ಕವಿತೆ

ಕವಿತೆಯ ಬಾಯ ತೆರೆದು ಹೊಯ್ದರೂ ಏನೇನೋ

ಪಿಟಿಕ್ಕೆನ್ನದೆ ತುಂಬಿಕೊಳ್ಳುವ ಚೀಲ!


ಎಂಥ ಜೀರ್ಣಾಂಗ ಇದಕೆ!

ಎಲ್ಲವನೂ ಅರಗಿಸಿಕೊಳ್ಳುವ ತಾಕತ್ತಿಗೆ

ಬೆರಳು ಮೂಗಿನ ತುದಿಗೇ ಬಂದು

ಅದಕೂ ಬೆರಗಾಗಬೇಕು!


ಈ ಹರುಷ ಆ ದು:ಖ ತಾಪ-ಕೋಪಗಳನೆಲ್ಲ

ಸೋಸಿ ತುಂಬಿದರೂನು

ಕಮಕ್ಕಿಮಕ್ಕೆನ್ನದೆ ಉಂಬ ಸಹನೆ

ಗೆ ಅದರ ಸಹನೆಯೇ ಸಮಸಮ!


ತುಂಬಿಕೊಂಡ ಹೊಟ್ಟೆ ಕಂಡು

ಊದಿಕೊಂಡರೆ ಒಂದು

ಉರಿದುಕೊಂಡರೇ ಒಂದು

ಒಲವ ತುಂಬಿರಲೊಂದು

ಒಂದು ಇನ್ನೊಂದು ಮಾತುಗಳ

ಕೇಳಿದರೂ ಕಿವುಡುನಂತೇ ಇದ್ದು

ದಾರಿ ಸವೆಸುವ ಕವಿತೆಗಾರು ಸಮರು!?


ಹೀಗೆ ಉಣ್ಣುತ್ತ

ಉಂಡದ್ದೆಲ್ಲಾ ಅರಗಿಸಿಯೇಕೊಳ್ಳುತ್ತ

ಉಸಿರು ಹಿಡಿದಿದೆ ಕವಿತೆ--

--ಉಸಿರಾಡುತ!

ನಿಟ್ಟುಸಿರನೂ ಕೂಡ ನಿಧಾನವೇ ಬಿಟ್ಟು!


ಅದಕೊಂದೇ ಕಳವಳ--

--ಉಸಿರು ಬಿಟ್ಟರೆ ಜೋರು,

ಗಾಳಿಯೇ ಸುಳಿಸುಳಿಯಾಗಿ

ಬಿರುಗಾಳಿಯಾದರೆ!?

ಸುತ್ತ ತಿರುಗುವುದಲ್ಲಕಾಲುಬಿಟ್ಟು!?

--ಎಂಬುದಷ್ಟೇ!


--ಗಣಪತಿ ಗೌಡ--

2 views0 comments