ವಿದಾಯ [ಕವಿತೆ ]

ಗಾಢ ಕತ್ತಲಿನಲ್ಲಿ

ನೀರವ ಮೌನದಲ್ಲಿ

ನಿದ್ದೆಯಿಲ್ಲದ ಕಣ್ಣುಗಳಲ್ಲಿ

ಪ್ರೇತ ನರ್ತನ.

ಪ್ರಶಾಂತ ಕೊಳದಲ್ಲೀಗ

ಅಲೆಗಳದೇ ಸಾಮ್ರಾಜ್ಯ.

ಎದೆಯ ಗೂಡಲ್ಲಡಗಿದ

ಹಕ್ಕಿಗಳಿಗೆ ಹೊರಹಾರುವ

ಹುರುಪು, ತವಕ

ಗಬ್ಬು ನಾರುವ ಕಸ, ಕಡ್ಡಿ

ಕೊಳೆಗಳಿಗೀಗ ಮುಕ್ತಿ

ಹರಿದು ಚಿಂದಿಯಾದ ಸೀರೆಗಳಿಗೆ

ತೇಪೆ ಹಚ್ಚುವ, ಗಾಯಗಳಿಗೆ

ಮುಲಾಮು ಸವರುವ ಕೆಲಸ

ಬಾಗಿಲಿನಲ್ಲಿ ತುದಿಗಾಲಿನಲ್ಲಿ

ನಿಂತಿರುವೆನು

ಸಂಭ್ರಮ ಸಡಗರದಲ್ಲಿ

ಕ್ಷಣಕಾಲ ಸಹಿಸಲಾರೆನು ನಿನ್ನ

ಆಚೆ ತೊಲಗಿ ಬಿಡು ಬೇಗ

ಸರಿದು ಬಿಡು ನೇಪಥ್ಯಕೆ

ಕಾಯುತ್ತಿರುವೆನು 2020 ರ

ವಿದಾಯದ ಗಳಿಗೆಗಾಗಿ

==0==

- ಸುಭದ್ರಾ ಹೆಗಡೆ

50 views0 comments