top of page

ಪ್ರೀತಿಯ ನಾವೆಯನ್ನೇರಿ

ನನ್ನೊಲವಿನ ಓದುಗರೆ,

ಪ್ರೀತಿಯ ನಮನಗಳು. ನಿಮ್ಮ ಜೊತೆಗೆ ಇಂದು ಪ್ರೀತಿಯ ಕಥೆಯನ್ನು ಹೇಳುವ ಮನಸ್ಸಾಯಿತು. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಅನುಭವಿಸಲೇ ಬೇಕಾದ ಒಂದು ಆಹ್ಲಾದಕರ ನೋವನ್ನು ಅನಾವರಣಗೊಳಿಸುವುದಕ್ಕಾಗಿಯೇ ನಾನು ಲೇಖನಿಯ ಒಳಹೊಕ್ಕೆ. ಬದುಕಿನ ಪುಟಗಳಲ್ಲಿ ಬಂದುಳಿದ, ಬೆಂದುಳಿದ, ಬಂದು-ಹೋದ ಮನಸ್ಸುಗಳನ್ನು ಹೆಸರು ಹೇಳದೆ ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ ನನ್ನದು. ಪ್ರೀತಿಯೆಂಬುದು ಒಂದು ಅದ್ಭುತ ಕ್ಷಣ, ಪ್ರೀತಿಯೆಂಬುದೇ ಮರೀಚಿಕೆ, ಪ್ರೀತಿಯೆಂಬುದು ಸ್ವರ್ಗ, ಪ್ರೀತಿಯೇ ವಿಷ, ಪ್ರೀತಿಯೆಂಬುದು ಮೋಹ, ಪ್ರೀತಿಯೆಂಬುದು ಮಾಯೆ, ಪ್ರೀತಿಯೆಂಬುದು ಕಾಮ ಪ್ರಚೋದಕ, ಪ್ರೀತಿಯೆಂಬುದು ವಾತ್ಸಲ್ಯ, ಪ್ರೀತಿಯೆಂಬುದು ಭ್ರಾತೃತ್ವ, ಪ್ರೀತಿ ಕುರುಡು, ಪ್ರೀತಿಯೇ ಸ್ನೇಹದ ಲತೆಯಲ್ಲರಳಿದ ಪುಷ್ಪ, ಪ್ರೀತಿಯೆಂಬುದು ಬದುಕು, ಪ್ರೀತಿಯೆಂಬುದು ಮಧುರ ನೆನಪು, ಪ್ರೀತಿಯೇ ಕನಸು, ಪ್ರೀತಿಯೇ ಜಗತ್ತು, ಪ್ರೀತಿಯೇ ಮಮತೆಯ ಮೊಗ್ಗು, ಪ್ರೀತಿಯೇ ಜೀವನದ ಅಂತ್ಯ, ಪ್ರೀತಿಯ ಹೊಳೆಯಲ್ಲಿ ಮಿಂದೆದ್ದವರೆಷ್ಟೋ....ಕೊಚ್ಚಿ ಹೋದವರೆಷ್ಟೋ.... ಅಂತಹ ಒಂದು ಪ್ರೀತಿಯ ನಾವೆಯನ್ನೇರಿದ ಸುಂದರ ಜೋಡಿಗಳ ಪ್ರೇಮ್ ಕಹಾನಿ ಇದು. ಅವರ ಕಥೆಯನ್ನು ಅವರದೇ ಮಾತುಗಳಲ್ಲಿ ಕೇಳೋಣ. ನಾವೂ ಕೆಲ ಕ್ಷಣ ಪ್ರೀತಿಯ ನಾವೆಯನ್ನೇರಿ ಹೊರಡೋಣ.

