top of page

ಕಬೀರ ಕಂಡಂತೆ..೧೦ ಮನುಷ್ಯ ಜನ್ಮದ ಮೌಲ್ಯ ಮರೆಯದಿರು..!

ಆಯಾಥಾ ಕಿಸ ಕಾಮಕೊ, ತೂ ಸೋಯಾ ಚಾದರ ತಾನ/ ಸುರತ ಸಂಭಾಲ ಏ ಗಾಫಿಲ, ಅಪನಾ ಆಪ ಪೆಹಚಾನ// " ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ" ಎಂದು ದಾಸರು ಹೇಳಿದ್ದಾರೆ. ಪ್ರಪಂಚದ ೮೪ ಲಕ್ಷ ಜೀವರಾಶಿಗಳಲ್ಲಿ ಮಾನವ ಯೋನಿ ಅತ್ಯಂತ‌ ಶ್ರೇಷ್ಠವಾಗಿದ್ದು ಈ ಜನ್ಮ ಪಡೆಯಲು ಪೂರ್ವ ಜನ್ಮದ ಸುಕೃತವೇ ಕಾರಣ ಎಂದು ನಮ್ಮ ಧರ್ಮಗ್ರಂಥಗಳು ಸಾರಿ ಸಾರಿ ಹೇಳುತ್ತವೆ. ಮಾನವರಾಗಿ ಏನು ಕಾರ್ಯ ಸಾಧಿಸಬೇಕಾಗಿದೆ ಎಂಬುದನ್ನು ಮರೆತು ಅನೇಕರು ನಿಷ್ಕ್ರಿಯರಾಗಿ ಇರುವದನ್ನು ಎಲ್ಲೆಡೆ ಕಾಣುತ್ತೇವೆ. ಮನುಷ್ಯನಿಗೆ ಮನುಷ್ಯ ಸಂಬಂಧಗಳನ್ನು ನಿರ್ವಹಿಸುವದರ ಜೊತೆಗೆ ಅದಕ್ಕೆ ಪೂರಕವಾದ ಕರ್ತವ್ಯಗಳ ಪಾಲನೆ ಅತ್ಯಂತ ಅವಶ್ಯ. ಆದರೆ ಅನೇಕರು ವ್ಯರ್ಥ ಕಾಲಹರಣ ಮಾಡುತ್ತ, ಆಲಸಿಗಳಾಗಿ ಕುಟುಂಬ ಮತ್ತು ಸಮಾಜಕ್ಕೆ ಭಾರವಾಗಿರುತ್ತಾರೆ. ಜೀವನವನ್ನು ಸುಂದರವಾಗಿಸಲು ಪ್ರಯತ್ನ ನಡೆಸುವದನ್ನು ಬಿಟ್ಟು ಕೆಲವರು ಇತರರ ಮೇಲೆ, ಪರಿಸ್ಥಿತಿಯ ಮೇಲೆ, ಕೊನೆಗೆ ತಮ್ಮ ಹಣೆಬರಹದ ಮೇಲೆ ದೋಷ ಹೊರಿಸುತ್ತ ತಿರುಗುತ್ತಾರೆ. ಇಂಥವರಿಂದ ನಕಾರಾತ್ಮಕ ಸಂದೇಶ ಬಿತ್ತರ ಆಗುತ್ತದೆಯೇ ಹೊರತು ಸಮಾಜಕ್ಕೆ ಖಂಡಿತ ಪ್ರಯೋಜನ ಆಗಲಾರದು. ಕುರುಕ್ಷೇತ್ರದ ರಣಾಂಗಣದಲ್ಲಿ ಶ್ರೀಕೃಷ್ಣ ಪರಮಾತ್ಮ, ಅರ್ಜುನನಿಗೆ, "ನಿನಗೆ ಕ್ಲೈಬ್ಯ ಆವರಿಸಿದೆ, ಅದರಿಂದ ಹೊರಬಂದು ಕ್ಷತ್ರಿಯ ಧರ್ಮ ಪಾಲಿಸು" ಎಂಬ ಆದೇಶ ನೀಡುತ್ತಾನೆ. ಸ್ವಾಮಿ ವಿವೇಕಾನಂದರು " ಉತ್ತಿಷ್ಠ, ಜಾಗೃತ, ಪ್ರಾಪ್ಯವರಾನ್ನಿ ಬೋಧಿತ" ಅಂದರೆ 'ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ' ಎಂದು ಸಮಾಜ ವನ್ನು ಎಚ್ಚರಿಸುವ ಸಂದೇಶ ನೀಡಿದ್ದಾರೆ. ಮೇಲಿನ ದೋಹೆಯಲ್ಲಿ ಸಂತ ಕಬೀರರು, "ಬಂದಿರುವ ಉದ್ದೇಶ ಮರೆತು ಮಲಗಿರುವೆಯಲ್ಲ ಹೊದ್ದು ಕಂಬಳಿ/  ಏ ಮೂರ್ಖ ಅರಿವು ಸಂಭಾಳಿಸಿಕೊ, ಮೊದಲು ನಿನ್ನ ನೀ ತಿಳಿ// ಎಂದು ಎಚ್ಚರಿಸಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಅವರದ್ದೇ ಆದ ಬುದ್ಧಿಮತ್ತೆ, ಕಾರ್ಯಕ್ಷಮತೆ, ವೈಚಾರಿಕ ದೃಷ್ಟಿಕೋನಗಳು ಇರುತ್ತವೆ. ನಮ್ಮಲ್ಲಿ ಅಂತರ್ಗತವಾಗಿರುವ ಶಕ್ತಿಯನ್ನು ಅರಿತು ಸತ್ಕಾರ್ಯ ಮಾಡುವದರ ಮೂಲಕ ಸಮಾಜ ಕಟ್ಟುವ ಕರ್ತವ್ಯ ಪೂರೈಸಿದರೆ, ನಾವು ಮನುಷ್ಯ ಜನ್ಮ ಪಡೆದಿದ್ದು ಸಾರ್ಥಕವಾದೀತು. ಮಾನವ ಜನ್ಮವಿದು ಸತ್ಕರ್ಮದ ಪುಣ್ಯಫಲ  ಮನುಕುಲದ ದುರಿತವ ನೋಡು ಹಿಂತಿರುಗಿ/ ಮನವ ಸಿಂಗರಿಸು ಮಾನವೀಯ ಗುಣದಿಂದ ಮಾನವನಾಗು ಬದುಕಿನಲಿ - ಶ್ರೀವೆಂಕಟ//       ಶ್ರೀರಂಗ ಕಟ್ಟಿ ಯಲ್ಲಾಪುರ.



11 views0 comments
bottom of page