top of page

ಸ್ತಬ್ಧ

ಗೋಲಾಕಾರದ ಕಿರಿದುಂಡೆಯ

ಆರ್ಭಟಕ್ಕೆ

ನಲುಗುತ್ತಿದೆ

ವೃತ್ತಾಕಾರದ ದೊಡ್ಡ ಭೂಮಿ


ಕಿರಿದುಂಡೆಯ ಕಿರೀಟದ

ಆಕ್ರಮಣಕ್ಕೆ

ನಿದ್ದೆಗೆಟ್ಟ

ಆಳುವ ಕಿರೀಟಗಳು


ಸರಳ ರೇಖೆಯ ಹಾಗೆ ಬೆಳೆದ

ಪ್ರಗತಿಯ ದಾರಿಗಳೆಲ್ಲ

ಮಲಗಿವೆ ಸುಸ್ತಾಗಿ

ಅರ್ಧಕ್ಕೆ

ರೇಖಾಖಂಡಗಳಾಗಿ


ಕ್ರಿಯಾಪದಗಳಿಗೆ ಸಂವಾದಿಯಾಗಿ

ಹಗಲು ರಾತ್ರಿ

ಬದುಕು ಕಟ್ಟಿದ ಜೀವಗಳೆಲ್ಲ

ಅನಾಥವಾಗಿವೆ ರಸ್ತೆಯಲ್ಲಿ

ಉರುಳಿದ ಎಲೆಗಳಂತೆ


ಪರಿಧಿ ಮೀರಿ

ನಗರ ಮಹಾನಗರದ ಸೆಳೆತಕ್ಕೆ

ಓಡಿದ ಕನಸುಗಳೆಲ್ಲ

ಮುಖ ಮಾಡಿವೆ

ಮರಳಿ

ಕೇಂದ್ರದ ಕಡೆಗೆ


ಸಂಬಂಧಗಳು

ಪರಿಚಯಗಳು

ಅಂತರದ ಅಗ್ನಿಯಲ್ಲಿ

ಸುಟ್ಟು

ಕಂಬನಿ ಆವಿಯಾಗಿದೆ


ಹೆತ್ತವರು ಹೊತ್ತವರು

ಕರುಳುಗಳು ಕುಡಿಗಳು

ಕಣ್ಣೆದುರಿದ್ದೂ

ದೂರದಿಂದಲೇ

ನಿರ್ಗಮಿಸುತ್ತಿವೆ


ಬಿಂದುವಿನೊಳಗಿನ

ಸಹಸ್ರ ಬಿಂದುಗಳಲ್ಲೊಂದಾದ

ಈ ಕಿರಿದುಂಡೆಯ

ದಾಳಿಗೆ

ಕನಸುಗಳೂ

ಸ್ತಬ್ಧವಾಗಿವೆ.


- ಶ್ರೀಧರ ಶೇಟ್ ಶಿರಾಲಿಭಟ್ಕಳ ತಾಲೂಕಿನ ಶಿರಾಲಿಯ ಶ್ರೀಧರ ಶೇಟ್ ರವರು ಕವಿ, ಲೇಖಕ, ಚಿತ್ರ ಕಲಾವಿದ,ವ್ಯಂಗ್ಯಚಿತ್ರಕಾರ, ಕಾರ್ಯಕ್ರಮ ನಿರೂಪಕ ಹೀಗೆ ಬಹುಮುಖ ಪ್ರತಿಭೆಯಿಂದ

ಜನಮನ್ನಣೆ ಗಳಿಸಿದ್ದಾರೆ.ಭಟ್ಕಳದ ಸರಕಾರಿ ಪ್ರೌಢಶಾಲೆ ಜಾಲಿಯಲ್ಲಿ ಇಂಗ್ಲೀಷ್ ಭಾಷಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು,ತಾಲ್ಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿರುತ್ತಾರೆ. 'ಹಸಿವು ಸಾಯುವುದಿಲ್ಲ'(ಕವನ ಸಂಕಲನ),ಬೇಲಿಯ ಹೂವು(ಮಕ್ಕಳ ಕವಿತೆಗಳು),ಬೆರಳ ಸಂಧಿಯಿಂದ( ಹನಿಗವಿತೆಗಳು) ಅವರಿಗೆ ಹೆಸರು ತಂದುಕೊಟ್ಟ ಕೃತಿ ಗಳು.ರಾಜ್ಯ ಮಟ್ಟದ 'ಸಂಕ್ರಮಣ ಕಾವ್ಯ' ಪ್ರಶಸ್ತಿಯಿಂದ ಎರಡು ಬಾರಿ ಪುರಸ್ಕೃತರಾಗಿರುವ ಹೆಮ್ಮೆ ಇವರದ್ದು.

58 views0 comments

コメント


bottom of page