top of page

ಕಿರು ಯೋಜನೆಗಳ ಅಗತ್ಯ

ಪೇಟೆ ಪಟ್ಟಣಗಳಲ್ಲಿ ಅವರವರ ಮನೆ ಮಹಡಿ ಮೇಲೆ ತಾರಸಿ ಕೃಷಿಮಾಡುವುದರ ಮೂಲಕ ತರಕಾರಿಗೆ ಸಂಬಂಧಿಸಿದಂತೆ ಮತ್ತು ಸೌರ ಪ್ಯಾನೆಲ್ ಗಳನ್ನು ಅಳವಡಿಸಿ ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ ಸ್ವಾವಲಂಬನೆ ತಂದುಕೊಳ್ಳಲು ಸಾಧ್ಯ. ಇಂತಹ ವಿಷಯಗಳಲ್ಲಿ ಸರಕಾರ ಜನರಿಗೆ ಮಾಹಿತಿ – ಶಿಕ್ಷಣ ಕೊಡುವ ಅಗತ್ಯವಿದೆ. ಆಗ ಬೇರೆ ಮೂಲಗಳಿಗೆ ಬೀಳುವ ಒತ್ತಡ ಸ್ವಲ್ಪ ಕಡಿಮೆಯಾಗಬಹುದು.


ಕೃಷಿ ಇಲಾಖೆ ಮತ್ತು ವಿದ್ಯುಚ್ಛಕ್ತಿ ಇಲಾಖೆಗಳು ನೇರವಾಗಿ ಇದಕ್ಕೆ ಸಂಬಂಧಿಸಿದವಾಗಿದ್ದು, ಈ ಎರಡು ಇಲಾಖೆಗಳು ಸೂಕ್ಷ್ಮ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬಹುದೆಂದು ತೋರುತ್ತದೆ.


ಪೇಟೆ ಪಟ್ಟಣಗಳಲ್ಲಿರುವ ಸಾವಿರಾರು ಮನೆಗಳಲ್ಲಿ ಆಸಕ್ತಿ ಇರುವವರನ್ನು ಆಯ್ದು ಒಕ್ಕೂಟಗಳನ್ನು ರಚಿಸಿಕೊಂಡು ತಾರಸಿಯಲ್ಲಿ ತರಕಾರಿ ಕೃಷಿಮಾಡಲು ಪ್ರೇರೇಪಿಸಬಹುದು. ಇಲಾಖೆ ಬೀಜ ಗೊಬ್ಬರಗಳನ್ನು ಉಚಿತವಾಗಿ ಕೊಟ್ಟು ಉತ್ತೇಜಿಸಬಹುದು. ಮನೆಗೆ ಬೇಕಾದ ತರಕಾರಿ ಬೆಳೆಯುವುದರೊಂದಿಗೆ ಮನೆಯ ಒಳಭಾಗ ತಂಪಾಗಿಯೂ ಇರುತ್ತದೆ.


ಸೌರ ವಿದ್ಯುತ್ ಉತ್ಪಾದನೆ ಮಾಡಿದರೆ ಇತರೇ ಮೂಲಗಳ ಮೇಲೆ ಬೀಳುವ ಒತ್ತಡ ಸಹಜವಾಗಿಯೇ ಕಡಿಮೆಯಾಗುತ್ತದೆ. ಹಗಲಿಡೀ ಅಗಾಧ ಪ್ರಮಾಣದ ಬಿಸಿಲು ಬೀಳುವುದರಿಂದ ಮನೆಯ ಉಪಯೋಗಕ್ಕೆ ಬೇಕಾದ ವಿದ್ಯುತ್ ಅನ್ನು ಆಯಾ ಮನೆಯಲ್ಲೇ ಉತ್ಪಾದಿಸಬಹುದು.


ಆಸಕ್ತಿ ಮತ್ತು ಅನುಕೂಲ ಇರುವವರು ಆಲಂಕಾರಿಕ ಮೀನುಗಳ ಉತ್ಪಾದನೆಗೆ (ಅಕ್ವೇರಿಯಂ ತಯಾರಿಸಲು) ಮನ ಮಾಡಬಹುದು. ನಗರದ ಹೊರವಲಯದಲ್ಲಿ ಸ್ವಲ್ಪ ಹಿತ್ತಿಲು ಇರುವವರು ಮಲ್ಲಿಗೆ ಕೃಷಿ ಮಾಡಬಹುದು. ಇವೆಲ್ಲ ಉದ್ಯೋಗ ಮತ್ತು ಸ್ವಾವಲಂಬನೆಯ ಬದುಕಿಗೆ ನೆರವಾಗುತ್ತವೆ. ಇಂತಹ ಕಿರು ಯೋಜನೆಗಳು ಸರಕಾರದ ಬಳಿ ಇಲ್ಲವೆಂದಲ್ಲ. ಆದರೆ ಅವು ಅನುಷ್ಠಾನಗೊಳ್ಳುತ್ತಲಿಲ್ಲ.


