top of page

ಪತ್ರಿಕಾರಂಗದ ನನ್ನ ೬೦ ವರ್ಷಗಳು ಭಾಗ -೧೬

ಪತ್ರಕರ್ತರು ಸಮಾಜಮುಖಿಯಾಗಿರಬೇಕು;

ಅವರ ದೃಷ್ಟಿ ವಿಶಾಲವಾಗಿರಬೇಕು

****"****

ಪತ್ರಕರ್ತರು ಸಮಾಜದ Watch Dog - ಕಾವಲುನಾಯಿಯಾಗಿರಬೇಕು ಹೊರತು ಭ್ರಷ್ಟ ರಾಜಕಾರಣಿಗಳ ಹಿಂದೆ ಬಾಲ ಅಲ್ಲಾಡಿಸುವ ಬೀದಿನಾಯಿಯಾಗಿರಬಾರದು. ಸದಾ ಸಮಾಜದ ಆಗುಹೋಗುಗಳ ಕಡೆಗೆ ಗಮನವಿರಬೇಕು. ದೃಷ್ಟಿ ಸೂಕ್ಷ್ಮವೂ, ವಿಶಾಲವೂ ಆಗಿರಬೇಕು. ಆದಷ್ಟರಮಟ್ಟಿಗೆ ಪಕ್ಷಾತೀತವೂ ಆಗಿರಬೇಕು.

ಘಟನೆ -೧

***

೧೯೮೦-೮೧ ರ ಸಮಯ. ನಾನು ಹುಬ್ಬಳ್ಳಿಯ ದೀನವಾಣಿ ಎಂಬ ವಾರಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡುತ್ತಿದ್ದೆ. ( ಅದು ಒಬ್ಬ ಟಿಂಬರ್ ಮರ್ಚೆಂಟ್ ಮಾಲಕತ್ವದ್ದಾಗಿತ್ತು.). ಒಂದು ದಿನ ಬೆಳಿಗ್ಗೆ ವಿದ್ಯಾನಗರದಲ್ಲಿನ ಪತ್ರಿಕಾ ಕಚೇರಿಗೆ ಬಂದು ಕುಳಿತು ಅಂದಿನ ದಿನಪತ್ರಿಕೆಗಳ ಮೇಲೆ ಕಣ್ಣು ಹರಿಸುತ್ತಿದ್ದಾಗ ಪ್ರಜಾವಾಣಿಯ ಹಿಂಬದಿ ಒಂದು ಜಾಹೀರಾತು ಕಂಡಿತು. ಚಿಕ್ಕಮಗಳೂರು ಹತ್ತಿರದ ಒಂದು ಊರಿನಲ್ಲಿ ದೊಡ್ಡ ದಿನಪತ್ರಿಕೆಯೊಂದನ್ನು ಪ್ರಾರಂಭಿಸಲಿರುವದಾಗಿಯೂ ಅದಕ್ಕಾಗಿ ‌ಸಂಪಾದಕ, ಉಪಸಂಪಾದಕ, ವರದಿಗಾರ ಮೊದಲಾದ ಏಳೆಂಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರು. ಸಹಜವಾಗಿಯೇ ಅಂತಹ ಜಾಹೀರಾತು ನೋಡಿದಾಗ ನಮ್ಮಂಥವರು ಒಂದು ಅರ್ಜಿ ಗುಜರಾಯಿಸುವದುಂಟು.

ಆದರೆ ಆ ಜಾಹೀರಾತನ್ನು ಮತ್ತೆ ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ಕೆಲವು ಸಂದೇಹಗಳು ತಲೆದೋರಿದವು. ಅದರಲ್ಲಿ ಏನೋ ಬೇರೆ ಉದ್ದೇಶ ಇರಬಹುದೆನಿಸಿತು. ನಾನು ಸ್ವಲ್ಪ ಹೊತ್ತು ಯೋಚಿಸಿ ನಂತರ ಒಂದು ಕೆಲಸ ಮಾಡಿದೆ. ಚಿಕ್ಕಮಗಳೂರಿನ ಜಿಲ್ಲಾ ಪೋಲೀಸ್ ಅಧಿಕಾರಿಗೆ ಆ ಪತ್ರಿಕಾ ಕಟ್ಟಿಂಗ್ ಸಹಿತ ಒಂದು ಪತ್ರ ಬರೆದು ಇಂತಿಂತಹ ಕಾರಣಗಳಿಗಾಗಿ‌ ನನಗೆ ಸಂದೇಹವಿದ್ದು ನೀವೂ ಪರಿಶೀಲಿಸಿ ನನ್ನ ಸಂದೇಹ ನಿಜವಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಬಹುದೆಂದು ತಿಳಿಸಿದೆ. ಆ ಮೇಲೆ ನಾನು ಅದನ್ನು ಮರೆತುಬಿಟ್ಟಿದ್ದೆ.

ಆದರೆ ಸುಮಾರು ಹದಿನೈದು ದಿವಸ ಬಿಟ್ಟು ಚಿಕ್ಕಮಗಳೂರಿನ ಆಗಿನ ಎಸ್. ಪಿ. ಸುಭಾಸ ಭರಣಿಯವರಿಂದ ಒಂದು ಟೈಪ್ಡ್ ಪತ್ರ ಬಂತು. ಅದರಲ್ಲಿ ಅವರು " ನಿಮ್ಮ ಪತ್ರ ತಲುಪಿದ ನಂತರ ನಾನು ಪರಿಶೀಲನೆಗಾಗಿ ಅಧಿಕಾರಿಗಳನ್ನು ನೇಮಿಸಿದೆ. ನೀವು ಊಹಿಸಿದಂತೆ ಅದರಲ್ಲಿ ಬೇರೆ ಉದ್ದೇಶವಿದ್ದುದು ಕಂಡುಬಂದಿದ್ದರಿಂದ ಸಂಬಂಧಪಟ್ಟ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ವಿಚಾರಣೆ ನಡೆದಿದೆ. " ಎಂದು ಬರೆದಿದ್ದಲ್ಲದೆ ಇದನ್ನು ಪೋಲೀಸರ ಗಮನಕ್ಕೆ ತಂದ ಬಗ್ಗೆ ಮೆಚ್ಚುಗೆ ಮತ್ತು ಕೃತಜ್ಞತೆ ಅರ್ಪಿಸಿದ್ದರು. ಆ ಪತ್ರವನ್ನು ನಾನು ಇಂದಿಗೂ ಕಾದಿರಿಸಿದ್ದೇನೆ. ಅದು ಪತ್ರಕರ್ತನಾದ ನನಗೆ ಒಂದು ಪ್ರಶಂಸಾಪತ್ರವೇ ಆಗಿದೆ. ( ನಾಳೆ ಅದನ್ನು ಪ್ರಕಟಿಸುತ್ತೇನೆ)

ನನಗೆ ಸಂಶಯ ಬರಲು ಎರಡು ಮೂರು ಕಾರಣಗಳಿದ್ದವು. ಆ ದಿನಪತ್ರಿಕೆ ಹೊರಡಿಸಲುದ್ದೇಶಿಸಿದ ಸ್ಥಳ ಚಿಕ್ಕಮಗಳೂರು ಜಿಲ್ಲೆಯ ಒಂದು ಸಣ್ಣ ಊರಾಗಿತ್ತು. ಅಷ್ಟು ದೊಡ್ಡ ಪ್ರಮಾಣದ ಪತ್ರಿಕೆ ಹೊರತರಲು ಸೂಕ್ತ ಪ್ರದೇಶವಾಗಿರಲಿಲ್ಲ. ಎರಡನೆಯದಾಗಿ ಅರ್ಜಿದಾರರು ತಲಾ ೨೫ ರೂ. ಕಳಿಸುವಂತೆ ತಿಳಿಸಲಾಗಿತ್ತು. ಆ ಕಾಲದಲ್ಲಿ ೨೫ ರೂ. ಸಹ ಬಹಳ ದೊಡ್ಡ ಮೊತ್ತವೇ. ನಿರುದ್ಯೋಗಿಗಳು ಕೆಲಸದ ಆಸೆಗೆ ಹಣ ಕಳಿಸುತ್ತಾರೆ. ಹಾಗೆ ಹಣ ಸಂಗ್ರಹಿಸುವ ವಿಚಾರವೂ ಅವರಿಗೆ ಇರಲು ಸಾಧ್ಯ ಎಂಬುದು ನನ್ನ ವಿಚಾರವಾಗಿತ್ತು. ಎಸ್. ಪಿ. ಯವರ ಪತ್ರ ನನ್ನ ಆ ವಿಚಾರ ಸರಿ ಎನ್ನುವದಕ್ಕೆ ಸಾಕ್ಷಿಯಾಗಿತ್ತು.


ಘಟನೆ -೨

ನಾನಾಗ ಬೆಳಗಾವಿಯ ನಾಡೋಜ ದಿನಪತ್ರಿಕೆಯಲ್ಲಿದ್ದೆ. ಒಮ್ಮೆ ಎಲ್ಲೋ ಹೋಗಿ ಬರುವಾಗ ಬೆಳಗಾವಿ - ಹುಬ್ಬಳ್ಳಿ ದಾರಿಯಲ್ಲಿ ಸಿಗುವ ಎಂ. ಕೆ. ಹುಬ್ಬಳ್ಳಿ ( ಮುಗುಟಖಾನ ಹುಬ್ಬಳ್ಳಿ) ಹತ್ತಿರ ಎಡಕ್ಕೆ ಒಂದು ಖಾಲಿ ಜಾಗದಲ್ಲಿದ್ದ ಮಹಾತ್ಮಾ ಗಾಂಧೀಜಿಯವರ ಚಿತಾಭಸ್ಮವಿಟ್ಟಿದ್ದ ಒಂದು ಸಣ್ಣ ಸಿಮೆಂಟ್ ಸ್ಮಾರಕವನ್ನು ಬುಲ್ ಡೋಜರ್ ಮೂಲಕ ಒತ್ತಿ ರಸ್ತೆ ಬದಿಗೆ ಒಗೆದದ್ದು ಬಸ್ಸಿನಲ್ಲಿದ್ದ ನನ್ನ ಗಮನಕ್ಕೆ ಬಂತು. ಗಾಂಧೀಜಿ ನಿಧನರಾದ ನಂತರ ಅವರ ಚಿತಾಭಸ್ಮವನ್ನು ಹಲವೆಡೆ ಒಯ್ಯಲಾದಂತೆ ಬೆಳಗಾವಿಗೂ‌ ತರಲಾಗಿತ್ತು. ಅದನ್ನು ನೋಡಿ ನನಗೆ ಕಸಿವಿಸಿಯಾಯಿತು.

