top of page

150 ತುಂಬಿದ ಬಾಪೂವಿಗೊಂದು ಪತ್ರ


ಬಾಪೂ,

ನಿಮ್ಮನ್ನು ಹೇಗೆ ಸಂಬೋಧಿಸಬೇಕೆಂಬುದರ ಕುರಿತು ತಲೆ ಕೆಡಿಸಿಕೊಳ್ಳುವ ಗೋಜಿಗೆ ನಾನು ಹೋಗುವುದಿಲ್ಲ. ನಿಮ್ಮ ಹೆಸರಿನ ಹಿಂದೆ ಯಾವ ವಿಶೇಷಣದ ಜೋಡಣೆಯ ಹಂಗಿನ ಆಗ್ರಹವೇ ಹುಟ್ಟುವುದಿಲ್ಲವೆಂದು ನನ್ನ ಮನದಾಳದ ನಂಬುಗೆ ಸಾರಿ ಸಾರಿ ಹೇಳುತ್ತಿದೆ.


ಬಾಪೂ, ನೀವು ಈ ಭೂಮಿಗೆ ಬಂದಾಗ ನಾನಿನ್ನೂ ಹುಟ್ಟೇ ಇರಲಿಲ್ಲ. ಇನ್ನು ನೀವು ಈ ನೆಲದ ಋಣವನ್ನು ಕಡಿದು ಹೊರಟು ಹೋದ ಹಲವು ವರುಷಗಳ ನಂತರವೇ ನಾನು ಈ ಭೂಮಿಯ ಮೇಲೆ ಕಣ್ಣು ತೆರೆದದ್ದು. ಆದರೂ ಬಾಪೂ, ನೀವು ನನಗೆ ಗೊತ್ತಾಗದೆಯೆ ನನ್ನ ಮನಸ್ಸಿನ ಗೂಡಿನಲ್ಲಿ ಆಗೀಗ ಅವತರಿಸಿ ವಿದಿತವಾಗುವ ಪರಿ ನನ್ನ ಬದುಕಿನ ತುಂಬೆಲ್ಲ ಬಹು ದೊಡ್ಡ ಚೋದ್ಯವಾಗಿ ಮುಂದುವರಿಯುತ್ತಿದೆ.


ನಿಮ್ಮನ್ನು ಮುಖತಃ ಕಾಣದ ನನಗೆ ನಿಮ್ಮ ಬದುಕಿನ ಕತೆ ಗೊತ್ತಿರದ ವಿಚಾರವೇನೂ ಅಲ್ಲ. ಶಾಲೆಯ ಪಠ್ಯದಿಂದ ಹಿಡಿದು ನಿಮ್ಮ ಕುರಿತಾದ ಹಲವಾರು ಗ್ರಂಥಗಳನ್ನು ಓದಿದ ತರುವಾಯ ನನಗೆ ನಿಮ್ಮ ಬದುಕು ಹೊಸದೆಂದು ತೋರಲಿಲ್ಲ. ಅದು ನಮ್ಮಂತಹ ಸಾಮಾನ್ಯರ ಬದುಕಿನ ಪಯಣದ ಮತ್ತೊಂದು ಅಧ್ಯಾಯವೆಂದು ಅರಿವಾದಾಗ ನೀವು ಅಪರಿಚಿತ ಪ್ರಪಂಚದ ವ್ಯಕ್ತಿಯಾಗಿ ನನಗೆ ಅನಿಸಲಿಲ್ಲ. ಬಹುಷಃ ಇದೇ ನಿಮ್ಮ ಅಂತಃಶಕ್ತಿ ಎಂಬುದು ನನಗೆ ಈಗೀಗ ಸ್ಪಷ್ಟವಾಗುತ್ತಿದೆ.


ಅಂದಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಬಾರ್‌ ಎಟ್‌ ಲಾ ಪರೀಕ್ಷೆ ಮುಗಿಸಿ ಬಂದು ಈ ನೆಲದಲ್ಲಿ ವಕೀಲವೃತ್ತಿ ನಡೆಸಿದ ನೀವು ಅದನ್ನು ಬಂಡವಾಳವಾಗಿಸಿ ಸಂಪತ್ತಿನ ಶಿಖರವೇರಿ ಕುಳಿತಿರಬಹುದಾಗಿತ್ತು. ಆದರೆ ಅಂದು ನೀವು ಆ ನಿರ್ಣಯಕ್ಕೆ ಬದ್ಧನಾಗಿ ಕರಿಕೋಟಿನೊಳಗೆ ಬಂಧಿಯಾಗಿದ್ದರೆ ಇಂದು ಸರಳ ಬದುಕಿನ ಹಾದಿಯಲ್ಲಿ ನಡೆದ ಮಹಾಸಂತನೊಬ್ಬನನ್ನು ಅಷ್ಟೇ ಅಲ್ಲಾ ಇಡೀ ಜಗತ್ತೇ ಮಹಾತ್ಮನೆಂದು ಕೊಂಡಾಡುವ ಗಾಂಧೀಜಿಯೆಂಬ ಅಮರಚೇತನವನ್ನು ಊಹಿಸುವುದು ಅಸಾಧ್ಯದ ಮಾತೇ ಸರಿ.


ಅನ್ಯಾಯ, ಅವಹೇಳನ, ದೌರ್ಜನ್ಯ ಮುಂತಾದ ಅಮಾನವೀಯತೆ ನಮ್ಮ ಬದುಕಿನಲ್ಲಿ ಎದುರಾದಾಗ ಅವುಗಳ ವಿರುದ್ಧ ಹೋರಾಟ ಮಾಡುವುದು ನಮ್ಮ ಸಹಜ ಪ್ರವೃತ್ತಿ. ಆಗ ನಮಗೆ ಗೊತ್ತಿದ್ದ ಒಂದೇ ಒಂದು ಅಸ್ತ್ರವೆಂದರೆ ಹಿಂಸಾತ್ಮಕ ಹೋರಾಟ. ಹಿಂಸೆಯಿಂದಲ್ಲದೆ ಏನನ್ನೂ ಗೆಲ್ಲಲು ಸಾಧ್ಯವಿಲ್ಲವೆಂಬ ಮನೋಭೂಮಿಕೆ ನಮ್ಮದು. ಆದರೆ ಹಿಂಸೆಯ ಅಸ್ತ್ರ ಹಿಡಿಯದೆ ಸತ್ಯವೆಂಬ ಆಯುಧ ಹಿಡಿದು ಅಮಾನವೀಯತೆಯ ವಿರುದ್ಧ ಧ್ವನಿ ಎತ್ತಿ ನಡೆಸಿದ ಸತ್ಯಾಗ್ರಹ ಇದೊಂದು ಮನುಕುಲಕ್ಕೆ ನೀವು ನೀಡಿದ ಮಹಾನ್‌ ಅಹಿಂಸಾತ್ಮಕ ಅಸ್ತ್ರವೆಂದರೆ ಅತಿಷಯೋಕ್ತಿಯೇನೂ ಅಲ್ಲ. ದಕ್ಷಿಣ ಆಫ್ರಿಕಾದಲ್ಲಿ ಬಿಳಿ ಜನಾಂಗದ ವರ್ಣ ಭೇದ ನೀತಿಯ ವಿರುದ್ಧ ಸತ್ಯಾಗ್ರಹದ ಮೂಲಕ ಇಡೀ ಜಗದ ಕಣ್ಣು ತೆರೆಸಿದ ನೀವು ನೆಲ್ಸನ್‌ ಮಂಡೇಲಾ, ಮಾರ್ಟಿನ್‌ ಲೂಥರ ಕಿಂಗ್‌ ಅವರಂತಹ ಮಹಾನ್‌ ಹೋರಾಟಗಾರರಿಗೆ ಸ್ಪೂರ್ತಿಯ ಸೆಲೆಯಾಗಿದ್ದು ಇಂದು ಇತಿಹಾಸದ ಪುಟಗಳೇ ಸಾಕ್ಷಿಯಾಗಿವೆ. ಸತ್ಯಾಗ್ರಹವೆಂಬ ಅಸ್ತ್ರ ಮನುಕುಲದ ಕರತಲದಲ್ಲಿ ಮಿನುಗುತ್ತಿರುವರೆಗೆ ನೀವು ಜನಮಾನಸದಲ್ಲಿ ಸದಾ ಬೆಳಗುವ ನಕ್ಷತ್ರವೆಂದರೆ ತಪ್ಪಾಗಲಾರದು.


