top of page

ಕುಂಬಳಕಾಯಿ ಕಳ್ಳ

ಬೂದುಗುಂಬಳದ ಹೊಲದಲ್ಲೇ

ಕುಂಬಳಕಾಯಿ ಕಳ್ಳ

ಸಿಕ್ಕಿಬಿದ್ದರೆ ಹೇಗೆ


ಹೆಗಲು ಮುಟ್ಟಿ ನೋಡಿಕೊಂಡಾನೇ

ಅಥವಾ ಹುಳ್ಳಗೆ ನಕ್ಕಾನೇ

ಸಭ್ಯನೆಂದು ತೋರಿಸಿಕೊಳ್ಳಲು

ನಿಮ್ಮನ್ನೇ ಕಳ್ಳನೆಂದು ಬಿಂಬಿಸಲು


ಹೇಳಬಹುದೇ ನಿಮ್ಮ ಹೆಗಲಲ್ಲೇ ಕೊಳೆಯಿದೆಯೆಂದು

ಕಾಲಿಗಂಟಿದೆ ಕೆಸರು

ಮಲಿನವಾಗಿದೆ ದಿರಿಸು ಅನ್ನಬಹುದೇ


ಈಗ ಕೀಟಗಳ ಬಾಧೆ ಅಧಿಕ

ಬಳ್ಳಿ ಕರಟುತ್ತಿದೆ ಬಿಸಿಲಿಗೆ

ನೀರು ಪೂರೈಕೆ ಸಾಲದು

ಗೊಬ್ಬರ ಪೋಷಕಾಂಶಗಳ ಕೊಡಬೇಕು

ಎಂದೆಲ್ಲ ದೇಶಾವರಿ ಮಾತಾಡಬಹುದೇ


ಅಥವಾ ಕೃಷಿಯ ತೊಂದರೆಗಳು

ಕೊಯ್ಲು ಮತ್ತು ಸಾಗಾಟದ ಸಮಸ್ಯೆ

ಮಾರುಕಟ್ಟೆಯ ಅನಿಶ್ಚಯತೆ

ಅಸಮರ್ಪಕ ಧಾರಣೆ

ದಾಸ್ತಾನಿನ ತೊಂದರೆ

ಹೀಗೆ... ಹೀಗೆ... ರೈತರ ಬವಣೆಗಳ ಬಗ್ಗೆ


ರಾಜಕೀಯ ಆಗುಹೋಗು

ಯುದ್ಧ ತೈಲಬಿಕ್ಕಟ್ಟು ಬೆಲೆಯೇರಿಕೆ

ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು


ಶಿಕ್ಷಣಪಂಡಿತನ ಹಾಗೆ

ನಿಷ್ಣಾತ ರಾಜನೀತಿಜ್ಞನ ಒಳವಿಶ್ಲೇಷಣೆಯ ಹಾಗೆ


ನೀವು ನಿಂತಲ್ಲೇ ಬಾಕಿ

ನಿಮ್ಮ ಹೆಗಲಿಗೆ ಬೂದಿಯ ಹಚ್ಚಿ

ಟೆಂಪೋಗೆ ಕಾಯಿಗಳ ಹೇರಿ

ಪೇರಿ ಕಿತ್ತಂತೆ ಅವ ಪರಾರಿ!


-ಡಾ. ವಸಂತಕುಮಾರ ಪೆರ್ಲ

8 views0 comments
bottom of page