top of page

ಎಮ್ಮ ಮನೆಯಂಗಳದ ಹೂವು ವಿಸೀ

We See.... but we can’t reach him

 ಧೀಮಂತ ವ್ಯಕ್ತಿತ್ವ, ಶುಭ್ರ ಉಡುಗೆ, ಮಹೋನ್ನತ ವಿಚಾರ, ಋಜುನಡತೆಯ ಸಾಕಾರಮೂರ್ತಿಗಳೆಂದು ಹಿರಿಯ ಸಾಹಿತಿಗಳಿಂದ ಹೊಗಳಿಸಿಕೊಂಡ ವೆಂಕಟರಾಮಯ್ಯ ಸೀತಾರಾಮಯ್ಯನವರ ನೂರಿಪ್ಪತ್ತೆರಡನೇ ಜನ್ಮದಿನವಿಂದು.

 

ಹೊನ್ನಾವರ ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿ ಅದಕ್ಕೆ ಭದ್ರ ನೆಲೆಗಟ್ಟನ್ನು ಹಾಕಿ ಗೌರವ ಒದಗಿಸಿದ ವಿಸೀಯವರು ಮತ್ತೊಮ್ಮೆ ಅದೇ ಕಾಲೇಜಿನ ವಾರ್ಷಿಕೋತ್ಸವದ ಅಧ್ಯಕ್ಷರಾಗಿ ಬಂದಾಗ ನನ್ನ ತೀರಚಿಕ್ಕವಯಸ್ಸಿನಲ್ಲಿ ಅವರ ದರ್ಶನ ಪಡೆದು ನಮಸ್ಕರಿಸಿದ್ದೆ; ಅವರ ವಾತ್ಸಲ್ಯಪೂರ್ಣ ಹರಕೆಗೆ ಮನಸೋತಿದ್ದೆ.

 

ವಿಸೀ ಎಂದೇ ಪ್ರಸಿದ್ಧರಾಗಿದ್ದ ವಿ. ಸೀತಾರಾಮಯ್ಯನವರು ಹೊಸಗನ್ನಡ ಸಾಹಿತ್ಯ ನಿರ್ಮಾಣಕ್ಕೆ ಶ್ರೀಕಾರ ಹಾಕಿದ ಹಿರಿಯರು. ಕನ್ನಡದಲ್ಲಿ ಹೊಸಬಗೆಯ ಸಾಹಿತ್ಯವನ್ನು ಹಲವು ಮುಖಗಳಲ್ಲಿ ತಂದು ಬೆಳೆಸಬೇಕೆಂದು ಶ್ರಮಿಸಿದ ಕನ್ನಡದ ಕಣ್ವ ಶ್ರೀಯವರ ಅಂದರೆ ಶ್ರೀಮಾನ್ ಬಿ. ಎಂ. ಶ್ರೀಕಂಠಯ್ಯನವರ ನೆಚ್ಚಿನ ಶಿಷ್ಯರಿವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ವಿಸೀಯವರನ್ನು ಶ್ರೀಯವರು ಕನ್ನಡಸೇವೆಗೆ ಆರಿಸಿದರು; ಕನ್ನಡವನ್ನು ಕನ್ನಡವನ್ನು ಕಲಿಸಲು ವಿನಂತಿಸಿದರು. ಅದರಂತೆ ನಡೆದು ವಿಸೀಯವರು ಗುರುವಾಕ್ಯ ನಡೆಸಿದರು... ಸಾರ್ಥಕಗೊಳಿಸಿದರು.

 

“ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು” ಎಂಬ ಅವರ ಮನೆತುಂಬಿಸುವ ಹಾಡು, “ಕಾದಿರುವಳು ಶಬರಿ.... ರಾಮ ಬರುವನೆಂದು” ಎಂಬ ಶಬರಿಯ ಹಾಡುಗಳು ಇಂದಿಗೂ ನಮ್ಮ ಮತ್ತು ನಮ್ಮ ಹಿಂದಿನ ಪೀಳಿಗೆಯ ಪ್ರತಿಯೊಬ್ಬ ಕನ್ನಡಿಗನ ಮನೆ-ಮನೆಗಳಲ್ಲಿ, ಮನ-ಮನಗಳಲ್ಲಿ ಅಚ್ಚಳಿಯದೇ ಉಳಿದಿವೆ. ಜನತೆಯ ಬರಲು ಹೃದಯವನ್ನು ಅರಲಾಗಿಸುವ ಸಾಮರ್ಥ್ಯ ಅವರ ಸಾಹಿತ್ಯಕ್ಕಿದೆ.

