top of page

ಬಂದೂಕಿನ ನಳಿಕೆಯಿಂದ ಹೊರಬಿದ್ದ ಜೀವಪರ ಪದಗಳು

ಅಂಜುಬುರುಕಿಯ ರಂಗವಲ್ಲಿ

( ಕವಿತೆಗಳು )

ಮಂಜುನಾಥ ನಾಯ್ಕ ಯಲ್ವಡಿಕವೂರ


ಮಂಜುನಾಥ ನಾಯ್ಕ ಉತ್ತರ ಕನ್ನಡದ ಮತ್ತೊಂದು ಅಪ್ಪಟ ಗ್ರಾಮೀಣ ಪ್ರತಿಭೆ . ಕಡು ಬಡತನದಿಂದಲೇ ಕವಿತೆಯ ಹಾಗೇ ಬದುಕು ಕಟ್ಟಿಕೊಂಡ ಇವರದು ಮೊದಲಿನಿಂದಲೂ ಅಕ್ಷರ ಪ್ರೀತಿಯದೇ ಉಸಿರು . ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯದ ಬೀಜ ಮನದಲಿ ಹುದುಗಿಸಿಕೊಂಡ ಇವರು ಮೊದಮೊದಲು ಬದುಕಿಗಾಗಿ ಪತ್ರಿಕೋದ್ಯಮ ಅಪ್ಪಿಕೊಂಡರು ; ಒಪ್ಪಿಕೊಂಡರು. ಪತ್ರಿಕೆಯೊಂದರ ಮುಖ್ಯ ವರದಿಗಾರರಾಗಿ ಮತ್ತು ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುವಾಗ ಬದುಕಿನ ಎಷ್ಟೋ ಮುಖವನ್ನು ಅರಿತರೂ ಸಹ ಕವಿತೆ ಎಂದರೆ , ಸೋತ ರಟ್ಟೆಗಳು ದಣಿವಾರಿಸಿಕೊಳ್ಳೊ ನಿಲ್ದಾಣ ಎಂಬ ಉಸಿರಿನಿಂದ ಎದ್ದು ಬಂದವರು. ಮುಂದಿನ ದಿನಗಳಲ್ಲಿ ಬದುಕಿನ ಭದ್ರತೆಗಾಗಿ ಪೋಲೀಸ್ ಇಲಾಖೆ ಸೇರಿ ಕೆಲ ಸಮಯ ಸಾಹಿತ್ಯದಿಂದ ದೂರ ಇದ್ದಂತೇ ಕಂಡರೂ ಒಳಗೊಳಗೇ ಕುದಿತಗಳ ಮೈದುಂಬಿಸಿಕೊಂಡು ಆಗಾಗ ಅಕ್ಷರಗಳೊಡನೆ ಆಡುತ್ತಾ ಲಾಠಿ ಹಿಡಿಯುವ ಕೈಯ್ಯಲ್ಲಿ ಪೆನ್ನಿಗೂ ಶರಣಾದವರಿವರು. ಸದ್ಯ ಹೊನ್ನಾವರದ ಪೋಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಟ್ಕಳದ ಮಂಜುನಾಥ ನಾಯ್ಕ ಯಲ್ವಡಿಕವೂರ ಇವರು ವೃತ್ತಿ ಪ್ರವೃತ್ತಿಗಳೆರಡರಲ್ಲೂ ಜನಮೆಚ್ಚುಗೆ ಪಡೆದಿರುವರು .


"ಅಂಜುಬುರುಕಿಯ ರಂಗವಲ್ಲಿ " ಇದು ಮಂಜುನಾಥರ ಮೊದಲನೆಯ ಕವನ ಸಂಕಲನವಾಗಿದ್ದು 70 ಪುಟಗಳ ಸಂಕಲನದಲ್ಲಿ 36 ಕವಿತೆಗಳಿದ್ದು ಇವೆಲ್ಲವೂ ನಿತ್ಯದ ಜೀವನಾನುಭವದ ಸಾಲುಗಳೇ ಆಗಿದ್ದು ಇದನ್ನು ಉಡುಪಿಯ ಶಿರೂರಿನ ಅದಿತಿ ಪ್ರಕಾಶನದವರು ಪ್ರಕಟಿಸಿರುವರು.


