top of page

ವಿಷಕನ್ಯೆಯಾಗಿ

ಅದೋ ನಾಲ್ಕು ಬೀದಿಗಳು ಸೇರುವ

ಹಳೆಯ ಗೃಂಥಿಗೆ ಅಂಗಡಿಯಲ್ಲಿ

ಮಾರಲಾಗುತ್ತಿದೆ ನೈಸರ್ಗಿಕ ವಿಷವನ್ನು

ಮಣ್ಣಿನ ಕುಡಿಕೆಗಳಲ್ಲಿ ಭದ್ರವಾಗಿ ಮುಚ್ಚಿ

ಸೀಲು ಹಾಕಿ ಒಂದಿಷ್ಟೂ ಕೆಡದಂತೆ

ಕಾಪಿಡಲಾಗಿದೆ ಜೋಪಾನವಾಗಿ


ಹಳಸಿದ ವಿಷವನ್ನು

ಯಾರೂ ಕೊಳ್ಳುವುದಿಲ್ಲ ಎನ್ನುವ ಸತ್ಯ

ತಿಳಿದಿದೆ ಗೃಂಥಿಗೆ ಅಂಗಡಿಯ ಮುದುಕನಿಗೆ

ಮಣ್ಣಿನ ಮಡಕೆಯನ್ನು ಜೋಪಾನವಾಗಿ ಎತ್ತಿ

ಬೂಸಲು ಬಂದು ಹಾಳಾಗದಂತೆ

ಒರೆಸಿಡುತ್ತಾನೆ ಆಗಾಗ

ಚಂದವಾಗಿ, ಆಕರ್ಷಕವಾಗಿ ಕಾಣಬೇಕಲ್ಲ ವಿಷ

ಕೊಳ್ಳಲು ಬಂದ ಪಡಪೋಸಿಗಳಿಗೆ


ಅದೇಕೋ ಅದೇ ನಾಲ್ಕು ಬೀದಿ ಸೇರುವ

ದಾರಿಯಲ್ಲಿ ಉದಾಸೀನಳಾಗಿ

ನಡೆಯುತ್ತ ಹೊರಟವಳು

ಹಾಳೂಮೂರು ನಾರು ಬೇರನ್ನೆಲ್ಲ ಕೊಂಡು

ಗೃಂಥಿಗೆ ಅಂಗಡಿಯ ಕನ್ನಡಿ ಕಪಾಟಿನ

ಮುಂಬಾಗದಲ್ಲಿರುವ ಕೆತ್ತನೆಯ

ಮಣ್ಣಿನ ಮಡಕೆಗೆ ಮನಸೋತು ಖರೀದಿಸಿದ್ದೇನೆ

ಎರಡೆರಡು ದೊಡ್ಡ ಮೊತ್ತದ ನೋಟುಗಳನ್ನು ನೀಡಿ

ಒಂದಿಷ್ಟೂ ಕಲಬೆರಿಕೆ ಮಾಡದ

ಗೃಂಥಿಗೆ ಅಂಗಡಿಯವನ ವರ್ಣನೆಗೆ ಮರುಳಾಗಿ


ಇದೀಗ ಅಡುಗೆ ಮಾಡುವ ಒಲೆಯ ಎದುರಿನ

ಕಿಟಕಿಯ ಪಡಸಾಲೆಯಲ್ಲಿ

ಜೋಪಾನವಾಗಿಟ್ಟ ಮಣ್ಣಿನ ಮಡಿಕೆಯ

ಕುಸುರಿ ಕೆಲಸದ ಕೆತ್ತನೆ

ಮನೆಗೆ ಬಂದ ಅತಿಥಿಗಳನ್ನೆಲ್ಲ ಆಕರ್ಷಿಸುತ್ತಿದೆ

'ಎಷ್ಟು ಚಂದವಿದೆ.

