ಬದುಕು ನೀಡುವ ಕಷ್ಟಗಳು ಹಾಲಾಹಲ ಹೆಣ್ಣೇ
ಕುಡಿದು ನೀ ನಗು ನಗುತಾ ಬದುಕಿಬಿಡು ಹೆಣ್ಣೇ
ತಾಯ ಗರ್ಭದಿ ಮುದುಡಿ ಮಲಗಿರೆ 'ನೀ ಹೆಣ್ಣೇ?'
ಎಂಬ ಪ್ರೆಶ್ನೆಗೆ ಸೊರಗದೆ ಬೆಳೆದುಬಿಡು ಹೆಣ್ಣೇ
ಬೆಳೆದರೆ ನೀನು ಸಹೋದರರ ಜೊತೆಯಲಿ ಹೆಣ್ಣೇ
ಹಡೆದವರ ಪುತ್ರವ್ಯಾಮೋಹ ಮರೆ ನೀನು ಹೆಣ್ಣೇ
ಮದುವೆಯ ಅದೃಷ್ಟದಾಟದಕೆ ಬಾಗಿಬಿಡು ಹೆಣ್ಣೇ
ಪತಿ ಹೇಗಿದ್ದರೂ ಅವನನ್ನು ಸಹಿಸಿಬಿಡು ಹೆಣ್ಣೇ
ಅತ್ತೆಯ ಮನೆಯ ಎಲ್ಲಾ ಪರೀಕ್ಷೆ ಗೆದ್ದುಬಿಡು ಹೆಣ್ಣೇ
ಚಿಪ್ಪಿನ ಒಳಗಿರು ಆ ಮನೆಯ ಮುತ್ತಂತೆ ನೀನು ಹೆಣ್ಣೇ
ತಾಯಿ ಮನೆಯ ಸಿರಿಯೆಲ್ಲ ತಂದುಬಿಡು ನೀ ಹೆಣ್ಣೇ
ವರದಕ್ಷಿಣೆಯ ಭೂತ ಸುಡದಿರಲಿ ನಿನ್ನನ್ನು ಹೆಣ್ಣೇ
ವರುಷದಲಿ ಗಂಡೊಂದ ಹಡೆದು ಬಿಡು ಹೆಣ್ಣೇ
ಮುಂದೆಲ್ಲಾ ಗರ್ಭಪಾತದ ಭಯ ಜನಿಸಿದರೆ ಹೆಣ್ಣೇ
ಅನಿಸಲಾರದೆ ನಿನಗೆ ಹೀಗೆ ಬದುಕಲು ಮತ್ತೆ ಯಾಕೆ ಹೆಣ್ಣೇ
ಉಗಮವಾಗಿ ಸುಖ ಪಡಲು ಪುತ್ರನೇ ಸರಿ ಹೆಣ್ಣೇ
ಮಗನೊಂದು ಹುಟ್ಟಿದರೆ ಆ ಕ್ಷಣದಿ ಗೆದ್ದಂತೆ ನೀ ಹೆಣ್ಣೇ
ಭ್ರಮೆಯಲ್ಲಿ ಬದುಕಿಬಿಡು ಮುಪ್ಪಿನಲಿ ಕಾಯುವನು ಹೆಣ್ಣೇ
ಹತ್ತು ಹಡೆದರೆ ಏನು ಯಾರಿಗೆ ಯಾರಿಲ್ಲ ಕೊನೆಗೆ ಹೆಣ್ಣೇ
ಬದುಕ ಮುಗಿಸಿಬಿಡು ಈಡೇರದ ಆಸೆಯ ಜೊತೆಗೆ ಹೆಣ್ಣೇ
- ಕವಿತಾ ಗಿರೀಶ ಶಾರ್ಜಾ .
Comments