ಸುದ್ದಿ ಮನೆಯ ಕೊನೆ ಕ್ಷಣದ ಕಸರತ್ತುಗಳು ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಭಿನ್ನವಿಲ್ಲ. ಒತ್ತಡ, ಸ್ಪರ್ಧೆ,ತಂತ್ರ,ಪ್ರತಿ ತಂತ್ರ ಇದ್ದೇ ಇರುತ್ತೆ. ಈ ಒತ್ತಡಕ್ಕೆ ರಕ್ತದೊಳಗಿನ ಸಕ್ಕರೆ ಪಾಕ ಹೇಗೆ ಏರುತ್ತೆ ಅನ್ನೋದು ಅನುಭವಿಸಿದವರೇ ವರ್ಣಿಸಲು ಸಾಧ್ಯ. ಏಕೆಂದರೆ ಅದು ಯಾವತ್ತೂ ಕೆಳಗಿಳಿಯುವ ಮುನ್ಸೂಚನೆ ನೀಡುವುದಿಲ್ಲ. ನನಗೆ 1991ರ ಮೇ.21ರ ರಾಜೀವ್ ಹತ್ಯೆಯಾದ ರಾತ್ರಿ ನೆನಪಾಗುತ್ತೆ. ಆಗಷ್ಟೇ ಮೈಸೂರ್ ನ ಮಹಾನಂದಿ ಪತ್ರಿಕೆ ಸೇರಿದ್ದೆ. ನಾಲ್ಕು ಪುಟಗಳ ಸುದ್ದಿ ತುಂಬಿಸಲು ಆಗದೇ ಪಬ್ಲಿಕ್ ಟಿವಿ ರಂಗನಾಥ ಕೆಲಸ ಬಿಟ್ಟಿದ್ದರು. ರಾತ್ರಿ 10.30ಕ್ಕೆ ಪೇಜ್ ಪ್ರಿಂಟ್ ಗೆ ಹೋಗಬೇಕಿತ್ತು. ಸುದ್ದಿ ಸಂಪಾದಕ ದಿವಂಗತ ಕೆ ಎಂ ವಿಶ್ವ ನಾಥ್ ಮನೆಗೆ ಹೋಗಿದ್ದರು. ನಾನು ಮತ್ತು ಟಿ ವಿ ರಾಜೇಶ್ವರ್ ಪೇಜ್ ರೆಡಿ ಮಾಡಿಸುತ್ತಿದ್ದೆವು. ಅಷ್ಟರಲ್ಲಿ ಅಟೆಂಡರ್ ನಾಗರಾಜಯ್ಯ " ಸರ್ UNI ಟೆಲಿ ಪ್ರಿಂಟರ್ ಕೆಟ್ಟೋಗಿದೆ ಅನ್ಸುತ್ತೆ. ಒಂದೇ ಲೈನ್ ಪ್ರಿಂಟ್ ಆಗ್ತಾ ಇದೆ "ಅಂತ ತಂದು ತೋರಿಸಿದ. ಅದೇನೂ ನೋಡಿ ಅಂದ್ರು ನನಗೆ ಅಲ್ಲಿ ಕೆಲಸ ಕೊಡಿಸಿದ ರಾಜೇಶ್ವರ್. ನಾನು ಟೆಲಿಪ್ರಿಂಟರ್ ಕಾಪಿ ನೋಡಿದ್ರೆ, ಅದರಲ್ಲಿ ಒಂದೇ ಸಾಲು ಪ್ರಿಂಟ್ ಆಗಿತ್ತು. ಮುಂದೆ ಉದ್ದುದ್ದ ಸಾಲು ಖಾಲಿ ಆಗಿತ್ತು. ನಾನು ಒಂದು ಸಾಲು ಓದಿದಾಗ ನನ್ನ ಎದೆ ನಡುಗಿ ಹೋದಂತಾಯಿತು. "Former prime minister Rajiv Gandhi assassinated at Sriperambudur near Chennai "ಅಂತ uni ಸುದ್ದಿ ಸಂಸ್ಥೆ ಟೆಲಿ ಸಂದೇಶ ಕಳುಹಿಸುತ್ತಿತ್ತು. ಇದನ್ನು ಟಿ ವಿ. ರಾಜೇಶ್ವರ್ ಗೆ ಹೇಳಿದಾಗ, ಅವರು ಸಹ ಓದಿ ಅವರ ಕೈ ಕಾಲೆಲ್ಲ ಕಂಪಿಸತೊಡಗಿತು. ಅದಾಗಲೇ ಮುಖ ಪುಟವೆಲ್ಲ ಪೇಸ್ಟ್ ಅಪ್ ಆಗಿ ಮನೆಗೆ ಹೋಗುವ ನಿರಾಳ ಕಾಲದಲ್ಲಿ ಮತ್ತೇ ಸುದ್ದಿ ಕಿತ್ತು, ಹೊಸದಾಗಿ ಸುದ್ದಿ ಬರೆದು ಪೇಸ್ಟ್ ಅಪ್ ಮಾಡ ಬೇಕಾದ ಕಷ್ಟ. ಈ ಕಷ್ಟಕ್ಕಿಂತ ಪೇಜ್ ಹಾಗೇ ಪ್ರಿಂಟ್ ಗೆ ಹೋಗಿ, ನಾವು ಮನೆಗೆ ಹೋಗಿದ್ದರೆ, ಬೆಳಗ್ಗೆ ನಮ್ಮ ಪತ್ರಿಕೆ ಗತಿ ಏನೂ? ಸಂಪಾದಕ ಕಂ ಮಾಲೀಕರಾದ JSS ಸಂಸ್ಥೆ ಮಾಜಿ ಕಾರ್ಯದರ್ಶಿ ಎಚ್. ಸಿ. ಬಸವಣ್ಣ ರಿಗೆ ಏನೂ ಉತ್ತರ ಕೊಡುವುದು ಅನ್ನುವುದಕ್ಕಿಂತ, ಎದುರಾಳಿ ಪತ್ರಕರ್ತರ ಮೂದಲಿಕೆಯ ಮುಖ, ಕೊಂಕು ಮಾತು ಸಹಿಸುವುದಾದರು ಹೇಗೆ? ಅಂತೂ ರಾಜೀವ್ ಹತ್ಯೆ ಸುದ್ದಿ ಸಿಕ್ಕಾಯಿತು. ದೊಡ್ಡ ಸುದ್ದಿಯಾಗಿದ್ದರಿಂದ ದೊಡ್ಡದಾಗೆ ಬರೆಯ ಬೇಕಿತ್ತು.
ಹೀಗಾಗಿ ಅಂದಿನ ಬಂಗಾರಪ್ಪ ಸಂಪುಟದ ಸಾರಿಗೆ ಮಂತ್ರಿ ಅಜೀಜ್ ಸೇಟ್ ಮನೆಗೆ ಫೋನಾಯಿಸಿ, ಅವರ ಪ್ರತಿಕ್ರಿಯೆ ಪಡೆವ ಹೊಣೆಗಾರಿಕೆ ಹೊತ್ತು ಮಾತಾಡಿದೆ.ಸಚಿವ ಅಜೀಜ್ ಸೇಟ್ "ನಿಜಾನಾ,ನಿಜ್ವಾಗ್ಲೂ, ಯಾವಾಗ "ಅಂತ ಗಾಬರಿಯಿಂದ ನಮ್ಮನ್ನೇ ಕೇಳತೊಡಗಿದರು. ನಾನು ಅವರ ದಿಗ್ಬ್ರಮೆ ಯನ್ನೇ ಪ್ರತಿಕ್ರಿಯೆಯಾಗಿ ಮಾಡಿಕೊಂಡು ಸಂತಾಪ ಹೇಳಿಕೆ ಬರೆದೆ, ನಂತರ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರ್ಷ ಕುಮಾರ್ ಗೌಡ್ರಿಗೆ ಫೋನ್ ಮಾಡಿದ್ರೆ, ಅವರು ವಿಷಯ ಕೇಳಿ ಬಿಕ್ಕಿ ಬಿಕ್ಕಿ ಅಳ ತೊಡಗಿದರು. ಹೀಗೆ ಅಂದಿನ ಮೈಸೂರು ನಗರ ಪಾಲಿಕೆ ಉಪ ಮೇಯರ್ ಎನ್. ಲಕ್ಷ್ಮಣ್ ಮತ್ತಿತರರರಿಗೆ ಫೋನ್ ಮಾಡಿ ಪ್ರತಿಕ್ರಿಯೆ ಸುದ್ದಿ ತಯಾರಿಸಿದೆ. 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಆದಾಗ ಗಲಭೆಯಾಗಿ ಸಿಖ್ ಜನರನ್ನು ಕೊಂದಂತೆ, ದಕ್ಷಿಣ ಭಾರತೀಯರನ್ನ ಕೊಲ್ಲುವ ಗಲಭೆ ದೆಹಲಿ, ಮುಂಬಯಿ ಗಳಲ್ಲಿ ಸಂಭಾವಿಸಬಹುದೇ ಅಂತ , ರಾಜೇಶ್ವರ್ ರನ್ನು ನಾನು ಕೇಳಿದಾಗ ಅವರು ಸಾಧ್ಯವಿದೆ ಅಂತ ಹೇಳಿ ಅವರು ಸಹ ದೇಶದ ಭವಿಷ್ಯದ ಕುರಿತು ಆತಂಕಿತರಾದರು.
