top of page

ಕಬೀರ ಕಂಡಂತೆ ೪

ಕಾಲನ ಎದುರು ಎಲ್ಲರೂ ಸರಿಸಮ..


ಆಯೇ ಹೈ ತೋ ಜಾಯೇಂಗೆ, ರಾಜಾ ರಂಕ ಫಕೀರ/

ಏಕ ಸಿಂಹಾಸನ ಚಡೀಚಲೆ, ಏಕ ಬಂಧೆ ಜಾಯೆ ಜಂಜೀರ//


ಜೀವನದ ಪಯಣಕ್ಕೆ ಅಂತ್ಯವೆನ್ನುವದು ಇದ್ದು, ಜನನ- ಮರಣದ ಮೇಲಾಟದಲ್ಲಿ ಕೊನೆಗೆ ಕಾಲನ ಕೈ ಮೇಲಾಗಿ ಮೃತ್ಯು ಜಯದ ಕೇಕೆ ಹಾಕುವದು ಸರ್ವ ವಿದಿತ. ಅನಿಶ್ಚಿತಗಳ ತೂಗುಯ್ಯಾಲೆಯ ಬದುಕಿಗೆ ಮೃತ್ಯು ಮಾತ್ರ ಪೂರ್ಣ ವಿರಾಮ ಹಾಕಬಲ್ಲದು! ಸರ್ವಶಕ್ತ ಕಾಲನ ಬಲದಿಂದ ನಮ್ಮಲ್ಲಿ ಭುಗಿಲೆದ್ದು ನಿಂತ ಅಭಿಮಾನ, ಅಹಂಕಾರ, ಅನುಮಾನ, ವೈಚಾರಿಕ ಸಂಘರ್ಷ ಗಳು ಇನ್ನಿಲ್ಲದಂತೆ ಆರಿ ತಣ್ಣಗಾಗುತ್ತವೆ.

ಬದುಕು ಸೋಲು- ಗೆಲುವುಗಳ, ಜಯಾಪಜಯ ಗಳ ನಿರಂತರ ಯಾತ್ರೆ. ಆದರೆ ಏರಿಳಿತಗಳ ಮಧ್ಯೆಯೂ ಮನುಷ್ಯ ಯಾವ ರೀತಿ ಬದುಕು ನಡೆಸುತ್ತಾನೆ ಎನ್ನುವದು ಬಹಳ ಮುಖ್ಯ. ಕೇವಲ ಉಸಿರಿರುವವರೆಗೆ ಬದುಕುವದಲ್ಲ, ಉಸಿರು ನಿಂತ ಮೇಲೂ ಜನಮಾನಸದಲ್ಲಿ ಸ್ಥಾನ ಗಳಿಸಿದ ವ್ಯಕ್ತಿ ಯಶಸ್ವಿ ಎನಿಸಬಲ್ಲ.


ಮೇಲೆ ಉಲ್ಲೇಖಿಸಿದ ದೋಹೆಯಲ್ಲಿ ಸಂತ ಕಬೀರ ಬದುಕಿನ ಅಂತಿಮ ವಾಸ್ತವದ ಮೇಲೆ ಬೆಳಕು ಚೆಲ್ಲುತ್ತಾನೆ.

