ ಜೊತೆಗೆ ಇತರೆ ಜವಾಬ್ದಾರಿಗಳ ಬಗ್ಗೆಯೂ ಕಾಳಜಿ ವಹಿಸುವದು ಅಷ್ಟೇ ಅಗತ್ಯ. ಹೀಗಾದಾಗ ಮಾತ್ರ ಆತ ಸ್ವಾರ್ಥಬುದ್ಧಿ ಮತ್ತು ಭೌತಿಕವಾದದ ಕಡೆಗೆ ಗಮನ ಕೊಡುವದು ಕಡಿಮೆ -ಯಾದೀತು. ನಮಗಾಗಿ ತಮ್ಮ ಆಯುಷ್ಯವನ್ನೇ ಸವೆಸುವ ತಂದೆ-ತಾಯಿಯರ ಬಗ್ಗೆ ಕಾಳಜಿ ವಹಿಸುವದು ಮನುಷ್ಯನ ನೈತಿಕ ನ ಕರ್ತವ್ಯವಾಗಿದೆ. ಅಲ್ಲದೇ ಈ ಕುರಿತು ಕೃತಜ್ಞತಾ ಭಾವದಿಂದ ಇದ್ದಾಗ ದೊರೆಯುವ ಶಾಂತಿ, ಸಮಾಧಾನ, ಆನಂದಗಳಿಗೆ ಪಾರವೇ ಇರಲಾರದು. ದೇವಋಣ, ಋಷಿಋಣ, ಪಿತೃಋಣಗಳು ಮನುಷ್ಯನ ಮೇಲೆ ಸದಾ ಇದ್ದು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುವದರಲ್ಲಿಯೇ

ಮನುಷ್ಯನ ಶ್ರೇಯಸ್ಸು ಅಡಗಿದೆ.


ಅಂತರಂಗದ ದನಿಯ ಕೇಳದವ ಬಲು ಕಿವುಡ

ಮಾತಾ-ಪಿತರ ವಾರ್ಧಕ್ಯದಿ ನೋಡದವ ಕುರುಡ |

ಇತರರ ನೋವಿಗೆ ಬರಲಾಗದವ ಹೆಳವ ನೊ

ಮತಿಗೆಟ್ಟು ವಿಕಲಾಂಗನಾಗದಿರು - ಶ್ರೀವೆಂಕಟ ||


ಶ್ರೀರಂಗ ಕಟ್ಟಿ ಯಲ್ಲಾಪುರ.

3 views0 comments
bottom of page