ಪ್ರೀತಿಯ ಸಂದೀಪ್ ಪ್ರೀತಿಯ ಕಥೆಗಳಿಗೇನು ಕೊರತೆಯೇ?! ನಾನೊಮ್ಮೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೆ. Education ಮುಗಿದ ಮೇಲೆ ಅಲ್ಲೇ software company ಯಲ್ಲಿ ಕೆಲಸ ಮಾಡುತ್ತಿದ್ದವ ನಾನು. ನಮ್ಮ ಊರಿಗೆ ಆಗಾಗ ಬಂದು ಹೋದರೆ ಮಾತ್ರ ಖುಷಿ ಇಮ್ಮಡಿಯಾಗುತ್ತೆ. ಪ್ರಯಾಣವನ್ನೂ ನಾನು ಅಷ್ಟೇ enjoy ಮಾಡುತ್ತಿದ್ದವ. ನನ್ನದು ಆದಿನ single sleeper. ನನ್ನ ಆಚೆಗೂ ಒಂದು family ಬಂದು bus ಏರಿತು. ಅಪ್ಪ ಮಗಳು...ಎನ್ನುವುದು ಅವರನ್ನು ನೋಡಿದಾಗಲೇ ಅನ್ನಿಸಿತು. ಅಮ್ಮ ಬಸ್ ಏರಿದವಳೇ ಮಗಳಿಗೆ ಶುಭ ಹಾರೈಸಿ ಕೆಳಗಿಳಿದಳು. ಅವರ ಮಾತುಗಳಲ್ಲಿ ಹೊಸದಾಗಿ ಕೆಲಸಕ್ಕೆ ಸೇರುವವಳು ಇವಳೆಂಬುದು ಸ್ಪಷ್ಟವಾಗಿತ್ತು ನನಗೆ. ನಾನಿನ್ನೂ ನನ್ನ ear sound buds ಗಳನ್ನು ಕಿವಿಗೆ ಹಾಕಿರಲಿಲ್ಲ. ಹೀಗಾಗಿ ಅವರ ಮಾತುಗಳು ನನಗೆ ಸ್ಪಷ್ಟವಾಗಿ ಕೇಳಿಸುತ್ತಿದ್ದವು.

ಆಹಾ! ಎಂಥ ಚಂದ. ರೇಷ್ಮೆಯಂತಹ ಕೂದಲು. ಹಳದಿ ಕಣ್ಣಿನ ಬೆಳದಿಂಗಳ ಬಾಲೆ. ಯಾವ ಹೀರೋಯಿನ್ ಗೂ ಕಡಿಮೆಯಲ್ಲದ ಚೆಲುವೆ ಆಕೆ. ಮುಖದೊಳಗೆ ಸದಾ ಮೂಡಿದ್ದ ಮಂದಹಾಸ ಕಣ್ಣೊಳಗೊಂದು ಹೊಳಪು. ಎಂಥವರನ್ನೂ ತಕ್ಷಣಕ್ಕೆ ಅವಳೆಡೆಗೆ ನೋಡುವಂತೆ ಮಾಡುವಂತಹ ಚೆಲುವು. ಮೊದಲ ನೋಟಕ್ಕೇ ಬಿದ್ದು ಹೋದೆ ಎನ್ನುವುದಕ್ಕಿಂತ ಬಿದ್ದುಕೊಂಡಲ್ಲೇ ಇದ್ದೆ. ( ಬಸ್ಸಿನ ಮೇಲೆ ) 😄