ಗುಬ್ಬಿಗೂಡಿಗೆ ಬೆಂಕಿ ಬಿದ್ದಿದೆ

ನಂದಿಸುವವರೇ ಇಲ್ಲ

ಒಡಲ ಬೆಂಕಿ ಮುಂದೆ

ಚಳಿ ಕಾಯಿಸುವವರೇ ಎಲ್ಲ

ಗುಬ್ಬಿಮರಿ ಕೊಂದ ರಣಹದ್ದುಗಳು

ಕಾಡಲ್ಲಿ ನಾಡಲ್ಲಿ ರಾಜಾರೋಷ .


ಎನ್ನುತ್ತಾ , ' ಗುಬ್ಬಿಗೂಡಿಗೆ ಬೆಂಕಿ ಬಿದ್ದಿದೆ ' ಕವಿತೆಯಲ್ಲಿ ಬಡ ಅಮಾಯಕ ಅಸಹಾಯಕರ ಬದುಕಿನ ದೈನಂದಿನ ಚಿತ್ರವನ್ನು ಮನದಟ್ಟಾಗುವಂತೆ ಚಿತ್ರಿಸುತ್ತಾ ಇಂದಿನ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ -ಗತಿ ಗಳನ್ನು ಮನನ ಮಾಡಿಕೊಂಡಿರುವರು . ಸಮಾಜದಲ್ಲಿ ಉಪದೃವಿ - ನಿರುಪದೃವಿ ಎಂಬೆರಡು ವಿಧಗಳಿದ್ದು , ಈ ಉಪದೃವಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತನ್ನ ತುತ್ತಿಗಾಗಿ ಹಗಲಿರಳೂ ದುಡಿದು ಮತ್ತೊಬ್ಬರ ಹಂಗಿಲ್ಲದೇ ಬದುಕುವ ಇವರು ಕಷ್ಟಗಳ ಬಿರುಬಾಣಕೆ ಸೆಟೆದು ನಿಂತವರು. ಆದರೆ ಇಂತವರಿಗೆ ಸದಾ ತೋಳ ನರಿ ರಣಹದ್ದುಗಳದೇ ಕಾಟ. ಆಗಾಗ ಗುಬ್ಬಿ ಮನದ ಹೃದಯಗಳಿಗೆ ಬೆಂಕಿ ಇಡುವದರಲ್ಲೇ ಖುಷಿ ಇವರಿಗೆ. ಬಿದ್ದ ಬೆಂಕಿ ಆರಿಸದೇ ಚಳಿ ಕಾಯಿಸುವ ಜನಗಳ ನಡುವೆ ಗುಬ್ಬಿಗಳು ನಲುಗಿ ಹೋಗಿವೆ. ಮನಕೂ ಬೆಂಕಿ , ಮನೆಗೂ ಬೆಂಕಿ ಎನ್ನುತ್ತಾ ಕವಿ ಇಲ್ಲಿ ಶಬ್ಧಗಳ ಚಾಕ ಚಕ್ಯತೆಯಲಿ ಅಸಹಾಯಕರ ಪರವಾಗಿ ದನಿ ಎತ್ತಿರುವರು .

