ಉಸಿರಾಡುವಷ್ಟೇ ಅವಶ್ಯ
ಇಂದು ಹೋರಾಟ ನಿತ್ಯ
ಬಿಟ್ಟರಿಲ್ಲ ಮುಕ್ತಿ!
ನಿನ್ನದೇ ಮಾರ್ಗದರ್ಶನ
ಅಂದು ಸ್ವಾತಂತ್ರ್ಯಕ್ಕಾಗಿ
ಇಂದು ಬರಿ ಸ್ವಂತಕ್ಕಾಗಿ!
ನಿನ್ನದೇ ತತ್ವಗಳು:
ಸತ್ಯಾಗ್ರಹ
ಅಹಿಂಸೆಯೇ ಧರ್ಮ
ಹೌದು,
ಜಾತಿ ಜಾತಿಗಳಲ್ಲಿ ತಿಕ್ಕಾಟ
ವೋಟಿನ ಬೇಟೆ
ನೀನಮರ ಬಾಪು
ನಿನ್ನ ಹೆಸರು ಅಜರಾಮರ!
ಮುಚ್ಚಿಡುವೆವು ಮಾಡಿದ ಪಾಪಗಳನೆಲ್ಲ
ಗಾಂಧಿ ಟೋಪಿ ಒಂದಿದ್ದರಾಯ್ತು!
ಇನ್ನೂ ಉಳಿಸಿಕೊಂಡಿದ್ದೇವೆ
ಮಾಡು,ಇಲ್ಲವೆ ಮಡಿ
ಏನು ಮಾಡುವುದು?
ದುಡ್ಡು ಮಾಡುತ್ತಲೇ ಇದ್ದೇವೆ
ಗದ್ದುಗೆ ಏರುತ್ತಲೇ ಇದ್ದೇವೆ
ಹೆಚ್ಚೀಗೇನು,
ಖುರ್ಚಿ ಭದ್ರತೆಗಾಗಿ ಏನೆಲ್ಲಾ
ಮಾಡುತ್ತಲೇ ಇದ್ದೇವೆ
ನಿನ್ನದೇ ಸಿನಿಮಾ ಕೂಡ ಆಯ್ತು
ಕೋಟಿಗಟ್ಟಲೆ ಹಣ ಬಂತು!
ಮಾಡು,ಮಾಡು,ಮಾಡು
ಮತ್ತೇನಿದೆ ಮಾಡಲಿಕ್ಕೆ?
ಮಾಡುವುದನ್ನು ಬಿಟ್ಟರಲ್ಲವೆ
ಮಡಿಯುವುದು?
ಹೀಗೆಲ್ಲಾ
ನಿನ್ನ ತತ್ವಗಳನು
ಪಾಲಿಸುತ್ತಲೇ ಇದ್ದೇವೆ
ಚಾಚೂ ತಪ್ಪದೆ
ದುಡಿಯದಿದ್ದರೂ
ಮಡಿಯಲಿಕ್ಕೆ ಬಿಡುವುದಿಲ್ಲ
ಉಚಿತ ಕೊಡುಗೆಗಳು
ಕೈಯ್ಯಲ್ಲೊಂದಿಷ್ಟು ಕಾಸು
ಬದುಕಲಿಕ್ಕುಂಟು ಹಕ್ಕು
ಎಲ್ಲರಿಗೂ
ಮಡಿಯುವುದೇಕೆ?
ಬಡವರುಧ್ಧಾರ
ನಮ್ಮ ಗುರಿ!
ಮತ್ತೂ ಮಾಡುವವರಿದ್ದೇವೆ
ಹರಸು ಬಾಪು!
ಹರಸು ನಮ್ಮನು
ವೆಂಕಟೇಶ ಹುಣಶಿಕಟ್ಟಿ
ಕವಿಗಳು ಗುರುಗಳು ಆದ ಪ್ರೊ.ವೆಂಕಟೇಶ ಹುಣಶಿಕಟ್ಟಿ ಅವರ ' ಹರಸು ಬಾಪು' ಕವನ ನಿಮ್ಮ ಓದು ಮತ್ತು ಪ್ರತಿ ಸ್ಪಂದನಕ್ಕಾಗಿ- ಸಂಪಾದಕ ಆಲೋಚನೆ.ಕಾಂ
Opmerkingen