top of page

ಮರೆಯಲಾದ ಮಹಾನುಭಾವರು-೧೫೩

ಕನ್ನಡ ಸಾಹಿತ್ಯ ಲೋಕದ ಮಂದಾರಪುಷ್ಪ

ರಂ. ಶ್ರೀ. ಮುಗಳಿ (ರಸಿಕರಂಗ)

************

" ಬಂದಾರ ತಂದಾರ ಮಂದಾರ ಹೂವ,

ಇಂದ್ರನ ನಂದನದ ಹೂವಾಡಗಿತ್ತೀರು....

ಕನ್ನಡಿಗರೆಲ್ಲರ ಮನದಲ್ಲಿ ಅಚ್ಚಳಿಯದಂತೆ ಉಳಿದ ಇಂತಹ ಕವನಗಳನ್ನು " ರಸಿಕ ರಂಗ" ಎಂಬ ಕಾವ್ಯನಾಮದಿಂದ ಬರೆದ ಕನ್ನಡಿಗರ ಮೆಚ್ಚಿನ ಕವಿ ರಂಗನಾಥ ಶ್ರೀನಿವಾಸ ಮುಗಳಿ ಅವರು ಹುಟ್ಟಿದ್ದು ೧೯೦೬ ಜುಲೈ ೧೫ ರಂದು ಧಾರವಾಡ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರಿನಲ್ಲಿ. ತಂದೆ ಆ ಕಾಲದ ಪ್ರಸಿದ್ಧ ವಕೀಲರು. ಮರಾಠಿಮಯ ವಾತಾವರಣವಿದ್ದ ಆ ಕಾಲದಲ್ಲಿ ಅವರು ಕನ್ನಡ ನಾಟಕಗಳನ್ನಾಡಿಸಿ ಕನ್ನಡಾಭಿಮಾನ ಜಾಗೃತಗೊಳಿಸುತ್ತಿದ್ದವರು.

ಪುಣೆ ವಿಶ್ವವಿದ್ಯಾಲಯದ ಚೊಚ್ಚಿಲು ಡಿ. ಲಿಟ್. ಪದವಿ ತಮ್ಮದಾಗಿಸಿಕೊಂಡ ಮೊದಲ ಕನ್ನಡಿಗ ಮುಗಳಿಯವರು ೧೯೩೩ ರಲ್ಲಿ ಮಹಾರಾಷ್ಟ್ರದ ಸಾಂಗ್ಲಿ ವಿಲ್ಲಿಂಗಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇರಿ , ೧೯೬೧ ರಲ್ಲಿ ಅಲ್ಲಿಯೆ ಪ್ರಾಚಾರ್ಯರಾಗಿ, ೧೯೬೬ ರಲ್ಲಿ ನಿವೃತ್ತರಾದರು. ಡಾ. ವಿ. ಕೃ. ಗೋಕಾಕರ ಸಂಗಡವೂ ಕೆಲಸ ಮಾಡಿದವರು ಮುಗಳಿಯವರು ಹಾಗೂ ಸು. ರಂ. ಯಕ್ಕುಂಡಿ, ಚಿತ್ತಾಲರಂಥವರ ಗುರುಗಳಾಗಿದ್ದವರು. ಸಂಸ್ಕೃತದಲ್ಲಿ ಎಂ. ಎ. ಪದವಿ, ನಂತರ ಬಿಟಿ.

ರಂ. ಶ್ರೀ. ಅವರು ಬೇಂದ್ರೆ ಪ್ರಭಾವಕ್ಕೊಳಗಾದವರು. ಮಧುರಚೆನ್ನ, ಬೇಂದ್ರೆಯವರೆಲ್ಲ ಇದ್ದ ಗೆಳೆಯರ ಬಳಗ ಸೇರಿ ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡು ಕನ್ನಡ ಸಾಹಿತ್ಯದ ಆಳವಾದ ಅಧ್ಯಯನ ಮಾಡಿ ಭಾಷೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅಮೂಲ್ಯ ಸಾಹಿತ್ಯ ರಚನೆ ಮಾಡಿದರು. ತಮ್ಮ ಕನ್ನಡ ಸಾಹಿತ್ಯ ಚರಿತ್ರೆಗೆ ಪುಣೆ ವಿವಿ ಪಿಎಚ್ಡಿ ಪಡೆದರು. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದ್ದು ಸಾಹಿತ್ಯಾಭ್ಯಾಸಿಗಳಿಗೆ ಅದೊಂದು ಅಪೂರ್ವ ಆಕರ ಗ್ರಂಥವೆನಿಸಿದೆ.