' ಬೆಟ್ಟ ಹತ್ತುವದೆಂದರೆ.... ' ಕವಿತೆಯಲ್ಲಿ

ಬೆಟ್ಟ ಹತ್ತುವದೆಂದರೆ

ಬಲವಿರಬೇಕು ಬೆಟ್ಟದಾನೆಯಷ್ಟು

ಗಟ್ಟಿಯಿರಬೇಕು

ಕೈ ಕಾಲು ಎದೆಗುಂಡಿಗೆ

ವಿಜಯಗೀತೆ ಮೊಳಗಲು

ಬೆಟ್ಟದ ತುದಿಯಲ್ಲಿ ನಿಂತು

ಗಟ್ಟಿ ಕೊರಳಿರಬೇಕು


ಎನ್ನುತ್ತಾ ಈ ಜನರ ನಿತ್ಯದ ಬದುಕನ್ನು ಬೆಟ್ಟ ಹತ್ತಿಸುವಿಕೆಗೆ ಹೋಲಿಸಿರುವರು. ಹಗಲೆಲ್ಲಾ ಈ ಜಗದಲಿ ಹುಲಿ ಕರಡಿ ಸಿಂಹಗಳೇ. ಇವುಗಳೊಡನೆ ಈಸಿ - ಜೈಸಿ ದಡ ಸೇರ ಬೇಕೆಂದರೆ ನಮ್ಮದೆಲ್ಲವೂ ಗಟ್ಟಿ ಇರಬೇಕು. ನಮ್ಮದನು ನಾವು ಹೇಳಿಕೊಳ್ಳಲೂ ನಮಗೆ ಗಟ್ಟಿಕೊರಳು ಬೇಕೇ ಬೇಕು ಎನ್ನುತ್ತಾ ಕವಿ ' ಬೆಟ್ಟ ಗಟ್ಟಿಗರಿಗೆ ; ಪುಕ್ಕಲಿಗರಿಗಲ್ಲ ಎಂಬ ಕಿವಿಮಾತನ್ನೂ ಹೇಳಿರುವರು .


ನಾಡಿನ ನಾಮಾಂಕಿತ ಜನಪರ ಮನಸ್ಸಿನ ಬರಹಗಾರ ಜಯಂತ ಕಾಯ್ಕಿಣಿ ತಮ್ಮೂರ ಹುಡುಗನ ಈ ಕವಿತೆಯ ಸಾಲುಗಳಿಗೆ ' ಆಪ್ತ ಕಿಟಕಿ ' ಎಂಬ ಮುನ್ನುಡಿ ಬರೆಯುತ್ತಾ , " ಇಲ್ಲಿ , ಸಂತೆಯಲ್ಲಿ ಕನಸು ಮಾರುವ ಹುಡುಗರಿದ್ದಾರೆ ,ಭೋರ್ಗರೆವ ಮಳೆಯ ನಂತರ ಕೊಂಬೆಗೆ ಗೂಡು ಕಟ್ಟುವ ಗುಬ್ಬಿ ಇದೆ , ಅಮವಾಸ್ಯೆ ಯಿಂದಲೇ ರೂಪುಗೊಂಡು ಚಲಿಸುವ ಆಜ್ಜಯ್ಯನಿದ್ದಾನೆ. ಚಟ್ಟದ ಮನೆಯಲ್ಲಿ ಕುಂತ ಚಿಟ್ಟೆಯಿದೆ, ಅಪ್ಪನ ಕಿಸೆಯಿಂದ ಕದ್ದ ಬೀಡಿಯಿದೆ , ಹಾಯಿದೋಣಿಯಲ್ಲಿ ಕೂತ ಅಕ್ವೇರಿಯಂ ಮೀನು ಇದೆ , ಅಂಜುವ ಬೆರಳು ಗಳಿಂದ ಮೂಡಿದ ನೆರಳು ಬೆಳಕಿನ ರಂಗವಲ್ಲಿ ಇದೆ , ಬೆಟ್ಟವೇರುತ್ತ ಹಗುರಾಗುಲ ವಾಂಛೆಯಿದೆ.ವೃತ್ತಿ ಯಿಂದಲೂ ಪ್ರವೃತ್ತಿಯಿಂದಲೂ ಸಮಾಜವನ್ನು ಒಂದು ದೊಡ್ಡ ಕುಟುಂಬವೆಂದು ಗ್ರಹಿಸುವ ಜೀವಿಯೊಬ್ಬನ ಆತ್ಮಸಾಕ್ಷಿ ರೂಪುಗೊಳ್ಳುತ್ತಿರುವುದನ್ನು ಧ್ವನಿಸುವ ಸೊಲ್ಲುಗಳು ಇಲ್ಲಿವೆ. ಕಾವ್ಯದ ಬರವಣಿಗೆಯನ್ನು ಆತ್ಮಲೋಲುಪ ಭಾವಾಲಾಪದ ಶೋಕಿಯಾಗಿಸದೆ, ಒಂದು ಚಿಂತನೆಯ ಕಿಟಕಿಯನ್ನಾಗಿಸಿ ನೆಚ್ಚಿಕೊಂಡಿರುವ ಮಂಜುನಾಥ ನಾಯ್ಕರನ್ನು ಅಕ್ಕರೆಯಿಂದ ಅಭಿನಂದಿಸುತ್ತೇನೆ " ಎಂದಿರುವರು .


