top of page

ಆಲೋಚನೀಯ - ೧೪.

  ಬಂದ ದು:ಖದ ನೆನಪು ಹಿಂದೆ,

   ಬರುವ ದು:ಖದ ಭಯವು ಮುಂದೆ

   ನಡುವೆ ಇಂದಿನ ದು:ಖ ಪೀಠದಿ

    ನೆಗಹಿ ಗಗನಕೆ ಮುಖವನು

   ಹಾರುತಿರುವೆನು ಕಾಳಕೂಟದಿ

           ಕಾಣಲಮೃತದ ಸುಖವನು.


                   ದು:ಖಧ್ವನಿ- ಕುವೆಂಪು.


        ಈ ದು:ಖ ಪೀಠದಲ್ಲಿ ಕುಳಿತು ಸುಖವನ್ನು ಹಂಬಲಿಸುವ ಹಾರೈಸುವ ನಾವು ಕಾಳಕೂಟದಲ್ಲಿ ಮುಳುಗೇಳುತ್ತ ಅಮೃತದ ಸುಖಕ್ಕಾಗಿ ಹಾರೈಸುತ್ತಿದ್ದೇವೆ. ಇದು ಇಡಿ ಮನುಕುಲದ ಕತೆ.ನಮಗೆ ಕಷ್ಟ,ಕೋಟಲೆ,ನೋವು,ಯಾತನೆಗಳು ಬೇಡವೆ ಬೇಡ.ನಮಗೆ ಸುಖ ಬೇಕು,ಸಂತಸ ಬೇಕು,ಎಲ್ಲವು ನಾವು ಅಂದುಕೊಂಡಂತೆ ಆಗ ಬೇಕು.ಹಾಗೆ ಆಗದಿದ್ದರೆ ಸೃಷ್ಟಿಕರ್ತನಿಗೆ, ದೇವರಿಗೆ, ವಿಧಿಗೆ ನಮ್ಮ ಬೈಗುಳ ತಪ್ಪಿದ್ದಲ್ಲ. ಅದು ನಮ್ಮ ಅಸಹಾಯಕತೆ ನಾವು ಎಲ್ಲವನ್ನು ಸರಿ ಪಡಿಸುತ್ತೇವೆ. ನಾವು ಕಾಳಜಿ ವಹಿಸುತ್ತೇವೆ ಎನ್ನುತ್ತೇವೆ.ಇದೆಲ್ಲ ನಮ್ಮ ಬಡಿವಾರದ ಮಾತುಗಳು ಇದನ್ನೆಲ್ಲ ಮೀರಿ ನಡೆಯುವುದೆಲ್ಲ ಘಟಿಸಿ ಬಿಡುತ್ತದೆ.

    ಇಷ್ಟೆಲ್ಲ ಬರೆಯಲು ಕಣ್ಮುಂದೆ,ಮನದ ಮುಂದೆ, ಸುತ್ತ ಮುತ್ತ ಆವರಿಸಿಕೊಂಡು,ತನ್ನ ವಿಕಟಾಟ್ಟ ಹಾಸದಿಂದ ಎಲ್ಲರನ್ನು ಸಾವಿನ ಮನೆಗೆ ಜಮಾ ಮಾಡಲು ಹೊರಟಿರುವ ಕೋವಿಡ್ ೧೯ ರ ಕುರಿತು.

       ದಿನ ದಿನಕ್ಕೆ ಹೆಚ್ಚಾಗುತ್ತಿರುವ ಸಾವು ನೋವಿನ ಸುದ್ದಿ.ಸತ್ತವರನ್ನು ಸರಿಯಾಗಿ ಸಂಸ್ಕಾರ ಮಾಡಲು ಆಗದ ಭಯಾನಕ ಪರಿಸ್ಥಿತಿ.ಇದ್ದವರಿಗೂ ಕೊರೋನಾ ಪೀಡಿತರೆಂಬ ಸಾಮಾಜಿಕ ಬಹಿಷ್ಕಾರ. ಕೊರೋನಾ ಪೀಡಿತರು ಗುಣಮುಖರಾಗಿದ್ದರೂ ಅವರನ್ನು ಅನುಮಾದಿಂದ ನೋಡುವ, ಬಹಿಷ್ಕರಿಸುವ  ಆಸು ಪಾಸಿನ ಜನರ ಸಣ್ಣತನ ಕಿರಿಕಿರಿಯಾಗಿ ಕಾಡುತ್ತದೆ.


    ತಲೆಯ ಮೇಗಡೆ ಮುಳ್ಳುಮುಡಿಯಿದೆ

     ನೊಂದ ಕೊರಳಲಿ ನರಳು ನುಡಿಯಿದೆ

     ಹಿಡಿದ ವೀಣೆಯ ತಂತಿ ಮಿಡಿದರೆ

                    ಹೊಮ್ಮುತಿದೆ ಬರಿ ರೋದನ!

