top of page

ದೇವುಡು ನರಸಿಂಹ ಶಾಸ್ತ್ರಿಗಳು

Updated: Nov 2, 2023









ಪ್ರಚಂಡ ಪ್ರತಿಭೆಯ ಮಹಾ ಮಾನವ!

ದೇವುಡು ನರಸಿಂಹ ಶಾಸ್ತ್ರಿಗಳು

***************************

ಸಾಹಿತ್ಯ, ಪತ್ರಿಕೆ, ರಂಗಭೂಮಿ, ಸಿನಿಮಾ, ರಾಜಕೀಯ, ಸ್ವಾತಂತ್ರ್ಯ ಹೋರಾಟ, ಕನ್ನಡ ಹೋರಾಟ, ಶಿಕ್ಷಣ, ಬ್ಯಾಂಕಿಂಗ್ - ಒಂದೇ ಎರಡೇ...ಒಬ್ಬ ಮನುಷ್ಯ ಜೀವನದಲ್ಲಿ ಅದೆಷ್ಟೊಂದು ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು, ಅದೆಷ್ಟೊಂದು ಸಾಧನೆ ಮಾಡಬಹುದು ಎನ್ನುವದನ್ನು ತಮ್ಮ ಬದುಕಿನಿಂದಲೇ ತೋರಿಸಿಕೊಟ್ಟವರು ದೇವುಡು ನರಸಿಂಹ ಶಾಸ್ತ್ರಿಗಳು. ಕೇವಲ ಕನ್ನಡಕ್ಕೆ ಅಪೂರ್ವ ಪೌರಾಣಿಕ ಕಾದಂಬರಿಗಳನ್ನು ಕೊಟ್ಟವರು ಎಂದು‌ ಮಾತ್ರ ನಾವು ಅವರನ್ನು ಅದಕ್ಕೆ ಸೀಮಿತಗೊಳಿಸುವಂತಿಲ್ಲ. ಅದರ ಹೊರತಾಗಿ ಬಹಳಷ್ಟು ಸಂಗತಿಗಳು ಅವರ ಜೀವನದಲ್ಲಿ ತುಂಬಿಕೊಂಡಿವೆ. ಅಕ್ಷರಶಃ ಅವರದು ದೈತ್ಯಪ್ರತಿಭೆಯೇ.

ನರಸಿಂಹ ಶಾಸ್ತ್ರಿಗಳು ಮೈಸೂರಲ್ಲಿ ೧೮೯೬ ರ ಡಿಸೆಂಬರ್ ೨೬ ರಂದು ಜನಿಸಿದರು. ತಂದೆ ಕೃಷ್ಣ ಶಾಸ್ತ್ರಿ, ತಾಯಿ ಸುಬ್ಬಮ್ಮ. ತಂದೆ ಮೈಸೂರು ಅರಸರ ಆಸ್ಥಾನ ಸೇವೆಯಲ್ಲಿದ್ದುದರಿಂದ ಇವರಿಗೆ ಕಲಿಯಲು ತೊಂದರೆಯಾಗಲಿಲ್ಲ‌ ಇವರ ಪೂರ್ವಜರಿಗೆ ದೈವ ಸಾಕ್ಷಾತ್ಕಾರವಾಗಿದ್ದರಿಂದ ಈ ಮನೆತನಕ್ಕೆ ದೇವುಡು ಎಂಬ ಶಬ್ದ ಕೂಡಿಕೊಂಡಿತಂತೆ. ದೇವುಡು ಅವರು ಕನ್ನಡ ಸಂಸ್ಕತಗಳ ಘನ ವಿದ್ವಾಂಸರು. ಅದಕ್ಕೆ ತಕ್ಕಂತೆ ಅವರು ಕನ್ನಡಕ್ಕೆ ಬಹಳ ಅಮೂಲ್ಯವಾದ ಪೌರಾಣಿಕ ಕಾದಂಬರಿಗಳನ್ನು ಕೊಟ್ಟರು. ಕನ್ನಡದಲ್ಲಷ್ಟೇ ಏಕೆ, ಭಾರತೀಯ ಭಾಷೆಗಳಲ್ಲೇ ಇಂತಹ ಕಾದಂಬರಿಗಳು ಬೇರೆ ಇಲ್ಲ. ಒಂದು ವೇಳೆ ಅವು ಇಂಗ್ಲೀಷಿಗೆ ಅನುವಾದವಾಗಿದ್ದಲ್ಲಿ ಅವು ನೋಬೆಲ್ ಗೌರವಕ್ಕೂ ಅರ್ಹವಾಗಬಹುದಿತ್ತೇನೊ. ಪೌರಾಣಿಕ ಕಾದಂಬರಿಗಳನ್ನು ಹಲವರು ಬರೆದಿದ್ದಾರೆ. ಆದರೆ ಸತ್ವದ ದೃಷ್ಟಿಯಿಂದ, ಶೈಲಿಯ ದೃಷ್ಟಿಯಿಂದ ದೇವುಡು ಕೃತಿಗಳಿಗೆ ಸಮನೆನಿಸುವ ಬೇರೆ ಕೃತಿಗಳು ಇರಲಾರವು. ಮಹಾಬ್ರಾಹ್ಮಣ, ಮಹಾ ಕ್ಷತ್ರಿಯ ಮತ್ತು ಮಹಾ ದರ್ಶನ ಇವು ಮೂರು ಸಾಹಿತ್ಯವಿರುವತನಕವೂ ಹೊಳೆಯುತ್ತಲೇ ಇರುವ ಬೆಲೆ ಕಟ್ಟಲಾಗದ ಮೂರು ರತ್ನಗಳು.