ನಾನು ಬೆಳಗಾವಿಗೆ ಬಂದವನೇ ಸಂಪಾದಕರಾಗಿದ್ದ ರಾಘವೇಂದ್ರ ಜೋಶಿಯವರಿಗೆ ಈ ವಿಷಯ ತಿಳಿಸಿದೆ. ಆಗ ಅವರು ತಕ್ಷಣ ತಮ್ಮ ಛಾಯಾಗ್ರಾಹಕನನ್ನು ಕರೆದುಕೊಂಡು ಅಲ್ಲಿಗೆ ಹೋಗುಲಿ ವಿವರ ವರದಿ ಮಾಡಿ ಎಂದರು. ಅದೇರೀತಿ ನಾನು ಫೋಟೋಸಹಿತ ವರದಿ ಮಾಡಿದೆ. ಆಗ ಅದನ್ನು ಸಂಯುಕ್ತಕರ್ನಾಟಕ ಸಹಿತ ಇತರ ಪತ್ರಿಕೆಗಳೂ ವರದಿ ಮಾಡಿದ್ದರಿಂದ ಜಿಲ್ಲಾಧಿಕಾರಿಗಳು‌ ಗಡಬಡಿಸಿ ತಕ್ಷಣ ತಮ್ಮ ಅಧಿಕಾರಿಗಳನ್ನು ಎಮ್ ಕೆ ಹುಬ್ಬಳ್ಳಿಗೆ ಕಳಿಸಿ ಪರಿಶೀಲಿಸಿದರು. ಯಾರೋ ಒಬ್ಬರು ಆ ಖಾಲಿ ಜಾಗವನ್ನು ಖರೀದಿಸಿ ಅಲ್ಲಿ ಏನೋ ಬೇರೆ ಕಟ್ಟಡ ಕಟ್ಟಲು ತಯಾರಾಗಿ ಚಿತಾಭಸ್ಮವಿದ್ದ ಆ ಪುಟ್ಟ ಸ್ಮಾರಕವನ್ನೂ ಗುಡಿಸಿ ಸ್ವಚ್ಛ ಮಾಡಿದ್ದ. ಜಿಲ್ಲಾಡಳಿತ ಅದಕ್ಕೆ ತಡೆ ತಂದು ಪುನಃ ಅಲ್ಲಿ ಆ ಚಿತಾಭಸ್ಮ ಕರಂಡಕ ಮರಳಿ ಸ್ಥಾಪಿಸಿ ಅದರ ಮೇಲೆ ಈಗ ಕಾಣುವಂತಹ ದೊಡ್ಡ ಸ್ಮಾರಕವನ್ನು ನಿರ್ಮಿಸಿತು. ಇದಕ್ಕೆ ನನ್ನ ವರದಿಯೇ ಕಾರಣವಾಯಿತೆಂಬ ಹೆಮ್ಮೆ ನನ್ನದು. ಸಂಪಾದಕ ರಾಘವೇಂದ್ರ ಜೋಶಿಯವರು ಒಂದು ಕಾರ್ಯಕ್ರಮದ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿಯೂ ಇದನ್ನು ಪ್ರಸ್ತಾಪಿಸಿ ಪತ್ರಿಕಾ ವರದಿಗಾರರ ದೃಷ್ಟಿ ಹೀಗಿರಬೇಕೆಂದು ಪ್ರಶಂಸಿಸಿದ್ದರು.

ಇಂತಹ ಹಲವು ಸಂದರ್ಭಗಳು ನನ್ನ ಪತ್ರಿಕಾ ಜೀವನದಲ್ಲಿ ನಡೆದದ್ದುಂಟು. ಅಂದರೆ ಪತ್ರಕರ್ತ ಸದಾ ಜಾಗೃತನಾಗಿರಬೇಕು. ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡಬೇಕು. ‌ಅದರಿಂದ ಜನಸಮೂಹಕ್ಕೆ ಪ್ರಯೋಜನವಾಗಬೇಕು. ಒಂದು ಪ್ರಭಾವಿ ಮಾಧ್ಯಮ ನಮ್ಮ ಕೈಯಲ್ಲಿರುವಾಗ ನಾವು ಅದನ್ನು ಪರಿಣಾಮಕಾರಿಯಾಗಿ ಸಮಾಜಹಿತಕ್ಕೆ ಪೂರಕವಾಗಿ ಬಳಸುವದು ಬಹಳ ಮುಖ್ಯ.

- ಎಲ್. ಎಸ್. ಶಾಸ್ತ್ರಿ

3 views0 comments

Comments


bottom of page