         ದು:ಖ ದು:ಖದ ನಡುವೆ ಮಡಿದರೆ

                     ಶವವೆ ಸುಖದ ನವೋದನ!

   ‌           ‌  ‌‌‌‌                              ಅದೆ- ಕುವೆಂಪು

ಕೋವಿಡ್-೧೯ ಇಂದು ಬಾರಿಸುತ್ತಿರುವ ಮರಣ ಮೃದಂಗದ ಕುರಿತು ಶತಮಾನದ ಹಿಂದೆ ಕುವೆಂಪು ಬರೆದ ಈ ಕವನ ಕಾಲ ಜ್ಞಾನದ ವಚನದಂತಿದೆ.

ಕೋವಿಡ್ ಬಂದರೆ ಬರಿ ಕೈಯಲ್ಲಿ ಬರಲಿಲ್ಲ.ಚಳಿ,ಜ್ವರ,ನೆಗಡಿ,ಕೆಮ್ಮು,ಗಂಟಲು ನೋವು,ಅಶಕ್ತತೆ,ಖಿನ್ನತೆ,ಏಕಾಕಿತನ ಎಲ್ಲವನ್ನು ಜೊತೆಗೂಡಿಕೊಂಡು ಬರುತ್ತದೆ.ಮೊದಲೆ ಬಿ.ಪಿ.,ಶುಗರ್,ಲಿವರ್ ,ಕಿಡ್ನಿ ಸಂಬಂಧಿಯಾದ ಕಾಯಿಲೆ ಇದ್ದವರ ಪರಿಸ್ಥಿತಿ ಅಡ್ಡ ಗೋಡೆಯ ಮೇಲಿಟ್ಟ ದೀಪ.ದೀಪ ಉರಿದರೆ ಪುಣ್ಯ.ಗಾಳಿಗೆ ನಂದು ಹೋದರೆ ಅದು ವಿಧಿ ಲೀಲೆ.

  ಐಸಿಯು ನಲ್ಲಿ ಇದ್ದಾಗ ತೆಳ್ಳಗಾದ ಬದುಕುವ ಹಂಬಲ,ಆಕ್ಷಿಜನ್ ಮಟ್ಟ ಏರದೆ ಇದ್ದಾಗ ಉಂಟಾಗುವ ಆತಂಕ,ಪಕ್ಕದ ವೆಂಟಲೇಟರಿನಲ್ಲಿ ಕಾಯಿಲೆ ತೀವ್ರವಾಗಿ ಅವರ ಹರಣ ಹಾರಿ ಹೋಗುವುದನ್ನು ಮಂಪರು ಮತ್ತು ಎಚ್ಚರದ ನಡುವಿನ ಸ್ಥಿತಿಯಲ್ಲಿ ನೋಡುತ್ತಾ ಅದಕ್ಕೆ ಸ್ಪಂದಿಸಲಾರದ ದಣಿವು,ಅಶಕ್ತತೆ.ಏನೂ ನಡೆಯಿತು. ಮಂದೇನಾಗುತ್ತಿದೆ ಎಂಬುದು ಪ್ರಜ್ಞೆಗೆ ಎಟುಕದ ಸ್ಥಿತಿ. ಹೊನ್ನಾವರ ಮತ್ತು ಕೆಎಂಸಿ ಮಣಿಪಾಲ ಅತ್ತಾವರಆಸ್ಪತ್ರೆಯ ವೈದ್ಯರು, ನರ್ಸುಗಳು ,ಸಹಾಯಕರು,ನನ್ನ ಹಿತೈಷಿಗಳು,ವಿದ್ಯಾರ್ಥಿ ಮಿತ್ರರು ದೇವದೂತರಂತೆ ನೆರವಿಗೆ ಧಾವಿಸಿ ನನ್ನನ್ನು ಬದುಕಿನ ದಡ ತಲುಪುವಂತೆ ಮಾಡಿದ ಪ್ರಯತ್ನವನ್ನು ಹೇಗೆ ಮರೆಯಲಿ.ಆ ಪುಣ್ಯವಂತರೆಲ್ಲರಿಗೆ ಕೃತಜ್ಞತೆ ಸಲ್ಲಿಸಲು ಶಬ್ದವೆ ಸೋತು ಹೋದ ಅನುಭವ.ಅವರಿಗೆಲ್ಲ ನನ್ನ ಉಪಕೃತಿಯ ವಂದನೆಗಳು.ಆತಂಕದಲ್ಲಿಯು ನನ್ನ ಬಗ್ಗೆ ಕಾಳಜಿವಹಿಸಿದ ನನ್ನ ಕುಟುಂಬ ವರ್ಗ,ವಿದ್ಯಾರ್ಥಿಗಳು, ಪೂಜೆ, ಪುನಸ್ಕಾರ , ಜಪಾನುಷ್ಠಾನಮಾಡಿದ ವೈದಿಕರು,ದೇವಳದ ಅರ್ಚಕರು ಇವರಿಗೆಲ್ಲ ನನ್ನ ಕೃತಜ್ಞತೆಗಳು. ನನ್ನ ಮಿತ್ರರೂ,ಒಡನಾಡಿಗಳು,ರಾಷ್ಟ್ರದ ಜನ ನಾಯಕರು,ಪ್ರತಿಭಾವಂತ ಗಾಯಕರು ಮಂತ್ರಿಗಳು,ವೈದ್ಯರು,ಆರೋಗ್ಯ ಕಾರ್ಯಕರ್ತರು, ಸಮಾಜ ಸೇವಕರು ಈ ಕೋವಿಡ್ ನಿಂದ ಮರಣ ಹೊಂದಿದ್ದಾರೆ.ಅವರ ಅಗಲಿಕೆಯ ದು:ಖ ಕಾಡುತ್ತಿದೆ.ಭಾವ ತೀವ್ರತೆ ಯಲ್ಲಿ ವೈಚಾರಿಕತೆ,ಚಿಂತನೆಗಳಿಗೆ ಮೋಡ ಮುಸುಕಿದ ಅನುಭವವಾಗುತ್ತಿದೆ.