ರಾತ್ರಿಯಿಡೀ ನಿದ್ದೆಯೇ ಹತ್ತಲಿಲ್ಲ ಕಣ್ಣಿಗೆ. ಸುಂದರ ಸುಮಧುರ ಕನಸುಗಳು ಕಣ್ಮುಂದೆ ದಿಬ್ಬಣದಂತೆ ಹಾದು ಹೋಗುತ್ತಿದ್ದವು. ಮಧ್ಯದಲ್ಲಿ ಒಮ್ಮೆ ಬಸ್ ನಿಂತಿತು. ಬಿಸಿ ಬಿಸಿ ಚಹಾ ಸೇವನೆಗೊಮ್ಮೆ ಇಳಿದಾಗಲೂ ಅದೇ ಹುಡುಗಿ ಮತ್ತೊಮ್ಮೆ ಎದುರಾದಳು. ಇಲ್ಲ ಇವಳನ್ನು ನಾನು ದಿನಾ ನೋಡುವಂತಾಗಬೇಕೆಂದು ಅವತ್ತೇ ನಿರ್ಧರಿಸಿಬಿಟ್ಟೆ. ಅವರು ನಮ್ಮವರೇ ಎಂಬುದು ಅವರ ಮಾತುಗಳಲ್ಲಿ ಸ್ಪಷ್ಟವಾಗುತ್ತಿದ್ದುದರಿಂದ ಅವರೆಲ್ಲಿಯವರು ಎಲ್ಲಿ ಇಳಿಯುತ್ತಾರೆ ಎಂಬುದನ್ನು ತಿಳಿಯುವುದಷ್ಟೇ ಬಾಕಿ ಇತ್ತು. ಬೆಳಗಾಗುವ ಹೊತ್ತಿಗೆ ಹುಡುಗಿಯ ಚಪ್ಪಲಿ ನಾನು ಮಲಗಿದ ಸೀಟಿನ ಅಡಿಭಾಗಕ್ಕೇ ಬಂದು ಬಿದ್ದುದರಿಂದ ಅವರ ಜೊತೆ ಮಾತನಾಡುವ ಯೋಗವೂ ಒದಗಿಬಂತು. ಮಬ್ಬುಗತ್ತಲಿನಲ್ಲೇ ಅವರ ಜೊತೆ ನಾಲ್ಕಾರು ಮಾತಾಡಿ ಮೊದಲ ಸ್ನೇಹ ಸಂಪಾದಿಸಿದೆ. ಅವರು ಇಳಿಯುವ ಸ್ಥಳ ಮತ್ತು ಹೋಗಬೇಕಾದ ಸ್ಥಳಕ್ಕೆ ಮಾಹಿತಿ ನೀಡಿದೆ. ಆಕೆ thanks ಎಂದು ಹೇಳಿದಾಗ ಆದ ಖುಷಿಯನ್ನು ಮತ್ತೆ ಪದಗಳಲ್ಲಿ ವರ್ಣಿಸುವುದಕ್ಕೆ ನನಗೆ ಬರುವುದಿಲ್ಲ.

ಊರಿಗೆ ಬಂದವಳು ನೀರಿಗೆ ಬರಲಾರಳೇ...ಎಂದ ಹಾಗೆ....ರಾಜಧಾನಿಯಲ್ಲಿ ಅವಳನ್ನು ಹುಡುಕುವುದು ನನಗೇನೂ ಕಷ್ಟವಿರಲಿಲ್ಲ. ಯಾಕೆಂದರೆ ಅದಾಗಲೇ ಬಹಳ ವರ್ಷಗಳಾಗಿತ್ತು ನಾನು ಬೆಂಗಳೂರು ಸೇರಿ. ಅವಳ ಹೆಸರು ಹೇಳಿ ಅಮ್ಮ ಬೈ ಎಂದಾಗಲೇ ನನ್ನೆದೆಯಲ್ಲಿ ಅವಳ ಹೆಸರನ್ನು ಬರೆದು ಆಗಿ ಹೋಗಿತ್ತು ನನಗೆ. ಮೊದಲ ಹುಡುಕಾಟ Facebook ನಲ್ಲಿ. ಸಿಕ್ಕಿ ಆಯ್ತು. ಅದಾಗಲೇ friend request ಕಳುಹಿಸಿದೆ. Accepted. Messenger ನಲ್ಲಿ message ಮಾಡಿದೆ. Reply ಕೂಡ ಬಂತು. ಔಪಚಾರಿಕ ಮಾತುಗಳಲ್ಲೇ ಅವಳು ಕೆಲಸ ಮಾಡುವ ಸ್ಥಳ. ಕೆಲಸದ ವಿವರ ಎಲ್ಲವನ್ನೂ ಸಂಪಾದಿಸಿದೆ. ನಾನೂ ತಕ್ಷಣಕ್ಕೆ ಅವಳ ನಂ ಕೇಳುವ ಗೋಜಿಗೆ ಹೋಗಲಿಲ್ಲ. ತಿಂಗಳು ಕಳೆಯಿತು. ಒಂದು ದಿನ ಮಾಲಿನಲ್ಲಿ ಮತ್ತೆ ಭೇಟಿಯಾದಳು. ಈ ಬಾರಿ ತಡಮಾಡಲೇ ಇಲ್ಲ. ಮಾತಾಡಿ ಫೋನ್ ನಂ ಕೂಡ ಸಂಪಾದಿಸಿದೆ.

