top of page

ಮೂರು ದೇಶ - ನೂರು ಕೋಶ -೧ (ಪ್ರವಾಸಿಯ ದಿನಚರಿಯಿಂದ)

ಪುಸ್ತಕಗಳ ಓದಿನಿಂದ ಜ್ಞಾನ ಕೋಶ ತೆರೆದುಕೊಳ್ಳುತ್ತದೆ. ಪ್ರವಾಸಗಳಿಂದ ಅನುಭವಕೋಶ ತೆರೆದುಕೊಳ್ಳುತ್ತದೆ. ಆದ್ದರಿಂದಲೇ ತಮ್ಮ ಜ್ಞಾನಾನುಭವಗಳನ್ನು ಹೆಚ್ಚಿಸಿಕೊಳ್ಳಬೇಕೆನ್ನುವವರು ಕೋಶ ಓದುತ್ತಾರೆ, ದೇಶ ತಿರುಗುತ್ತಾರೆ. ಬೇರೆ ದೇಶವೇ ಆಗಬೇಕೆಂದಿಲ್ಲ. ನಮ್ಮದೇ ದೇಶವನ್ನಾದರೂ‌ ನಾವು ಆದಷ್ಟು ಹೆಚ್ಚು, ಸಾಧ್ಯವಾದರೆ ಪೂರ್ತಿ ನೋಡಲು ಪ್ರಯತ್ನಿಸಬೇಕು. ಒಂದೊಂದು ಹೊಸ ದೇಶ ನೋಡುತ್ತ ಹೋದಾಗಲೂ ನಮ್ಮೆದುರು ಹೊಸ ಜಗತ್ತು ತೆರೆದುಕೊಳ್ಳುತ್ತಹೋಗುತ್ತದೆ. ಪ್ರತಿಯೊಂದು ದೇಶದ ಜನಜೀವನ, ಸಂಸ್ಕೃತಿ, ಭಾಷೆ ಎಲ್ಲವೂ ಭಿನ್ನ ಭಿನ್ನವಾಗಿರುತ್ತವೆ. ಯಾವುದೇ ಒಂದು ದೇಶದಲ್ಲೂ ಅದೊಂದೇ ದೇಶವಿರುವದಿಲ್ಲ. ಅಲ್ಲಿ ಹಲವು ದೇಶಭಾಷೆ ಸಂಸ್ಕೃತಿ ಉಪಸಂಸ್ಕೃತಿಗಳ ಸಮ್ಮಿಲನವಾಗಿರುತ್ತದೆ. ನಮಗೆ ನೋಡುವ ಕಣ್ಣು, ತಿಳಿದುಕೊಳ್ಳಬೇಕೆಂಬ ಮನಸ್ಸು, ಹೊಸದನ್ನು ಪರಿಚಯಿಸಿಕೊಳ್ಳಬೇಕೆಂಬ ಆಸಕ್ತಿ ಇದ್ದಾಗ ಮಾತ್ರ ಪ್ರವಾಸ ಯಶಸ್ವಿಯಾಗುತ್ತದೆ. ಅವಿಲ್ಲದೇ ಇದ್ದರೆ ಪ್ರವಾಸ ಮಾಡಿ ಪ್ರಯೋಜನವೂ ಇಲ್ಲ.

ನಾನು ಪ್ರವಾಸಪ್ರಿಯರಲ್ಲೊಬ್ಬ. ಸಾಮಾನ್ಯವಾಗಿ ಪ್ರವಾಸ ಮಾಡುವವರಲ್ಲಿ ಎರಡು ಬಗೆ. ಮೋಜಿಗಾಗಿ, ಕೌಟುಂಬಿಕ ಸಂತೋಷಕ್ಕಾಗಿ ಪ್ರವಾಸ ಮಾಡುವವರೇ ಹೆಚ್ಚು. ಅದು ಸಹಜವೂ ಹೌದು. ದೇಶ ನೋಡುವದು ಬೇರೆ. ದೇಶ ಅರಿತುಕೊಳ್ಲುವದು ಬೇರೆ. ಬರೆಹಗಾರರಾದವರು ಯಾವುದೇ ದೇಶಕ್ಕೆ ಹೋಗಿಬಂದ ನಂತರ ಪುಸ್ತಕವನ್ನು ಬರೆಯುವುದುಂಟು. ಅದರಲ್ಲಿಯೂ‌ ಪ್ರವಾಸೀ ಸ್ಥಳಗಳ ಪರಿಚಯ, ಊಟತಿಂಡಿ ಅದು ಇದು ತುಂಬಿರುವವರೇ ಹೆಚ್ಚು. ದೇಶದ ಅಂತರಂಗವನ್ನು ಕೆದಕಿ ಒಳಹೊಕ್ಕಿ ನೋಡುವ ಕೆಲಸ ಮಾಡುವವರು ಕಡಿಮೆ.

