top of page

`ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ.....'

ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ ಎಂಬುದು ಕವಿ ಬಸವಣ್ಣನ ಪ್ರಸಿದ್ಧ ಸಾಲು. ಸಂಸ್ಕೃತ ಭೂಯಿಷ್ಟವಾಗಿದ್ದ ಕನ್ನಡ ಕಾವ್ಯ, ಅರಮನೆಗೆ,ಪಂಡಿತರಿಗೆ ಮೀಸಲಾಗಿದ್ದ ಕನ್ನಡ ಕಾವ್ಯವನ್ನು ಜನ ಸಾಮಾನ್ಯನ ನೋವು ನಲಿಗೆ, ಮನಸಿನ ಸೂಕ್ಷ್ಮತೆ ಮತ್ತು ಬದುಕಿಗೆ ಒಗ್ಗಿಸಿದ್ದು ವಚನ ಸಾಹಿತ್ಯ. ಜನ ಸಾಮಾನ್ಯನ ಕುರಿತಾಗಿ ಅಷ್ಟೇ ಅಲ್ಲ, ಜನ ಸಾಮಾನ್ಯನೂ ಬರೆಯುವಂತೆ ಮಾಡಿದ ಕಾಲ ಅದು. 12ನೇ ಶತಮಾನದ 25 ವರ್ಷಗಳ ಕಾಲ ಕರ್ನಾಟಕವನ್ನು ಅದರಲ್ಲೂ ಕಲ್ಯಾಣ ಕರ್ನಾಟಕವನ್ನು ಹರಡಿಕೊಂಡಿದ್ದ ವಚನ ಚಳುವಳಿ ಅಕ್ಷರ ಚಳುವಳಿ ಸಹ ಹೌದು. ಸಾಮಾಜಿಕ ಸಮಾನತೆಗಾಗಿ ನಡೆದ ಜೀವಪರ ಕಾಳಜಿಯ ಹಂಬಲ, ಗಂಡು ಹೆಣ್ಣು ಬೇಧವಿಲ್ಲದ ಸಮ ಸಮಾಜಕ್ಕಾಗಿ ನಡೆದ ಹೋರಾಟ, ಬದುಕಿನ ಕಾಯಕದ ಜೊತೆ ನಡೆದದ್ದು ಮತ್ತೊಂದು ದಾಖಲೆ. ಈ ಮಾದರಿಯ ಚಳುವಳಿ ಜಗತ್ತಿನ ಯಾವ ದೇಶದಲ್ಲೂ, ಅವುಗಳ ಇತಿಹಾಸದಲ್ಲೂ ಕಾಣಸಿಗುವುದಿಲ್ಲ. ಹಾಗಾಗಿ ಕನ್ನಡಿಗರಾದ ನಮಗೆ 12ನೇ ಶತಮಾನ ಮತ್ತು ವಚನ ಚಳುವಳಿ ಮಹತ್ವದ್ದು. ಅದರಲ್ಲೂ ಮಹಿಳೆ ಮತ್ತು ಶ್ರಮಜೀವಿಗಳಿಗೆ 12ನೇ ಶತಮಾನದ ಒಂದು ಮಹೋನ್ನತ ಘಟನೆಯನ್ನು ನಾವು ಆಗಾಗ ಬರೆಯುವ ಮೂಲಕ, ಮಾತನಾಡುವ ಮೂಲಕ ಮುನ್ನೆಲೆಗೆ ತರಬೇಕಾಗಿದೆ. ಕನ್ನಡ ಕವಿಗಳು ನನಗೆ ಕಲಿಸಿದ ಪಾಠ ಎಂಬ ಸಾಲು ಜಗ್ಗನೆ ದೀಪದಂತೆ ನನಗೆ ಜು.19 ರವಿವಾರ ಹೊಳೆಯಿತು. ಇದಕ್ಕೂ ಮುನ್ನ ಅಭಿನವ ಪಂಪನೆಂದೇ ಹೆಸರಾದ ನಾಗಚಂದ್ರನ ರಾಮಚಂದ್ರಚರಿತ ಪುರಾಣ ಎಂಬ ಕಾವ್ಯದ ಒಂದು ಸಾಲು ಮಿಂಚಿತು. ``ಅಬ್ದಿಯುಂ ಓರ್ಮೆ ಕಾಲ ವಶದಿಂ ಮರ್ಯಾದೆಯಂ ದಾಂಟದೆ'' ಅಂದರೆ ಕಾಲದ ಕಾರಣದಿಂದ ಸಮುದ್ರವೂ ಸಹ ತನ್ನ ಸೀಮಾ ರೇಖೆಯನ್ನು ಮೀರುತ್ತದೆ ಎಂದು. ಸೀತೆಯನ್ನು ನೋಡಿದಾಗ ರಾವಣನ ಮನಸು ಹೇಗೆ ನೀತಿಯ ಗೆರೆ ದಾಟಿತು ಎಂಬುದನ್ನು ವಿವರಿಸಲು ನಾಗಚಂದ್ರ ಈ ಉಪಮೆಯನ್ನು,ಹೋಲಿಕೆಯನ್ನು ನೀಡುತ್ತಾನೆ. ಹಾಗೆ ಮುಂದುವರಿದು ರಾವಣನ ಚಂಚಲತೆ ಕುರಿತು ಹೇಳುತ್ತಾ ``ಪದ್ಮಪತ್ರದ ಜಲಬಿಂದುವಿನಂತೆ ಚಲಿತ ಮಾದುದು ಚಿತ್ತಂ'' ಎನ್ನುತ್ತಾನೆ. ಕಮಲದ ಎಲೆಯ ಮೇಲಿನ ನೀರಿನ ಬಿಂದು ಅತ್ತಿತ್ತ ಓಡಾಡುವಂತೆ ಸೀತೆಯನ್ನು ನೋಡಿದಾಗ ರಾವಣನ ಮನಸ್ಸಿನಸ್ಥಿತಿಯಾಯಿತು ಎಂದು ನಾಗಚಂದ್ರ ವಿವರಿಸುತ್ತಾನೆ. ಒಂದು ಕಡೆ ಬಸವಣ್ಣ, ಮತ್ತೊಂದು ತುದಿಯಲ್ಲಿ ನಾಗಚಂದ್ರ ಇಬ್ಬರೂ ಮನದಲ್ಲಿ ಹಾದುಹೋದರು. ಸಾಹಿತ್ಯದಿಂದ, ಕಲೆ ಕಾವ್ಯದಿಂದ ಮನುಷ್ಯ ಕಲಿಯುವುದು ತುಂಬಾ ಇದೆ. ಸಾಹಿತ್ಯದ ಒಡನಾಟ ಮನುಷ್ಯ ಏಕಾಂತ ಗೆಲ್ಲಲು, ಬದುಕನ್ನು ಗೆಲ್ಲಲು ಇರುವ ಪ್ರಮುಖ ಸಾಧನ. ಸಂಗೀತ ನೀಡುವ ಸಂತೋಷವನ್ನು, ಸಾಹಿತ್ಯ ನೀಡಬಲ್ಲದು. ಬಸವಣ್ಣನ ವಚನಕ್ಕೆ ಮರಳಿ ಬರೋಣ, ಕೂಡಲಸಂಗಮನನ್ನು ಸಾಕ್ಷಿಯಾಗಿಟ್ಟುಕೊಂಡೇ ವಚನಗಳನ್ನು ಬರೆದ ಬಸವಣ್ಣ ಆನು ಒಲಿದಂತೆ ಹಾಡುವೆನು, ನಿನಗೆ ಕೇಡಿಲ್ಲವಾಗಿ ಅಂದರೆ ದೇವರಿಗೆ ಕೇಡಾಗದಂತೆ ನಾನು ಬರೆಯುವೆ, ಬದುಕುವೆ ಎನ್ನುತ್ತಾನೆ. ಹಾಗದರೆ ಬಸವಣ್ಣನ ದೃಷ್ಟಿಯಲ್ಲಿ ಯಾರು ದೇವರು? ಇದನ್ನು ಮೊದಲು ನೋಡೋಣ. ಬಸವಣ್ಣನ ದೃಷ್ಟಿಯಲ್ಲಿ ಮನುಷ್ಯರೇ ದೇವರು. ಇತರರೆಗೆ ಕೇಡು ಬಗೆಯದಿರುವ, ದುಡಿದು ತಿನ್ನುವವ ದೇವರು. ಕಾಯಕದಲ್ಲಿ ನಿರತನಾದೆಡೆ ಲಿಂಗವನ್ನಾದರೂ ಮರೆಯಬೇಕು, ಅಂಗವನ್ನಾದರೂ ಮರೆಯಬೇಕು, ಜಂಗಮವನ್ನಾದರೂ ಮರೆಯಬೇಕು ಎಂಬುದು ಬಸವಣ್ಣನ ನಿಲುವು. ಸ್ಥಾವರವಾದ ಲಿಂಗ ಮತ್ತು ಅಶಾಶ್ವತವಾದ ದೇಹ, ಸಂಚಾರಿಯಾದ ಜಂಗಮ( ನೀತಿ ಸಾರುತ್ತಾ , ನೀತಿಯನ್ನೇ ಬದುಕುತ್ತಾ, ಚಲನಶೀಲವಾಗಿರುವ ಶರಣರು, ಕೂಡಲ ಸಂಗಮನ ಪ್ರತಿನಿಧಿಗಳು ಅನ್ನೋಣ) ಇವರೇ ಬಂದು ಎದುರು ನಿಂತರೂ ಕಾಯಕ ಮಾಡುವಾಗ ಮರೆಯಬೇಕು. ಕಾಯಕ(ಕೆಲಸ)ದ ನಂತರ ಲಿಂಗ, ಅಂಗ, ಗುರು ಜಂಗಮರು. ಕಾಯಕಕ್ಕೆ ಮೊದಲ ಆದ್ಯತೆ, ಲಿಂಗ, ಗುರುವಿಗೆ ಎರಡನೇ ಆದ್ಯತೆ. ಇದು ಶರಣರು ಕಾಯಕಕ್ಕೆ,ದುಡಿಮೆಗೆ ನೀಡಿದ ಮಹತ್ವ. ಬಸವಣ್ಣ ತುಂಬಾ ವೈಚಾರಿಕ, ಭಾವುಕ ಮನುಷ್ಯ ಎಂಬುದಕ್ಕೆ ಆತನ ವಚನದ ಅನೇಕ ಸಾಲುಗಳನ್ನು ನೆನಪಿಸಿಕೊಳ್ಳಬಹುದು. ಲೋಕದ ಡೊಂಕ ನೀವೇಕೆ ತಿದ್ದುವಿರಿ ಎನ್ನುವ ಬಸವಣ್ಣ, ವ್ಯವಸ್ಥೆಯ ಭ್ರಷ್ಟಾಚಾರ ನೋಡಿ, ಬೇಲಿಯೇ ಎದ್ದು ಹೊಲವ ಮೇಯ್ದೊಡೆ, ಏರಿ ನೀರುಂಬೊಡೆ, ತಾಯಿಯ ಮೊಲೆ ಹಾಲು ವಿಷವಾದೊಡೆ ಇನ್ನಾರಿಗೆ ದೂರಲಿ ಕೂಡಲಸಂಗಮದೇವಾ ಎನ್ನುತ್ತಾನೆ. ಬಿಜ್ಜಳನ ಅರಮನೆಯಲ್ಲಿ ಪುರೋಹಿತಶಾಹಿಯ ಜನ ವಿರೋಧಿ ಆಲೋಚನೆಗಳನ್ನು ಕಂಡೇ ಬಸವಣ್ಣ ಈ ವಚನ ಬರೆದಿರುವಲ್ಲಿ ಅನುಮಾನವೇ ಇಲ್ಲ. ಬಿಜ್ಜಳನ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿ, ಜನಪರ ಅರ್ಥನೀತಿ ರೂಪಿಸಿದ್ದು, ಬಿಜ್ಜಳನ ಸುತ್ತ ಇದ್ದ ವಂಧಿಮಾಗಧರಿಗೆ ಕಿರಿಕಿರಿಯನ್ನು, ಅಸಹನೆಯನ್ನು ತಂದಿತ್ತು. ಬಸವಣ್ಣನನ್ನು ಹಣಿಯಲುನ ಸೂಕ್ತ ಸಂದರ್ಭಕ್ಕೆ ಅವರು ಕಾದಿದ್ದರು. ಮುಂದೆ ಬಿಜ್ಜಳನ ರಾಜ್ಯದಲ್ಲಿ ಅಂತರ್ಜಾತಿ ವಿವಾಹದ ಸಂದರ್ಭ, ಸನ್ನಿವೇಶ ಬಂದದ್ದೇ ತಡ, ಧರ್ಮ ವಿರೋಧಿ ಕೃತ್ಯ ಇದು ಎಂದು ಬಿಜ್ಜಳನ ಕಿವಿಯೂದುವಲ್ಲಿ ಯಶಸ್ವಿ ಯಾಯಿತು ವ್ಯವಸ್ಥೆ. ಇವತ್ತಿನ ಅರಸೊತ್ತಿಗೆಯಲ್ಲಿ ನಡೆಯುವ ರಾಜಕಾರಣಕ್ಕೂ, 12 ನೇ ಶತಮಾನದಲ್ಲಿ ಬಿಜ್ಜಳನ ಸುತ್ತ ನಡೆದ ವಿದ್ಯಮಾನಕ್ಕೂ ಅಂತ ವ್ಯತ್ಯಾಸವೇನಿಲ್ಲ. ಘಟನೆಗಳು, ಕಾರಣಗಳು ಭಿನ್ನ ಭಿನ್ನ ಇರಬಹುದು ಅಷ್ಟೇ. 