top of page

ಆಲೋಚನೀಯ


ಲಾಭದ ಲೆಕ್ಕಾಚಾರ

ಮನುಷ್ಯ ಈ ಭೂಮಿಯಲ್ಲಿ ಜನಿಸಿ ಬಂದ ಕಾರಣ ಆತನ ಅರಿವಿಗೆ ಬಂದಾಗ ಬದುಕು ಸಾರ್ಥಕ. ಆದರೆ ಬಹಳ ಜನರಿಗೆ ತಮ್ಮ ಬದುಕಿನ ಗುರಿ ಮತ್ತು‌ ಉದ್ದೇಶದ ಬಗ್ಗೆ ಅರಿವೆ ಇರುವುದಿಲ್ಲ. ಕೆಲವರು ಹತ್ತರ ಸಂಗಡ ಹನ್ನೊಂದಾಗಿ ಬದುಕುತ್ತಾರೆ. ಆ ರೀತಿಯ ಬದುಕು ಅವರಿಗೆ ಸಮಾಧಾನ ಕೊಡುವುದಿಲ್ಲ. ಕೆಲವರಿಗೆ ಜೀವನ ಸಾರ್ಥಕಗೊಳಿಸಿಕೊಳ್ಳುವ ಪರಿವೆಯು ಇರುವುದಿಲ್ಲ. ಆದರೆ ಹಣ ಮಾಡುವ ಲಾಭಗಳಿಸುವ ಯೋಚನೆ ಬಹುತೇಕ ಎಲ್ಲರಿಗು ಇರುತ್ತದೆ. ಇದನ್ನು ಮೀರಿನಿಂತು

" My life is my message" ಎಂದು ಹೇಳಿದ ಮಹಾತ್ಮಾ ಗಾಂಧೀಜಿಯವರು. ಆ ಕಾಲಘಟ್ಟದಲ್ಲಿ ಬಾಳಿದ ಗುರುದೇವ ರವೀಂದ್ರನಾಥ ಟಾಗೋರ್, ಮಹರ್ಷಿ ಅರವಿಂದರು, ದಯಾನಂದ ಸರಸ್ವತಿ, ರಾಜಾರಾಮ ಮೋಹನ ರಾಯ್,ರಮಣ ಮಹರ್ಷಿ, ನಾಮಧಾರ್ ಗೋಪಾಲಕೃಷ್ಣ ಗೋಖಲೆ,ಡಾ.ಎಸ್.ಕೆ.ಕರೀಮ್ ಖಾನ್, ದಿನಕರ ದೇಸಾಯಿ,ಡಿ.ವಿ.ಗುಂಡಪ್ಪ ಮುಂತಾದವರು ನಮ್ಮ ಬಾಳುವೆಯ ಮೂಲಕ ಮುಂದಿನವರಿಗೆ ಬೆಳಕಾದರು.

ಇದನ್ನೆಲ್ಲಾ ಅರಿವಿಗೆ ತಂದುಕೊಳ್ಳದ ಲಾಭ ಬಡಕರ ಸಂತಾನ ಬೆಳೆಯುತ್ತಲೆ ಇದೆ. ಪ್ರಯೋಜನವಿಲ್ಲದೆ ಒಂದು ಕಪ್ಪೆಯು ಆ ಕಡೆಯಿಂದ ಈ ಕಡೆ ಹಾರಲಾರದು ಎಂಬ ಹಾಗೆ ( ಪ್ರಯೋಜನಮನುದ್ದಿಶ್ಯ ನ ಮಂದೋಪಿ ಪ್ರವರ್ತತೆ) ಇವರ ಬದುಕಿನ ಗತಿ ಮತ್ತು ರೀತಿ.ಲಾಭದ ಲೆಕ್ಕಾಚಾರದಲ್ಲಿ ಇವರು ಇಡಿ ಜೀವಮಾನವನ್ನು ಕಳೆಯುತ್ತಾರೆ. ಆಂತರಿಕ ನೆಮ್ಮದಿಗಿಂತ ಬಾಹ್ಯದ ಆಡಂಬರದ ಬದುಕಿನ ಕಡೆಗೆ ಇವರ ಮನ ಮತ್ತು ಗಮನ. ಇವರು ಕಂಡ ಕಂಡಲ್ಲಿ ಸಿಗುತ್ತಾರೆ. ಸರ್ಕಾರಿ ಕಚೇರಿಗಳಲ್ಲಿ,ಸಾರ್ವಜನಿಕ ಸಂಸ್ಥೆಗಳಲ್ಲಿ,ಸಹಕಾರಿ ಸಂಘಗಳಲ್ಲಿ, ರಾಜಕಾರಣಿಗಳ ಅಕ್ಕ ಪಕ್ಕದಲ್ಲಿ‌, ಅವರ ಆಪ್ತವಲಯದಲ್ಲಿ ಕಂತ್ರಾಟುದಾರರಾಗಿ ಕಾರ್ಯಕರ್ತರಾಗಿ,ಸಮಾಜ ಸೇವಕರಾಗಿ ಬಹು ಬಗೆಯ ವೇಷ ಭೂಷಗಳಲ್ಲಿ ಇವರು ಮುನ್ನಲೆಯಲ್ಲಿ ಇರುತ್ತಾರೆ. ಇಂತಹ ಬಹುರೂಪಿಗಳ ಬಗ್ಗೆ ಕವಿ ದಿನಕರ ದೇಸಾಯಿಯವರು ತಮ್ಮ ಚುಟಕದಲ್ಲಿ,