 

ಮೈಸೂರು ರುಮಾಲು ವಿಸೀಯವರ ನೆಚ್ಚಿನ ಶಿರೋಭೂಷಣ. ಅದನ್ನು ಕುರಿತು ಅವರು ಬರೆದ ಲಲಿತಪ್ರಬಂಧ ಎಲ್ಲರ ಮನಸೂರೆಗೊಂಡಿದೆ. ಪಂಪಾಯಾತ್ರೆ ಅವರ ಸರ್ವಜನಪ್ರಿಯ ಏಕೈಕ ಪ್ರವಾಸಕಥನ. ಅಂತಹ ಬರವಣಿಗೆ ಕನ್ನಡಸಾಹಿತ್ಯದಲ್ಲಿ ಇನ್ನೊಂದಿಲ್ಲ. It is a class by itself. ಇದು ಅನನ್ವಯಾಲಂಕಾರವಾಗಿರದೇ ವಸ್ತುಸ್ಥಿತಿಯೇ ಎನ್ನುವದು ಪಂಪಾಯಾತ್ರೆಯನ್ನು ಓದಿದ ಸಹೃದಯರೆಲ್ಲರಿಗೂ ಮನದಟ್ಟಾಗುತ್ತದೆ.

 

ವಿಸೀಯವರದು ಅತ್ಯುನ್ನತವಾದ ಅಭಿರುಚಿ. ಎರಡನೇ ವರ್ಗದ ಯಾವ ವಸ್ತುವನ್ನೂ ಅವರು ಮೆಚ್ಚುವವರಲ್ಲ. ಹೊನ್ನಾವರದಲ್ಲಿದ್ದಾಗ ಮೂಗುಮುಕ್ಕಾಗದ ಗೇರುಬೀಜವನ್ನವರು ಅಂಕೋಲೆಯಿಂದ ತರಿಸುತ್ತಿದ್ದರಂತೆ! ತಾಜಾ ಕಾಫಿಪುಡಿ ಅವರಿಗೆ ಬೆಂಗಳೂರಿನಿಂದಲೋ ಚಿಕ್ಕಮಗಳೂರಿನಿಂದಲೋ ಬರಬೇಕಾಗಿತ್ತು. ಫಿಲ್ಟರ್ ಕಾಫಿಗೆ ಹಾಲು ಬೆರೆಸಲು ಅವರು ಇಂಕ್ ಫಿಲ್ಲರ್ ಬಳಸುತ್ತಾರೆಂದು ಗೋಕಾಕರು ವಿನೋದವಾಡುತ್ತಿದ್ದರು.

 

“ಮಾನವನೆತ್ತರ ಆಗಸದೇರಿಗೆ ಏರುವವರೆಗೂ ಏರೇವು...” ಎನ್ನುತ್ತಿದ್ದ ವಿಸೀಯವರ ಸಾಹಿತ್ಯಸೇವೆ ದೊಡ್ಡದು. ಆದರೆ ಅದಕ್ಕಿಂತ ದೊಡ್ಡದು ಅವರ ವ್ಯಕ್ತಿತ್ವ. ಸಣ್ಣ ಮಾತು ಸಣ್ಣ ನಡತೆಗಳು ಆ ಮಹಾವ್ಯಕ್ತಿಯ ಸಮೀಪಕ್ಕೆ ಕೊನೆಯವರೆಗೂ ಸುಳಿಯಲಿಲ್ಲ. ವಿನಾಯಕ ಗೋಕಾಕರು ಅವರನ್ನು ರೂಪಾರಾಧಕ ಎಂದು ಕರೆಯುತ್ತಿದ್ದರು. ಕನ್ನಡದ ಆಸ್ತಿ ಅಜ್ಜ ಮಾಸ್ತಿ ಅವರನ್ನು ವಿಷಕಂಠ ಎಂದು ಕರೆದಿದ್ದಾರೆ. ಜನತೆಯ, ಮಿತ್ರರ, ಸಾಹಿತಿಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವವರ, ಸಹೋದ್ಯೋಗಿಗಳ ಅಷ್ಟೇ ಏಕೆ.. ಅವರದೇ ವಿದ್ಯಾರ್ಥಿಗಳ ವ್ಯಂಗ-ವಿರೋಧ-ಕೊಂಕು ನಡೆನುಡಿಗಳ ವಿಷವನ್ನು ಅವರು ನಗುನಗುತ್ತಲೇ  ನುಂಗಿದರು. ಆದರೆ ಅವರಿಂದ ಸಮಾಜಕ್ಕೆ ಸಿಕ್ಕದ್ದು ಕೇವಲ ಶಿವ ಅಥವಾ ಶುಭ ಮಾತ್ರ. ಇಂತಹ ಮಹಾಪುರುಷರ ಸ್ಮರಣೆಯೇ ನಮಗೆಲ್ಲ ಶ್ರೇಯಸ್ಸನ್ನು ನೀಡುತ್ತದೆ. ಇಗೋ ಅಡ್ಡಬಿದ್ದೆ ನಮಸ್ಕಾರ


- ಡಾ . ಪತಂಜಲಿ ವೀಣಾಕರ









51 views0 comments
bottom of page