ನಾನು ಅಪ್ಪಟ ಶಾಂತಿದೂತ

ನಾನು ಕಹಳೆಗಳಿಗೆ ಕಿವಿಯಾಗುತ್ತೇನೆ

ಚಂಡೆಯಾಗುವದಿಲ್ಲ

ಕಹಳೆಗಳು ಶಂಕನಾದದಂತಿದ್ದರೆ ಸರಿ

ರಣಕಹಳೆಗಳಾಗಿದ್ದರೆ ? ....

ನನಗೆ ಬೀದಿ ಹೆಣವಾಗುವದು ಇಷ್ಟವಿಲ್ಲ .


ಎಂದು ' ಕಹಳೆ ' ಕವನದಲ್ಲಿ ಶಾಂತಿ ಮಂತ್ರವನ್ನು ಜಪಿಸುತ್ತಾ ' ಹೇಳಿಕೆ ' ಗಳ ಕುರಿತು ಮಾದ್ಯಮಗಳ ಇಂದಿನ ಸ್ಥತಿಗತಿಗಳಿಗೂ ಕಣ್ಣಾಗಿರುವರು. ಸುದ್ದಿಗಳಿಗೆ ಮರುಳಾಗದೇ , ಚೆಂಡೆಯಾಗಿ ರಣಕಹಳೆಯಿಂದ ದೂರವಿರುವಾ ಎಂದು ಯುವಕರಿಗೆ ಕಿವಿಮಾತು ಹೇಳುತ್ತಾ ಹೇಳಿಕೆಯ ಮಾತುಗಳಿಂದ ಬೀದಿ ಹೆಣವಾಗದಿರಿ ಎಂಬ ಎಚ್ಚರಿಕೆಯನ್ನೂ ನೀಡಿರುವರು.


ಅಪ್ಪಾ

ಹುಲ್ಲಿನ ಮನೆಯೊಳಗೆ

ಮೆಲ್ಲನೆ ಎಳೆ ಎಳೆಯಾಗಿ

ಸುರುಳಿಸುರುಳಿ ಬಿಟ್ಟ ನಿನ್ನ ಬೀಡಿಯ ಹೊಗೆ

ದೇವರ ದಯೆಗಾಗಿ ಮಾಡಿದ ಹೋಮದ ಹಾಗೆ


ಎಂದು ' ಅಪ್ಪನ ಬೀಡಿ ' ಕವಿತೆಯಲ್ಲಿ ಅಪ್ಪನ ಬದುಕಿನ ಉಸುರಿನ ನೆನಪಾಗಿರುವರು. ಇದೊಂದು ಅಪ್ಪಟ ದೇಸಿ ಕವಿತೆಯ ಸಾಲುಗಳು. ಇಲ್ಲಿ ಯಾವುದೇ ನಯ ನಾಜೂಕುಗಳಿಲ್ಲ ; ಅಬ್ಬರದ ಸಾಲುಗಳಿಲ್ಲ. ಅಪ್ಪನ ಮೌನದ ಕಣ್ಣೋಟ ಈ ಸಾಲುಗಳಲ್ಲಡಗಿದೆ. ಅಪ್ಪನ ಅರ್ಧತೋಳಿನ ಕೊಳಕು ಅಂಗಿ , ಆ ಅಂಗಿಯಲ್ಲಿದ್ದ ಬೀಡಿ ಮೋಟು , ಅಪ್ಪ ಬೀಡಿಗೆ ದಾಸನಾದ ಕಾರಣ, ಆ ಬೀಡಿಮೋಟಿನ ಹೊಗೆ ಮೊಡದ ಮರೆಯಲ್ಲಿ ಲೀನವಾದದ್ದು ; ಇವೆಲ್ಲಕಿಂತ ಹೆಚ್ಚಾಗಿ ಅಪ್ಪನಿಗೆ ಕಾರಣಾಂತರಗಳಿಂದ ಆಸರೆಯಾಗಿದ್ದ ದಿನದ ಆ ಒಂದೇ ಒಂದು ಬೀಡಿಯನ್ನು ಕವಿ ಕದ್ದು ತಾನು ಸೇದಿ ಖುಷಿ ಪಟ್ಟದ್ದು ಇವೆಲ್ಲವೂ ಅಪ್ಪನ ನೆನಪಿನ ಕಣ್ಣೋಟದ ಕುಡಿಗಳಾಗಿವೆ.


