ನೋಡನೋಡುತ್ತಿದ್ದಂತೆ
ಎಲ್ಲವೂ ಬದಲಾಗಿದೆ
ಕೊನೆಗೆ ಸಾವೂ !!
ಸುತ್ತ ನೆರೆವ ಬಂಧುಗಳ ಕೈಯಲ್ಲಿ ಕಾಶಿ ಗಿಂಡಿ
ಮೇಲುಸಿರು, ನೀರು ಬಿಡಿ
ಹಿರಿಯರ ಮೆಲುದನಿಗೆ
ಸೆರಗಡ್ಡ ಹಿಡಿದ ದುಃಖ
ಅರೆ ಬರೆ ಪ್ರಾಣದ ಕುರುಹಿದ್ದರೆ
ಉಳಿಯಲಿ ಹಿರಿ ಜೀವ ಮೊಮ್ಮಕ್ಕಳ ನೋಡಲಿ
ತಲೆಯ ಮೇಲೆ ಅಕ್ಕಿ ಕಾಳು ಹಾಕಲಿ
ಕನಕಾಭಿಷೇಕವೂ ಆಗಲಿ
ಸುಲಭಕ್ಕೆ ಬಿಟ್ಟು ಕೊಡಲಾರದ ಎಳೆಗಳು
ಎಲ್ಲೆಲ್ಲೂ ಆವರಿಸಿದ ಮೌನ
ಅಕ್ಕ-ಪಕ್ಕ ಊರು-ಕೇರಿಯೆಲ್ಲ ಸರಬರ ಸೇರಿ
ಕೋಲು, ಕಟ್ಟಿಗೆ, ಮಡಿಕೆ, ಗುಂಡಿ
ಅವರಷ್ಟಕ್ಕೆ ಕೆಲಸಗಳ ಹಂಚಿಕೆ
ಬಂದವರಿಗೆ ಚಹಾ, ಕಾಫಿ, ತಿಂಡಿ
ಯಾರ ಯಾರದೋ ಖುಣ
ಪರಲೋಕದ ಯಾತ್ರೆಗೆ
ಎಲ್ಲರ ಹೆಗಲು
ಸೂತಕವೋ, ಮೈಲಿಗೆಯೋ
ಮಾರನೇ ದಿನದ ಹಾಲು-ತುಪ್ಪ
ಸಾಲು ಸಾಲು ತಿಥಿ, ಶ್ರಾದ್ಧ ಗಳು
ಮಡುಗಟ್ಟಿದ ದುಃಖ
ಸಾವಿಗೆಂಥ ಘನತೆ !!
ಸಾವೀಗ
ಕುಳಿತಲ್ಲೆ, ನಿಂತಲ್ಲೆ ಕುಸಿದು
ಅರಿಯುವ ಮೊದಲೇ
ಎದ್ದು ಹೋಗಿ ಬಿಡುವ ಜೀವ !!
ಕಣ್ಣು ಮಾತಾಡಲಿಲ್ಲ
ನೋವೋ, ಸಂಕಟವೋ ಗೊತ್ತಿಲ್ಲ
ಆಂಬುಲೆನ್ಸಿನ ಸದ್ದೊಂದು ನೆವನ
ಬರುವವರು ಬಂದಾರು
ದೂರ, ಕಾರುಬಾರು, ಕಛೇರಿ ಬಿಡುವಿದ್ದರೆ
ಅವರವರ ದಂದುಗದ ಹೊರೆ
ಉಸಿರು ಇದ್ದವರಿಗೆ
ಬದುಕು ಘನವಾಗಿದ್ದರೆ
ಸಾವಿಗೂ ಘನತೆ !!
-ನೂತನ ದೋಶೆಟ್ಟಿ
Very nicely written 😌