top of page

ಸ್ವಾತಂತ್ರ್ಯ - ಒಂದಿಷ್ಟು ಆಲೋಚನೆ


" ಜನರು ತಮ್ಮ ಸ್ವಾತಂತ್ರ್ಯಕ್ಕಾಗಿ ಎಷ್ಟೆ ಹೋರಾಡಿ ಗೆದ್ದರು ಹೊಸ ಯಜಮಾನರ

ಹೊರತು ಮತ್ತೇನನ್ನೂ ಪಡೆಯರು" - ಜಾರ್ಜಸ್ಯಾವಿಲ್ ಹೆಲಿಫಾಕ್ಸ.


ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯರಾದ ನಾವೆಲ್ಲರು ಅಗಷ್ಟ ೧೫ ರಂದು ಆಚರಿಸುತ್ತೇವೆ. ತ್ರಿವರ್ಣ ಧ್ವಜವನ್ನು ಹಾರಿಸಿ, ರಾಷ್ಟ್ರ ಗೀತೆಯನ್ನು ಹಾಡಿ, ಮಹನೀಯರ ಮಾತುಗಳನ್ನು ಕೇಳಿ, ಸಿಹಿಯನ್ನು ವಿತರಿಸಿ ಸಂಭ್ರಮಿಸುತ್ತೇವೆ. ಆದರೆ ಅಮಾಯಕರಿಗೆ, ಕೂಲಿಯಾಳುಗಳಿಗೆ ಸ್ವಾತಂತ್ರ್ಯ ಎಂದರೆ ಏನು ಎಂಬುದರ ಅರಿವಾಗಲಿ, ಪರಿವೆಯಾಗಲಿ ಇರುವುದಿಲ್ಲ. "ದುರ್ಬಲರಿಗೆ ಸ್ವಾತಂತ್ರ್ಯವೆ ಇಲ್ಲ" ಎಂಬ ಜಾರ್ಜ ಮೆರಿಡಿತ್ ನ ಮಾತು ಲಕ್ಷಿಸುವಂತಹದ್ದು. ರೈತರಿಗೆ, ಕಾರ್ಮಿಕರಿಗೆ, ಬುಡಕಟ್ಟು ಜನರಿಗೆ, ಅಲೆಮಾರಿಗಳಿಗೆ ತಿಳಿಯುವುದೆ ಇಲ್ಲ. ಇಂತಹ ಆಚರಣೆ ತಮಗೆ ಸಂಬಂಧಿಸಿದ್ದಲ್ಲ ಎಂಬ ಹಾಗೆ ಅವರು ನೋಡುತ್ತಾರೆ. “ಬೇರೆಯವರಿಗೆ ಕೊಟ್ಟ ಹೊರತು ನಿಮಗೆ ದಕ್ಕದ ವಿಚಾರವೆಂದರೆ ಸ್ವಾತಂತ್ರ್ಯ" ವಿಲಿಯಂ ಅಲೆನ್ ವೈಟ್ ಎಂಬ ಮೇಧಾವಿಯ ಮಾತು ಉಲ್ಲೇಖನಾರ್ಹ. ಆದರೆ ಸ್ವಾತಂತ್ರ್ಯವನ್ನೆ ಬೇರೆಯವರಿಗೆ ಕೊಡುವುದಕ್ಕಿಂತ ಅದನ್ನು ತಮ್ಮ ಮತ್ತು ತಮ್ಮವರ ಹಿತಕ್ಕಾಗಿ ಬಳಸಿ ಕೊಂಡವರು ಅಥವಾ ಯಾರದೊ ಹಿತಾಸಕ್ತಿಯ ಈಡೇರಿಕೆಗೆ ಅದನ್ನು ದುಡಿಸಿಕೊಂಡವರು, ಮಾತಿನಲ್ಲಿ ಮಮತೆಯನ್ನು ಬಡಿಸಿ, ಕಾರ್ಯದಲ್ಲಿ ಸ್ವಂತ ಸುಖವನ್ನು ಸಾಧಿಸಿದ ಬಹಳ ಜನ ನಾಯಕರು ನಮಗೆ ದಂಡಿಯಾಗಿ ಸಿಗುತ್ತಾರೆ. ಆ ಕಾರಣದಿಂದ ಸ್ವಾತಂತ್ರ್ಯ ಸೇನಾನಿ ಎನಿಸಿಕೊಂಡ ಬಾಪೂಜಿ ಅಧಿಕಾರ ಕೇಂದ್ರದಿಂದ ದೂರ ಉಳಿದರು. ಆದರೆ ಸ್ವಾತಂತ್ರ್ಯ ಹೋರಾಟಗಾರರಾಗಿ ವಿತ್ತ ಜೀವಿತಗಳನ್ನು ಪಣವಾಗಿ ಇಟ್ಟು ಹೋರಾಟ ಮಾಡಿದವರು ಅಧಿಕಾರ ದೊರಕಿದಾಗ ಬದಲಾದರು. ದೇಶ ಮೊದಲು ಎಂದ ಅವರು ಸ್ವಾರ್ಥ ಮೊದಲು ದೇಶ ಆಮೇಲೆ ಎಂದರು. ಇಂತವರು ಚರಿತ್ರೆಯಲ್ಲಿ ಉಳಿಯಲಿಲ್ಲ.

