top of page

ಆಲೋಚನೀಯ-೧೮

ಆಲೋಚನೆ.ಕಾಂ ಪತ್ರಿಕೆಯ ಓದುಗ ಬಂಧುಗಳಿಗೆ,ನಮ್ಮ ಹಿತೈಷಿಗಳಿಗೆ ಬರಹಗಾರರಿಗೆ ಶರನ್ನವರಾತ್ರಿಯ,ಆಯುಧ ಪೂಜೆಯ,ವಿಜಯ ದಶಮಿಯ ಹಾರ್ದಿಕ ಶುಭಾಶಯಗಳು.

  ಶರತ್ಕಾಲ ಬೆಳಕಿನ ಕಾಲ.ವರ್ಷ ಋತುವಿನ ಮೋಡ ಮಳೆಗಳು ಕಡಿಮೆಯಾಗಿ ನಿರಭ್ರವಾದ ನೀಲಿ ಆಗಸವನ್ನು ಕಣ್ತುಂಬಿಕೊಂಡು ಮುದಗೊಳ್ಳುವ ಕಾಲ.ಹಾರುವ ಗಾಳಿಪಟದ ಅಂದವನ್ನು ಕಣ್ಣಾರೆ ಕಾಣುವ ಕಾಲ.

ಈ ಶರದ್ ಋತುವಿನಲ್ಲಿ ನವರಾತ್ರಿ ಸನ್ನಿಹಿತವಾಗುತ್ತದೆ.ಶಕ್ತಿ ದೇವತೆಯ ಪೂಜೆಗೆ ಜನ ಸಜ್ಜಾಗುತ್ತಾರೆ.'ಶಕ್ತಿಯ ಕೊಡು ಶಕ್ತಿಯ ಕೊಡು ಹೇ ಜನನಿ' ಎಂದರು ಕವಿ ಕುವೆಂಪು.  ದೇವಾಲಯಗಳಲ್ಲಿ,ಮೈಸೂರಿನಲ್ಲಿ ದಸರೆಯ ವಿಶೇಷ ಆಚರಣೆ ನಡೆಯುತ್ತದೆ. ಮೈಸೂರು ಅರಮನೆಯ ಜಂಬೂ ಸವಾರಿ ಜಗತ್ಪ್ರಸಿದ್ದವಾಗಿದೆ. ವಿಜಯ ದಶಮಿಯ ದಿನ ಉತ್ತರ ಕರ್ನಾಟಕದಲ್ಲಿ ಜನರು ಪರಸ್ಪರ ಬನ್ನಿಯನ್ನು ವಿನಿಮಯ ಮಾಡಿಕೊಂಡು ನಾವು ಬನ್ನಿ ತಕ್ಕೊಂಡು ಬಂಗಾರ ಆಗೋಣ ಎನ್ನುತ್ತಾರೆ.

ಪುರುಷ ಪ್ರಧಾನವಾದ ನಮ್ಮ ಸಮಾಜ ಮನೆಯಲ್ಲಿ ಹೆಣ್ಣನ್ನು ಹೇಗೆ ನಡೆಸಿಕೊಂಡರೂ ವಿದ್ಯೆ,ಸಂಪತ್ತು ಮತ್ತು ಶಕ್ತಿಯನ್ನು ಪಡೆಯಲು ಸ್ತ್ರೀ ದೇವತೆಗಳನ್ನೆ ಆರಾಧಿಸುತ್ತಾರೆ.

      ಮಹಾ ಕಾಳಿ ,ಮಹಾ ಲಕ್ಷ್ಮೀ,ಮಹಾ ಸರಸ್ವತಿ ಇವರನ್ನು ಒಂದಾಗಿ ಆರಾಧಿಸುವುದು ನವರಾತ್ರಿಯ ವಿಶೇಷ.'ಯಾ ದೇವಿ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ' ಎಂದು ದೇವಿಯನ್ನು ಸ್ತುತಿಸಲಾಗುತ್ತದೆ.ಅಂಥ ದೇವಿಯ ವರ್ಣನೆ ಹಳಗನ್ನಡ ಮತ್ತು ನಡುಗನ್ನಡ ಕಾವ್ಯದಲ್ಲಿ ವಿಶೇಷವಾಗಿ ವರ್ಣನೆ ಮಾಡಲಾಗಿದೆ.