ನನಗೊಂದು ತಂದಿಡು' ಎಂದೆಲ್ಲ

ಆತ್ಮೀಯರು ವರಾತೆ ಹಚ್ಚಿದ್ದಾರೆ

ಅದು ಕಲಬೆರಿಕೆಯಾಗದ ವಿಷ

ನನ್ನ ಮಾತು ಪೂರ್ಣವಾಗುವ ಮೊದಲೇ

ಮುಂಬಾಗಿಲ ದಾಟಿ ಅಂಗಳಕ್ಕಿಳಿಯುತ್ತಾರೆ

ಬಯಸಿ ಬಯಸಿ ಊಟಕ್ಕೆಂದು ಬಂದವರೂ


ಅಡುಗೆಯ ಆಟವಾಡಿ ಬೇಸರವಾದಾಗಲೆಲ್ಲ

ತೋರು ಬೆರಳದ್ದಿ

ಒಂದೇ ಒಂದು ಹನಿಯನ್ನು ತೆಗೆದು

ತುಟಿಗಿಟ್ಟು ಚಪ್ಪರಿಸುವುದು

ನೀಡುತ್ತಿದೆ ಹೇಳಲಾಗದ ಸುಖ


ಮೊನ್ನೆ ಹಾಸಿಗೆ ಬಿಟ್ಟೇಳುತ್ತಲೇ

ಹಸಿರುಗಟ್ಟಿದೆ ಮೈಯ್ಯೆಲ್ಲ

ಕಣ್ಣ ಕೆಳಗೆ ಆಕಾಶ ನೀಲಿಯ ಛಾಯೆ

ಕೆನ್ನೆಯೆಲ್ಲ ಕೃಷ್ಣನ ಶಿರದ ಮೇಲಿನ

ನವಿಲುಗರಿಯ ಹಸಿರು ಮಿಶ್ರಿತ ನೀಲಿಯ ಕಡು

ಕುತ್ತಿಗೆ ತಿರುವಿನಲ್ಲಿ ನೇರಳೆ ಹಣ್ಣಿನ ರಸಾಯನ

ಕನ್ನಡಿ ದಿಟ್ಟಿಸಿದರೆ ಮೈಯ್ಯೊಳಗೆ

ಕಾಮನಬಿಲ್ಲು ಅವತರಿಸಿದಂತೆ ರಂಗಿನೋಕುಳಿ


ನೇರವಾಗಿ ಅಡುಗೆಕೋಣೆಯ

ಕಿಟಕಿಯ ಪಡಸಾಲೆಯಲ್ಲಿನ

ನಾಜೂಕು ಮಡಿಕೆಯ ಮುಚ್ಚಳವನ್ನೆತ್ತಿ

ತೋರು ಬೆರಳದ್ದಿ ಚೀಪಿ ಆಸ್ವಾದಿಸಿದ್ದೇನೆ


ಸುಸ್ತು ಸಂಕಟಗಳೆಲ್ಲ ಮಟಾಮಾಯವಾಗಿ

ಹಕ್ಕಿಯಷ್ಟು ಹಗುರವಾದ ದೇಹದೊಳಗೆ

ತುಂಬಿದೆ ನನ್ನೊಳಗೊಂದು ಜೀವನೋತ್ಸಾಹ

ಮೈಯ್ಯೊಳಗೆ ನವಿರಾಗಿದೆ ಬಣ್ಣದ ನವಿಲುಗರಿ


ಈಗ, ಎಂದೂ ಕೆಡದ, ಕಲಬೆರಕೆ ಮಾಡದ

ಅತಿ ಶುದ್ಧವಾದ ವಿಷದ ಹೆಗ್ಗಳಿಕೆಗೆ

ಆರಾಧಿಸುತ್ತಿದ್ದೇನೆ ಮನಸೋತು


-ಶ್ರೀದೇವಿ ಕೆರೆಮನೆ


ಮೂಲತ: ಕವಿಯತ್ರಿಯಾದ ಶ್ರೀದೇವಿ ಕೆರೆಮನೆಯವರು ತಮ್ಮ ಕವಿತೆ, ಕತೆ, ವಿಮರ್ಶೆ, ಅಂಕಣ ಬರಹಗಳ ಮೂಲಕ ನಾಡಿನಾದ್ಯಂತ ಚಿರ ಪರಿಚಿತರು ಉತ್ತಮ ಶಿಕ್ಷಕಿ,ವಾಗ್ಮಿ ಹಾಗು ಸಂಶೋಧಕಿಯಾಗಿರುವ ಶ್ರೀದೇವಿಯವರ ಸಾಹಿತ್ಯಿಕ ಸಾಧನೆಯನ್ನು ಪರಿಗಣಿಸಿ ಹಲವು ಪ್ರಶಸ್ತಿಗಳು ಅವರಿಗೆ ಸಂದಾಯವಾಗಿವೆ. ಕಾರವಾರದ ಚಿತ್ತಾಕುಲ ಸರಕಾರಿ ಫ್ರೌಢಶಾಲೆಯಲ್ಲಿ ಇಂಗ್ಲೀಷ ಭಾಷಾ ಶಿಕ್ಷಕಿಯಾಗಿರುಬ ಅವರು ನಾಡಿನ ಹಲವು ಪತ್ರಿಕೆಗಳಲ್ಲಿ ನಿರಂತರವಾಗಿ ಅಂಕಣ ಬರೆಯುತ್ತ ಎಲ್ಲರ ಗಮನವನ್ನು ಸೆಳೆದಿದ್ದಾರೆ. ನಾನು ಗೆಲ್ಲುತ್ತೇನೆ, ಮೌನದ ಮಹಾ ಕೋಟೆಯೊಳಗೆ, ಗೆಜ್ಜೆ ಕಟ್ಟದ ಕಾಲಲ್ಲಿ ಇವು ಅವರ ಕವನ ಸಂಕಲನಗಳು. ಅಲೆಯೊಳಗಿನ ಮೌನ, ನನ್ನ ದನಿಗೆ ನಿನ್ನ ದನಿಯು ಗಜಲ್ ಸಂಕಲನ, ಬಿಕ್ಕೆ ಹಣ್ಣು ಕತಾ ಸಂಕಲನ, ಅಂಗೈಯೊಳಗಿನ ಬೆಳಕು ಪುಸ್ತಕ ವಿಮರ್ಶೆ. ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ಈಚೆ, ಉರಿವ ಉಡಿ, ಮನದಾಳದ ಮಾತು, ವರ್ತಮಾನದ ಉಯ್ಯಾಲೆ, ಇವು ಅವರ ಅಂಕಣ ಬರಹಗಳ ಸಂಕಲನಗಳು. ರಾಜೀವ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಯುವ ಗ್ರಂಥ ಪುರಸ್ಕಾರ, ಶ್ರೀಗಂಧ ಹಾರ ಪ್ರಶಸ್ತಿ, ಸಂಕ್ರಮಣ ಪ್ರಶಸ್ತಿ, ಕ್ರೈಸ್ತ ಕಾಲೇಜು ಪ್ರಶಸ್ತಿ, ಬಿ.ಎಂ.ಶ್ರೀ.ಕಾವ್ಯ ಪ್ರಶಸ್ತಿ, ಪ್ರಜಾವಾಣಿ ಕಾವ್ಯ ಪ್ರಥಮ ಬಹುಮಾನ ದೇವಾಂಗನಾ ಶಾಸ್ತ್ರಿ ಪ್ರಶಸ್ತಿ, ಹೇಮರಾಜ ದತ್ತಿ ಪ್ರಶಸ್ತಿ,ಜಿಲ್ಲಾ ಉತ್ತಮ ಶಿಕ್ಕಕ ಪ್ರಶಸ್ತಿ,ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಇವು ಶ್ರೀದೇವಿ ಅವರ ಸಾಹಿತ್ಯ ಸಾಧನೆಗೆ ಸಂದಾಯ ವಾದ ಪ್ರಶಸ್ತಿ ಪುರಸ್ಕಾರಗಳು. ಅ.ಭಾ.ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ , ಮೈಸೂರು ದಸರಾ ಕವಿಗೋಷ್ಠಿ ಹಲವು ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಹೀಗೆ ಪಾದರಸದಂತೆ ಚುರುಕಾಗಿರುವ ಶ್ರೀದೇವಿ ಕೆರೆಮನೆಯವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.


407 views4 comments

4 commenti


crystal cool
crystal cool
10 lug 2020

Tumba chennagide. Nivu nimma kshetradalli innu pragati sadhisalendu haraisuthheve.

Mi piace

ತುಂಬಾ ಚೆನ್ನಾಗಿದೆ.

ಆಸ್ವಾದಿಸಿದೆ.

Mi piace

ಚೆನ್ನಾಗಿದೆ ಕವನ... ಓದಿಸಿಕೊಂಡು ಹೋಗುತ್ತದೆ..

Mi piace

thambaddc
thambaddc
09 lug 2020

ಬಹಳ ಕುತೂಹಲದಿಂದ ಓದುವ ಕವನ ಹೊಸ ವಿಚಾರ ಹೇಳುವ ಜನಪದ ಶೈಲಿಯ ಕವನ ನಿಮ್ಮ ಈ ಕವನ . ಮತ್ತೆ ಮತ್ತೆ ಓದಬೇಕು ಎನಿಸುತ್ತದೆ ತುಂಬಾ ಉತ್ತಮವಾಗಿ ಮೂಡಿ ಬಂದಿದೆ. ಧನ್ಯವಾದಗಳು ಮ್ಯಾಡಮ ರವರಿಗೆ....

Mi piace
bottom of page