top of page

ಅವ್ವಾರ್ ಕರಿಯಾಕ್ ಹತ್ತರ‍್ರೀ, ಅವ್ರೀಗೆ ಮುತ್ ಬೇಕಂತ್ರಿ

ರಾಜ್ಯ ಲೆಕ್ಕಪತ್ರ ಇಲಾಖೆಯ ನಾನು, ಲರಕ್ಕ ಪರಿಶೋಧಕನಾಗಿ ಜಿಲ್ಲೆಯ ಗ್ರಾಮಪಂಚಾಯತಿಗಳ ಲೆಕ್ಕ ಪರಿಶೋಧನೆ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಒಂದು ಸ್ವಾರಸ್ಯಕರವಾದ ಘಟನೆಯನ್ನು ಇಲ್ಲಿ ಹೇಳಬೇಕೆಂದುಕೊoಡಿದ್ದೇನೆ. ಹಾವೇರಿ ಜಿಲ್ಲೆಯ ಹಳ್ಳಿಗಳ ಗ್ರಾಮ ಪಂಚಾಯಿತಿಯ ಆಡಿಟ್ ಅನ್ನು ನಾನು ಹಾಗೂ ನನ್ನ ಬ್ಯಾಚಿನ ಸ್ನೇಹಿತ ಚೊಳಿಮಠ ಇಬ್ಬರೂ ಕರ್ತವ್ಯದಲ್ಲಿದ್ದ ಸಮಯವದು. ಒಂದು ಹಳ್ಳಿಗೆ ಹೋದಾಗಲಂತೂ ಅಲ್ಲಿ ಬಸ್ಸುಗಳ ವ್ಯವಸ್ಥೆಯೂ ಸರಿಯಿಲ್ಲದೇ ಮುಖ್ಯ ರಸ್ತೆಯಿಂದ ಎಷ್ಟೋ ಮೈಲಿಗಳವರೆಗೆ ನಡೆದುಕೊಂಡೇ ಗ್ರಾಮ ಪಂಚಾಯಿತಿ ಕಛೇರಿಗೆ ಹೋಗುವ ಪರಿಸ್ಥಿತಿ ಎದುರಾಗುತ್ತಿತ್ತು. ನಡೆಯುವುದು ಆರೋಗ್ಯದ ದೃಷ್ಟಿಯಿಂದ ಒಂದು ಒಳ್ಳೆಯ ರೂಢಿಯೆಂದು ನಾವಿಬ್ಬರೂ ವಿಶಾಲ ಮನಸ್ಸಿನಿಂದ ಸಮಾಧಾನ ಮಾಡಿಕೊಳ್ಳುತ್ತ ನಡೆಯುತ್ತಿದ್ದೆವಾದರೂ, ನಮ್ಮ ಕೈಗಳಲ್ಲಿರುವ ಕಛೇರಿಯ ಅವಶ್ಯಕ ಕಾಗದ ಪತ್ರ ಹಾಗೂ ವಾರಕ್ಕೆ ಬೇಕಾಗುವಷ್ಟು ಅಗತ್ಯದ ಖಾಸಗಿ ಬಟ್ಟೆಗಳನ್ನು ತುಂಬಿದ ಪುಟ್ಟ ಸೂಟುಕೇಸು ರಟ್ಟೆಯಲ್ಲಿ ಅಸಾಧ್ಯ ನೋವನ್ನು ತರುತ್ತಿತ್ತು. 