“ ಪಾರತಂತ್ರ್ಯದ ಶೃಂಖಲೆಯ ಕಡಿದೊಗೆದು ಭಾರತಾಂಬೆಗೆ ಮುಕ್ತಿ ಸಂಪದವನಿತ್ತ ಪುಣ್ಯ ಮಹಿಮ ಗಾಂಧಿ" ಎಂದು ರಾಷ್ಟ್ರಕವಿ ಗೋವಿಂದ ಪೈ ಅವರು ಗಾಂಧೀಜಿ ಕುರಿತು ಪದ್ಯ ಬರೆದರು. ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿವೆ. ಭವ್ಯ ಭಾರತದ ಸತ್ಪ್ರಜೆಯ ಜೀವನ ಮಟ್ಟ (standard of living) ಎಂಬುದನ್ನು ನಮ್ಮ ಅರ್ಥಶಾಸ್ತ್ರಜ್ಞರು ಇತರ ದೇಶಗಳ ಜನರ ಜೀವನ ಮಟ್ಟದೊಂದಿಗೆ ಹೋಲಿಸಿ ಅಂಕಿ ಸಂಖ್ಯೆಗಳನ್ನು ಕೊಡಬೇಕಾದ ಅಗತ್ಯವಿದೆ. ಸಮಾಜ ವಿಜ್ಞಾನಿಗಳು ನಮ್ಮದೇಶದ ಜನರ ಬಾಳಿನ ಮಟ್ಟ( standard of living) ಯಾವ ಮಟ್ಟದಲ್ಲಿದೆ ಎಂಬುದನ್ನು ಶ್ರುತಪಡಿಸುವ ಕೆಲಸ ಆಗಬೇಕಾಗಿದೆ. ಜಗತ್ತಿನ ಜೊತೆಗೆ ನಾವು ಪೈಪೋಟಿಗಿಳಿಯುವ ಮೊದಲು ನಮ್ಮ ಅಂತ:ಶಕ್ತಿಯನ್ನು, ಆತ್ಮವಿಶ್ವಾಸವನ್ನು, ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಒಂದು ದೇಶದ ಶಕ್ತಿಯನ್ನು ಆ ದೇಶದ ಮಾನವ ಸಂಪನ್ಮೂಲದ ಕೌಶಲ್ಯ, ಕಾರ್ಯಕ್ಷಮತೆ, ದಕ್ಷತೆ, ಸ್ವಾವಲಂಬಿ ಮನೋಭಾವ, ಉದ್ಯಮ ಶೀಲತೆಯನ್ನು ಅವಲಂಬಿಸಿರುತ್ತದೆ. ಕೇವಲ ರೇಶನ್ ಕಾರ್ಡ ಭರ್ತಿಗಾಗಿ ಬದುಕುವವರ, ಸರಕಾರದ ಸವಲತ್ತುಗಳಿಗೆ ವಿವಿಧ ಛದ್ಮವೇಷ ಧರಿಸುವವರ ಸಂತಾನ ಕ್ಷೀಣಿಸಬೇಕು. ಧೃಡಿಷ್ಟರು, ಬಲಿಷ್ಠರು ಆದ ನೂರು ಜನರನ್ನು ಕೊಡಿ ಈ ದೇಶದ ಭವಿಷ್ಯವನ್ನೆ ಬದಲಾಯಿಸುತ್ತೇನೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಆದರೆ ವಾಸ್ತವಿಕೆ ಗಹಗಹಿಸಿ ನಗುತ್ತಿದೆ. ಕವಿ ನಿಸಾರ್ ಅಹಮ್ಮದ್ ಅವರ, "ಕುರಿಗಳು ಸಾರ್ ಕುರಿಗಳು ಕವನ ನೆನಪಾಗುತ್ತಿದೆ". ಕುರಿಗಳು ಅವುಗಳನ್ನು ಕಾಯುವ, ಕೊಯ್ದು ಬಿರಿಯಾನಿ ಮಾಡುವ ಕುರುಬರು, ಹಸಿರು ನೋಟಿನ ಆಸೆಗೆ ಜಮಾಬಂದಿಗೆ ಬರುವ ಅಮಲ್ದಾರರು ಇನ್ನು ಕೊಬ್ಬಿ ಹೋಗಿದ್ದಾರೆ.' ಕುರಿ ಕೊಬ್ಬಿಸೋದು ಕುರುಬನ ಹಿತಕ್ಕೆ' ಎಂಬ ಗಾದೆಯಂತೆ ಆಶ್ವಾಸನೆ, ಭರವಸೆಗಳ ಮೇವು ಹಾಕಿ ಮತದಾರರನ್ನು ಕೊಬ್ಬಿಸುವ ಕಾರ್ಯವನ್ನು ಅಧಿಕಾರಕ್ಕೆ ಬಂದ ಎಲ್ಲ ರಾಜಕೀಯ ಪಕ್ಷಗಳು ಗೈದು ನಾವು ನಿಮಗೇನು ಕಡಿಮೆಯಿಲ್ಲ ಎಂದು ಹುಬ್ಬು ಹಾರಿಸುತ್ತಿವೆ. ' ಕರಿಯರಾದೊಡೇಂ ಬಿಳಿಯರಾದೊಡೇಂ ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ' ಎಂದು ಮಹಾಕವಿ ಕುವೆಂಪು ಅವರ ಕಾವ್ಯದ ಸಾಲು ನೆನಪಾಗುತ್ತಿದೆ.