ಬಾಪೂಜಿ, ನಿಮ್ಮ ಬದುಕೊಂದು ಅಪರೂಪದ ಹಾಗೂ ಅದ್ವಿತೀಯ ಧರ್ಮ ಗ್ರಂಥವೆಂಬುದು ನನ್ನ ಬಲವಾದ ಅನಿಸಿಕೆ. ಧರ್ಮವೆಂದರೆ ಜಾತಿ, ಮತ, ಪಂಥ, ವರ್ಣ, ಅಸ್ಪ್ರಶ್ಯತೆಗಳ ಅಯೋಮಯತೆಯಲ್ಲಿ ಬಸವಳಿದ ಆಚರಣೆಯಲ್ಲ. ನಿಮ್ಮ ಕಣ್ಣಿನಲ್ಲಿ ರಾಮನೆಂದರೆ ಕೇವಲ ರಾಮನಲ್ಲ. “ ರಘುಪತಿ ರಾಘವ ರಾಜಾರಾಮ್:‌ ಪತೀತಪಾವನ ಸೀತಾರಾಮ್‌: ಈಶ್ವರ ಅಲ್ಲಾ ತೇರೋ ನಾಮ್‌ ಸಬಕೋ ಸನ್ಮತಿ ದೇ ಭಗವಾನ” ಎಂಬ ನಿಮ್ಮ ಅಂತರಾತ್ಮದ ಭಜನೆ ಇಂದು ನಾವು ಸಾಗಬೇಕಾದ ಧರ್ಮಪಥದ ಸೂಕ್ಷ್ಮ ನಕ್ಷೆ ಎಂದರೆ ಹೆಚ್ಚು ಅರ್ಥಪೂರ್ಣವಾದೀತು. ಬಹುಷಃ ಈ ದೇಶದ ಉಳಿವಿಗೆ ಮತ್ತು ಬೆಳವಣಿಗೆಗೆ ಈಗ ನಮ್ಮ ಮುಂದಿರುವ ಮಾರ್ಗ ಈ ತೆರನಾದ ಧರ್ಮ ಪ್ರಜ್ಞೆ ಎಂಬುದನ್ನು ನಾವು ಅರ್ಥವಿಸಿಕೊಳ್ಳುವ ಅನಿವಾರ್ಯತೆ ಇಂದು ಎಂದೆಗಿಂತಲೂ ಹೆಚ್ಚಿದೆ ಎಂದನಿಸುತ್ತದೆ. ಅದಕ್ಕಾಗಿಯೇ ಬಾಪೂಜಿ ನೀವು ಎಂದೆಂದಿಗೂ ಪ್ರಸ್ತುತ ಎಂಬುದು ನನ್ನ ಪ್ರಾಮಾಣಿಕ ಭಾವನೆ.


