top of page

ಆಲೋಚನೀಯ - 11

ಗುರು ಎಂಬ ಶಬ್ದವೇ ಅವರ್ಣನೀಯ. ಅದು ಯಾವುದೆ ವ್ಯಾಖ್ಯೆಯ ಪರಿಮಿತಿಗೆ ನಿಲುಕದ ಶಬ್ದ. ‘ಏಕಾಕ್ಷರಂ ಕಲಿಸಿದಾತಂ ಗುರು’ ಎಂಬ ಮಾತು ಇದನ್ನು ಪುಷ್ಟೀಕರಿಸುತ್ತದೆ. ತಾಯಿಯೇ ಮೊದಲು ಗುರುವು ಎಂಬ ಜನಪದರ ಮಾತು ಗುರತನದ ಮೊದಲ ಬಿಂದುವನ್ನು ಗುರುತಿಸುತ್ತದೆ. ಆದರೆ ಮುಂದಿನ ಬಿಂದುಗಳನ್ನು ಲೆಕ್ಕವಿಡುವುದಕ್ಕೆ ನಮಗೆ ಅದೆಷ್ಟು ಜನುಮಗಳು ಬೇಕೊ. ಅದಕ್ಕಾಗಿಯೇ ನಮ್ಮ ಹಿರಿಯರು ಗುರುಭ್ರಹ್ಮ, ಗುರು ವಿಷ್ಣು, ಗುರು ಸಾಕ್ಷಾತ್ ಪರಮೇಶ್ವರ ಎಂದು ಕೈಮುಗಿದು ಶರಣಾಗತರಾಗಿ ಜಾಣ್ಮೆ ತೋರಿದರು.


ಗುರು ದಕ್ಷಿಣೆ ಎಂಬ ಶಬ್ದ ಹೇಗೆ ಮತ್ತು ಯಾವಾಗ ಹುಟ್ಟಿತು ಎಂಬದೇ ದೊಡ್ಡ ಜಿಜ್ಞಾಸೆಯ ವಿಷಯ. ವಿದ್ಯೆಯೆಂಬ ಮಹಾ ಸಂಪತ್ತನ್ನು ಧಾರೆಯೆರೆಯುವ ಗುರು ದಕ್ಷಿಣೆಯ ಆಸೆಗೆ ತನ್ನ ಜ್ಞಾನವನ್ನು ನೀಡುತ್ತಾನೆಂದಾದರೆ ಎಂದಾದರೆ ಆತನಿಗೂ ಒಬ್ಬ ವ್ಯಾಪಾರಿಗೂ ಏನು ತಾನೆ ವ್ಯತ್ಯಾಸ ಉಂಟಾದೀತು! ಅಂತಹ ಗುರುವಿಗೆ ಪ್ರದಕ್ಷಿಣೆ ಹಾಕಿ ದಕ್ಷಿಣೆ ಕೊಟ್ಟು ಸುಲುಭವಾಗಿ ಕೈತೊಳೆದುಕೊಳ್ಳಬಹುದಲ್ಲ! ಹಾಗಿದ್ದರೆ ಈ ಶಿಕ್ಷಕರ ದಿನಾಚರಣೆ, ಗುರು ಪೂರ್ಣಿಮೆ ಎಂಬೆಲ್ಲ ಆಚಾರಗಳು ಪ್ರಚಾರದ ಗೀಳಿನ ತಂತ್ರಗಳೆ?


ಗುರುವಿನೊಡನೆ ಗುರುದಕ್ಷಿಣೆ ಎಂಬ ಶಬ್ದವು ತಳಕು ಹಾಕಿಕೊಂಡಿದೆ. ವಾಸ್ತವಿಕವಾಗಿ ಗುರುದಕ್ಷಿಣೆ ಎಂಬ ಶಬ್ದವೇ ಕಾಲಾಂತರದಲ್ಲಿ ಅಪಭ್ರಂಶವಾಗಿದೆಯೆಂದರೆ ತಪ್ಪಾಗಲಾರದು. ನಿಜವಾದ ಅರ್ಥದಲ್ಲಿ ಯಾವ ಗುರುವೂ ತಾನು ನೀಡಿದ ವಿದ್ಯೆಗೆ ಪ್ರತಿಫಲವಾಗಿ ದಕ್ಷಿಣೆಯನ್ನು ಬಯಸುವುದೂ ಇಲ್ಲ, ಕೇಳುವುದೂ ಇಲ್ಲ, ತನ್ನ ಶಿಷ್ಯನಲ್ಲಿ ತಾನು ಅಕ್ಕರೆಯಿಂದ ಬಿತ್ತಿದ ಜ್ಞಾನವೆಂಬ ಬೀಜ ಹೆಮ್ಮರವಾಗಿ ಬೆಳೆದು ತನ್ಮೂಲಕ ಜಗದ ಏಳಿಗೆಯಾಗಬೇಕೆಂಬ ಸಾತ್ವಿಕ ಹೇತುವುಳ್ಳವನೇ ನಿಜವಾದ ಅರ್ಥದಲ್ಲಿ ಗುರುವೆಂದೆನಿಸಿಕೊಳ್ಳುತ್ತಾನೆ. ತನ್ಮೂಲಕ ಆತನಿಗೆ ಸಿಗುವ ಪಾರಮಾರ್ಥಿಕ ಸುಖವೇ ಗುರುದಕ್ಷಿಣೆ ಎಂದು ನಾವು ಅರ್ಥೈಸಿಕೊಂಡರೆ ಅದು ಹೆಚ್ಚು ಸಾಧುವಾದೀತು. ಅದಕ್ಕಾಗಿಯೇ ಶಿಷ್ಯನ ಏಳಿಗೆ ಗುರುವಿನಲ್ಲಿ ಕಾಣು ಎಂಬ ವ್ಯವಹಾರದಲ್ಲಿ ಆಡುವ ಮಾತು ಇದಕ್ಕೆ ಪುಷ್ಟಿ ನೀಡುತ್ತದೆ.


ಇಂದು ನಾವೆಲ್ಲ ಆಚರಿಸುವ ಶಿಕ್ಷಕರ ದಿನಾಚರಣೆ ಆ ಅರ್ಥದಲ್ಲಿ ಮಹಾನ್ ವಿದ್ವಾಂಸ, ತತ್ವಜ್ಞಾನಿ ಹಾಗೂ ಪೂರ್ವ ರಾಷ್ಟ್ರಪತಿ ದಿ.ಸರ್ವಪಳ್ಳಿ ರಾಧಾಕೃಷ್ಣ ಅವರ ಅಂತರಾಳದ ಬಯಕೆಯಿಂದ ಜನ್ಮ ತಾಳಿದ್ದು. ತಮ್ಮ ಹುಟ್ಟು ಹಬ್ಬವನ್ನು ಆಚರಿಸಲು ಹೊರಟ ದೇಶದ ಜನತೆಗೆ ಅದರ ಬದಲು ಆ ದಿನವನ್ನು ಶಿಕ್ಷಕ ದಿನಾಚರಣೆ ಎಂದು ಆಚರಿಸುವಂತೆ ಕರೆ ನೀಡಿದ ಮಹಾ ಚೇತನವದು. ಬಹುಷಃ ಗುರುದಕ್ಷಿಣೆ ಎಂಬ ಶಬ್ದಕ್ಕೆ ಹೊಸ ಭಾಷ್ಯ ಇದೆಂದರೆ ತಪ್ಪಾಗಲಾರದು.


ತಮಿಳುನಾಡಿನ ಮಧ್ಯಮ ಕುಟುಂಬದಲ್ಲಿ ಸೆಪ್ಟೆಂಬರ್ 05, 1888 ರಲ್ಲಿ ಜನಿಸಿದ ದಿ.ರಾಧಾಕೃಷ್ಣನ್ ಅವರು ತಮ್ಮ 87 ನೇ ವಯಸ್ಸಿನಲ್ಲಿ ಅಂದರೆ 16-04-1975 ರಲ್ಲಿ ಇಹಲೋಕ ತ್ಯಜಿಸಿದರು. ಮೂಲಭೂತವಾಗಿ ಅವರೊಬ್ಬ ಶಿಕ್ಷಕ ಜೊತೆಗೆ ಮಹಾ ತತ್ವಜ್ಞಾನಿ. ಭಾರತೀಯ ತತ್ವಜ್ಞಾನ, ಉಪನಿಷದ್ ಫಿಲಾಸಫಿ, ಆದರ್ಷ ಬದುಕಿನ ಚಿಂತನೆಗಳು, ಪೌರಾತ್ಯ ಮತ್ತು ಪಾಶ್ಚಿಮಾತ್ಯ ಧರ್ಮಗಳ ಚಿಂತನೆಗಳು – ಮುಂತಾದವು ಅವರ ಮಹಾನ್ ಕೃತಿಗಳು. ಕೇವಲ ರಾಜಕಾರಣಿಯೆಂದು ಗುರುತಿಸಿಕೊಳ್ಳುವ ಬದಲು ಮೂಲತಃ ತಮ್ಮ ಜೀವನವನ್ನು ಶಿಕ್ಷಕರಾಗಿ, ಶಿಕ್ಷಣ ತಜ್ಞರಾಗಿ ಶೈಕ್ಷಣಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಆ ಮಹಾನ್ ಚೇತನಕ್ಕೆ ನಮ್ಮ ‘ಆಲೋಚನೆ’ ಈ ದಿನದಂದು ವಂದಿಸುತ್ತದೆ. ಈ ಮೂಲಕ ಸಮಸ್ತ ಗುರುಕುಲಕ್ಕೆ ತಲೆಬಾಗುತ್ತದೆ.