ನನಗೂ ಸೌಜನ್ಯ ಮೀರುವ ಅಭ್ಯಾಸವಿಲ್ಲ. ಹಾಗಂತ ಈ ಹುಡುಗಿಯನ್ನು ಮದುವೆ ಆಗಲೇ ಬೇಕೆಂದು ಮನಸ್ಸು ಮಾಡಿಬಿಟ್ಟೆ. ದಿನಾ ನಮ್ಮ ಮನದ ಮಾತುಗಳು share ಆಗುತ್ತಿದ್ದವು. ಒಂದು ದಿನ ಯಾಕೋ ತಡೆಯಲಾಗಲಿಲ್ಲ. ನನಗೆ ಸುತ್ತು ಬಳಸಿ ಹೇಳಿ ಅಭ್ಯಾಸವಿಲ್ಲ I love you ಅಂದು message ಕಳುಹಿಸಿಯೇ ಬಿಟ್ಟೆ. ಮರಳಿ reply ಬರಲೇ ಇಲ್ಲ ಅವಳಿಂದ.

ತಲೆ‌ ಕೆಟ್ಟು ಹೋಯ್ತು. ಎರಡು ದಿನವಾದರೂ message ಇಲ್ಲ. ಅವಳಿದು. No status. ತಪ್ಪು ಮಾಡಿಬಿಟ್ಟೆ ಅನ್ನಿಸಿತು. ಪ್ರೀತಿಯ ನೆಪದಲ್ಲಿ ನೋವು ಕೊಡುವುದು ನನ್ನ character ಅಲ್ಲ ಅನ್ನಿಸಿಬಿಟ್ಟಿತು. ಸುಮ್ಮನಾಗಿಬಿಟ್ಟೆ.

ಅವತ್ತೊಂದಿನ ರಾಜಧಾನಿಯಲ್ಲಿ ನಮ್ಮವರ ಸಮ್ಮೇಳನವೊಂದಿತ್ತು. ಊರಿನಿಂದ ನಮ್ಮ ತಂದೆ ತಾಯಿಯವರು ಬಂದಿದ್ದರು. ದೇವರಿಗೆ ನಮ್ಮನ್ನು ಜೋಡಿಸಬೇಕೆಂಬ ಮನಸ್ಸಿತ್ತು ಅಂತ ಅನ್ನಿಸುತ್ತದೆ. ಅದೇ ಸಮ್ಮೇಳನದಲ್ಲಿ ಅವಳೂ ಅವಳ ತಂದೆ ತಾಯಿಗಳೂ ನಮ್ಮ ಎದುರಾದರು. ಅವತ್ತು ನನಗೆ ಸಮುದಾಯದ ಯುವರತ್ನ ಪ್ರಶಸ್ತಿ ಪ್ರದಾನ ಆಗುವುದಿತ್ತು. ಆಹಾ! ಅದೇ ಸಮಾರಂಭದ ಕೊನೆಯಲ್ಲಿ ಹುಡುಗಿಯ ಅಪ್ಪ ಅಮ್ಮ ಬಂದು ನಮ್ಮ ತಂದೆಯವರಿಗೆ ಹುಡುಗಿಯ ಜಾತಕ ಕೊಟ್ಟು ನಿಮ್ಮ ಮಗನಿಗೆ ನಮ್ಮ ಹುಡುಗಿಯ ಮೇಲೆ ಮನಸ್ಸಿದೆಯಂತೆ. ನಮಗೂ ಒಬ್ಬಳೇ ಮಗಳು. ನಿಮ್ಮ ಮನೆಗೆ ಸೊಸೆಯಾಗಿ ಸ್ವೀಕರಿಸುವುದಾದರೆ ಅದು ನಮ್ಮ ಭಾಗ್ಯವೇ ಸರಿ ಎಂದರಂತೆ.