ನಿಮ್ಮ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿದ ಗ್ರಂಥ ಭಗವದ್ಗೀತೆಯೆಂಬುದನ್ನು ನಾನು ಕೇಳಿದ್ದೇನೆ. ಭಗವದ್ಗೀತೆಯಲ್ಲಿ “ಮಾ ಫಲೇ಼ಷು ಕದಾಚನಾ” ಎಂಬ ಮಾತನ್ನು ಅನಾಸಕ್ತಿಯೋಗ ಎಂದೇ ಕರೆದು ಭೋದಿಸಿದ ನೀವು ನಿಮ್ಮ ಬದುಕಿನ ತುಂಬೆಲ್ಲ ನುಡಿದಂತೆ ನಡೆದಿರಿ. ಅದರ ಕುರಿತು ಹಲವಾರು ಆಧ್ಯಾತ್ಮಿಕ ಪ್ರಯೋಗಗಳನ್ನು ಮಾಡಿ ತೋರಿಸಿದಿರಿ. “ ಈಶಾವಾಸ್ಯಂಮಿದಂ ಸರ್ವಂ, ತೇನ ತ್ಯಕ್ತೇನ ಭುಂಜಿತಾ” ಎಂಬ ಈಶಾವಾಸ್ಯ ಉಪನಿಷತ್ತಿನ ಮಾತು ನಿಮ್ಮ ಟ್ರಷ್ಟಿಶಿಪ್‌ ಕಲ್ಪನೆಗೆ ನಾಂದಿ ಹಾಡಿದೆ ಎಂಬುದನ್ನು ನಾನು ಎಲ್ಲಿಯೋ ಓದಿದ್ದೇನೆ. ಇಡೀ ಜಗತ್ತು ಭಗವಂತನಿಗೆ ಸೇರಿದ್ದು; ಅವನು ನೀಡಿದ್ದನ್ನು ನಾವು ಕೃತಜ್ಞತೆಯಿಂದ ಸ್ವೀಕರಿಸಬೇಕೆಂಬ ಭಾವನೆಯಿಂದ ಬದುಕಿದಾಗಲೇ ಅಪರಿಗ್ರಹ ಭಾವ ನಮ್ಮಲ್ಲಿ ಪಡಿಮೂಡಿ ಆರೋಗ್ಯಕರ ಸಮಾಜ ಸಹಜವಾಗಿಯೇ ಸೃಷ್ಟಿಯಾಗುತ್ತದೆಯೆಂಬ ತಮ್ಮ ಮಾತು ಎಂದೆಂದಿಗೂ ಸತ್ಯ.


ಸ್ವದೇಶಿ ಎಂಬ ಆಂದೋಲನವನ್ನು ಹುಟ್ಟುಹಾಕಿದ ನೀವು ಚರಕವನ್ನು ಹಿಡಿದು ನೂಲುವುದನ್ನು ಪ್ರಚುರಪಡಿಸಿದಾಗ ಹಲವರು ನಕ್ಕಿದ್ದುಂಟು. ಚರಕ ಹಿಡಿದರೆ ಈ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬರಲು ಸಾಧ್ಯ ಎಂಬ ಕುಹಕ ನುಡಿಯ ಪ್ರಹಾರವನ್ನು ಎದುರಿಸಬೇಕಾದಾಗ ನೀವು ಧೃತಿಗೆಡಲಿಲ್ಲ. ಬ್ರಿಟೀಷರನ್ನು ಈ ನೆಲದಿಂದ ಓಡಿಸಿದ ಮಾತ್ರಕ್ಕೆ ನಾವು ಸ್ವತಂತ್ರರಾಗುವುದಿಲ್ಲ. ನಮ್ಮ ಅನ್ನ ಹಾಗೂ ಬಟ್ಟೆಗಳನ್ನು ನಾವು ಸೃಷ್ಟಿಸದೆ ನಾವು ಸ್ವಾವಲಂಬಿಗಳಾಗುವುದಿಲ್ಲ. ಪರಾವಲಂಬಿ ಬದುಕೂ ಸಹ ದಾಸ್ಯದ ಬದುಕಿನ ಇನ್ನೊಂದು ರೂಪವೆಂಬುದು ನಿಮ್ಮ ದೃಢವಾದ ನಿಲುವು. ಬ್ರಿಟೀಷರನ್ನು ಈ ನೆಲದಿಂದ ಹೊರದಬ್ಬಿದ ಮಾತ್ರಕ್ಕೆ ಸ್ವರಾಜ್ಯ ಬರುವುದಿಲ್ಲ. ನಾವು ಎಲ್ಲ ಅರ್ಥದಲ್ಲಿ ಸ್ವಾವಲಂಬಿಯಾಗಬೇಕು. ಅದನ್ನೇ ನೀವು ಸ್ವರಾಜ್‌ ಎಂದು ವ್ಯಾಖ್ಯಾನಿಸಿದಿರಿ. ಅದಕ್ಕಾಗಿಯೇ, “ I am not interested in India merely free of British Yoke; I am bent on India free from every yoke whatsoever” ಎಂಬ ನಿಮ್ಮ ಮಾತನ್ನು ನಾವು ಮರೆಯುವುದೆಂತು ಹೇಳಿ ಬಾಪೂ?


