top of page

ದೇವರು ಬಂದು ಸಹಾಯ ನೀಡಿದಾಗ ಪ್ರಶ್ನೆ ಕೇಳಬಾರದಂತೆ!

ಒಮ್ಮೆ ವಯಸ್ಸಾದ  ಮಹಿಳೆಯೊಬ್ಬಳು ತನ್ನ ಗಂಡನಿಗೆ ತುರ್ತಾಗಿ ಔಷಧ  ತರಲು ದೂರದ ಮಾರುಕಟ್ಟೆಗೆ ಕಾರು ಚಲಾಯಿಸಿಕೊಂಡು ಹೋಗಿದ್ದಳು. ಔಷಧ ಕೊಂಡು ತಿರುಗಿ ಕಾರಿನತ್ತ ಬಂದಾಗ  ಅವಳಿಗೆ  ತಾನು  ಮರೆವಿನಲ್ಲಿ ಕಾರಿನ ಚಾವಿಯನ್ನು ತೆಗೆಯದೆ ಅಲ್ಲೇ ಬಿಟ್ಟು ಬಾಗಿಲು ಹಾಕಿಕೊಂಡು  ಬಂದುದು  ನೆನಪಾಗುತ್ತದೆ. ಕಾರು ಲಾಕ್ ಆಗಿತ್ತು. ಕಂಗಾಲಾದಳು. ತನ್ನ ತಲೆಗೆ  ಚುಚ್ಚಿಕೊಂಡಿದ್ದ ಕೂದಲು ಪಿನ್ನನ್ನು ತೆಗೆದು ಅದರಿಂದ  ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದಳು. ಆಗಲಿಲ್ಲ. ಹತಾಶಳಾಗಿ, " ಓ ದೇವರೇ, ನನಗೆ ಸಹಾಯ ಮಾಡು " ಎಂದು ಬೇಡಿಕೊಂಡಳು.

ಸುತ್ತಲೂ  ನೋಡಿದಳು. ಮೂಲೆಯೊಂದರಲ್ಲಿ ಅವಳಿಗೆ ಒಂದು ಮುರುಕು ಕೋಟಿನ  ಹ್ಯಾಂಗರು ಕಂಡಿತು. ಓಡಿ ಹೋಗಿ ಅದನ್ನು ಹೆಕ್ಕಿ ತಂದು  ತನ್ನ ಕಾರಿನ ಬಾಗಿಲು ತೆರೆಯುವ ಸಾಹಸ ