top of page

ಎಲ್ಲೆಗಳ ಮೀರಿ

ಕತ್ತಲ ಗರ್ಭದೊಳಗಿಂದಲೇ 

ಮೊಳೆತು ಕುಡಿಯೊಡೆದು 

ಹೊರಬಂದ ಬೆಳಕಿನ ಬೀಜ 

ಕತ್ತಲಿನ ತೆಕ್ಕೆಯೊಳಗೇ

ಇಷ್ಟೊಂದು ಬೆಳಕೇ 

ಎಲ್ಲಿತ್ತು ಈ ತೇಜ ...?


ಎತ್ತರಗಳಲ್ಲಿದೆಯೇ ಉತ್ತರ 

ಆಳಗಳಲ್ಲಿದೆಯೇ ಅರಿವು 

ಆಳ - ಎತ್ತರಗಳ 

ಮೀರಿವೆಯೇ ಗೆಲವು  ?

ಸೋಲು -ಗೆಲುವಿನ 

ಇತಿ -ಮಿತಿಗಳಾಚೆಗೂ 

ಕೈ ಬೀಸಿ ಕರೆದಿದೆ ತಿಳಿವು 


ಈಸುವ ಮೀನಿಗೆ 

ನೀರಿನ ಆಳದ ಅರಿವಿಲ್ಲ 

ನೀರಿಗೋ ,

ಮೀನಿನೊಳಗಿನ ಅರಿವಿಲ್ಲ 

ಅರ್ಥ ಅನಿವಾರ್ಯವಲ್ಲ !

ನಿಗೂಢ !

ಸುಮ್ಮನೆ ಹಾಗೇ ಸಾಗಿದರಾಯಿತು 

ಅದರ ಪಾಡಿಗೆ ಅದು 

ಇದರ ಪಾಡಿಗೆ ಇದು 

ಯಾರಿಗೂ ಲೆಕ್ಕ ಒಪ್ಪಿಸಬೇಕಿಲ್ಲ 


ಪೂರ್ಣ ವಿರಾಮದಲಿ

ಯಾವುದೂ ಇಲ್ಲ 

ಅದು ಸರಿಯೋ 

ಇದು ಬೆಸವೋ 

ತರ್ಕಕ್ಕೆ ತರ್ಕ ಸಲ್ಲ 

ಇಷ್ಟೇ , ಹೀಗೇ 

ಎಂಬ ನಿರ್ಧಾರವಿಲ್ಲ ....

ಕೊನೆಯಿಲ್ಲ ,ಮೊದಲೂ ಇಲ್ಲ 

ಎಲ್ಲೆಗಳ ಮೀರಿಯೂ 

ಉತ್ತರಗಳಿಲ್ಲ .....!


- ಪ್ರಭಾಕರ  ತಾಮ್ರಗೌರಿ  ಗೋಕರ್ಣ

23 views0 comments
bottom of page