ನಿಮ್ಮ ಇನ್ನೊಂದು ಕನಸಿನ ಆಶಯವೇ ಸರ್ವೋದಯ. ಬಹುಷಃ ಇದೊಂದು ಈ ನೆಲದಿಂದ ನೀವೇ ಎತ್ತಿ ಪರಿಷ್ಕರಿಸಿ ಜಗತ್ತಿಗೆ ನೀಡಿದ ಅದ್ಭುತ ಕೊಡುಗೆಯೆ ಸರಿ. ಪಾಶ್ಚಾತ್ಯ ಪ್ರಪಂಚದ ಚಿಂತನೆಯಲ್ಲಿ ವ್ಯಕ್ತಿ ಮತ್ತು ಸಮಾಜದ ನಡುವೆ ವ್ಯಕ್ತಿಯೇ ಪ್ರಮುಖನಾಗುತ್ತಾನೆ. ವ್ಯಕ್ತಿಯ ಉನ್ನತಿಯಾದರೆ ಸಾಕು ಎನ್ನುವದು ಪಾಶ್ಚಾತ್ಯ ಸಿದ್ಧಾಂತದ ನಿಲುವು. ಆದರೆ ವ್ಯಷ್ಟಿ ಅಂದರೆ ವ್ಯಕ್ತಿ ಮತ್ತು ಸಮಷ್ಟಿ ಅಂದರೆ ಸಮಾಜ – ಇವು ಪರಸ್ಪರ ಪುರಕವಾಗಿ ಇರಬೇಕು ಎಂಬುದು ಭಾರತೀಯ ಸಿದ್ಧಾಂತ. “ ಸರ್ವೆ ಭವಂತು ಸುಖಿನಃ; ಸರ್ವೆ ಸಂತು ನಿರಾಮಯ” ಎಂಬುದು ಆರ್ಷೇಯ ನುಡಿ. ಅದನ್ನೇ ನೀವು ಇನ್ನೂ ಸರಳವಾಗಿ ಸರ್ವೋದಯವೆಂಬ ವ್ಯಷ್ಟಿ-ಸಮಷ್ಟಿಗಳ ಸಮನ್ವಯೀಕರಣದ ಮೂಲಕ ಹೇಗೆ ಸರ್ವೋನ್ನತಿಯ ಮೆಟ್ಟಿಲನ್ನು ಏರಿ ನಿಲ್ಲಬಹುದು ಎಂಬುದನ್ನು ಸಾರಿದಿರಿ. ವ್ಯಕ್ತಿಯ ಉನ್ನತಿಯೆಂಬ ಮಾಯಾ ಕುದುರೆಯನ್ನು ಏರಿ ಹಗಲು ಕನಸಿನಲ್ಲಿ ತೇಲುತ್ತಿರುವ ಇಂದಿನ ಸಮಾಜದಲ್ಲಿ ಛಿದ್ರ ಛಿದ್ರವಾಗುತ್ತಿರುವ ಮಾನವೀಯ ಸಂಬಂಧದ ನೆಲೆಯನ್ನು ಭದ್ರಗೊಳಿಸಲು ಇರುವ ಮಾರ್ಗವೆಂದರೆ ನೀವು ಸಾರಿದ ಸರ್ವೋದಯ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ತಲೆ ಎತ್ತಿ ಬದುಕುವ ಆ ದಿನವೇ ಸರ್ವೋದಯದ ಸುದಿನ. ಅದೇ ನೀವು ಕಂಡ ರಾಮರಾಜ್ಯದ ಕನಸು.