ಎಷ್ಟೋ ವಿದ್ಯಾರ್ಥಿಗಳ ಎದೆಯಲ್ಲಿ ಅಕ್ಷರದ ಬೀಜ ಬಿತ್ತಿದ ನೆಚ್ಚಿನ ಪ್ರಾದ್ಯಾಪಕ , ವಾಂಗ್ಮಿ , ಸೃಜನಶೀಲ ಮನಸ್ಸಿನ ಡಾ. ಶ್ರೀಪಾದ ಶೆಟ್ಟಿ ತಮ್ಮ ಬೆನ್ನುಡಿಯಲ್ಲಿ, " ರಂಗವಲ್ಲಿಯೇ ಬೆಳದಿಂಗಳಾಗಬೇಕೆಂಬ ಕನಸಿನ ಕನವರಿಕೆಯ ಮಂಜುನಾಥ ನಾಯ್ಕ ಯಲ್ವಡಿಕವೂರ ಹೊಸ ತಲೆಮಾರಿನ ಭರವಸೆಯ ಕವಿ. ಕೃಷಿ ಕಾರ್ಮಿಕ ಕುಟುಂಬದಲ್ಲಿ ಬಡತನವನ್ನೆ ಉಂಡು ಉಟ್ಟು ಬೆಳೆದರು. ಭೌತಿಕ ಮತ್ತು ಬೌದಿಕ ಎತ್ತರವನ್ನು ನಿಲುಕ ಹೊರಟ ಮಂಜುನಾಥ ಆರಕ್ಷಕ ಇಲಾಖೆಯ ಉದ್ಯೋಗಿ. ಮನುಕುಲದ ಬುದ್ದಿ ಭಾವ ಆದರ್ಶಗಳು ವಿಕಾಸ ವಾಗಬೇಕು, ಜಾತಿ, ಮತ, ಪಂಥ ರೂಢಿಗಳ ಕಟ್ಟು ಕಳಚಿ ಸ್ವಜನಪಕ್ಷಪಾತ, ಬ್ರಷ್ಟಾಚಾರ, ಮೋಸ, ವಂಚನೆಗಳ ಜಾಲವು ಹರಿದು ಜನರ ಬದುಕು ನೆಮ್ಮದಿಯ ನಲೆ ವೀಡಾಗಬೇಕು. ಅಸಮಾನತೆಯು ತೊಲಗಿ ಸಮಾನತೆಯ ಸೊಲ್ಲು ಎಲ್ಲೆಡೆಗೆ ಕೇಳಬೇಕು ಎಂಬ ಹಂಬಲ ಹೊತ್ತಿರುವ ಕವಿಗೆ ದೇವಶಿರದ ಮೇಲಿನ ಮಲ್ಲಿಗೆ ಮುಳ್ಳಿನವರ ಮನೆಯ ಮಲ್ಲಿಗೆಯಾಗಬಾರದು ಎಂಬ ಇರಾದೆ " ಎಂದಿರುವರು .