ದೇವುಡು ಅವರದು ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡ ಮಹಾಪ್ರತಿಭೆ. ಅರವತ್ತಾರು ವರುಷಗಳ ಜೀವನದಲ್ಲಿ ಅವರು ಹಲವು ಕ್ಷೇತ್ರಗಳಲ್ಲಿ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ತೊಡಗಿಸಿದರು. " ನವಜೀವನ" ವಾರಪತ್ರಿಕೆಯ ಮೂಲಕ ಪತ್ರಿಕಾ ಕ್ಷೇತ್ರದಲ್ಲಿ ಕಾಲಿಟ್ಟರು. ಕರ್ನಾಟಕ ಫಿಲ್ಮ ಕಾರ್ಪೊರೇಶನ್, ಮೈಸೂರು ಹಿಂದಿ ಪ್ರಚಾರ ಸಂಸ್ಥೆ, ಕನ್ನಡ ಸಾಹಿತ್ಯ ಸಮಾಜ, ಬೆಂಗಳೂರಿನ ಗಾಂಧೀನಗರ ಪ್ರೌಢಶಾಲೆ, ಗೀರ್ವಾಣ ವಿದ್ಯಾಪೀಠ ಮೊದಲಾದವುಗಳ ಸ್ಥಾಪನೆಗೆ ಕಾರಣರಾದರು. ಸ್ವಾತಂತ್ರ್ಯ ಹೋರಾಟ, ಏಕೀಕರಣ ಚಳವಳಿಗಳಲ್ಲಿ ಪಾಲ್ಗೊಂಡರು. ಆರಂಭದ ಕನ್ನಡ ಸಿನಿಮಾ ನಿರ್ಮಾಣ ಕಾರ್ಯದಲ್ಲಿ ಪಾಲುದಾರರಾದರು.

೧೯೨೨ ರಲ್ಲಿ ಎಮ. ಎ. ಪಾಸಾಗಿ ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಶಿಕ್ಷಕರಾದರು. ಸುಮಾರು ಅರವತ್ತು ಕೃತಿಗಳನ್ನು ರಚಿಸಿದ ದೇವುಡು ಅವರ ಕರ್ನಾಟಕ ಸಂಸ್ಕೃತಿ ಗ್ರಂಥಕ್ಕೆ ದೇವರಾಜ ಬಹಾದ್ದೂರ ಪಾರಿತೋಷಕ ಲಭಿಸಿತು. ಮೀಮಾಂಸಾ ದರ್ಪಣಕ್ಜೆ ಮೈಸೂರು ಅರಸರ ಪ್ರಶಸ್ತಿ ಪತ್ರ ದೊರಕಿತು. ಮಹಾಬ್ರಾಹ್ಮಣ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಶಿಶು ಸಾಹಿತ್ಯ, ಅನುವಾದ, ಜಾನಪದ ಸಾಹಿತ್ಯ , ಸಣ್ಣಕತೆ, ನಾಟಕ, ಕಾವ್ಯ, ಚಿತ್ರಸಾಹಿತ್ಯ, ವೈಚಾರಿಕ ಸಾಹಿತ್ಯ ಮೊದಲಾದ ವೈವಿಧ್ಯಮಯ ಸಾಹಿತ್ಯ ರಚನೆ ಅವರಿಂದ ಆಗಿದೆ. .

ಅವರ ಬದುಕಿನ ಸಾಧನೆಗಳನ್ನು ಸಂಕ್ಷಿಪ್ತವಾಗಿ ಹಿಡಿದಿಡುವದು ಕಷ್ಟ. ಅವರ ಹೆಸರಿನಲ್ಲಿ ಟ್ರಸ್ಟ್ ರಚನೆಯಾಗಿದ್ದು ದೇವುಡು ನೆನಪನ್ನು ಶಾಶ್ವತವಾಗಿಡುವ ಕಾರ್ಯ ನಡೆದಿದೆ. ೧೯೬೨ ಅಕ್ಟೋಬರ್ ೨೨ ರಂದು ಅವರು ನಿಧನ ಹೊಂದಿದರು. ಆದರೆ ದೇವುಡು ತಮ್ಮ ಅಗಾಧ ಸಾಧನೆ ಮತ್ತು ಕೃತಿಗಳ ಮೂಲಕ ನಮ್ಮ ನಡುವೆ ಉಳಿದುಕೊಂಡಿದ್ದಾರೆ.

- ಎಲ್. ಎಸ್. ಶಾಸ್ತ್ರಿ


ದೇವುಡು ನರಸಿಂಹ ಶಾಸ್ತ್ರಿಗಳನ್ನು ಎಲ್.ಎಸ್.ಶಾತ್ರಿ ಅವರು ಪರಿಚಯಿಸಿಸಿದ್ದು ನಿಮ್ಮ ಓದಿಗಾಗಿ .ಸಂಪಾದಕ.




13 views0 comments

©Alochane.com 

bottom of page