ಬಾಪೂ, ಈ ಎಲ್ಲ ಹೋರಾಟಗಳ ಮೂಲಕ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತ ನಿಮ್ಮ ಬದುಕು ನನ್ನ ಹಾಗೂ ನನ್ನಂತಹ ಕೋಟ್ಯಾಂತರ ಮಂದಿಗೆ ಇನ್ನೊಂದು ಕಾರಣದಿಂದ ಆಪ್ಯಾಯಮಾನವಾಗಿದೆ. ಸರಳತೆಗೆ ಉಸಿರು ತುಂಬಿ ಬಾಳ ಪಥದಲ್ಲಿ ನಡೆದ ನಿಮ್ಮ ವ್ಯಕ್ತಿತ್ವವೇ ಒಂದು ಅಚ್ಚರಿಯ ಪುಸ್ತಕವೆಂದರೆ ತಪ್ಪಾಗಲಾರದು. ಈ ನೆಲದ ಸಾಮಾನ್ಯನು ತೊಡುವ ಅತ್ಯಂತ ಕಡಿಮೆ ಬಟ್ಟೆಯನ್ನು ತೊಟ್ಟು ಜಗದಗಲ ಅಲೆದಾಡಿದ ನೀವು ತಾನೊಬ್ಬ ಫಕೀರನೆಂದೇ ಹೆಮ್ಮೆಪಡುತ್ತಿದ್ದೀರಂತೆ. ನಿಮ್ಮ ಸರಳ ವೇಶ-ಭೂಷಣ ತೊಟ್ಟೇ ಇಂಗ್ಲೆಂಡಿನ ರಾಣಿಯನ್ನು ಭೇಟಿ ಮಾಡಿದುದರ ಕುರಿತು ಪ್ರಶ್ನಿಸಿದ್ದಕ್ಕೆ “ ನನಗೂ ಮತ್ತು ರಾಣಿಯವರಿಗೂ ಸಾಕಾಗುವಷ್ಟು ಬಟ್ಟೆಯನ್ನು ಅವರೇ ತೊಟ್ಟಿರುವಾಗ ನಾನು ಹೆಚ್ಚಿಗೆ ಬಟ್ಟೆ ತೊಡುವ ಅವಶ್ಯಕತೆ ಏನಿದೆ” ಎಂಬ ನಿಮ್ಮ ಹಾಸ್ಯ ಪ್ರಜ್ಞೆಯ ಉತ್ತರ ನಿಮ್ಮೊಳಗಿನ ಸರಳತೆಯ ಗಟ್ಟಿತನವನ್ನು ಬಿಚ್ಚಿಡುತ್ತದೆ. ಸಾಹಿತಿ ಅನಂತಮೂರ್ತಿಯವರು ಒಂದೆಡೆ ಹೇಳುವಂತೆ ನಿಮ್ಮನ್ನೂ ಸೇರಿ ಜಗತ್ತಿನ ಮಹಾ ನಾಯಕರನ್ನು ಒಟ್ಟಿಗೆ ಸೇರಿಸಿ ಎಲ್ಲರ ದೇಹದ ಮೇಲರ್ಧ ಬೆತ್ತಲೆಯಾಗಿರುವಂತೆ ನಿಲ್ಲಿಸಿ ಪೋಟೊ ತೆಗೆದರೆ ನಿಮ್ಮ ಭಾವಚಿತ್ರವೇ ಸುಂದರವಾಗಿ ಕಾಣುತ್ತದೆಯಂತೆ. ಶರೀರವನ್ನು ಸುಖದ ಸುಪ್ಪತ್ತಿಗೆಯಲ್ಲಿಟ್ಟು ಪೋಷಿಸುವುದನ್ನು ದ್ವೇಷಿಸುತ್ತಿದ್ದ ನೀವು ದೇಹ ದಂಡನೆಯ ಮುಖೇನ ವಿರಾಗಿಯಾಗಿ ಜನ ಮಾನಸದಲ್ಲಿ ವಿರಾಜಮಾನವಾಗಿ ನಿಂತಿದ್ದೀರಿ.


