ಹಾರಬಹುದಿತ್ತು

ನಿತ್ಯ ಕಟಕಟೆಯಲ್ಲಿ ನಿಲ್ಲುತ್ತೇನೆ

ಯಾಕೆ?ಏನು?ಎಲ್ಲಿ? ಎಷ್ಟು?

ಸಮಜಾಯಿಶಿ ನೀಡುವ ಮೊದಲೇ

ಪಾಟಿಸವಾಲಿಗೆ ತಪರಗುಟ್ಟುತ್ತೇವೆ

ಸೀರೆ ತೆಳ್ಳಗೇಕೆ? ಬ್ಲೌಸ್ ಕೊರಳು

ಅಷ್ಟೊಂದು ಡೀಪೆ? ಸ್ಲೀವ್ಲೆಸ್ ಬೇಕೆ?

ಸುತ್ತಬಾರದೇ ಬಿಚ್ಚುಗೂದಲು

ಅಂಗಳ ತೊಳೆಯುವಾಗ

ಸೀರೆ ಅಷ್ಟೊಂದು ಎತ್ತಿಕಟ್ಟುವದೇಕೆ

ಎದೆಮೇಲೆ ದುಪಟ್ಟಾ ಇಲ್ಲದೇ

ಹೊಸಿಲು ದಾಟುವದೇಕೆ

ಅಡಿಗೆ ಬಿಸಿ ಇಷ್ಟೊತ್ತು

ಏನ್ಮಾಡ್ತಾ ಇದ್ರಿ

ಆರಿಹೋಗಿದೆ ಅನ್ನ

ಬಿಸಿಯಾಗಿಡೋಕೆ ಆಗದೇ?

ಅಪೀಲು ಹೋಗಬೇಕು

ಎಲ್ಲಿಗೆ? ಎಲ್ಲರೂ

ಪಿರ್ಯಾದುದಾರರೇ ಇಲ್ಲಿ

ಹೆಜ್ಜೆಗೊಂದು ಹೊಸ ಸವಾಲು

ಉತ್ತರವಿದೆ ಎದೆಯ

ಹಾಲಲ್ಲಿ ಅದ್ದಿ ಮುದ್ದೆ

ಯಾರಿವರು ?

ನಮ್ಮದೇ ಹರಿವ ಹೀರಿದವರು

ಒಂಟಿ ಹಕ್ಕಿ

ಹಾಯಾಗಿ ಹಾರುತಿದೆ

ದೂರ ಬಾನಲ್ಲಿ

ನಮಗೂ ರೆಕ್ಕೆಗಳಿದ್ದರೆ

ಹಾರಬಹುದಿತ್ತು ಒಂಟಿಯಾಗಲ್ಲ

ಅಮ್ಮ ಅತ್ತೆ ಅಕ್ಕ ಅತ್ತಿಗೆಯರನ್ನೂ

ಕಟ್ಟಿಕೊಂಡು ಇಷ್ಟ ಬಂದಲ್ಲಿಗೆ


-ಪ್ರೇಮಾ ಟಿ.ಎಂ.ಆರ್ಕವಯತ್ರಿ,ಕತೆಗಾರ್ತಿ ಹಾಗು ಅಂಕಣಗಳ ಬರವಣಿಗೆಯಲ್ಲಿ ನಿಷ್ಣಾತರಾಗಿರುವ ಶ್ರೀಮತಿ ಪ್ರೇಮಾ ಟಿ.ಎಂ.ಅರ್ ಅವರು  ಗ್ರಹಿಣಿ.  ಹುಟ್ಟಿದ್ದು ಕುಮಟಾದ ಕೂಜಳ್ಳಿ. ಕೊಟ್ಟ ಊರು ಭಟ್ಕಳದ ಬಂದರ್. ಬದುಕು ಕಟ್ಟಿಕೊಂಡಿದ್ದು ಕಾರವಾರ ಕಡಲತೀರದಲ್ಲಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ. ಮದುವೆಗೆ ಮುಂಚೆ ಸರ್ಕಾರಿ ಶಾಲೆಯಲ್ಲಿ ಮೂರು ವರ್ಷ ಶಿಕ್ಷಕಿಯಾಗಿ ಸೇವೆ. ಮದುವೆಯಾದಮೇಲೆ ಕೆಲಸಕ್ಕೆ ರಾಜೀನಾಮೆ .ಕಥೆ ಕವನ ವಿಮರ್ಶೆ ಲೇಖನಗಳು ಹವ್ಯಾಸ. ಕವಯಿತ್ರಿಯಾಗಿ ಅಂಕಣಕಾರ್ತಿಯಾಗಿ ಕಥೆಗಾರ್ತಿಯಾಗಿ ಗುರುತಿಸಿಕೊಂಡಿದ್ದು. ತಾಲ್ಲೂಕು ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಲನಗಳಲ್ಲಿ ಪ್ರಬಂಧ ಮಂಡಿಸಿರುವ ಇವರಿಗೆ ಮಾತುಗಾರ್ತಿ ಎಂದೇ ಹೆಸರು.  ಹಲವಾರು ಕಾರ್ಯಕ್ರಮಗಳ ನಿರೂಪಣೆಯನ್ನು ನಿರ್ವಹಿಸಿದ ಇವರ 'ವಿಲ್ಲು ಬರೆಯುತ್ತೇನೆ' ಕವನ ಸಂಕಲನ ಹೊರಬಂದಿದೆ . ಇನ್ನೆರಡು  ಕವನ ಸಂಕಲನಕ್ಕಾಗುವಷ್ಟು ಕವನಗಳು, ನಾಲ್ಕಾರು ಪುಸ್ತಕವಾಗುವಷ್ಟು ಲೇಖನಗಳು, ಒಂದು ಸಂಕಲನವಾಗುವಷ್ಟು ಕಥೆಗಳು ಕೈಯ್ಯಲ್ಲಿದೆ.ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.

144 views0 comments