top of page

ಮಗಳು ಮಧುಮಗಳಾದಾಗ

ಎಷ್ಟೋ ಗಂಡುಗಳು

ಬಂದು ಹೋದ ನಂತರ

ಮಗಳಿಗೊಂದು ಸಂಬಂಧ

ನಿಕ್ಕಿಯಾದದ್ದು ಖಾತ್ರಿಯಾಗಿದೆ


ಅಪ್ಪನ ಹೆಗಲು ಭಾರವಾದರೂ

ಮುಖದಲ್ಲಿ ಗೆಲುವಿನ ಸಂಭ್ರಮ

ಅಮ್ಮನ ಕಣ್ಣಿನಲ್ಲಿ ಹನಿಯಿದ್ದರೂ

ಅದಕೆ ಸಂತೋಷದ ಪರಿಮಳವಿದೆ


ಹಿಂದೆ ಮುಂದೆ ಓಡಾಡುವಾಗಲೆಲ್ಲಾ

ಅಪ್ಪ ಕಂಡು ಕಾಣದಂತೆ

ಮಗಳ ಕಣ್ತುಂಬಿಕೊಳ್ಳುತ್ತಿದ್ದಾನೆ

ಮಗಳೀಗ ಅಪ್ಪನಿಗೆ ಪ್ರಶ್ನಾರ್ಥಕವಾಗಿದ್ದಾಳೆ


ಮೊನ್ನೆಯವರಿಗೂ ಹಗಲ ಮೇಲೆ ಕುಳ್ಳಿಸಿ

ಗದ್ದೆ ಹಾಳಿಯ ಸುತ್ತು ಹಾಕಿಸಿದ ಮಗಳೀಗ

ಹಸೆಮಣೆಯೇರುವ ಕನಸು ಕಾಣುತ್ತಿದ್ದಾಳೆ

ಅಪ್ಪ ಹಿಂದೆಂದಿಗಿಂತ ಹೊಸ ಅಪ್ಪನಾಗಿದ್ದಾನೆ


ಹೆಂಗೆಂಗೋ ಉಳಿಸಿದ ಹಣ

ಮೊದಲ ಮಳೆ ಭೂಮಿ ಸೇರಿದಂತೆ ಆಗುತ್ತಿದೆ

ಹೆಂಡತಿ ಅಡ ಇಡಲು ಎನೇನೋ ಲೆಕ್ಕ ಹಾಕುತ

ಗಂಡನ ಒಳ ಮನಸಿನ ತೊಳಲಾಟಕ್ಕೆ ತಲೆ ಸವರಿದ್ದಾಳೆ


ಬಾಸಿಂಗ ಕಟ್ಟಿದ ಮಗಳ ಹಣೆ

ಅಪ್ಪ ಅಮ್ಮನ ಮೌನಗೀತೆಯ ಗುರುತಿಸಿದೆ

ಕೊರಳಿಗೆ ತಾಳಿ ಕಟ್ಟುವ ಶುಭಗಳಿಗೆಗೆ

ಅಪ್ಪ ಅಮ್ಮನ ತುಟಿಗಳು ಮೆಲ್ಲಗೆ ಕಂಪಿಸಿವೆ


ಬಂಧು ಬಾಂಧವರು ಹರಸಿದ್ದಾರೆ

ಬಳಗವೆಲ್ಲ ಭೋಜನಕ್ಕೆ ಸಿದ್ದವಾಗಿದೆ

ತವರುಮನೆಯ ಉಡುಗರೆಯ

ಧಾರೆ ಎರೆದಿದ್ದಾರೆ

ಎಲ್ಲರ ಖುಷಿಯಲ್ಲಿ ಅಪ್ಪನ ಹಗಲು ಹಗುರಾಗಿದೆ


ಮಗಳು ಗಂಡನ ಮನೆಗೆ ಹೊರಟಿದ್ದಾಳೆ

ತಾಯಿಯ ಕಣ್ಣಲ್ಲಿ ಕೋಟಿ ಮಾತಿದೆ

ಅಪ್ಪ ಲುಂಗಿಯನ್ನೋ ಹೆಗಲ ವಸ್ತ್ರವನೋ

ಸರಿಪಡಿಸಿಕೊಳ್ಳುತ್ತಾ ಕಣ್ಣಿರನ್ನು ಒತ್ತೆಯಿಟ್ಟಿದ್ದಾನೆ


ವಿನಿಮಯವಾಗದ ಕೋಟಿ ಮಾತುಗಳು

ದಿಬ್ಬಣದ ವಾದ್ಯದಲ್ಲಿ ಹಾಗೇ ಮರೆಯಾಗಿವೆ

ಅಪ್ಪ ಅಮ್ಮನ ಶುಭ ಹಾರೈಕೆಯಲಿ

ಮಗಳು ಹೊಸ ಮನೆಯ ಹೊಸಿಲು ತುಳಿದಿದ್ದಾಳೆ....

ಮಗಳೀಗ ತವರಿನ ಚಿತ್ರವ ಕಣ್ಣಲೆ ಬರೆಯುತ

ಗಂಡನ ಮನೆಯ ಒಳಿತಿಗೆ

ಅಣಿಯಾಗುತ್ತಿದ್ದಾಳೆ....


@ ಮೋಹನ್ ಗೌಡ ಹೆಗ್ರೆ

 
 
 

Comments


©Alochane.com 

bottom of page