top of page

ಮರೆಯಲಾಗದ ಮಹಾನುಭಾವರು

ಭಿಕ್ಷೆ ಬೇಡುತ್ತಿದ್ದ ಹುಡುಗ ಕುಲಪತಿಯಾದ ಕತೆ

ಡಾ. ಆರ್. ಸಿ. ಹಿರೇಮಠ


ಹುಡುಗ ಭಿಕ್ಷೆ ಬೇಡಿ ತನ್ನ ಅಂಧ ತಾಯಿ ತಮ್ಮ ತಂಗಿಯರನ್ನು ಸಾಕಬೇಕಾದ ಪರಿಸ್ಥಿತಿ. ಅಂತಹದರಲ್ಲೂ ತನ್ನ ಆತ್ಮಸ್ಥೈರ್ಯ ಕಳೆದುಕೊಳ್ಳದ ಹುಡುಗ ಛಲದಿಂದ ಬೆಳೆದು ಒಂದು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯತನಕ ಹೋಗುತ್ತಾನೆಂದರೆ ಅದೊಂದು ಅದ್ಭುತ ಸಂಗತಿಯೇ ಸರಿ! ಆ ಹುಡುಗನೇ ಕರ್ನಾಟಕ ವಿ. ವಿ. ದ ಕುಲಪತಿಯಾದ ಡಾ. ಆರ್. ಸಿ. ಹಿರೇಮಠರು.

ರುದ್ರಯ್ಯಾ ಚಂದ್ರಯ್ಯಾ ಹಿರೇಮಠ ಧಾರವಾಡ ಜಿಲ್ಲೆಯ ಕುರಡಗಿಯಲ್ಲಿ ೧೯೨೦ ಜನೆವರಿ ೧೫ ರಂದು ಬಡ ಕುಟುಂಬದಲ್ಲಿ ಜನಿಸಿ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಳ್ಳುತ್ತಾರೆ. ತಾಯಿ ವೀರಮ್ಮನಿಗೆ ನಾಲ್ವರು ಮಕ್ಕಳು. ಅಂಧತ್ವ ಬೇರೆ. ಎಲ್ಲ ಮಕ್ಕಳ ಸಹಿತ ಜೀವ ಕಳೆದುಕೊಳ್ಳಲು ಹೊರಟ ತಾಯಿಗೆ ಯಾರೋ ಮಗನನ್ನು ಭಿಕ್ಷೆಗೆ ಕಳುಹಿಸು. ಸಾಯುವದೇಕೆ ಎಂಬ ಸಲಹೆ ನೀಡಿದರು. ಸರಿ , ತಾಯಿ ರುದ್ರಯ್ಯನನ್ನು ಭಿಕ್ಷೆಯ ಕಾಯಕಕ್ಕೆ ತೊಡಗಿಸುತ್ತಾಳೆ. ಕೆಲಕಾಲ ಭಿಕ್ಷೆ ಬೇಡುತ್ತ ತಾಯಿತಂಗಿತಮ್ಮಂದಿರನ್ನು ನೋಡಿಕೊಂಡು ನಂತರ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿ ಯಾರದೋ ಸಹಾಯದಿಂದ ಶಾಲೆಗೂ ಸೇರಿ ಕಲಿತು ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮರೆನಿಸಿ ಪಾಸಾದ ರುದ್ರಯ್ಯ ೧೯೩೯ ರಲ್ಲಿ ಮ್ಯಾಟ್ರಿಕ್ ಪಾಸಾಗಿ ಮುಂದೆ ಶ್ರೀರಂಗರಿಂದ ಕಾಲೇಜಿನ ಕಲಾ ವಿಭಾಗಕ್ಕೆ ಸೇರಿ, ಡಾ. ಶಿ. ಚೆ. ನಂದೀಮಠ ಅವರಿಂದ ಬೆಳಗಾವಿ ಲಿಂಗರಾಜ ಕಾಲೇಜಿಗೆ ಬಂದು ಇಲ್ಲಿ ಬಿ. ಎ. ಎಂಎ. ಮಾಡಿ ಬಾಗಲಕೋಟ ಬಸವೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ಪ್ರಾಧ್ಯಾಪಕರಾಗಿ ೧೯೫೧ ರಲ್ಕಿ ಕವಿವಿ ರೀಡರ್ ಆಗಿ ೫೭ ರಲ್ಲಿ ಪ್ರೊಫೆಸರ್ ಆಗಿ, ೧೯೫೫ ರಲ್ಕಿ ಪಿಎಚ್ಡಿ ಮುಗಿಸಿ , ೧೯೭೫ ರಲ್ಲಿ ಕವಿವಿ ಕುಲಪತಿ ಸ್ಥಾನಕ್ಕೇರುತ್ತಾರೆ. ಇದು ಅವರ ಸಾಹಸ ಯಾತ್ರೆ.

ಓದಿನೊಡನೆ ಸಾಹಿತ್ಯಾಸಕ್ತಿಯೂ ಇದ್ದ ಡಾ. ಹಿರೇಮಠರು ಮೊದಲು ಕವನಗಳನ್ನು ಬರೆದರು. ಅವರ ಎರಡು ಕವನ ಸಂಕಲನಗಳು " ಸುಮಾಂಜಲಿ, ಮೌನಸ್ಪಂದನ " ಪ್ರಕಟಗೊಂಡವು. ನಂತರ ಅವರು ಗ್ರಂಥ ಸಂಪಾದನೆ, ಸಂಶೋಧನೆ, ವಚನ ಸಂಗ್ರಹ, ಹಸ್ತಪ್ರತಿ ರಕ್ಷಣೆಗಳಂತಹ ವಿಶೇಷ ಕಾರ್ಯಕ್ಕೆ ತೊಡಗಿಸಿಕೊಂಡರು. ಹಳೆಗನ್ನಡ ಕಾವ್ಯಗಳ ಆಳವಾದ ಅಧ್ಯಯನ ಮತ್ತು ಅವುಗಳ ಪರಿಷ್ಕರಣೆ ಪ್ರಕಟನೆಗಳೊಡನೆ ಹತ್ತು ಸಾವಿರಕ್ಜೂ ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಿದ ಮ್ಯೂಸಿಯಂ ಸ್ಥಾಪಿಸಿದರು. ೪೦ ಕ್ಕೂ ಹೆಚ್ಚು ಪಿಎಚ್ಡಿ ಗಳಿಗೆ ಮಾರ್ಗದರ್ಶನ ಮಾಡಿದರು.

ಕುಲಪತಿಯಾಗಿ ಅವರು ಕರ್ನಾಟಕ ವಿಶ್ವವಿದ್ಯಾಲಯ ದಲ್ಲಿ ಸಾಕಷ್ಟು ಪ್ರಗತಿಪರ ಹೆಜ್ಜೆಗಳನ್ನಿರಿಸಿ ಅದರ ಶ್ರೇಯೋಭಿವೃದ್ಧಿಗೆ ಅಪೂರ್ವ ಕೊಡುಗೆಯಿತ್ತರು. ೧೯೯೮ ರನವೆಂಬರ ೫ ರಂದು ಅವರು ನಿಧನರಾದರು. ಆದರೆ ಅವರ ಅದಮ್ಯ ಜೀವನೋತ್ಸಾಹ ಮತ್ತು ಅವರು ಸಾಧಿಸಿದ ಸಾಧನೆ ಅಚ್ಚಳಿಯದಂತಹದು ಮತ್ತು ಮಾದರಿಯಾದುದು.

- ಎಲ್. ಎಸ್. ಶಾಸ್ತ್ರಿ




10 views0 comments

©Alochane.com 

bottom of page