12ನೇ ಶತಮಾನದ ಘಟನಾವಳಿಗಳ ಕುರಿತೇ ಕನ್ನಡದಲ್ಲಿ ನಾಲ್ಕು ನಾಟಕಗಳು ಬಂದಿವೆ. ಸಂಕ್ರಾತಿ, ತಲೆದಂಡ, ಕೆಟ್ಟಿತ್ತು ಕಲ್ಯಾಣ, ಮಹಾಚೈತ್ರ. ಲಂಕೇಶ್, ಗಿರೀಶ್ ಕಾರ್ನಾಡ,ಎಂ.ಎಂ.ಕಲಬುರ್ಗಿ,ಎಚ್.ಎಸ್.ಶಿವಪ್ರಕಾಶ್. ಈ ನಾಲ್ವರು ನಾಟಕಗಳ ಮೂಲಕ 12ನೇ ಶತಮಾನದ ಘಟನಾವಳಿಗಳನ್ನು ಪುರ್ನನಿರ್ಮಿಸಲು ಯತ್ನಿಸಿದ್ದಾರೆ. ಇದು ಕನ್ನಡದ ಪರಂಪರೆ ಎಷ್ಟು ಮಹತ್ವದ್ದು, ಯಾವ ಕಡೆಗೆ ಕನ್ನಡದ ಸಂಸ್ಕøತಿಯ ತುಡಿತ ಇತ್ತು ಎಂಬುದುನ್ನು ತೋರಿಸುತ್ತದೆ. ಇದನ್ನೇ ನಾವು ಆಗಾಗ ಮುನ್ನೆಲೆಗೆ ತಂದು ಯುವಜನರ ಮುಂದೆ ಇಡಬೇಕಾಗಿದೆ. ಇಂಥ ಮಾನವಪರ ಪರಂಪರೆ ಪರಿಚಯಿಸಲು ಪ್ರಯತ್ನಗಳು ಆಗಿಯೇ ಇಲ್ಲ ಎನ್ನುವಂತಿಲ್ಲ. 21ನೇ ಶತಮಾನದಲ್ಲಿ ಸಹ ವಚನ ಚಳುವಳಿಯ ಮಹತ್ವ ಸಾರಲು ಪ್ರಯತ್ನಗಳು ನಡೆದಿವೆ. ಆದರೆ ಅಂಥ ಹೋರಾಟಕ್ಕೆ ವ್ಯಾಪಕತೆ ದಕ್ಕಿಲ್ಲ. ಕಾರಣ ನಮ್ಮ ಸಮಾಜ ಜಾತಿ ವ್ಯವಸ್ಥೆಯಲ್ಲಿ ಹಂಚಿಹೋಗಿದೆ. ಮೀಸಲಾತಿಯ ಉದ್ದೇಶ ಸಹ ಸಮಾನತೆ ಸಾರುವ ಸಮಾಜ ಕಟ್ಟಲು ಎಂಬ ಅದರೊಳಗಿನ ಆಶಯವನ್ನು ಮೀಸಲಾತಿ ಅನಭವಿಸುವವರು ಮತ್ತು ಮೀಸಲಾತಿ ವಿರೋಧಿಸುವವರು ಕುಳಿತು ಚರ್ಚಿಸಲು ಸಿದ್ಧರಿಲ್ಲ. ಸಾಣೇಹಳ್ಳಿಮಠದ ಶ್ರೀ ಪಂಡಿತಾರಾಧ್ಯರು ಮತ್ತೆ ಕಲ್ಯಾಣ ಎಂಬ ಪ್ರಮುಖ ತಲೆಬರೆಹದಡಿ 2019ರಲ್ಲಿ ಇಡೀ ಕರ್ನಾಟಕದ 30 ಜಿಲ್ಲೆಗಳನ್ನು ಸುತ್ತಿದರು. ಆಗ ಯುವಜನರನ್ನೇ ಪ್ರಮಖವಾಗಿಟ್ಟುಕೊಂಡು ಅವರೆತ್ತುವ ಎಲ್ಲಾ ಪ್ರಶ್ನೆಗಳಿಗೆ ಸಂಯಮದಿಂದ ಉತ್ತರಿಸಿದರು. ವಚನಕಾರರನ್ನು, ಅವರ ಅಶಯಗಳನ್ನು, ಅವರ ಉದ್ದೇಶದ ಸಮಾಜವನ್ನು ವಿದ್ಯಾರ್ಥಿ ಯುವಜನರ ಮುಂದಿಡುವುದು ಮತ್ತೆ ಕಲ್ಯಾಣದ ಉದ್ದೇಶವಾಗಿತ್ತು. 