ನಿನ್ನ ಕನವರಿಕೆಯ ಕಂಬಳಿ ಮಡಚಿಟ್ಟು
ನನ್ನ ಪಾಡಿಗೆ ಬಯಲ ಸೇರಬೇಕು
ಕಾಡ ಹಾದಿಯಲ್ಲಿ ನನ್ನ ಯಾವ
ಹೂವು ನಗಿಸಬಾರದು
ಯಾವ ದನಿ ಕೇಳದಷ್ಟು ಆಳವಾದ
ನೆಲೆಯಲ್ಲಿ ಮಗ್ನನಾಗಬೇಕು
ಕಾಲ ಸವೆದರೂ ತಿರುಗಿಬಾರದ
ಒಂಟಿ ಊರು ಸಿಗಬೇಕು
ಇದಕ್ಕೆ ಕಾರಣ ಕೇಳಬೇಡ
ನೀನೆ ಖುಷಿಗೆ ನೋವಿನ ಕೋಟೆ ಕಟ್ಟಿದವನು
ಹೃದಯಕ್ಕೆ ಭಾರ ಹೊರಿಸಿದವನು
ಇಷ್ಟೆಲ್ಲಾ ಮುಗಿದ ವರುಷಗಳ ನಂತರ
ಈ ಸನ್ನೆಯ ಧಾವಂತ
ಕಳ್ಳ ನೋಟದ ಮಿಂಚು
ಇವೆಲ್ಲ ಬೇಡದ ಹುಚ್ಚು ನಿನದಲ್ಲವೇ?
ನನ್ನ ತಡೆಯಲು ಸೆಳೆಯಲು
ಸಮರ್ಥನೆಯ ಜಾದು ಹೂಡಿ
ಆ ಯಂತ್ರದ ಮೇಲೆ ನಡೆಸುವ
ಅಮಲು ಪ್ರೇಮ ಬೇಡವೇ ಬೇಡ
ಈಗೀಗ ವೇಷ ಕಳಚಿದ ಮುಖಗಳೆ
ನನಗೆ ಸಿಗುತ್ತಿಲ್ಲ !
ನಾನು ನನ್ನ ನೋಡುವ ದರ್ಪಣ ಹಿಡಿದು
ಸಾಗುತ್ತಿರುವೆನು...ಸಾಗುತ್ತಿರುವೆನು
ಸೀರೆಗೆ ಬಣ್ಣವಿಲ್ಲ,ಮುಡಿಗೆಹೂವಿಲ್ಲ
ಇದರ ಗುದ್ದಾಟದ ನಡುವೆ
ಸಿಡಿಯುವ ಸಾಸಿವೆಯಂತೆ
ನನಗೂ ನಿನಗೂ ಬಾರದ ನೆಂಟರ ತರ್ಕ
ಸಂಜೆಗೆ ಅದೇ ಕಾಯುವ ಕಂಗಳ ಕದನ
ರಾತ್ರಿಯ ಗಂಭೀರ ಮಾತು ತಣ್ಣನೆಯ ನಿದ್ದೆ
ಇವೆಲ್ಲಕ್ಕೂ ಬೀಗ ಹಾಕಿ ನಡೆದಿರುವೆ
ಮತ್ತೆ ಅದೇ ವಸಂತದ ಕಳೆ ಚೆಲ್ಲುವನಂತೆ
ಬೆನ್ನ ಹಿಡಿಯಬೇಡ ...ಕಾದು ಕರಗಬೇಡ
-ಎಂ.ಜಿ.ತಿಲೋತ್ತಮೆ, ಭಟ್ಕಳ
Comments