top of page

ರಸ್ತೆ

ಸರಬರನೆ ಹರಿದಾಡುವ ವಾಹನಗಳ ಉರಿಯನ್ನು ಸುಮ್ಮನೆ ಹೊದ್ದು ಮಲಗಿದ ರಸ್ತೆ.

ಆಗಾಗ ಮೈ ಕೊಡವಿ ಹೊಂಡ ದಿಣ್ಣೆಯಲ್ಲೋ, ಬದಿಯ ಗಟಾರದಲ್ಲೋ ವಾಹನಗಳ ಪಕ್ಕೆಲುಬು ಮುರಿಸಿ ತನಗೇನು ಗೊತ್ತಿಲ್ಲದ ಹಾಗೆ ತನ್ನ ಮಗ್ಗಲು ಬದಲಾಯಿಸಿ ಮಲಗುತ್ತದೆ.

ಅಲ್ಲಲ್ಲಿ ತಿಕ್ಕಿದ ಕುರುಹು ರಕ್ತದ ಕಲೆ ಬಿಡಿಭಾಗದ ಚೂರು ಪಂಚನಾಮೆಗೆ ಪುರಾವೆ ಒಪ್ಪಿಸಿ ಮೈಯ ಗಾಯಕೆ ಮುಲಾಮು ಹಚ್ಚುವ ಗುತ್ತಿಗೆದಾರರ ಟೆಂಡರ್ ಕನಸು ಕಾಣುತ್ತ ಮಲಗುತ್ತದೆ...

ಸವೆದ ಟಾಯರ್ ಗಳ ಲೆಕ್ಕವಿಲ್ಲ ತುಳಿದ ಪಾದಗಳಿಗಂತೂ ಎಣಿಕೆಯೇ ಇಲ್ಲ ಮಕ್ಕಳು ಯುವಕರು ಮುದುಕರು ಇಡೀ ಪರಿವಾರವೇ ತುಳಿದು ತುಳಿದು ನಡೆದು ಓಡಿ ಕುಣಿದು ಕುಪ್ಪಳಿಸಿ ಹಿಂದೆ ಮುಂದೆ ಗಾಲಿಯ ಹರಿಬಿಟ್ಟು ನರನಾಡಿಯೆಲ್ಲಾ ಅಪ್ಪಚ್ಚಿಯಾದರೂ ಸಂಕಟವ ಕಿಬ್ಬೊಟ್ಟೆಯಲ್ಲಿ ಅವುಡುಗಚ್ಚಿ ನಕ್ಕು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಎಲ್ಲೆಲ್ಲಿಗೋ ಸಾಗಬೇಕಾದವರೆನ್ನಾ ಸಾಗಿಸಿ ಒಮ್ಮೊಮ್ಮೆ ನಡುದಾರಿಯಲ್ಲೇ ಇನ್ನೆಲ್ಲಿಗೋ ಸಾಗಿಸಿಬಿಡುವ ಸಿಟ್ಟು ಹೊರಸೂಸುತ್ತಾ ಮಲಗುತ್ತದೆ...

ಮನೆಯಲ್ಲಿ ಈಗ ಬರುವರು ಎಂದು ಕಾಯುತ್ತಿರುವ ಜೀವಕ್ಕೆ ಏಕಾಏಕಿ ಆಘಾತಕಾರಿ ಸುದ್ದಿ ರವಾನಿಸಿ ಕಣ್ಣೀರಿನ ಮನದ ಹಿಡಿ ಶಾಪ ಹಾಕಿಸಿಕೊಂಡು ನಡೆವ ಜೀವ ತೆವಳುವಂತೆ ಅಂಗವೈಕಲ್ಯಗೊಳಿಸಿ ಕರುಳ ಬಳ್ಳಿಯನ್ನೋ... ಹೆತ್ತವರನ್ನೋ... ಕತ್ತರಿಸಿ ಅನಾಥರಾಗಿಸಿ, ಸಾಕ್ಷಿಯಾಗಿ ತೆಪ್ಪಗೆ ಮಲಗುತ್ತದೆ.

ಕೊಳ್ಳೆಬಾಕ ಬಕಾಸುರರ ಹೊಟ್ಟೆಗೆ ತನ್ನ ಮೈಯ ಹೊದಿಕೆಯ ಅಂದಾಜು ಪಟ್ಟಿ ಬರೆಸಿ ತಾನು ಮಾತ್ರ ಗಾಳಿ ಮಳೆ ಬಿಸಿಲು ಚಳಿಗೆ ನರಳುತ್ತ ಮೌನವಾಗಿ ಮಲಗುತ್ತದೆ ಈ ರಸ್ತೆ ಎಂದೆಂದಿಗೂ...

-ಬಾಲಕೃಷ್ಣ ದೇವನಮನೆ, ಬೆಳಂಬಾರ


ಬಾಲಕೃಷ್ಣ ದೇವನಮನೆ ಇವರು ಅಂಕೋಲಾ ತಾಲೂಕಿನ ಬೆಳಂಬಾರದವರು.ವೃತ್ತಿಯಲ್ಲಿ ಆರಕ್ಷ


ಕರಾಗಿರುವ ಇವರು ಸದ್ಯ ಕುಮಟಾ ಪೋಲಿಸ ಠಾಣೆಯಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ.ಇವರ ಕತೆ,ಕವನ,ಹನಿಗವನಗಳು ತುಷಾರ,ಮಯೂರ,ಕರ್ಮವೀರ,ತರಂಗ,ಸಂಯುಕ್ತ ಕರ್ನಾಟಕ,ಸಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕವನ ರಚನಾ ಸ್ಪರ್ಧೆಯಲ್ಲಿ ಹೊನ್ನಾವರ ಎಸ್.ಡಿ.ಎಂ.ಕಾಲೇಜಿನ ಪ್ರಥಮ ಬಹುಮಾನ ಸತತ ಮೂರು ವರ್ಷ,(೨೦೦೧ರಿಂದ ೨೦೦೩)ತುಷಾರ ಮಾಸ ಪತ್ರಿಕೆಯ ಬಹುಮಾನ,ಚಿತ್ರದುರ್ಗದ ಎ.ಬಿ.ವಿ.ಪಿ.ಶಾಖೆಯವರ ರಾಜ್ಯಮಟ್ಟದ ಕವನ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಇವರು ನಾಡಿನ ಭರವಸೆಯ ಕವಿ

145 views1 comment
bottom of page