ಕೊನೆಯದಾಗಿ, ಈ ಆಲೋಚನೀಯವನ್ನು ಮುಗಿಸುವ ಮುನ್ನ ಡಾ.ಸರ್ವಪಳ್ಳಿ ರಾಧಾಕೃಷ್ಣರ ಕೆಲವು ಸ್ಮರಣಾರ್ಹ ಚಿಂತನೆಗಳನ್ನು ನೆನಪಿಸಿಕೊಳ್ಳೋಣ.


1. ನಮ್ಮನ್ನು ನಾವು ಅರಿಯಲು ನಮಗೆ ಸಹಾಯ ಮಾಡುವವನೆ ನಿಜವಾದ ಶಿಕ್ಷಕ


2. ನಮಗೆ ಎಲ್ಲವೂ ತಿಳಿದಿದೆ ಎಂದುಕೊಂಡರೆ ನಮ್ಮ ಕಲಿಕೆ ಅಲ್ಲಿಯೇ ನಿಲ್ಲುತ್ತದೆ.


3. ಸಂಸ್ಕೃತಿಗಳ ನಡುವೆ ಸೇತುವೆಯ ನಿರ್ಮಾಣಕ್ಕೆ ಪುಸ್ತಕಗಳು ಸಾಧನ.


4. ಜ್ಞಾನ-ವಿಜ್ಞಾನಗಳಿಂದ ಮಾತ್ರ ನಮ್ಮ ಬದುಕು ಸುಖ-ಸಂತಸ ಹೊಂದಲು ಸಾಧ್ಯ.


5. ಶಿಕ಼್ಣಣದ ಅಂತಿಮ ಫಲವೆಂದರೆ ಐತಿಹಾಸಿಕ ಸನ್ನಿವೇಶ ಮತ್ತು ಪ್ರಾಕೃತಿಕ ವೈರುದ್ಧ್ಯಗಳ ವಿರುದ್ಧ ಹೋರಾಡಬಲ್ಲ ಸ್ವತಂತ್ರ ಮನುಷ್ಯನ ನಿರ್ಮಾಣ.


6. ಜ್ಞಾನ ನಮಗೆ ಶಕ್ತಿ ನೀಡುತ್ತದೆ. ಪ್ರೀತಿ ನಮಗೆ ಸಂತೃಪ್ತಿಯನ್ನು ನೀಡುತ್ತದೆ.


7. ಶಿಕ್ಷಕರೆಂದರೆ ಈ ದೇಶದ ಅತ್ಯುತ್ತಮ ಮನಸ್ಸಾಗಿರಬೇಕು.


8. ಅನುಭವವೇ ಜ್ಞಾನ ಮತ್ತು ವಿದ್ಯೆಯ ಫಲ.


9. ವಿಶ್ವವಿದ್ಯಾಲಯಗಳ ಕಾರ್ಯವೆಂದರೆ ಕೇವಲ ಡಿಗ್ರಿ ಮತ್ತು ಡಿಪ್ಲೋಮಾಗಳನ್ನು ಹಂಚುವುದಲ್ಲ. ವಿಶ್ವಭ್ರಾತುತ್ವ ಮತ್ತು ಪ್ರಗತಿಯುತ ಶಿಕ್ಷಣ ನೀಡುವುದು.


10. ಧರ್ಮವೆಂದರೆ ಕೇವಲ ನಂಬುಗೆಯಲ್ಲ ಅದು ಸನ್ನಡತೆ


=000=






ಶ್ರೀಪಾದ ಹೆಗಡೆ , ಸಾಲಕೊಡ

ಸಹ ಸಂಪಾದಕ

19 views0 comments
bottom of page