ಹೀಗೇ ಅಂದಿನ ರಾಜೀವ್ ಗಾಂಧಿ ಹತ್ಯೆ ಸುದ್ದಿ ಸಿದ್ದಪಡಿಸಿ ಮನೆಗೆ ಹೋದಾಗ ರಾತ್ರಿ ಒಂದೂವರೆ ಆಗಿತ್ತು. ಹಾಗೇ ಸಯ್ಯಾಜಿರಾವ್ ರಸ್ತೆ ಕಡೆ ನಡೆದು ಇರ್ವಿನ್ ರಸ್ತೆಯಲ್ಲಿದ್ದ ನನ್ನ ಮನೆಗೆ ಹೋಗುವಾಗ ದೇವರಾಜ ಮಾರುಕಟ್ಟೆ ಕಟ್ಟಡದಲ್ಲಿದ್ದ ಕಾಂಗ್ರೆಸ್ ಕಚೇರಿ ಮುಂದೆ ಶಾಸಕ ಹರ್ಷ ಕುಮಾರ್ ಗೌಡ ರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಧರಣಿ ಕೂತಿದ್ದ ದೃಶ್ಯ ಕಂಡಿತು. ಅದಾಗಲೇ drunk and monkey ಗಳಾಗಿದ್ದ ಯುವ ಕಾಂಗ್ರೆಸಿಗರ ರಂಪಾಟಕ್ಕೆ ಯಾಕಾದ್ರೂ ಮನೆ ಬಿಟ್ಟು ಕಾಂಗ್ರೆಸ್ ಕಚೇರಿಗೆ ಬಂದೆನೋ ಅನ್ನಿಸಿರ ಬೇಕು ಶಾಸಕ ಹರ್ಷ ಕುಮಾರ್ ಗೌಡರಿಗೆ. ರಾಜೀವ್ ಹತ್ಯೆ ನಂತರ ಕಾಂಗ್ರೆಸ್ ನವರಿಗೆ ಮುಂದೇನು ಅಂತ ದಿಕ್ಕೇ ತೋಚದೆ ದಿಗ್ಮುಢರಾಗಿ ಕಿರುಚಾಡುತ್ತಿದ್ದರು. ಇದೇ ಬಗೆಯ ಮನಸ್ಥಿತಿ ದೇಶದ ಕಾಂಗ್ರೆಸ್ ನಾಯಕರಿಗೂ ಇದ್ದದ್ದು ಸುಳ್ಳಲ್ಲ. ಭಾರತೀಯರ ಮನಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲ. ಅಂದು ದೆಹಲಿಯಲ್ಲಿ ಹುಚ್ಚು ಕಾಂಗ್ರೆಸಿಗರಿಗೆ ಕಡಿವಾಣಹಾಕಿದ ದಿಲ್ಲಿ ಪೊಲೀಸರ ಕಟ್ಟು ನಿಟ್ಟಿನ ರಾತ್ರಿ ಗಸ್ತು ಮತ್ತು ಗಲಭೆ ಆದರೆ ಕಂಡಲ್ಲಿ ಗುಂಡಿಕ್ಕುವ ಆಜ್ಞೆ ಭಾರತ ಐಕ್ಯವಾಗಿ ಉಳಿಯುವಂತೆ ಮಾಡಿತ್ತು. ಏಕೆಂದರೆ, ರಾಜೀವ್ ಹತ್ಯೆ ಹಿಂದಿನ ಉದ್ದೇಶವೂ ದೇಶ ಒಡೆವ ಸಂಚೇ ಆಗಿತ್ತು. ಇಂದಿರಾ ಹತ್ಯೆ ನಂತರ ನಡೆದ ಸಿಖ್ಖರ ಹತ್ಯೆಯಿಂದ ಪಂಜಾಬ್ ಸಂಪೂರ್ಣ ಕೈ ಬಿಟ್ಟು ಹೋಗುವ ಅಪಾಯ ತಂದಿತ್ತು. ರಾಜೀವ್ ಹತ್ಯೆಯಿಂದ ದಕ್ಷಿಣ ಭಾರತೀಯರ ಹತ್ಯೆ, ಅದರಲ್ಲೂ ತಮಿಳರ ಹತ್ಯೆಯಾದರೆ ತಮಿಳು ನಾಡು ಪ್ರತ್ಯೇಕ ರಾಷ್ಟ್ರ ದ ಕೂಗಿಗೆ LTTE ಉಗ್ರ ಸಂಘಟನೆ ಬಾಂಬು ಸ್ಪೋಟಿಸುವ ಆಲೋಚನೆ ಮಾಡಿತ್ತು. ಇದೆಲ್ಲಾ ಒಬ್ಬ ವಿವೇಕವಂತ ಪೊಲೀಸ್ ಅಧಿಕಾರಿಗಳಿಂದ ದೇಶದ ಕರಾಳ ಇತಿಹಾಸ ಬದಲಾಯಿತು. 1995ರಹೊತ್ತಿಗೆ ಪಂಜಾಬ್ ಸಹ ತಣ್ಣಗಾಗಿ ಭಾರತ ಐಕ್ಯ ಮತ್ಯಾ ಈಗಲೂ ಉಳಿದುಕೊಂಡು ಬಂದಿದೆ. ರಾಜೀವ್ ಹತ್ಯೆಯ ರಾತ್ರಿ ಪೊಲೀಸ್ ಕಾವಲು ತಪ್ಪಿದ್ದರೆ ಎಂಥ ಅನಾಹುತವಾಗುತ್ತಿತ್ತು ಎಂಬುದನ್ನು ಮರು ದಿನ ರಾಜೀವ್ ಗಾಂಧಿ ಶವಕ್ಕೆ ನಮಿಸಲು ಬಂದ ರಾಷ್ಟ್ರಪತಿ ವೆಂಕಟರಾಮನ್ ಕಾರಿಗೆ ಅಡ್ಡಿಪಡಿಸಿದ ಕಾಂಗ್ರೆಸ್ ಕಾರ್ಯಕರ್ತರ ಹುಚ್ಚು ಕೋಪ ಸಾಕ್ಷೀ ಕರಿಸಿತ್ತು.
ಶ್ರೀ ಪ್ರಕಾಶ ಬಾಬು
ಪತ್ರಕರ್ತರು ಮೈಸೂರು


ಪ್ರಕಾಶ ಬಾಬು ಮೈಸೂರು
ತಮ್ಮ ಜೀವನ ಪ್ರೀತಿ ಮತ್ತು ಒಡನಾಟಗಳಿಂದ ಮೈಸೂರಿನ ಜನಮಾನಸದಲ್ಲಿ ಪತ್ರಕರ್ತರಾಗಿ ,ಉತ್ತಮ ಸಂಘಟಕರಾಗಿ,ಸಾಹಿತ್ಯ ಸಂಸ್ಕೃತಿ ಪರ ಕಾರ್ಯಕ್ರಮಗಳ ಸಂಯೋಜಕರಾಗಿ ಸದಾಕಾಲ ಕ್ರಿಯಾಶೀಲರಾಗಿರುವ ಪ್ರಕಾಶ ಬಾಬು ಅವರು ರಾಜೀವ ಗಾಂಧಿ ಹತ್ಯೆಯ ಸಂದರ್ಭವನ್ನು ಪತ್ರಕರ್ತರಾಗಿ ಪ್ರಕಟಮಾಡಿದ ಸಂದರ್ಭದ ಮೆಲುಕುಗಳು ಸುದ್ದಿ ಮನೆಯ ಕತೆಯಾಗಿ ನಿಮ್ಮ ಓದಿಗೆ. ಡಾ.ಶ್ರೀಪಾದ ಶೆಟ್ಟಿ ಸಂಪಾದಕರು.