top of page

ಪೊರೆವ ಕರ ಮತ್ತು ಮರಿ ಗುಬ್ಬಿ

ಮರಿ ಗುಬ್ಬಿ ಬಾ ಎನ್ನ ಅಂಗೈ ಅರಮನೆಗೆ

ಪೊರೆವೆ ನಾ ಇರದಂತೆ ಬಂಧನವು ನಿನಗೆ

ಹಿಚುಕಲಾರೆನು ನಾ ನಿನ್ನ ಬಿಚ್ಚಿ ಹಾರುವ ಗರಿಯ

ಭರವಸೆಯ ಬೆಳಕಿನಲಿ ತೋರುವೆ ನಿನ್ನ ಗುರಿಯ...


ಹೋಗದಿರು ಕಾದಿಹವು ಹಸಿದ ಮಾರ್ಜಾಲಗಳು

ಒಬ್ಬಂಟಿ ಹಾರಿದರೂ ಎರಗುವವು ಗಿಡುಗಗಳು

ಬಲೆ ಹೆಣೆದು ಕುಳಿತಿಹರು ನಿನ್ನ ಸೆರೆಯಾಗಿಸಲು

ಪಂಜರದ ಗೂಡೊಳಗೆ ನಿನ್ನ ಕೊನೆಗಾಣಿಸಲು.


ಹಿಂದೆಲ್ಲಾ ನೀನಿದ್ದೆ ಮನೆ ಮಾಡಿನೊಳಗೆ

ಬೆಳೆದ ಆಧುನಿಕತೆಯೇ ಮುಳುವಾಯ್ತೇ ನಿನಗೆ?

ಎಲ್ಲೆಲ್ಲೂ ವಿಜ್ಞಾನ ತಂತ್ರಜ್ಞಾನದ ವಿಕಿರಣ...

ಹೊಸಕಿ ಹಾಕಿತೇ ನಿನ್ನ ಬಾಳ ಹೊಂಗಿರಣ..!?


ಮನೆ ಮನೆಯಲೂ ಕಸಕಡ್ಡಿಯಲಿ ನೇಯ್ದ ಬೆಚ್ಚನೆ ಗೂಡು

ಬಳಗದ 'ಚಿಂವ್... ಚಿಂವ್...' ದನಿಯು ಮನೆ ಮಕ್ಕಳ ಹಾಡು.

ಅಂಗಳದಿ ಚೆಲ್ಲುತಿರೆ ಅಕ್ಕಿ ರಾಗಿಯ ಕಾಳು

ಪರಿವಾರವೇ ಜಿಗಿದು ಆಡುತ್ತಿದ್ದವು, ಎಂಥ ಸುಂದರ ಬಾಳು!


ತುಂಬುವೆನು ಕಸುವನ್ನು ಎಳೆ ರೆಕ್ಕೆಗಳಿಗೆ

ಮುಗಿಲುಂಟು ಜಗದಗಲ ನೀ ನೆಗೆಯುವಾ ಗಳಿಗೆ.

ಮತ್ತೊಮ್ಮೆ ಅನುರಣಿಸಲಿ ನಿನ್ನ ಕಲರವವು

ಮರುಕಳಿಸಲಿ ನೆನಪು; ನೀ ಕೊಟ್ಟ ಸಂತಸದ ಕ್ಷಣವು.


ಇನ್ನೇತಕೀ ಬೆರಗು? ತಳಮಳವು ಮನದೊಳಗೆ..?

ಬಿಡು ಭಯವ, ಮುಕ್ತವಾಗಿಸು ಬದುಕು ಸ್ವಚ್ಛಂದದೆಡೆಗೆ...

ಅಂಜದಿರು ಅಳುಕದಿರು ಬಾ ನಂಬಿ ನನ್ನ

ಉಳಿಸಿ ಬೆಳೆಸುವೆ ಅನವರತ ನಿನ್ನ ಸಂತತಿಯನ್ನ..!! - ಬಾಲಕೃಷ್ಣ ದೇವನಮನೆ, ಬೆಳಂಬಾರ



ಬಾಲಕೃಷ್ಣ ದೇವನಮನೆ ಇವರು ಅಂಕೋಲಾ ತಾಲೂಕಿನ ಬೆಳಂಬಾರದವರು.ವೃತ್ತಿಯಲ್ಲಿ ಆರಕ್ಷಕರಾಗಿರುವ ಇವರು ಸದ್ಯ ಕುಮಟಾ ಪೋಲಿಸ ಠಾಣೆಯಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ.ಇವರ ಕತೆ,ಕವನ,ಹನಿಗವನಗಳು ತುಷಾರ, ಮಯೂರ, ಕರ್ಮವೀರ,ತರಂಗ,ಸಂಯುಕ್ತ ಕರ್ನಾಟಕ,ಸಕಾಲಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕವನ ರಚನಾ ಸ್ಪರ್ಧೆಯಲ್ಲಿ ಹೊನ್ನಾವರ ಎಸ್.ಡಿ.ಎಂ.ಕಾಲೇಜಿನ ಪ್ರಥಮ ಬಹುಮಾನ ಸತತ ಮೂರು ವರ್ಷ,(೨೦೦೧ರಿಂದ ೨೦೦೩)ತುಷಾರ ಮಾಸ ಪತ್ರಿಕೆಯ ಬಹುಮಾನ,ಚಿತ್ರದುರ್ಗದ ಎ.ಬಿ.ವಿ.ಪಿ.ಶಾಖೆಯವರ ರಾಜ್ಯಮಟ್ಟದ ಕವನ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವ ಇವರು ನಾಡಿನ ಭರವಸೆಯ ಕವಿ

167 views0 comments

©Alochane.com 

bottom of page