ಸಮಾರಂಭ ಮುಗಿದ ತಕ್ಷಣ ಅವಳೇ ನನ್ನೆಡೆಗೆ ಬಂದು ನಿಮ್ಮ ಮಾತುಗಳಿಗೆ ಅಂದು reply ಮಾಡಿರಲಿಲ್ಲ. I love you too...💕 ನಿಮ್ಮ ಗುಣ ನನಗೆ ಬಹಳ ಇಷ್ಟವಾಯಿತು..ಎನ್ನಬೇಕೆ.

ನಾ ಬಯಸಿದವಳೇ ನನ್ನವಳಾದಳು. ಪ್ರಪಂಚವನ್ನೇ ಸೂರೆಗೊಳ್ಳುವ ಪ್ರೀತಿ ನಮ್ಮದು. ಸಾರ್ವಜನಿಕ ಅಶ್ಲೀಲತೆಗೆ ನಮ್ಮಲ್ಲಿ ಅವಕಾಶವಿಲ್ಲ. ಸಂಸಾರದೊಳಗೆ ಅಪಸ್ವರವೂ ನಮ್ಮಲ್ಲಿಲ್ಲ. ನಾವೂ ಖುಷಿ ಖುಷಿಯಾಗಿದ್ದೇವೆ. ಬೆಂಗಳೂರಿನಿಂದ ಒಬ್ಬನೇ ಊರಿಗೆ ಹೋಗಿ ಬರುತ್ತಿದ್ದೆ. ಈಗ double seat book ಮಾಡುತ್ತೇನೆ. ಊರಿಗೆ ಹೋದರೆ ಊರೇ ರಾಜಧಾನಿ ನಮಗೆ. ಸ್ನೇಹಿತರಿಗೂ ಸಹಾಯ ಮಾಡುತ್ತಾ ಎಲ್ಲರೊಳಗೊಂದಾಗಿ ಬದುಕುತ್ತಿದ್ದೇವೆ.

ಪ್ರೀತಿ ಹುಟ್ಟುವ ಜಾಗ ಇದೇ ಎಂದು ಹೇಳಲಿಕ್ಕಾಗದು. ಪ್ರೀತಿ ಹುಟ್ಟುವ ಜಾಗ ಮುಖ್ಯವಲ್ಲ. ಅದನ್ನು ಅಂತ್ಯವಾಗದಂತೆ ಕಾಪಾಡಿಕೊಳ್ಳುವುದೇ ಮುಖ್ಯ. ಪ್ರೀತಿಯ ಹಿಂದೆಯೇ ಹೋಗಿ ಜೀವನ ಹಾಳುಮಾಡಿಕೊಳ್ಳುವುದಲ್ಲ. ಪ್ರೀತಿಯು ಸತ್ಯವಾಗಿದ್ದರೆ ಅದೇ ನಮ್ಮ ಹಿಂದೆ ಬರುತ್ತದೆ.


✍ಸಂದೀಪ ಎಸ್ ಭಟ್ಟ

11 views0 comments

Comments


bottom of page