ನಾನು ಮೊದಲ ಸಲ ಥೈಲ್ಯಾಂಡ್ ಗೆ ಹೋದದ್ದು‌ ೨೦೧೨ ರಲ್ಲಿ. ಆಗ ಆ ದೇಶದಲ್ಲಿ ಸುಮಾರು ೪೦ ದಿವಸ ಇದ್ದೆ ಮತ್ತು ಉತ್ತರ ಭಾಗವನ್ನು ಬಿಟ್ಟು ಆ ದೇಶದ ಉಳಿದ ಭಾಗಗಳಲ್ಲಿ ಸಂಚರಿಸಿದ್ದೆ. ಅದು ಪುಸ್ತಕರೂಪವಾಗಿ ಬಂದಿದೆ. " ಓ ಸಿಯಾಂ , ನಿನಗೆ ಸಲಾಂ" ಎಂಬ ಆ ಪುಸ್ತಕ ತುಂಬ ಜನಪ್ರಿಯವೂ ಆಗಿದೆ. ವಿದ್ವನ್ಮನ್ನಣೆಯನ್ನೂ ಪಡೆದಿದೆ. ಇಂಗ್ಲಿಷಿಗೆ ಅನುವಾದಿತವಾಗಿದೆ. ಅದರ ಮೇಲೆ ವಿವಿ ಕಿರು ಪ್ರಬಂಧ ರಚನೆಯಾಗಿದೆ. ಹದಿನೈದಕ್ಕೂ ಹೆಚ್ಚು ಜನ ಅದರ ಕುರಿತಾಗಿಯೇ ಲೇಖನಗಳನ್ನು ಬರೆದಿದ್ದಾರೆ. ಅದೀಗ ಎರಡನೇ ಮುದ್ರಣಕ್ಕೆ ಸಿದ್ಧವಾಗಿದೆ.

ಎರಡನೇ ಪ್ರವಾಸ ಕ್ಕೆ ಹೋಗಿದ್ದು ಎರಡು ವರ್ಷಗಳ ಹಿಂದೆ. ೨೦೧೯ ಮೇ. ಈ ಸಲ ಥೈಲ್ಯಾಂಡ್ ಉತ್ತರ ಭಾಗ, ಮಲೇಷಿಯಾ, ಹಾಗೂ‌ ಇಂಡೋನೇಷ್ಯಾದ- ಬಾಲಿ ಮೂರು ಕಡೆ . ಒಂದು ತಿಂಗಳ ಪ್ರವಾಸ ಇದು. ಈತನಕ ಅದರ ಕುರಿತು ಬರೆಯಲು ಸಾಧ್ಯವಾಗಲಿಲ್ಲ. ಬರೆಯಬೇಕಾದ ಬೇರೆ ಪುಸ್ತಕಗಳಿವೆ. ಆದ್ದರಿಂದ ಈ ಪ್ರವಾಸ ಕಥನವನ್ನು ಮೊಬೈಲ್ ನಲ್ಲೇ ಆಗಾಗ ಡಿಟಿಪಿ ಮಾಡುವ ವಿಚಾರವಿದೆ. ನನಗೆ ಅದು ಸುಲಭವೂ ಹೌದು. ಇನ್ನೊಂದು ವಾರ ಬಿಟ್ಟು ಇದು ಮುಂದುವರಿಯಲಿದೆ.

‌‌‌

- ಎಲ್. ಎಸ್. ಶಾಸ್ತ್ರಿ




6 views0 comments

Comments


bottom of page