top of page

ಕಬೀರ ಕಂಡಂತೆ..೭೨

ಆಪತ್ತಿಗಾದವನೆ ನಿಜ ಬಂಧು...


ಸಜನ ಸನೇಹಿ ಬಹುತ ಹೈ, ಸುಖ ಮೆ ಮಿಲೆ ಅನೇಕ|

ಬಿಪತ್ತಿ ಪಡೆ ದುಃಖ ಬಾಟಿಯೆ, ಸೊ ಲಾಖನ್ ಮೆ ಏಕ||


"ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ" ಎಂಬ ಮಾತಿನಂತೆ ವ್ಯಕ್ತಿಯ ಸುಖದ ದಿನಗಳಲ್ಲಿ, ಆತನ ಭರಾಟೆಯ ಕಾಲದಲ್ಲಿ ಸಂಬಂಧ ಇರದವರೂ ಹೊಸ ಸಂಬಂಧಗಳನ್ನು ಕಟ್ಟಲು ಬರುತ್ತಾರೆ. ಹಿಂದೆಂದೂ ಕಾಣದ ಜನರೂ ಸ್ನೇಹ ಬೆಸೆಯಲು ಹಾತೊರೆಯುತ್ತಾರೆ‌. ಬೆಲ್ಲಕ್ಕೆ ಮುತ್ತಿಕೊಳ್ಳುವ ಇರುವೆಗಳಂತೆ ಇಂಥವರು ಹಲವರು. ಆದರೆ ಒಂದು ವೇಳೆ ಇದೇ ವ್ಯಕ್ತಿಯ ಪರಿಸ್ಥಿತಿ ಹದಗೆಟ್ಟು ಹೋದರೆ ಹತ್ತಿರದ ಸಂಬಂಧಿಗಳು, ಬಂಧು-ಮಿತ್ರರು ಗೊತ್ತಿಲ್ಲದ ಹಾಗೆ ಅದೃಶ್ಯರಾಗುತ್ತಾರೆ! ಮುಳುಗುತ್ತಿರುವ ಹಡಗಿನಿಂದ ದೂರ ಹೋಗಲು ಎಲ್ಲರೂ ಪ್ರಯತ್ನಿಸುವವರೆ. ಇದು ಸಮಾಜದಲ್ಲಿ ಸಾಮಾನ್ಯವಾಗಿ ಕಂಡುಬರುವ ಮನೋಭಾವ. ಆದರೆ ಇದಕ್ಕೆ ಹೊರತಾಗಿ ಕಷ್ಟದ ಸಮಯದಲ್ಲೂ ಬಿಡದೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಜನರಿರುತ್ತಾರೆ. ಆದರೆ ಇಂಥವರು ಮಾತ್ರ ಅತಿ ವಿರಳ.

ಸಂಬಂಧಗಳ ಬಗ್ಗೆ ಗುರು-ಹಿರಿಯರು, ಸಾಧು-ಸಂತರು ಕಾಲಕಾಲಕ್ಕೆ ಮಾರ್ಗದರ್ಶನ ಮಾಡುತ್ತಲೇ ಬಂದಿದ್ದಾರೆ. ಸಂತ ಕಬೀರರು ಮೇಲಿನ ದೋಹೆಯಲ್ಲಿ,

ಬಂಧು-ಮಿತ್ರರು ಬಹಳ, ಸುಖ-ಸಂತಸದಿ ಅನೇಕರು|

ವಿಪತ್ತಿನಲಿ ಜೊತೆ ನೀಡುವ ಜನರು, ಲಕ್ಷಕ್ಕೆ ಒಬ್ಬರು||

ಎಂದು ಹೇಳುತ್ತ ಜನರ ಮನೋಭಾವದ ಮೇಲೆ ಬೆಳಕು ಚೆಲ್ಲಿದ್ದಾರೆ. ಕಷ್ಟದ ದಿನಗಳಲ್ಲಿ ದೂರವಾಗುವ ಬಂಧು- ಮಿತ್ರರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಜನರ ಮನಸ್ಥಿತಿಗೆ ನಕ್ಕು ಮುನ್ನಡೆಯುವದೇ ಇದಕ್ಕಿರುವ ಉತ್ತಮ ಉಪಾಯ. ದುಃಖ ಸಂಕಟದ ದಿನಗಳು ಬಹಳ ದಿನ ಇರಲಾರವು.‌ ಸುಖ, ದುಃಖಗಳು ಹಗಲು-ರಾತ್ರಿಯ ತರಹ. ಸುಖದ ನಂತರ ದುಃಖ ಮತ್ತು ದುಃಖದ ನಂತರ ಸುಖ ಇವು ಕಾಲಚಕ್ರದ ಗತಿಯ ಸಂಕೇತಗಳು. ಸುಖದ ಕಾಲವನ್ನು ಯಾವ ರೀತಿ ಅನುಭವಿಸಬೇಕು ಎಂಬುದರ ಬಗ್ಗೆ ಯೋಜನೆ ಮಾಡದೇ ಹೋದರೂ ತೊಂದರೆಯಿಲ್ಲ. ಆದರೆ ಕಷ್ಟದ ದಿನಗಳನ್ನು ಎದುರಿಸುವ ಬಗ್ಗೆ ತಯಾರಿ ನಡೆಸಿದಷ್ಟೂ ಕಡಿಮೆ. ಯಾಕೆಂದರೆ, ಈ ಸಂದರ್ಭದಲ್ಲಿ ಮನುಷ್ಯನನ್ನು ಕಾಡುವ ಒಂಟಿತನ ಮತ್ತು ಒಬ್ಬಂಟಿಯಾಗಿ ಜೀವನದ ಸವಾಲು -ಗಳನ್ನು ಎದುರಿಸುವ ಬಗ್ಗೆ ತಯಾರಿ ನಡೆಸುವದು ಅವಶ್ಯ. ಕಷ್ಟ ಬನಮದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸ್ಥಿತಪ್ರಜ್ಞ -ನಾಗಿ ಬದುಕನ್ನು ಎದುರಿಸುವ ಮನೋಭಾವವನ್ನು ರೂಢಿಸಿಕೊಳ್ಳುವದು ಅಪೇಕ್ಷಣೀಯ.

ಸುಪ್ಪತ್ತಿಗೆ ಭೋಗವಿರೆ ಬಂಧುಗಳ ಸಂತೆ

ತಪ್ಪಿ ಬೀದಿ ಪಾಲಾದರೆ ಯಾರಿಲ್ಲದ ಚಿಂತೆ|

ಒಪ್ಪತ್ತಿನ ಗಂಜಿ ಲೇಸು ಹಂಗಿನರಮನೆಗಿಂತ

ಆಪತ್ತಿಗಾದವನೆ ಬಂಧು - ಶ್ರೀವೆಂಕಟ||



ಶ್ರೀರಂಗ ಕಟ್ಟಿ ಯಲ್ಲಾಪುರ

2 views0 comments
bottom of page