"ರಾಜನಾದರೇನು, ಫಕೀರನಾದರೇನು ಹೋಗಲೇಬೇಕೊಂದು ದಿವಸ/

ಸಿಂಹಾಸನದ ಮೇಲೋ, ಸರಪಳಿ ಬಿಗಿದೋ ಅಷ್ಟು ಮಾತ್ರ ವ್ಯತ್ಯಾಸ//

ಬಡವ, ಬಲ್ಲಿದ, ಸಾಧು, ಸಂತರೆಲ್ಲರಿಗೂ ಮರಣ ಕಟ್ಟಿಟ್ಟ ಬುತ್ತಿ. ಯಾವುದೇ ಭೇದ-ಭಾವವಿಲ್ಲದೇ ಎಲ್ಲರನ್ನೂ ಅಪ್ಪುವ ಮೃತ್ಯು, ಸಮಾನತೆಯ ಸಂದೇಶ ಸಾರುತ್ತದೆ. ಹೀಗಿದ್ದೂ ಬದುಕಿರುವಾಗ, ಭೇದ- ಭಾವದ ಕ್ಲೇಶವೇಕೆ? ಎಂಬುದೇ ಕಬೀರನ ಪ್ರಶ್ನೆ. ರಾಜನಿಗೂ, ಫಕೀರನಿಗೂ ಹೋಗುವದು ಇದ್ದೇ ಇದೆ. ಆದರೆ ಗತಿಸಿದ ಮೇಲೂ ಕೆಲವರು ತಮ್ಮ ಸತ್ಕರ್ಮಗಳಿಂದ ಜನರ ಹೃದಯದಲ್ಲಿ ಉನ್ನತ ಸ್ಥಾನ ಗಳಿಸಿದರೆ, ಇನ್ನು ಕೆಲವರು ಕುಕರ್ಮಗಳಿಂದ ಪಾಪಕೂಪದ ಸರಪಳಿಯಲ್ಲಿ ಬಂಧಿತರಾಗಿ ಮರಣಹೊಂದಬಹುದು. ಹಾಗಾಗಿ ಬದುಕಿರುವಾಗ ಒಳ್ಳೆಯ ಕರ್ಮ ಮಾಡಿ ಎಂಬುದು ಕಬೀರನ ಆಶಯ.


ಜೀವನದಲ್ಲಿ ಎರಡು ಶ್ರೇಷ್ಠ ದಿನಗಳಿವೆ. ಒಂದು ಹುಟ್ಟಿದ ದಿನ ಮತ್ತು ಇನ್ನೊಂದು ನಾವು ಹುಟ್ಟಿದ್ದು ಏಕೆ ಎಂದು ಗೊತ್ತಾದ ದಿನ. ಇದನ್ನು ಅರ್ಥ ಮಾಡಿಕೊಂಡು ನಡೆಯುವಲ್ಲಿಯೇ ಜೀವನದ ಸಾರ್ಥಕ್ಯ ಅಡಗಿದೆ. " ಶರಣರ ಗುಣ ಮರಣದಲ್ಲಿ ಕಾಣು" ಎಂಬ ವಂತೆ, ರಾಜನಾದವನೂ ತನ್ನ ಕುಕೃತ್ಯ ಗಳಿಂದ ಜನಮನದಲ್ಲಿ ಸ್ಥಾನಭೃಷ್ಟನಾಗಬಹುದು.

ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ, ಅದೆಷ್ಟು ಸಾಮ್ರಾಜ್ಯಗಳು, ಸಾಮ್ರಾಟರು ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದಾರೆ ಎನ್ನುವದು ತಿಳಿದೀತು.ಆಸ್ತಿ, ಅಂತಸ್ತು, ಅಧಿಕಾರ ಎಲ್ಲವೂ ನಶ್ವರ. ಮೃತ್ಯುವಿನ ನಂತರ ಯಾವುದೇ ಸಂಪತ್ತು ನಮ್ಮೊಂದಿಗೆ ಬರಲಾರದು. ಹಾಗಾಗಿ ಭೂಮಿಯ ಮೇಲೆ ಬದುಕಿರುವಾಗ, ಸುಜ್ಞಾನ, ಸತ್ಕಾರ್ಯ ಗಳಿಂದ ಚಿರಸ್ಥಾಯಿಯಾಗಿ ಮನುಷ್ಯ ಇರಬಲ್ಲ.


ಜನನ-ಮರಣದ ಕಾಲಚಕ್ರವೀ ಜೀವನ

ಜನನ ಎಂತಿದ್ದರೇನು? ಚೊಕ್ಕವಿರು ಅನುದಿನ/

ಧನಿಕ- ಬಡವರೆನ್ನದೆ ಹೋಗುವರು ಮಸಣಕ್ಕೆ

ಇನಿತು ತರತಮವಿಲ್ಲ - ಶ್ರೀವೆಂಕಟ//


-ಶ್ರೀರಂಗ ಕಟ್ಟಿ ಯಲ್ಲಾಪುರ.

7 views0 comments
bottom of page