ನಮ್ಮ ಕೇರಿಗಳಲ್ಲೀಗ

ವಿಷದ ಉರಗಗಳ ಸದ್ದಿಲ್ಲ

ವಿಷ ಕಾರುವವರದೇ ಸದ್ದು


ಎನ್ನುತ್ತಾ, ಘಟಸರ್ಪವನ್ನಾದರೂ ಪಳಗಿಸಬಹುದು . ಈ ಹಾವುಗಳೇ ಒಮ್ಮೊಮ್ಮೆ ನಮ್ಮ ಅತಿಥಿಗಳಾಗಿ ಉಳಿದುಕೊಳ್ಳುತ್ತದೆ ; ಯಾಕೆಂದರೆ ನಾವು ಈಗ ವಾಸಿಸುತ್ತಿರುವ ಪ್ರದೇಶವು ಅವುಗಳದೇ. ನಾವೇ ದನ್ನೀಗ ಅತಿಕ್ರಮಣ ಮಾಡಿರುವೆವು.ಅದಕಾಗಿ ಸದ್ದು ಗದ್ದಲವಿಲ್ಲದೇ ಅವು ತಮ್ಮ ಮೂಲ ಪ್ರದೇಶಕ್ಕೆ ಬಂದು ಹೋಗುವವು.ಆದರೆ ಈ ಮನುಷ್ಯ ಎಂಬ ಜೀವಿ ಸದಾ ವಿಷಕಾರುತ್ತಾ ಮತ್ತೊಬ್ಬರ ಕೆಡಕನ್ನೇ ಬಯಸುತಿರುವನು , ಎಂದು ಮನುಷ್ಯನ ಮನಸ್ಸನ್ನು ಲೆಕ್ಕಾಚಾರಕ್ಕಿಳಿಸಿರುವರು .


ನನ್ನೂರು ಕಡಮೆಯ ಮಗ , ಹೊನ್ನಾವರದ ಪೋಲೀಸ್ ವೃತ್ತ ನಿರೀಕ್ಷಕರಾದ ಶ್ರೀ ವಸಂತ ಆಚಾರ್ ಇವರು ತಮ್ಮ ಸಿಬ್ಬಂದಿಯ ಸಾಹಿತ್ಯದ ಕುರಿತು ಬರೆಯುತ್ತಾ, " ನಮ್ಮ ಪೋಲೀಸ್ ಇಲಾಖೆಯಲ್ಲಿ ಇದ್ದು ಸಾಹಿತ್ಯದಲ್ಲಿ ಅಭಿರುಚಿ ಇಟ್ಟುಕೊಂಡು ಕವಿತೆ, ಕಥೆ, ಲೇಖನ ಬರೆಯುವ ಮಂಜುನಾಥ ನಾಯ್ಕ ಅವರು ಪ್ರತಿಭಾ ವಂತರು ಎನ್ನುವದರಲ್ಲಿ ಅವರ ಬರವಣಿಗೆಯನ್ನು ಓದಿದ ನನಗೆ ಮನವರಿಕೆಯಾಗಿದೆ.ಸಾಹಿತ್ಯ ಕ್ಷೇತ್ರಕ್ಕೆ ಪೋಲೀಸ್ ಇಲಾಖೆಯ ಕೊಡುಗೆಯ ಕೊರತೆಯನ್ನು ಇವರು ನೀಗಿಸಬಲ್ಲರು ಎಂಬ ವಿಶ್ವಾಸವಿದೆ " ಎಂದಿರುವರು .


" ಡೊಂಬರಾಟದ ಹುಡುಗಿ " ಯ ಕುರಿತು ಬರೆಯುತ್ತಾ,


ನಿನ್ನ ಸಿಹಿನಿದ್ದೆಯ ಕನಸಿಗೆ

ಜೋಗುಳ ಹಾಡಿ ತೂಗೋ ತೊಟ್ಟಿಲು

ಹಿಡಿಯಬೇಕಿದ್ದ ನಿನ್ನ ಹೆತ್ತ ತಾಯಿ

ಹೆಗಲ ಮೇಲೆ ಹೊತ್ತು ತಿರುಗಬೇಕಿದ್ದ ತಂದೆ

ಬದುಕಿನ ಭಾರಕ್ಕೆ

ಬಡತನದ ಬೆಂಕಿಗೆ

ಸಮಾಧಿಯ ಕ್ಷೋಭೆಯಲ್ಲಿ ಮಲಗಿದ್ದರು .