ಒಮ್ಮೆ ಹಾಗೇ ಆಯಿತು. ಮುಖ್ಯ ರಸ್ತೆಯಿಂದ ಮೂರು ಮೈಲಿ ದೂರದಲ್ಲಿ ಪಂಚಾಯಿತಿ ಕಚೇರಿಯಿದ್ದ ಒಂದು ಸಣ್ಣ ಹಳ್ಳಿ ಅದು. ನಾವಿಬ್ಬರೂ ಬಸ್ಸನ್ನಿಳಿದು ನಮ್ಮ ನಮ್ಮ ಸೂಟುಕೇಸು ಇಳಿಸಿಕೊಂಡು ಊರವರ ಹತ್ತಿರ ಅಲ್ಲಲ್ಲಿ ವಿಚಾರಿಸುತ್ತ, ಗ್ರಾಮ ಪಂಚಾಯಿತಿಯ ದಾರಿ ಹುಡುಕುತ್ತ ನಡೆದಿದ್ದೆವು. ಪಂಚಾಯಿತಿಯ ಕಾರ್ಯದರ್ಶಿಗಳು ನಾವು ಬರುವ ಮುಂಚೆಯೇ ತಮ್ಮ ಕಾಗದ ಪತ್ರಗಳನ್ನು ಜೋಡಿಸಿಡುವ ಕಾರ್ಯದಲ್ಲಿ ಮಗ್ನರಾಗಿದ್ದುದರಿಂದ, ಅವರು ನಮ್ಮನ್ನು ತಮ್ಮ ಕಚೇರಿಯಲ್ಲೇ ಕೂತು ಕಾಯುತ್ತಿದ್ದರು. ನಾವು ಕಚೇರಿಗೆ ತಲುಪುವುದು ಒಂದರ್ಧ ಘಂಟೆ ತಡವಾದರೂ ಅವರಿಗೆ ಸ್ವಲ್ಪ ಹಿತವೇ ಅನ್ನಿಸುತ್ತಿತ್ತು. ನಾವಿಬ್ಬರೂ ಅಲ್ಲಿ ನಡೆಯಲಾರಂಭಿಸಿದ್ದೇ ತಡ, ಆ ಊರಿನ ಅನೇಕ ಸಣ್ಣ ಪುಟ್ಟ ಪೋರರು ನಮ್ಮನ್ನು ಕುತೂಹಲದಿಂದ ಹಿಂಬಾಲಿಸುತ್ತಿದ್ದರು. ನನ್ನ ಜೊತೆ ಇದ್ದ ಚೊಳಿಮಠನು 'ಈ ಮಕ್ಕಳು ಮನುಷ್ಯರನ್ನು ಕಾಣದವರ ಹಾಗೆ ಆಡ್ತಾರಲ್ಲ' ಎಂದು ಒಂದೆರಡು ಬಾರಿ ಸಿಡುಕಿದ್ದ. ನಾನೇ ಅವನನ್ನು ಸಮಾಧಾನ ಪಡಿಸಿ, ನಾನೂ ಸಹ ಚಿಕ್ಕವನಿದ್ದಾಗ ಇಂಥದೇ ಒಂದು ಹಳ್ಳಿಯಲ್ಲಿ ಹುಟ್ಟಿ ಬೆಳೆದವನಾಗಿದ್ದು ಹೀಗೆಯೇ ಹೊಸಬರು ಅಪರಿಚಿತರು ಊರಿಗೆ ಬಂದಿಳಿದರೆ, ಅವರನ್ನು ಹಿಂಬಾಲಿಸಿ ಕೌತುಕದಿಂದ ಕಾಡಿಸುತ್ತಿದ್ದುದನ್ನು ನೆನಪಿಸಿಕೊಂಡು, ಚುನಾವಣಾ ಪ್ರಚಾರ ಹಾಗೂ ಪಕ್ಕದ ಗೋಕರ್ಣ ಪಟ್ಟಣದಲ್ಲಿಯ ಕಲ್ಪನಾ ಟಾಕೀಸಿಗೆ ಬರುವ ಹೊಸ ಸಿನೇಮಾ, ಹ್ಯಾಂಡ್ಬಿಲ್ ಗಳನ್ನು , ಚಕ್ಕಡಿ ಗಾಡಿಗಳಲ್ಲಿ ಬೋರ್ಡು ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಸಿಂಗರಿಸಿ ಧಾವಿಸಿ ಅವರನ್ನು ಬೆನ್ನಟ್ಟಿ , ಹ್ಯಾಂಡ್ ಬಿಲ್ ಸಂಗ್ರಹಿಸುವ ಅಂದಿನ ಆಟಗಳನ್ನು ಅವನ ಬಳಿ ಹೇಳಿಕೊಳ್ಳುತ್ತ ದಾರಿ ಸವೆದಿತ್ತು. 


