top of page

ಸಣಕಲು ಗಿಡದ ಸತ್ವಶಾಲಿ ಕವನಗಳು

ಅಬ್ಳಿಯವರ ಸಣಕಲು ಗಿಡದ

ಸತ್ವಯುತ ಕವನಗಳ ಗೊಂಚಲು

*******************"******

       ಕವಿಯ ಕವನಗಳಿಗೆಲ್ಲ ವಿವರಣೆ ಕೊಡಲು ಹೋಗಬಾರದು. ಒಳ್ಳೆಯ ಕವನಗಳು ತಾವೇ ಎಲ್ಲ ವಿವರಣೆ ಕೊಟ್ಟುಬಿಟ್ಟಿರುತ್ತವೆ. ಅಲ್ಲಿಯ ಶಬ್ದ, ಅಲ್ಲಿಯ ಭಾವ ಓದುವ ನಮ್ಮ ಮನಸ್ಸು ಮುಟ್ಟಿದರೆ ಸಾಕು ಅವು ಸಾರ್ಥಕ ಕವನಗಳು. ಕವನಗಳನ್ನು ಓದುತ್ತ ಓದುತ್ತ ನಮ್ಮ ಮನಸ್ಸು ಯಾವ ಅಭಿಪ್ರಾಯ ಕೊಡುತ್ತದೋ ಅದೇ ನಿಜವಾದ ವಿಮರ್ಶೆ. ಅದರಾಚೆಗೆ ಏನಿಲ್ಲ.

ಅಬ್ಳಿಯವರು ಫೇಸಬುಕ್ ಕವಿಗಳಾಗಿ ನಮಗೆಲ್ಲ ಪರಿಚಿತರಾದವರು. ಅಷ್ಟೇ ಏಕೆ ಪ್ರಿಯರಾದವರು. ಯಾರೋ ಸುಮ್ಮಸುಮ್ಮನೆ ನಮಗೆ ಇಷ್ಟವಾಗಿಬಿಡುವುದಿಲ್ಲ. ಅವರಲ್ಲೇನಾದರೂ ಇಷ್ಟವಾಗುವಂತಹದು ಇದ್ದಾಗ ಮಾತ್ರ ತಾನೇ? ಕಳೆದ ನಾಲ್ಕಾರು ವರ್ಷಗಳಲ್ಲಿ ಅಬ್ಳಿಯವರು ಫೇಸಬುಕ್ ಮೂಲಕವೇ ಬಹಳ ದೊಡ್ಡ ಆಪ್ತವಲಯವನ್ನು ಸೃಷ್ಟಿಸಿಕೊಂಡವರು. ಅದು ಅಷ್ಟು ಸುಲಭವಲ್ಲ. ಎಲ್ಲರಿಗೂ ಸಿಗುವುದಿಲ್ಲ ಆ ಭಾಗ್ಯ. ಅವರ ಸಂಕಲನದ ಹೆಸರು "ಸಣಕಲು ಗಿಡ"ವಾಗಿರಬಹುದು. ಅವರ ಕವನಗಳು ಸಣಕಲು ಅಲ್ಲ. ಅವು ತಕ್ಕಮಟ್ಟಿಗೆ ಸಶಕ್ತವಾಗಿಯೇ ಇವೆ. ಆದ್ದರಿಂದಲೇ ಅವು ನಮಗೆ ಇಷ್ಟವಾಗುತ್ತವೆ.

ಮೊದಲು ಅವರಿಂದ " ಗುಂದ" ಕಿರು ಕಾದಂಬರಿ ಬಂತು. ಅದರ ದಟ್ಟ ಪ್ರಾದೇಶಿಕತೆಯ ಛಾಯೆಗಾಗಿ ಪ್ರಶಂಸೆಯನ್ನೂ ಗಳಿಸಿಕೊಂಡಿತು. ಆದರೆ ಅವರ ಇತಿಮಿತಿಗಳು ಅವರಿಗೆ ಗೊತ್ತು. ಅವರ ಸಂಕೋಚ ಇನ್ನೂ ಹೋಗಿಲ್ಲ. ಮೈಛಳಿ ಪೂರ್ತಿ ಬಿಟ್ಟಿಲ್ಲ. ಅದಕ್ಕೆ ಅವರದೇ ಆದ ಕಾರಣಗಳೂ ಇವೆ. ಯಾವುದಕ್ಕೂ ನಮ್ಮ ಸುತ್ತ ನಮಗೆ ಸಿಗುವ ವಾತಾವರಣ ಬಹಳ ಮುಖ್ಯ.