ಸಿರಿಗಧಿದೇವಿ ಶಾರದೆಯ ಸತ್ಕಳೆ ಸೈಪಿನ 

ಜನ್ಮಭೂಮಿ ಸಚ್ಚರಿತದ ಸೀಮೆ ಸತ್ಯದ ತವರ್ಮನೆ ಪೆರ್ಮೆಗಡರ್ಪು

ಸಿದ್ಧಿ ಗಾಗರಮತುಲೋತ್ಸವಕ್ಕೆ ನೆಲೆ ಚೆಲ್ವಿನ ಕೋಶ ಮನೂನ

 ಮಂಗಳೋತ್ಕರನಿಧಿ ಗೌರಿ ರಂಜಿಸಿದಳಂಕದೊಳಿಂದು ಕಳಾವತಂಸನಾ


ಎಂದು ಶಿವನ ತೊಡೆಯ ಮೇಲೆ ಕುಳಿತು ರಾರಾಜಿಸುವ ಗಿರಿಜೆಯನ್ನು ಕವಿ ಮಾಲಾ ರೂಪಕದ ಮೂಲಕ ಬಣ್ಣಿಸಿದ್ದಾನೆ.ಈ ವರ್ಣನೆಯಲ್ಲಿ ದೇವಿಯ ವಿಶೇಷಣಗಳನ್ನು ಕವಿ ವರ್ಣಿಸಿದ್ದಾನೆ.

      ನವರಾತ್ರಿ ಮುಗಿಯುತ್ತಿದ್ದಂತೆ ಬೆಳಕಿನ ಹಬ್ಬ ದೀಪಾವಳಿ  ಬರುತ್ತದೆ.ಕಾರ್ತಿಕದಲ್ಲಿ ದೀಪಗಳು ಮನೆಗಳನ್ನು ಗುಡಿ ಗೋಪುರಗಳನ್ನು ಬೆಳಗುತ್ತವೆ. ಆ ಸಂದರ್ಭದಲ್ಲಿ ನಾವು ನಮ್ಮ ಮನದ ದೀಪವನ್ನು ಬೆಳಗಿಕೊಳ್ಳ ಬೇಕು.' ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯ' ಎಂಬ ಅಲ್ಲಮನ ವಚನದಂತೆ.

ನಮ್ಮ ಪತ್ರಿಕೆಯ ಬರಹಗಾರರು ಇದರ ಮೌಲ್ಯ ವರ್ಧನೆಯಲ್ಲಿ ಸದಾ ಕಾಲ ಶ್ರಮಿಸುತ್ತಿದ್ದಾರೆ. ಹಾಗು ನಮ್ಮ ಪತ್ರಿಕೆಯ ಆಧಾರ ಸ್ತಂಭದಂತಿರುವ ಹಿರಿಯ ಕವಿ ಮತ್ತು ಚಿಂತಕ ಡಾ.ವಸಂತ ಕುಮಾರ ಪೆರ್ಲ ಅವರು ಈ ಪತ್ರಿಕೆಯಲ್ಲಿರುವ ಸಂಪ್ರದಾಯ ಮತ್ತು ಆಧುನಿಕತೆಯ ಮೇಳೈಸುವಿಕೆಯನ್ನು ಮೆಚ್ಚಿ  ಬೆನ್ನು ತಟ್ಟಿದ್ದಾರೆ.ಅವರಿಗೆ ಕೃತಜ್ಞತೆಯ ವಂದನೆಗಳು.

        ಆಲೋಚನೆ.ಕಾಂ ನಿಮ್ಮೆಲ್ಲರ ಪತ್ರಿಕೆ ಮಗುವನೆತ್ತಿಕೊ ಮಗುವನೆತ್ತಿಕೊ ಎಂಬ ಕವಿ ವಾಣಿಯಂತೆ ಈ ಪತ್ರಿಕೆಯನ್ನು ಎತ್ತಿಕೊಂಡು ಕೊಂಡಾಡಿ,ಲಾಲಿಸಿ ಪಾಲಿಸಿ ಬೆಳೆಸುವ ಹೊಣೆ ನಮ್ಮ ನಿಮ್ಮೆಲ್ಲರದು.ಓದುಗರ ಸಕಾರಾತ್ಮಕ ಪ್ರತಿಕ್ರಿಯೆಗೆ ಸ್ವಾಗತ. ಈ ಪತ್ರಿಕೆಯ ಬೆಳವಣಿಗೆಯಲ್ಲಿ ಬರಹಗಾರರ,ಹಿತೈಷಿಗಳ ಸಲಹೆಯನ್ನು ನಾವು ಗೌರವಿಸುತ್ತೇವೆ ಮತ್ತು ಪಾಲಿಸುತ್ತೇವೆ.

     ವಿಜಯ ದಶಮಿ ಎಲ್ಲರಿಗು ವಿಜಯವನ್ನು ತರಲಿ. ಜಯವಾಗಲಿ.


 -ಡಾ.ಶ್ರೀಪಾದ ಶೆಟ್ಟಿ.

35 views0 comments
bottom of page