" ಜನರು ತಮ್ಮ ಸ್ವಾತಂತ್ರ್ಯಕ್ಕಾಗಿ ಎಷ್ಟೆ ಹೋರಾಡಿ ಗೆದ್ದರು ಹೊಸ ಯಜಮಾನರ ಹೊರತು ಮತ್ತೇನನ್ನೂ ಪಡೆಯರು". ಎಂಬ ಜಾರ್ಜ ಸ್ಯಾವಿಲ್ ಹೆಲಿಫಾಕ್ಸನ ಮಾತು ನೆನಪಾಗುತ್ತಿದೆ.ಹೌದು ಈ ಹೊಸ ಯಜಮಾನರು ಜನಸೇವೆಯ ಹಂಬಲದಿಂದಲೆ ಖರ್ಚು ಮಾಡಿ, ಬೆವರು ಸುರಿಸಿ, ಶತಾಯು ಗತಾಯು ಪ್ರಯತ್ನ ಮಾಡಿ ಬಂದವರು .ಆದರೆ ಇವರು ಅಧಿಕಾರ ಸ್ವೀಕರಿಸಿದ ಬಳಿಕ ನಿಂತ ನೆಲದ ಗುಣವೊ, ಕುಂತ ಕುರ್ಚಿಯ ಮಹಿಮೆಯೊ, ಭೋ ಪರಾಕ್ ಹಾಕುವ ವಂದಿಮಾಗಧರ ಬೊಬ್ಬೆಯೊ ಇವರನ್ನು ತಳ ತಪ್ಪಿಸಿ ಅಂತರಾಟಿಗೆ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ಕ್ರಮೇಣ ಇವರ ಕಣ್ಣು ಮಂಜಾಗುತ್ತದೆ, ಕುರ್ಚಿ ಬಿಟ್ಟರೆ ಜನ ಯಾರು ಕಾಣುವುದಿಲ್ಲ‌. ಬುದ್ದಿ ಮಂಕಾಗಿ ಕಾರ್ಯಕರ್ತರ ಸಂಬಾಳಿಸಿ ಕೊಂಡರೆ ಸಾಕಾಗಿ ಬಿಡುತ್ತದೆ. ಜಾಣ್ಮೆ ಹರಿತಗೊಂಡು ಬರಿದಾಗಿದ್ದ ಸ್ವಂತ ಖಜಾನೆಗೆ ಹಣದ ಹರಿವನ್ನು ಹೆಚ್ಚಿಸುವ ಯೋಜನೆಯನ್ನು ರೂಪಿಸುತ್ತದೆ. ಹಿಂದಿನ ಮಂತ್ರಿಗಿಂತ ಹೆಚ್ಚು ಗಳಿಸುವ ಪರಿ ಹೀಗೆಂದು ಹೇಳುವವರು ಮುನ್ನೆಲೆಗೆ ಬರುತ್ತಾರೆ. ಕೈ ಮುಗಿದುಕೊಂಡು ನಿಂತ ಬಡ ಬೋರೆ ಗೌಡ ಹಿಂದೆ ಸರಿಯುತ್ತಾನೆ. ಅಧಿಕಾರಿಗಳಿಗೆ ಅವರದೆ ಚಿಂತೆ. ಅನುಗಾಲವು ಸಂತೆ. ಕಿರಿಯರನು ಗದರಿಸುತ, ಹಿರಿಯರಿಗೆ ಮುಜಿರೆ ಸಲ್ಲಿಸುತ, ಶಾಸಕರು, ಮಂತ್ರಿವರ್ಯರೊಳು ವಿಧೇಯತೆಯ ಮೆರೆಯುತ ' ಬೀಸುವ ಗುಂಡಿಗೆ ಮುಕ್ಕಿದ್ದೆ ಲಾಭ’ ಎನ್ನುತ ಬದುಕುತಿದ್ದಾರೆ, ಜಾಹಿರಾತಿಗೆ ಬಾಯ್ಬಿಡುವ ಪತ್ರಿಕೋದ್ಯಮಿಗಳು ದೇಶಾವರಿ ನಗೆ ಚೆಲ್ಲುತ್ತ ಬಡವರ ಬಗ್ಗೆ ಕರುಳು ಕರುಗುವಂತೆ ಬರೆವಾಗ ಪೆಟ್ಟಿಗೆಯೊಳಗಿದ್ದ ತ್ರಿವರ್ಣ ಧ್ವಜ ಹಾಯಾಗಿ ಮಲಗಿದೆ. ಅತ್ತ ರೈತ ಸಪ್ಪು ತರಲು ಕಾಡಿಗೆ ನಡೆದಿದ್ದಾನೆ, ಕೊನೆ ಗೌಡ ಅಡಿಕೆ ಕೊನೆಗಳಿಗೆ ಮದ್ದು ಹೊಡೆಯುತ್ತಿದ್ದಾನೆ. ಇನ್ನು ಕರೋನಾ ನಮ್ಮನ್ನು ಕಟ್ಟಿಹಾಕಿ ಈ ೭೪ ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಮನೆಯಲ್ಲಿಯೆ ಅಚರಿಸುವ ಅನಿವಾರ್ಯತೆಗೆ ತಂದು ನಿಲ್ಲಿಸಿದೆ..