ಇದಕ್ಕೆ ಶಿಕ್ಷಣ ಮತ್ತು ತರಬೇತಿ ಕೊಡಬೇಕಾಗಬಹುದು; ಆರಂಭದಲ್ಲಿ ಜನರ ಮನವೊಲಿಸಬೇಕಾಗಿ ಬರಬಹುದು. ಸಬ್ಸಿಡಿ, ಹಣಕಾಸು ನೆರವು, ಮಾರ್ಗದರ್ಶನ ಮತ್ತು ಇನ್ನಿತರ ಕೆಲವು ಪೂರಕ ಉತ್ತೇಜನಗಳನ್ನು ಸರಕಾರ ನೀಡಬಹುದು. ಮಾಹಿತಿ – ತಿಳಿವಳಿಕೆ ಹೆಚ್ಚಾಗುತ್ತಿದ್ದಂತೆ ನಿಧಾನವಾಗಿ ಇತರರೂ ಆ ಯೋಜನೆಗೆ ಸೇರ್ಪಡೆಗೊಳ್ಳುತ್ತಾರೆ.


ಇಸ್ರೇಲಿಗರಂತೆ ಕಡಿಮೆ ಜಾಗದಲ್ಲಿ ಹೆಚ್ಚು ಸಂಪನ್ಮೂಲಗಳನ್ನು ಉತ್ಪಾದಿಸಲು ನಾವು ಕಲಿಯಬೇಕು. ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ತಾರಸಿ ಮೇಲೆ ಗಿಡಗಳಿಗೆ ಆಗುವ ಬಿಸಿಲಿನ ತೀವ್ರತೆಯನ್ನು ತಗ್ಗಿಸಲು ಈಗ ಶೇಡ್ ನೆಟ್ ಲಭ್ಯವಿದೆ. ಇದರಿಂದ ಮನೆಯೊಳಗೆ ಕೂಡ ಬಿಸಿಲಿನ ಝಳ ಕಡಿಮೆಯಾಗುತ್ತದೆ.


ಜನರನ್ನು ಶಿಕ್ಷಣವಂತರನ್ನಾಗಿ ಮಾಡಿದರೆ ಸಾಲದು; ಉದ್ಯಮಶೀಲರನ್ನಾಗಿ ಮಾಡುವುದರ ಕಡೆಗೂ ಯೋಚಿಸಬೇಕಿದೆ. ಹೊಟೇಲ್ - ಕ್ಯಾಂಟೀನ್ ಗಳನ್ನು ತೆರೆದು ಮತ್ತು ಒಂದು ರೂಪಾಯಿಗೆ ಅಕ್ಕಿ ಕೊಟ್ಟು ಜನರು ದುಡಿಯದ ಹಾಗೆ ಅಥವಾಅವರನ್ನು ಪರಾವಲಂಬಿಗಳನ್ನಾಗಿ ಮಾಡುವುದು ಸರಕಾರಗಳ ಕೆಲಸವಲ್ಲ! ದುಡಿಯುವ ಅವಕಾಶಗಳನ್ನು ಮಾಡಿ ಕೊಡಬೇಕು ಮತ್ತು ದುಡಿಯುವುದು ಹೇಗೆ ಎಂಬುದನ್ನು ಹೇಳಿ ಕೊಡಬೇಕು. ಇಲ್ಲದಿದ್ದರೆ ನಾಳೆ ದಿನ ಮಲಗಲು ಹಾಸಿಗೆ ತೆಗೆದು ಕೊಡುವ ದಿನವೂ ಬಂದೀತು! ಬಾಯಿಗೆ ತುತ್ತು ಕೊಡುವುದಲ್ಲ, ಆ ತುತ್ತನ್ನು ಸಂಪಾದಿಸುವುದು ಹೇಗೆ ಎಂಬುದನ್ನು ತಂದೆ ತಾಯಿಗಳು ಕಲಿಸಿ ಕೊಡಬೇಕು.


ದೇಶ ಪ್ರಗತಿ ಹೊಂದುವುದೆಂದರೆ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು. ನಮ್ಮ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ಯಂತ್ರ ದೀರ್ಘಾವಧಿ ಮತ್ತು ಅಲ್ಪಾವಧಿ ಯೋಜನೆಗಳನ್ನು ಮಾಡುವುದರ ಜೊತೆಗೆ ಆಯಾ ಪ್ರದೇಶದ ಪರಿಸರವನ್ನು ಅವಲೋಕಿಸಿ ಸೂಕ್ಷ್ಮ ಯೋಜನೆಗಳನ್ನು ರೂಪಿಸಬೇಕು. ಆ ಮೂಲಕ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು.


-ಡಾ. ವಸಂತಕುಮಾರ ಪೆರ್ಲ.

40 views0 comments
bottom of page