top of page

ಆತಂಕ [ ಕವನ - ಚಿತ್ರಾಲೋಚನೆ -3]

Updated: Sep 8, 2020


ನಾನು ಹೇಗಾದರೂ ಬರಬೇಕು ಹೊರಗೆ!

ಅಂದು ಸಿಮೆಂಟಿನ ಕಬಂಧ ಬಾಹುವಿನಲಿ

ಸಿಲುಕಿದ್ದ ನನಗೆ

ನೀರು , ಬೆಳಕು ಕಾಣದೆ ಉಸಿರು ಕಟ್ಟಿದ ಆತಂಕ!


ಇಲ್ಲಿಗೆ ಹೇಗೆ ಬಂದೆ ಎಂಬುದು ಗೊತ್ತಿಲ್ಲ.

ಗಾಳಿಯ ಹೆಗಲೇರಿ ಅರಿವಿಲ್ಲದೆ

ಹಾರಿ ಬಂದು ಸಂದಿಯಲಿ ಬಿದ್ದ ನನಗೆ

ನೆಲಕೆ ಕಾಲೂರಿ ತಲೆ ಎತ್ತಿ

ಹೊರ ಪ್ರಪಂಚ ಕಾಣುವ ಸಹಜ ಹಂಬಲ


ವರುಣದೇವ ಕರುಣೆಯನು ಹನಿಸಿದ

ಸೂರ್ಯದೇವ ಬೆಳಕನುಣಿಸಿದ

ಇದ್ದಕಿದ್ದಂತೆ ಕಣ್ಣು ತೆರೆದೆ

ಆತಂಕದಿಂದ ಹೊರಬಂದೆನೆಂದು

ಸಂತಸದಿ ಅರಳಿ ನಿಂತೆ

ಹಾಗೆಯೆ ಇಣಕಿ ನೋಡಿದೆ

ಸನಿಹದಲಿ ನನ್ನವರು ಯಾರೂ ಕಾಣಲಿಲ್ಲ


ಇದ್ದಕಿದ್ದಂತೆ ಹತ್ತಿರ ಬಂದ

ಮನೆಯ ಯಜಮಾನನ ಕಣ್ಣಿನಲಿ

ಬಿರುಕಿನ ಕಾರಣದ ಶೋಧ


ಗೊತ್ತಿಲ್ಲಾ ಮುಂದೊದು ದಿನ

ಎಸೆದು ಬಿಡುವನೆ ಭೂಮಿ ಮಡಲಿಗೆ

ಮುರಿದು ನನ್ನ ಕತ್ತು!


ಆತಂಕ ಮರಳಿ

ಮನೆ ಮಾಡಿತ್ತು.!


ಶ್ರೀ ದೇವಿದಾಸ ಜಿ. ಭಟ್ಟ ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಗ್ರಾಮದವರು. ಅಂಕೋಲೆಯ ಗೋಖಲೆ ಕಾಲೇಜಿನಲ್ಲಿ ಪದವಿ ಪಡೆದು ತದನಂತರ ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ, ಸಂಗೀತ, ನಾಟಕ ಹಾಗೂ ಯಕ್ಷಗಾನ ಮುಂತಾದ ಲಲಿತ ಕಲೆಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಉತ್ತಮ ಕಲಾವಿದರಾಗಿದ್ದು ನಾಟಕಗಳಲ್ಲಿ ಇವರ ನಟನೆಗೆ ಪ್ರಶಸ್ತಿಗಳು ದೊರಕಿವೆ. ಅಗಾಗ ಪತ್ರಿಕೆಗಳಿಗೆ ಬರೆಯುವ ಹವ್ಯಾಸ ಹೊಂದಿರುವ ಇವರಿಗೆ ಮಿತ್ರರ ದೊಡ್ಡ ಬಳಗವೇ ಇದೆ. ಪ್ರಸ್ತುತದಲ್ಲಿ ಶ್ರೀಯುತರು ಬೆಂಗಳೂರಿನಲ್ಲಿ ವಾಸವಾಗಿದ್ದು ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

63 views2 comments
bottom of page