" ಅನ್ನದನ್ಯಾಯ ದಾವಾಗ್ನಿಯಲಿ ಬತ್ತುತಿದೆ ನರತೆ, ಸಂಸ್ಕೃತಿ, ಪ್ರೀತಿ ದಿವದ ಬಯಕೆ” ಕವಿಗಳಾದ ಗೋಪಾಲ ಕೃಷ್ಣ ಅಡಿಗರ ಕವಿತೆಯ ಸಾಲು ನೆನಪಾಗುತ್ತಿದೆ. ನಾವು ನಮ್ಮ ದೇಶದ ಮಾನ, ಅಭಿಮಾನ, ಘನತೆ, ಗಾಂಭೀರ್ಯ ಮತ್ತು ಗುರುತ್ವವನ್ನು ಕಾಪಾಡಲು ನಮ್ಮ ಮನಸ್ಸಾಕ್ಷಿಯ ದಮನ ಮಾಡದೆ ಸತ್ಯ ಮತ್ತು ನ್ಯಾಯದ ಹಾದಿಯಲ್ಲಿ ನಡೆಯೋಣ. ತಾಯಿ ಭಾರತಾಂಬೆಗೆ ಜೈ ಅನ್ನೋಣ. ನಮಗಾಗಿ ಪ್ರಾಣವನ್ನೆ ಪಣವಾಗಿಟ್ಟ ಗಡಿಕಾಯ್ವ ಯೋಧರಿಗೆ ಜಯ ಜಯ ಅನ್ನೋಣ.

ಜೈ ಜವಾನ್ ಜೈ ಕಿಸಾನ್.

‌ ‌‌‌- ಡಾ.ಶ್ರೀಪಾದ ಶೆಟ್ಟಿ

76 views0 comments

Comments


bottom of page