ಕಾವ್ಯ, ನಾಟಕ, ಕಾದಂಬರಿ, ವಿಚಾರ ವಿಮರ್ಶೆ, ಜೀವನ ಚರಿತ್ರೆ, ಅನುವಾದ ಮೊದಲಾದ ವಿವಿಧ ಸಾಹಿತ್ಯಪ್ರಕಾರಗಳಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಮುಗಳಿಯವರು ಜಯಕರ್ನಾಟಕ/ ಜೀವನ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಪತ್ರಕರ್ತರೂ ಆಗಿದ್ದರು. ಒಂದು ಹಂತದಲ್ಲಿ ಗಾಂಧಿ ಚಳುವಳಿಯಲ್ಲೂ ಪಾಲ್ಗೊಂಡಿದ್ದರು. ಮನೋಹರ ಗ್ರಂಥಮಾಲೆಯ ಸಲಹೆಗಾರರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.‌

ಬಾಸಿಗ, ಅಪಾರ ಕರುಣೆ, ಬೇಂದ್ರೆ ಕಾವ್ಯ, ಪುನರ್ನವೋದಯ, ಪ್ರಾಚೀನ ಕನ್ನಡ ಸಾಹಿತ್ಯದ ರೂಪಗಳು, ಅರವಿಂದಮಕರಂದ, ಶಾಂತಕವಿ, ಸಾಹಿತ್ಯೋಪಾಸನೆ, ಛಂದೋರೂಪ ದರ್ಶನ, ಮಂದಾರ ಹೂ, ಕನಸಿನ ಕೆಳದಿ, ಅನ್ನ, ಕಾರಣಪುರುಷ, ನಾಮಧಾರಿ, ಬಾಳುರಿ, ರನ್ನನ ಕೃತಿರತ್ನ, ತವನಿಧಿ, ಸಾಹಿತ್ಯ ವಿಮರ್ಶೆಯ ಮಾರ್ಗಸೂತ್ರಗಳು, ಅಕ್ಕಮಹಾದೇವಿ, ಕನ್ನಡದ ಕರೆ, ಮಾತೆಂಬುದು ಜ್ಯೋತಿರ್ಲಿಂಗ, ಮೊದಲಾದವು ಮುಗಳಿಯವರ ಕೃತಿಕೊಡುಗೆಗಳು.

ಸಿದ್ದಗಂಗಾ ದಲ್ಲಿ ನಡೆದ ೪೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ( ೧೯೬೩), ಜಾಗತಿಕ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಪ್ರತಿನಿಧಿ (೧೯೬೪) , ಮೈಸೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಹೈದರಾಬಾದನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ನಾಟಕ ಗೋಷ್ಠಿ ಅಧ್ಯಕ್ಷತೆ ಮೊದಲಾದ ಗೌರವಗಳು ಅವರಿಗೆ ದೊರಕಿವೆ.

ಮಗುಮನದ ಮುಗ್ಧ ಜೀವಿಯಾಗಿ ಅಪಾರ ಶಿಷ್ಯ ಸಮೂಹದ ಪ್ರೀತಿಯ ಗುರುವಾಗಿ, ಕನ್ನಡ ಸಾಹಿತ್ಯಾಭ್ಯಾಸಿಗಳ ನೆಚ್ಚಿನ ಬರೆಹಗಾರರಾಗಿ ಕನ್ನಡಕ್ಕೆ ಅಪಾರ ಮತ್ತು ಅಮೂಲ್ಯ ಕೊಡುಗೆ ನೀಡಿದ ರಸಿಕರಂಗ ಮುಗಳಿಯವರು ೧೯೮೩ ಫೆಬ್ರುವರಿ ೨೦ ರಂದು ಕಣ್ಮರೆಯಾದರು.

- ಎಲ್. ಎಸ್. ಶಾಸ್ತ್ರಿ
19 views0 comments

Commenti


bottom of page