ಬಾಪೂಜಿ, ಕಳೆದ ಅಕ್ಟೋಬರ್‌ ೨ ಕ್ಕೆ ನೀವು ಭೂಮಿಗಿಳಿದು ೧೫೦ ವರ್ಷಗಳೇ ಸಂದಿವೆ. ನೀವು ಈ ಲೋಕ ಬಿಟ್ಟು ಹೋಗಿ ಸುಮಾರು ೭೨ ವರ್ಷಗಳೇ ಗತಿಸಿ ಹೋಗಿವೆ. ಈ ಮಧ್ಯೆ ನಮ್ಮ ಬದುಕು ಯಂತ್ರದ ಗಾಲಿಯ ಮೇಲೆ ನಮಗೆ ಬೇಕಾಗಿಯೋ, ಬೇಡವಾಗಿಯೋ ಚಲಿಸುತ್ತಿದೆ. ಅಂತರ್ಜಾಲ ನಮ್ಮ ಬೌದ್ಧಿಕ ಪ್ರಪಂಚದ ಮೇಲೆ ಸವಾರಿ ಮಾಡುತ್ತ ನಮ್ಮನ್ನು ತಂತ್ರಮುಗ್ಧರಾಗಿಸಿದೆ. ಆ ದಿನಗಳಲ್ಲಿ ನೀವು ಯಂತ್ರದ ಗುಲಾಮರಾಗದಿರುವಂತೆ ನೀಡಿದ ಕರೆ ಇಂದಿಗೂ ಅಷ್ಟೇ ಪ್ರಸ್ತುತ. ತನಗರಿವಿಲ್ಲದೆ, ದಿಕ್ಕು ದೆಸೆ ಇಲ್ಲದೆ ಓಡುತ್ತಿರುವ ಇಂದಿನ ಜನಾಂಗಕ್ಕೆ ಮನಃಶಾಂತಿಯೆಂಬುದು ಮರಿಚಿಕೆಯಂತಾಗಿದೆ. ಆಧುನಿಕ ಪ್ರಪಂಚದ ಭೋಗಭಾಗ್ಯವೆಂಬ ಕಣ್ಣುಪಟ್ಟಿ ಕಟ್ಟಿಕೊಂಡಿರುವ ನಮ್ಮನ್ನು ಮತ್ತು ನಮ್ಮ ಭಾವಿ ಜನಾಂಗವನ್ನು ಕೈಹಿಡಿದು ಮುನ್ನಡೆಸುವ ಶಕ್ತಿಯೆಂದರೆ ನೀವು, ಬಾಪೂ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ,ಅಸಂಗ್ರಹ, ಶರೀರ ಶ್ರಮ, ಅಸ್ವಾದ, ಸರ್ವಧರ್ಮ ಸಮಾನತ್ವ, ಸ್ವದೇಶಿ, ಸ್ಪರ್ಶಭಾವನಾ ನಿಮ್ಮ ಸೇವಾವ್ರತದ ಸೂತ್ರಗಳು ಮಾನವನ ನೆಮ್ಮದಿಯ ಬದುಕಿಗೆ ಮಾರ್ಗಸೂತ್ರಗಳು. ಈ ಸೂತ್ರಗಳ ಅನುಶಾಸನವೇ ಇಂದಿನ ನಮ್ಮ ಎಲ್ಲ ಗೊಂದಲಗಳ ಗೂಡಿಗೆ ಪರಿಹಾರಕ್ಕಿರುವ ಏಕಮೇವ ಕೀಲಿ ಕೈ ಎಂದರೆ ಅದು ಹೆಚ್ಚು ಸರಿಯಾದೀತು. ಬಹುಷಃ ಈ ಭೂಮಿಯ ಮೇಲೆ ಮಾನವ ಮಾನವನಾಗಿ ಉಳಿಯಬೇಕಾದರೆ ಈ ಕೀಲಿ ಕೈ ನಮ್ಮ ಕರಗತವಾಗಬೇಕೆಂಬುದು ಸರಳ ಸತ್ಯ. ಹಾಗಾಗಿಯೇ ಪ್ರಿಯ ಬಾಪೂ ನೀವು ಅಮರ: ಅಷ್ಟೇ ಅಲ್ಲಾ ಅಜರಾಮರ.


ಇಂತಿ ನಿಮ್ಮವ

ಸಿರಿಪಾದ

ಶ್ರೀಪಾದ ಹೆಗಡೆ, ಸಾಲಕೋಡ: ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧಿಕಾರಿಯಾಗಿ ನಿವೃತ್ತಿಯಾದ ಶ್ರೀಪಾದ ಹೆಗಡೆ, ಸಾಲಕೊಡ ಇವರು ತಮ್ಮ ಬಾಲ್ಯದ ದಿನಗಳಿಂದಲೂ ಸಾಹಿತ್ಯಾಸಕ್ತಿಯನ್ನು ಹೊಂದಿದವರು. ಕತೆ, ಹರಟೆ,ಲಲಿತ ಪ್ರಬಂಧ, ಕಾವ್ಯ, ನಾಟಕ,ವಿಮರ್ಶೆ ಮುಂತಾದ ಸಾಹಿತ್ಯ ಪ್ರಭೇಧಗಳಲ್ಲಿ ಬರವಣಿಗೆಯ ಮೂಲಕ ಕಳೆದ ನಾಲ್ಕು ದಶಕಗಳಿಂದ ತೊಡಗಿಕೊಂಡ ಇವರ ಕತೆ, ಪ್ರಬಂಧ, ಕವಿತೆಗಳು ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ ಕತೆಗಳಿಗೆ ಬಹುಮಾನಗಳು ಸಂದಿವೆ. ‘ಬೆಕ್ಕಿನ ಮೀಸೆ’ ಎಂಬ ಅವರ ಕಥಾ ಸಂಕಲನ ಪ್ರಕಟವಾಗಿದೆ. ಹಾಸ್ಯವನ್ನು ಸ್ಥಾಯಿಭಾವವಾಗಿ ತಮ್ಮ ಬರೆಹಗಳಲ್ಲಿ ನೆಲೆಗೊಳಿಸಿ ಮಾನವೀಯ ವಿಚಾರಗಳನ್ನು ಪ್ರಸ್ತುತಿ ಪಡಿಸುವದು ಅವರ ಬರೆಹದ ವೈಶಿಷ್ಟ್ಯ. ನಮ್ಮ ಪತ್ರಿಕೆಯ ಸಲಹಾ ಮಂಡಳಿಯ ಸದಸ್ಯರಾಗಿರುವ ಅವರ ಪ್ರಸ್ತುತ ಬರೆಹ ಈ ಮೂಲಕ ತಮ್ಮ ಓದಿಗಾಗಿ -ಸಂಪಾದಕ

91 views1 comment

1 Comment


sunandakadame
sunandakadame
Jul 03, 2020

'ಪರಾವಲಂಬಿ ಬದುಕು ಕೂಡ ದಾಸ್ಯದ ಬದುಕಿನ ಇನ್ನೊಂದು ರೂಪ' ಹಿಂದ್ ಸ್ವರಾಜ್ ಗ್ರಂಥದಲ್ಲಿರುವ ಬಾಪು ಅವರ ಅತ್ಯಮೂಲ್ಯ ಮಾತನ್ನು ನೆನೆದಿದ್ದೀರಿ, ಅರಿವು ಹೆಚ್ಚಿಸುವ ಬರಹ ಸರ್.

Like
bottom of page