30 ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ ಇದೀಗ ಕನ್ನಡಿಗರ ಮುಂದೆ ಪುಸ್ತಕರೂಪದಲ್ಲಿ ದಾಖಲಾಗಿವೆ. ಸಾಸಿವೆಯಷ್ಟು ಸುಖಕ್ಕೆ : ವಚನ ಸಾಹಿತ್ಯ ಕಾಲದಲ್ಲಿಯೇ ಬಂದ ಅನುಭಾವಿ ಕವಿ ಅಲ್ಲಮ ಪ್ರಭು ಮಾತೆಂಬುದು ಜೋತಿರ್ಲಿಂಗ ಎನ್ನುತ್ತಾನೆ. ಬೆಟ್ಟದ ನೆಲ್ಲಿಕಾಯಿ, ಸಮುದ್ರದೊಳಗಣ ಉಪ್ಪು ಎತ್ತಣಿಂದ ಎತ್ತ ಸಂಬಂಧವಯ್ಯ ಎಂದ. ಬೆಡಗಿನ ವಚನಗಳನ್ನು ಬರೆದ, ಅವುಗಳನ್ನು ಅನುಭವ ಮಂಟಪದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಕ್ಕ ಮಹಾದೇವಿ, ಶಿವಯೋಗಿ ಸಿದ್ಧರಾಮರೊಡನೆ ವಾದಕ್ಕಿಳಿದು ಮಂಡಿಸುತ್ತಿದ್ದ ಅಲ್ಲಮ ಪ್ರಭು ಕನ್ನಡಿಗರಿಗೆ ಒಂದು ಅಚ್ಚರಿ. ``ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ'' ಎಂದ ಅಲ್ಲಮಪ್ರಭು ನಮ್ಮ ಬದುಕಿನ ಬಹುದೊಡ್ಡ ಗುರು. ಬುದ್ಧ ಸಹ ಸಾವಿಲ್ಲದ ಮನೆಯ ಸಾಸಿವೆ ತರುವಂತೆ ಒಬ್ಬ ಹೆಣ್ಮಗಳಿಗೆ ಹೇಳಿದೆ. ಸಾವನ್ನಪ್ಪಿದ ತನ್ನ ಮಗುವನ್ನು ಬದುಕಿಸಿಕೊಡು ಎಂದು ಬಂದ ತಾಯಿಗೆ ಬುದ್ಧನ ಸಾಂತ್ವಾನ...ಸಾವಿಲ್ಲದ ಮನೆಯ ಸಾಸಿವೆ ಕಾಳು ತರುವಂತೆ ಹೇಳಿದ್ದು. ಇದು ನಮ್ಮ ಸಾಧಕರು ಜನ ಸಾಮಾನ್ಯರ ದುಃಖಕ್ಕೆ ಹುಡುಕಾಡಿದ ಉತ್ತರ. ವಚನಕಾರ ಅಲ್ಲಮ ಹೇಳುತ್ತಾನೆ ; ` ಹರಿವ ನದಿಗೆ ಮೈಯಲ್ಲಾ ಕಾಲು, ಬೀಸುವ ಗಾಳಿಗೆ ಮೈಯಲ್ಲಾ ಕಿವಿ, ಉರಿವ ಆಗ್ನಿಗೆ ಮೈಯಲ್ಲಾ ನಾಲಿಗೆ ' ಇಂತಹ ಪ್ರತಿಮೆಗಳ ಸೃಷ್ಟಿ , ಅನುಭಾವದ ಶರಣರಿಗೆ ಮಾತ್ರ ಸಾಧ್ಯ. ಹಾಗೂ 12ನೇ ಶತಮಾನದಲ್ಲೇ ಕನ್ನಡ ಭಾಷೆಯ ಬಳಕೆಯ ಬೆಡಗನ್ನು ಸಹ ಇದು ದಾಖಲಿಸುತ್ತದೆ. ಸಂತೆಯಲ್ಲೊಂದು ಮನೆಯ ಮಾಡಿ: ಅಕ್ಕ ಮಹಾದೇವಿ ಚೆನ್ನಮಲ್ಲಿಕಾರ್ಜುನನ ಹುಡುಕಿ ಹೊರಟವಳು. ಶಿವಮೊಗ್ಗ ಜಿಲ್ಲೆಯ ಅರಸು ಮನೆತನವೊಂದರ ರಾಜ ಕೌಶಿಕನ ಪತ್ನಿಯಾಗಿದ್ದ ಅಕ್ಕ ಉಡುತಡೆಯಿಂದ ಶ್ರೀಶೈಲಕ್ಕೆ ಹೊರಟವಳು. ದಾರಿಯಲ್ಲಿ ಅನುಭವ ಮಂಟಪದಲ್ಲಿದ್ದು, ಅಲ್ಲಿಯ ಶರಣರ ಜೊತೆ ತನ್ನ ಅರಿವಿನ, ಜ್ಞಾನದ ಬೆಳಕು ಚೆಲ್ಲಿದವಳು. ``ಸಾಯುವ ಕೆಡುವ ಗಂಡನನ್ನು ಉರಿಯ ಒಲೆಯೊಳಗಿಕ್ಕು'' ಎಂದು ಬರೆದು ಹಾಡಿದಾಕೆ. ಆಕೆಯ ಪ್ರಸಿದ್ಧ ವಚನ ಸಮುದ್ರ ತಡಿಯಲ್ಲೊಂದು ಮನೆಯ ಮಾಡಿ ನೆರೆತೊರೆಗಳಿಗೆ ಅಂಜಿದೊಂಡೆಯೆಂತಯ್ಯ, ಬೆಟ್ಟದಾ ಮೇಲೊಂದು ಮನೆಯ ಮಾಡಿ ಖಗಮೃಗಗಳಿಗೆ ಅಂಜಿದೊಡೆಯೆಂತಯ್ಯ, ಸಂತೆಯಲ್ಲೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಯೆಂತಯ್ಯ....? ಇದು ನಮ್ಮ ಇವತ್ತಿನ ಮಹಿಳೆಯರು ಆಗಾಗ ನೆನಪಿಸಿಕೊಳ್ಳಬೇಕಾದ ವಚನ. ಕೊನೆಯ ಮಾತು: ಮಾತು ಸೋತಾಗ ಮೌನಕ್ಕೆ ಶರಣಾಗಿ ಓದಬೇಕು. ಪಂಪನ್ನು ಎದೆಗೆ ಹಾಕಿಕೊಂಡರೆ, ವಚನಕಾರರು ನಿಮ್ಮ ಹೃದಯ ತುಂಬುತ್ತಾರೆ. ಕನಕದಾಸ, ಶರೀಫರು ನಿಮಗೆ ಕಿವಿಮಾತು ಹೇಳಿಯಾರು. ಆಧುನಿಕ ಕನ್ನಡ ಕಾಲಕ್ಕೆ ಬಂದೆ ಬೆಳಕಿನ ಬದಿಯಲ್ಲಿ ಪ್ರೀತಿ ಕಂಡ ಬೇಂದ್ರೆ, ಎದೆಯ ದನಿಗೆ ಮಿಗಿಲಾದ ಶಾಸ್ತ್ರವಿಹುದೇ ಎಂದ ಕುವೆಂಪು ಕೈ ಹಿಡಿದು ನಡೆಸಿಯಾರು. ಅಕ್ಷರವನ್ನು ಬೆಳಕಾಗಿಸಿಕೊಳ್ಳುವುದು, ಪ್ರತಿಭೆಯನ್ನು ಬಿತ್ತಿ ಬೆಳೆಯುವುದು ನಮ್ಮ ಮನದೊಳಗೆ ಇದೆ. .......... ನಾಗರಾಜ್ ಹರಪನಹಳ್ಳಿ





126 views0 comments
bottom of page