    ತಲೆಯ ಮೇಲಿನ ಮುಳ್ಳಿನ ಕಿರೀಟ,ನೊಂದ ಕೊರಳಲ್ಲಿ ನರಳುವಿಕೆಯ ನುಡಿಯಿದೆ.ಹಿಡಿದುಕೊಂಡ ವೀಣೆಯ ತಂತಿಯನ್ನು ಮೀಟಿದರೆ ರೋದನವೆ ಹೊರ ಹೊಮ್ಮುತಿದೆ.ಶವವೆ ಸುಖದ ಮಿತ್ರನೇನೊ(ನವೋದನ) ಎಂಬ ಭಾವ ಬಲಿಯುತ್ತಿದೆ.  ಕೊನೆಗೂ

"ಮೃತ್ಯುಶೀತಲ ಹಸ್ತ ಸ್ಪರ್ಶನ

ವರದಿನಳಿವುದು ತೊಂದರೆ"

ಎಂಬ ಕುವೆಂಪು ವಾಣಿಯಂತೆ ಮೃತ್ಯುವಿನ ಶೀತಲ ಹಸ್ತ ಸ್ಪರ್ಶ ವರವಾಗಿ ಎಲ್ಲ ತೊಂದರೆ ಅಳಿದು ಹೋಗುತ್ತದೆ. ಸಾವು ಕೊನೆಯ ಸತ್ಯ.

" ನಾವು ಸಾವಿಗೆ ಹೇದರ ಬೇಕಾಗಿಲ್ಲ. ಯಾಕೆಂದರೆ ನಾವು ಇದ್ದಾಗ ಸಾವು ಬರುವುದಿಲ್ಲ ಸಾವು ಬಂದಾಗ ನಾವು ಇರುವುದೆ ಇಲ್ಲ." ಅನುಭವ ವಾಣಿ.

ಮನೆಯಲ್ಲಿಯೆ ಇರೋಣ,ಸಾರ್ವಜನಿಕ ಸಂಪರ್ಕ ಅನಿವಾರ್ಯದಲ್ಲಿ ಮಾಸ್ಕ್, ಸೆನಿಟೈಸರ್, ಎರಡು ಮೀಟರ ಅಂತರ ಕಾಯ್ದುಕೊಳ್ಳೋಣ.ಬಿಸಿ ಬಿಸಿ ಆಹಾರ,ಪೌಷ್ಟಿಕ ಆಹಾರ ಸೇವನೆಯಿಂದ ಸಕಾರಾತ್ಮಕ ಚಿಂತನೆಯಲ್ಲಿ ಕಾಲ ಕಳೆಯೋಣ.

"ನಡೆದಷ್ಟು ದಾರಿಯಿದೆ,ಪಡೆದಷ್ಟು ಭಾಗ್ಯವಿದೆ."

ಡಾ.ವಿ.ಕೆ.ಗೊಕಾಕರ ಮಾತನ್ನು ಮೆಲುಕು ಹಾಕೋಣ.


- ಡಾ.ಶ್ರೀಪಾದ ಶೆಟ್ಟಿ.

85 views0 comments
bottom of page