ಎನ್ನುತ್ತಾ ಅಸಹಾಯಕತೆ , ಅಸಮಾನತೆಯ ಕುರಿತು ಮನಸ್ಸು ಮಂಜಾಗಿ ಮರಗಿರುವರು .


" ಅಂಜುಬುರುಕಿಯ ರಂಗವಲ್ಲಿ " ಯ ಹೂಮನದ ಕವಿ ಮಂಜುನಾಥ ನಾಯ್ಕ ಯಲ್ವಡಿಕವೂರ ತಮ್ಮ ಕವಿತೆಗಳ ಕುರಿತು ಬರೆಯುತ್ತಾ , " ನನಗೆ ಕಾವ್ಯವೆಂದರೆ ಜೀವಂತಿಕೆಯ ನಿಗಿನಿಗಿ ಕೆಂಡ ; ಅರ್ಥವಂತಿಕೆಯ ಬೆರಗು ; ಸೂಜಿಗಲ್ಲಿನ ಸೆಳೆತದ ಹಾಲುಗಲ್ಲದ ಕಂದ ; ಮುಟ್ಟ ಹೋದರೆ ಮಿಡಿಯಬಲ್ಲ ವಿಸ್ಮಯ ; ಕ್ರಮಿಸಿದರೂ ಗುರಿ ತಲುಪಲಾರದ ಹೆದ್ದಾರಿ ; ಹಕ್ಕಿಯ ಕಂಠದಿಂದ ಹೊರಬಿದ್ದ ಚಿಲಿಪಿಲಿ......... " ಎಂದಿರುವರು.


'ಕನಸು ಮಾರುವ ಹುಡುಗ ಮುಂದೆ ಮುಂದೆ

ಕನಸು ಕಾಣುವ ನಾನವನ ಹಿಂದೆ ಹಿಂದೆ ' ಎನ್ನುತ್ತಾ,

' ಕಳೆದು ಕೊಂಡಿರುವೆ ವಿಳಾಸವ

ಹುಡುಕಿಕೊಡುವಿರಾ ?

ನೆತ್ತರ ನೆಲವ ಹದಗೊಳಿಸಿ

ಫಲದ ಉಳುಮೆಗೈಯಬೇಕಿದೆ

ಹದಗೊಳಿಸಿ ಹಸನು ಮಾಡುವವನ

ಕಳುಹಿಸಿಕೊಡುವಿರಾ ? ' ಎಂದು ಅಂಗಲಾಚಿ ಕೇಳುವ ಮಂಜುನಾಥ ನಾಯ್ಕರ ಕವಿತೆಗಳಲ್ಲಿ ಬಾಲ್ಯದ ಬಡತನದ ತುಡಿತವಿದೆ ;ಮನುಷ್ಯತ್ವದ ಮಿಡಿತವಿದೆ . ಲಾಠಿ ಬಂದೂಕು ಹಿಡಿದ ಕೈಯ್ಯಿಂದ ಅರಳಿದ ಇಲ್ಲಿಯ ಅಕ್ಷರಗಳು , ಬಂದೂಕಿನ ನಳಿಕೆಯಿಂದ ಹೊರಬಿದ್ದ ಜೀವಪರ ಪದಗಳಾಗಿವೆ. ಮಂಜುನಾಥ ನಾಯ್ಕರ ಚೊಚ್ಚಲು ಕೃತಿಗೆ ಅಭಿನಂದಿಸಿ ಶುಭಕೋರುವೆ .ಪ್ರಕಾಶ ಕಡಮೆ

ನಾಗಸುಧೆ , ಹುಬ್ಬಳ್ಳಿ

9448850316.

4 views0 comments

Comments


bottom of page