ಈ ಸಣಕಲು ಗಿಡದಲ್ಲಿ ಅವರ ೬೨ ಕನಸುಗಳಿವೆ. ಕನಸು ಕಾಣುವುದು ಕವಿಯ ಅನಿವಾರ್ಯತೆ. ಅವನ ಹಕ್ಕು ಕೂಡ. ಎಲ್ಲ ಒಳ್ಳೆಯ ಕನಸುಗಳೇ ಬೀಳುತ್ತವೆಂದೇನಿಲ್ಲ. ಎಲ್ಲ ಕನಸುಗಳೂ ನನಸಾಗುವುದಿಲ್ಲ. ಸತ್ತೇ ಹೋಯಿತು ಎಂದು ಭಾವಿಸಿದ ಗಿಡವೂ ಎಂದೋ ಒಮ್ಮೆ ಚಿಗಿತುಕೊಂಡು- ಬಿಡಬಹುದು. ಕವಿ ಯಾವತ್ತೂ ಅಂತರ್ಮುಖಿ. ಅವನಿಂದ ಹೊರಬರುವ ಕವನ ಬಹಿರ್ಮುಖವಾದುದು. ಕವಿಯನ್ನು ಕೇಳದೇ ಕವನ ಹೊರಬಂದುಬಿಡುತ್ತದೆ. ಓದುಗನಿಗೆ ಅದು ಯಾವುದೋ ಒಂದು ಕಾರಣಕ್ಕಾಗಿ ಹಿಡಿಸಿತೆಂದರೆ ಅದು ಉತ್ತಮ ಕವನವೆಂದೇ ಅರ್ಥ.

ಅಂತಹ ಅನೇಕ ಹಿಡಿಸುವಂತಹ ಕವನಗಳು ಇದರಲ್ಲಿವೆ.

            ನಾನು ಮತ್ತು ದೇವರು

            ಇಬ್ಬರೇ ಕುಳಿತಿದ್ದೇವೆ

            ನಡುಮನೆಯ ಕತ್ತಲಲ್ಲಿ...

            ನನಗೆ ತುಂಬಾ ಇಷ್ಟ ಇಲ್ಲಿಯ ಕತ್ತಲು

            ಕಾರಣವಿಷ್ಟೇ ...

            ಇಲ್ಲಿ ಬೆತ್ತಲಾದರೂ ಗೊತ್ತಾಗುವುದಿಲ್ಲ ಹೊರಗೆ

( ಕೊನೆಯಲ್ಲಿ)

            ದೇವರು ಕೂಡ ಕತ್ತಲಲ್ಲಿ ನನ್ನೊಟ್ಟಿಗೆ

             ಆತನಿಗೂ ಬೆಳಕಿನ ಅನಿವಾರ್ಯತೆ

             ಇದ್ದಂತೆ ಕಾಣುತ್ತಿಲ್ಲ....

ಈ ಕವನದ ಮೂಲಕ ಕವಿಯ ಭಾವನೆಗಳು ಓದುವವರ ಭಾವಕ್ಕೆ ತಕ್ಕಂತೆ ಬೇರೆ ಬೇರೆ ರೂಪ ತಾಳಬಹುದು. ಅದನ್ನೇ ಒಳ್ಳೆಯ ಕವಿತೆ ಎನ್ನುವುದು. ಭಾವನೆಗಳನ್ನು ಹುಟ್ಟಿಸದೇ ಇದ್ದರೆ ಅದು ಕವಿತೆಯೇ ಅಲ್ಲ.

      ಅಂತರ ಕಾಯ್ದುಕೊಳ್ಳುವವರ,

      ಇಲ್ಲದವರ, ಮುಖಕ್ಕೊಂದು

      ಮುಖವಾಡ ಧರಿಸಿದವರ

      ಧರಿಸಿಲ್ಲದವರ, ಸಂದೋಹ ಎಲ್ಲೆಡೆಗೂ

      ಹೊಸ ಹೊಸ ಆವಿಷ್ಕಾರ , ಗ್ಯಾರೆಂಟೀ

      ಕಾರ್ಡುಗಳ ಸಹಿತ...

                .( ಸಾವಿನಂಗಡಿಯಲ್ಲಿ.)

      ಒಳ ಕತ್ತಲು ದಾಸ್ತಾನು ಕೋಣೆಯ

     ಬೀಗ ತೆರೆದು ಒಂದಿಷ್ಟು ಕತ್ತಲು ಬೀಜ

    ‌ ಬಾಚಿ ಹೊರಬಂದು

     ಬೆಳಕ ಬಯಲಲ್ಲಿ ಬಿತ್ತಿ ಬೆಳೆವಾಸೆ

    ಬೆಳೆದ ಫಸಲ ಬೆಳಕಿನೊಂದಿಗೆ

     ಹದವಾಗಿ ಬೆರಸಿ, ಕತ್ತಲ

     ಸಂಜೆ ಮುಂಜಾವುಗಳ ಮಂದ ಬೆಳಕಲ್ಲಿ

     ಬಯಲಿನಂದವ ಆಸ್ವಾದಿಸುವಾಸೆ......

ಇತ್ತೀಚೆಗೆ ಏಕೋ ಒಳ ಗೋಡೌನಿನಲಿ

ಹೆಚ್ಚೆಚ್ಚು ಕತ್ತಲ ದಾಸ್ತಾನು ಮಾಡುವಾಸೆ

ದಿನಬಳಕೆಗೆ.....

                   ( ಕತ್ತಲೆ ಬೆಳಕಿನೊಂದಿಗೆ)

     ದಿನಸಿ ಖಾಲಿಯೆಂದು ಅಮ್ಮ

      ಅಮ್ಮ ಅಲವತ್ತುಕೊಂಡಾಗ

      ಉಟ್ಟ ಸಣ್ಣ ಪಂಚೆ,

      ತೊಟ್ಟ ಮಾಸಿದ ಬನಿಯನ್ನಿನಲೆ

      ಅಂಗಡಿಗೆ ಹೋಗುವಾಗಿನ

      ಅಪ್ಪನ ವೇದಾಂತಿಯ ಮುಗುಳುನಗೆ....(ನನ್ನಪ್ಪ)

    ಇಂತಹ ಸಾಕಷ್ಟು ಸಾಲುಗಳನ್ನು ಹಿಡಿದಿಟ್ಟುಕೊಂಡು ಗಮನ ಸೆಳೆಯುವ ಹಲವು ಕವನಗಳು ಈ ಸಂಕಲನದಲ್ಲಿ ಕಾಣಸಿಗುತ್ತವೆ. ಅಬ್ಳಿಯವರು ಬೆಳೆಸಿದ ಮರ ಸಣಕಲೇನಲ್ಲ. ಅವರ ಕನಸುಗಳು ಸವಕಲೂ ಅಲ್ಲ. ಅವರು ನಮ್ಮನ್ನು ಎಪ್ರಿಲ್ ಫೂಲ್ ಮಾಡಲು ಹೊರಟಿದ್ದಾರೆ. ನಾವು ಹಾಗೆಲ್ಲ ಫೂಲ್ ಆಗುವವರಲ್ಲ. ಅವರ ಮಾತನ್ನು ನಂಬುವವರೂ ಅಲ್ಲ. ಏಕೆಂದರೆ ಅವರ ಕವನಗಳು ಅವರನ್ನು ಒಬ್ಬ ಕವಿ ಎಂದು ಸಾಬೀತು ಮಾಡುತ್ತವೆ. ಹಾಗೆ ಕವಿ ಎನಿಸಿಕೊಳ್ಳುವುದು ಸುಲಭವಲ್ಲ.

         ಅಬ್ಳಿಯವರು ಇನ್ನಷ್ಟು ಬರೆಯುತ್ತಿರಲಿ. ಪ್ರೀತಿಯಿಂದ ನಾವು ಓದುತ್ತಿರುತ್ತೇವೆ.

                        - ಎಲ್. ಎಸ್. ಶಾಸ್ತ್ರಿ


35 views0 comments

Comments


bottom of page