ನೀನ್ಯಾಕೋ? ನಿನ್ನ ಹಂಗ್ಯಾಕೋ ಹೇ ರಂಗ?

ನಮಗೆ ಬೇಕಾದದ್ದು ಮಂತ್ರಿಗಳ ಸಂಗ

ಸಚಿವರನು ಭಜಿಸಿದರೆ ಸಿಕ್ಕಿ ಕಂತ್ರಾಟು

ಕ್ಷಣದೊಳಗೆ ಝಣರೆನ್ನುವುದು ನಮ್ಮ ಕೋಟು

ದಿನಕರ ದೇಸಾಯಿ

ಭಜನೆಯ ದಾಟಿಯಲ್ಲಿ‌ ದಿನಕರರು ಮಾಡಿದ ವಿಡಂಬನೆ ಇದು. ಲಾಭ ಗಳಿಕೆಗಾಗಿ ಏನು ಮಾಡಲು ಸಿದ್ಧರಾದ ಇವರಿಗೆ ತತ್ವ,ಆದರ್ಶ, ಸಿದ್ಧಾಂತಗಳು ಏನೂ ಇರುವುದಿಲ್ಲ‌ .

ಇಂಥವರ ಸಾಮಾಜಿಕತೆಯ ಅರಿವು ಶೂನ್ಯವಾಗಿರುತ್ತದೆ. ಇವರ ಲೋಕ ಹಿತದ ಸಂವೇದನೆ ಮರಗಟ್ಟಿರುತ್ತದೆ.

ಈ ಲಾಭದ ಲೆಕ್ಕಾಚಾರ ಶಾಶ್ವತವಾಗಿ ನಿಲ್ಲುವುದಿಲ್ಲ ಎಂಬ ಅರಿವು ಅವರಿಗೆ ಇರುವುದೆ ಇಲ್ಲ.‌ ಹತ್ತನೆ ಶತಮಾನದ ಆದಿಕವಿ ಮಹಾಕವಿ ಪಂಪ ಪ್ರತಿಪಾದಿಸಿದ ಆ ಕಾಲದ ಜೀವನ ಮೌಲ್ಯಗಳಾದ ನನ್ನಿ ,ಚಾಗ,ವೀರಗಳು ಇವರಿಗೆ ಗೊತ್ತೆ ಇಲ್ಲ. ಅಕ್ಕಿಯಲ್ಲಿಯ ಹುಳಗಳಂತೆ,ಪುಸ್ತಕದೊಳಗಿನ ಸಿಲ್ವರ್ ಪಿಶ್ ಗಳಂತೆ ಬದುಕುವ ಇವರ ಮಾನವೀಯ ಮಾಲ್ಯ ಎಂಬ ಮರಕ್ಕೆ ಅಂಟಿದ ಬಂದಳಿಕೆಗಳಂತೆ. ಕೆಲವು ಕಡೆ ಇವು ಮರವನ್ನೆ ಮುಗಿಸಿ ಬೆಳೆಯ ಬಲ್ಲವು. ಇವರನ್ನು ತಡೆಯುವ ನಿಯಂತ್ರಿಸುವ ಪ್ರಜ್ಞಾವಂತರ ಪಡೆ ಬೆಳೆಯ ಬೇಕಾದ ಅನಿವಾರ್ಯ ತೆಯಿದೆ,ಸಜ್ಜನರು,ಹಿರಿಯ ನಾಗರೀಕರು,ಮಾಧ್ಯಮದವರು,

ಸಮಾಜ ಸೇವಕರು ಇವರ ನಿಯಂತ್ರಣ ಮಾಡಲು ತೊಡಗಿಕೊಳ್ಳ ಬೇಕಾದ ಅನಿವಾರ್ಯತೆ ಇಂದಿನದು.


‌‌ ಡಾ.ಶ್ರೀಪಾದ ಶೆಟ್ಟಿ


37 views0 comments
bottom of page