ಆ ಹುಡುಗರು ಮೊದಮೊದಲು ಓಡೋಡುತ್ತ ಸುಮ್ಮನೇ ಹಿಂದೆ ಹಿಂದೆ ಬಂದವರು, ನಾವು ಇನ್ನೂ ಸ್ವಲ್ಪ ದೂರ ದೂರ ನಡೆದಿದ್ದೇ ತೀರ ಹತ್ತಿರಕ್ಕೆ ಓಡೋಡಿ ಬಂದು , ಅದರಲ್ಲೊಬ್ಬ ಹುಡುಗ ಹೇಳಿದ್ದು ನನಗೆ ಸ್ಪಷ್ಟವಾಗಿ ಕೇಳಿದ್ದೇ ನಾನು ಅಲ್ಲೇ ತಡವರಿಸಿಬಿಟ್ಟೆ. ಐದಾರು ವರ್ಷದ ಆ ಹುಡುಗ ಎರಡೂ ಕೈಗಳನ್ನು ಒಂದಕ್ಕೊOದು ಹೆಣೆದುಕೊಳ್ಳುತ್ತ 'ನಮ್ ಅವ್ವರ‍್ರು ಕರಿಯಾಕ ಹತ್ತರ‍್ರೀ' ಎಂದುಸುರಿದ್ದೇ ನಮ್ಮ ಭಯಕ್ಕೆ ಕಾರಣವಾಗಿತ್ತು. ಆ ಹುಡುಗ ಏನು ಹೇಳುತ್ತಿದ್ದಾನೆಂದು ಈಗ ಧೈರ್ಯವಾಗಿ ಆಲಿಸಿದ ಚೊಳಿಮಠ, 'ಕೇಳ್ದಿಯೇನ ? ಅವರ ಅವ್ವ ಕರಿಯಾಕ ಹತ್ತಾಳಂತ' ಎಂದೇನೋ ಅನ್ನುತ್ತ ನನ್ನ ಮುಖ ಅಚ್ಚರಿಯಿಂದಲೂ ತುಂಟತನದಿOದಲೂ ನೋಡಿದ. ನಾನು ಅವನ ಮಾತಿಗೆ ಕಿವಿಗೊಡದೇ ಮುಂದೆ ಮುಂದೆ ನಡೆಯುತ್ತಿದ್ದೆ. ನಮ್ಮ ಚೊಳಿಮಠ ಅತ್ಯಂತ ಉತ್ಸಾಹದಿಂದ 'ಏನೋ ತಮ್ಮಾ, ಏನ ಅಂದ್ಯಲ್ಲ ಈಗ ?' ಎಂದು ಮತ್ತೆ ಮರುಪ್ರಶ್ನೆ ಹಾಕಿದ್ದೇ ಆ ಸಣ್ಣ ಹುಡುಗ ಪುನಃ ಪುನಃ ನಾಚಿ ನೀರಾಗುತ್ತ 'ನಮ್ ಮನೀ ಅಲ್ ಐತ್ರೀ, ನಮ್ ಅವ್ವಾರ್ ಕರಿಯಾಕ ಹತ್ತರ‍್ರೀ' ಎನ್ನುತ್ತ ನಿಂತಿದ್ದು ಕಂಡು ನಾನೂ ನಿಂತು 'ಏ ಯಾರ ನೀನು? ಏನ್ ಅಂತ್ ತಿಳಕೊಂಡೀ ನಮ್ಮನ್ನ? ' ಎಂದು ಹೆದರಿಸುವಂತೆ ಕೇಳಿದೆ. ಅಷ್ಟಕ್ಕೂ ಸುಮ್ಮನಿರದ ಆ ಹುಡುಗ ಮತ್ತೆ ನಾಚಿಕೊಳ್ಳುತ್ತ ತನ್ನ ಎರಡೂ ಹಸ್ತ ಮೊಣಕೈಗಳನ್ನು ಹೊಸೆದುಕೊಳ್ಳುತ್ತ 'ಅವ್ವಾರ್ ಕರಿಯಾಕ ಹತ್ತರ‍್ರೀ' ಅ೦ದ . ನನಗೆ ಸಿಟ್ಟು ನೆತ್ತಿಗೇರಿತ್ತು. ಚೊಳಿಮಠ ನೋಡುತ್ತಲೇ ಒಳಗೊಳಗೆ ನಗುತ್ತಲೇ ಪಟ್ಟದಾಗ ಅಂಥ ವ್ಯವಹಾರ ನಡೆಯಾಕ ಹತ್ತೇತಿ ಅಂದ್ರ ಈ ಹಳ್ಳೀಗೂ ಆ ಹೊಲಸ ರ‍್ವಾಗ ಬಡಕೊಂಡೇತೆನ?' ಎನ್ನುತ್ತ ಆ ಹುಡುಗನನ್ನೇ ದುರುಗುಟ್ಟಿ ನೋಡಲಾರಂಭಿಸಿದ. ಬೆನ್ನು ಹತ್ತಿದ ಆ ಹುಡುಗನನ್ನು ನಾನು 'ಹೊಕ್ಕಿಯೇನಲೇ, ಆಟಾ ಹಚ್ಚಿಯೆನ? ನಡಿ ನಡಿ' ಎನ್ನುತ್ತ ಹಿಂದಕ್ಕಟ್ಟಿಬಿಡಲು ಪ್ರಯತ್ನಿಸಿದೆ. 


ಆಗ ಹುಡುಗ ಇನ್ನೂ ಚೂರು ಮುಂದೆ ಬಂದು , ಹಿಂದಿಗಿ0ತ ಜೋರಿನಿಂದಲೂ ಧೈರ್ಯದಿಂದಲೂ ಪುನಃ 'ಅವ್ವಾರ್ ಕರಿಯಾಕ ಹತ್ತರ‍್ರೀ, ಅವ್ರೀಗ್ ಮುತ್ ಬೇಕಂತ್ರೀ' ಎಂದು ಗಂಭೀರವಾಗಿಯೇ ಅಂದ. ಆದರೆ ಚೊಳಿಮಠ ಅದನ್ನು ತಮಾಷೆ ಮಾಡುತ್ತ 'ಏ ಬಾರೋ ಪಾಪ ಮುತ್ ಬೇಕಂತ, ಕೊಟ್ ಬರೂನ್ ಬಾರೋ' ಅಂತ ನಗಲು ಆರಂಭಿಸಿ, ನಂತರ ಹುಡುಗರ ಬಳಿ ತಿರುಗಿ ಕಣ್ಣು ಬಿಟ್ಟು ಹೆದರಿಸಿದಂತೆ ಮಾಡಿ 'ಹೊಕ್ಕೀರೋ ಇಲ್ಲೋ, ತಥ್ ನಿಮ್ಮ' ಎನ್ನುತ್ತ ಹೊಡೆಯಲು ಹೋದ ಹಾಗೆ ಕೈಯೆತ್ತಿ ಅಟ್ಟಿಸಿಕೊಂಡು ಹೋದ. ಹಾಗೇ ಆ ಮಕ್ಕಳನ್ನು ಹಿಮ್ಮೆಟ್ಟಿಸಲು ಶತ ಪ್ರಯತ್ನ ಮಾಡಿದ. ನಾನು ತುಸು ಗಾಬರಿಯಿಂದಲೇ ತಿರುಗಿ, ಏನನ್ನೂ ಮಾತನಾಡದೇ ಲಗುಬಗೆಯಿಂದ ಹೆಜ್ಜೆ ಹಾಕುತ್ತ, ಅಲ್ಲೇ ಎದುರು ಕಂಡ ಪಂಚಾಯಿತಿ ಕಚೇರಿಯೊಳಗೆ ಅವಸರದಿಂದಲೇ ಹೊಕ್ಕಿ ಕೂತೆ. ಚೊಳಿಮಠನೂ ನನ್ನನ್ನು ಹಿಂಬಾಲಿಸಿದ. ಆಗ ಅಷ್ಟೊತ್ತಿನಿಂದ ಹಿಂಬಾಲಿಸುತ್ತಿದ್ದ ಪುಟ್ಟ ಹುಡುಗರ ಗುಂಪು ಇದ್ದಲ್ಲೇ ಕರಗಿ ಹೋಗಿತ್ತು. ನಾವಿಬ್ಬರೂ ಹತ್ತು ನಿಮಿಷ ಸುಧಾರಿಸಿಕೊಂಡಾದ ನಂತರ, ಕೇವಲ ಫೋನಿನಲ್ಲಷ್ಟೇ ಮಾತನಾಡಲು ಸಿಕ್ಕ ಪಂಚಾಯಿತಿ ಕಾರ್ಯದರ್ಶಿಯನ್ನು ಪರಿಚಯ ಮಾಡಿಕೊಳ್ಳುತ್ತ, ಈ ಊರಿನಲ್ಲಿಳಿದಾಗ, ಬರುವ ದಾರಿಯಲ್ಲಿ ನಮಗಾದ ಆ ಅನುಭವವನ್ನು ಯಾವುದೋ ಲಹರಿಯಲ್ಲಿ ಹೇಳುತ್ತಿರುವುದನ್ನು ಕೇಳಿದ ಆ ಕಾರ್ಯದರ್ಶಿ ಶಾಂತಚಿತ್ತನಾಗಿ 'ನೀವ್ ತಪ್ ತಿಳಕೊಂಡಿರಿ ಸರ್, ಈ ಹಳ್ಳೀಗ್ ಆಗಾಗ ಇಂಥದೇ ಸೂಟುಕೇಸನ್ನು ಹಿಡಿದುಕೊಂಡು ಮುತ್ತು ಮಾರುವವರು ರ‍್ತಾರ‍್ರೀ, ಆ ಮಕ್ಕಳು ಅವರೇ ನೀವು ಅಂತ ತಿಳಕೊಂಡು ಹಿಂಬಾಲ್ ಬಿದ್ದಾವ್ರೀ, ಅವ್ಕೇನ್ ತಿಳಿತಾವ್ರೀ ಪಾಪ' ಎನ್ನುತ್ತ ಪ್ಲಾಸ್ಕಿನಲ್ಲಿಯ ಬಿಸಿ ಚಹ ಬಗ್ಗಿಸಿಕೊಡುತ್ತ ಅವರು ತಮ್ಮ ಕಾಗದ ಪತ್ರಗಳ ಕಡತಗಳನ್ನು ನಮ್ಮ ಮುಂದಿಟ್ಟರು. ನಾವು ಕೆಲದಿನಗಳ ನಂತರ ಆಡಿಟ್ ಮುಗಿಸಿ ಹಿಂತಿರುಗಿ ಬರುತ್ತ, ಇವತ್ತಿಂದ ಇಂಥ ಸೂಟುಕೇಸನ್ನು ಯಾವತ್ತೂ ಹಿಡಿಬಾರ್ದು ಅಂತ ನಿರ್ಧರಿಸಿ ಹುಬ್ಬಳ್ಳಿಗೆ ಬಂದಿಳಿದ ಕ್ಷಣದಲ್ಲೇ ಹೆಗಲಿಗೆ ಹಾಕಿಕೊಳ್ಳುವ ಬ್ಯಾಗನ್ನು ಖರೀದಿಸಿದೆವು. ಅಂದಿನಿAದ ಇಂದಿನವರೆಗೆ ಯಾವತ್ತೂ ಆ ಸೂಟಕೇಸನ್ನು ನಾನು ನನ್ನ ವೃತ್ತಿ ಪ್ರವಾಸದ ಸಂದರ್ಭದಲ್ಲಿ ಹೊತೆಗೆದಿಲ್ಲ. -ಪ್ರಕಾಶ ಕಡಮೆ


ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದ ಪ್ರಕಾಶ ಕಡಮೆ ತಮ್ಮಲ್ಲಿ ಹುದುಗಿರುವ ಬರೆಹಗಾರನನ್ನು ಪರಿಶೋಧಿಸಿ ಹೊರತರುವ ಮೂಲಕ ಕಾವ್ಯ ಕೃಷಿಯನ್ನು ಸದಾ ನಡೆಸುತ್ತ ಬಂದಿದ್ದಾರೆ. ‘ಗಾಣದೆತ್ತು ಮತ್ತು ತೆಂಗಿನಮರ’,‘ಆ ಹುಡುಗಿ, ಹಾಗೂ ‘ಅಮ್ಮನಿಗೊಂದು ಕವಿತೆ’ ಇವರ ಪ್ರಕಟಿತ ಕವಿತಾಸಂಕಲನಗಳು. ಸದಾ ಕ್ರಿಯಾಶೀಲರಾಗಿರುವ ಇವರು ಹೊಸ ಪ್ರತಿಭೆಗಳನ್ನು ಗುರುತಿಸಿ ಬೆನ್ನು ತಟ್ಟುವ ಮೂಲಕ ದೊಡ್ಡ ಆಪ್ತವಲಯವನ್ನು ಹುಟ್ಟುಹಾಕಿದ್ದಾರೆ.. ಈ ಹಿನ್ನೆಲೆಯಲ್ಲಿ‘ ಗಾನಸುಧೆ ಜಗುಲಿ’ ಎಂಬ ಒಂದು ಆಪ್ತ ವೇದಿಕೆ ಯನ್ನು ತಮ್ಮ ಮನೆಯ ಅಟ್ಟದ ಮೇಲೆ ಕಟ್ಟಿಕೊಂಡು ಅದರ ಮೂಲಕ ಓದು, ಚರ್ಚೆ, ಕವಿಗೋಷ್ಠಿ, ಸಂವಾದ, ಸಾಹಿತಿಕ ಹಾಗೂ ಸಾಮಾಜಿಕ ವಿಷಯಗಳ ಮೇಲೆ ಚಿಂತನ ನಡೆಸುವ ಪರಿಯೊಂದು ಅವರ ಅನನ್ಯ ಸಾಹಿತ್ಯಸೇವೆಗೆ ಉತ್ತಮ ಸಾಕ್ಷಿ. ಈ ವೇದಿಕೆಯಲ್ಲಿ ಜಯಂತ ಕಾಯ್ಕಿಣಿ, ವಿವೇಕ ಶಾನುಭೋಗ, ಪ್ರಕಾಶ ರೈ, ವಸುಂಧರಾ ಭೂಪತಿ, ಬಸು ಬೇವಿನ ಗಿಡ ಮುಂತಾದವರು ಪಾಲ್ಗೊಂಡಿದ್ದರೆನ್ನುವುದು ಉಲ್ಲೇಖನಾರ್ಹ. ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರೀ ಪ್ರಕಾಶರು ಒಬ್ಬ ಸರಳ ಜೀವಿ. ಜೊತೆಗೆ ಖ್ಯಾತ ಕತೆಗಾರ್ತಿ ಶ್ರೀಮತಿ ಸುನಂದಾ ಕಡಮೆ ಇವರು ಪತ್ನಿಯಾಗಿದ್ದು, ಮಕ್ಖಳಾದ ಕಾವ್ಯಾ ಮತ್ತು ನವ್ಯಾ ಸಹ ಅಕ್ಷರಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದನ್ನು ಕಂಡಾಗ ಇವರ ಮನೆಯೇ ಸರಸ್ವತಿಯ ನಿಲಯವೆಂದರೆ ತಪ್ಪಾಗಲಾರದು



195 views2 comments
bottom of page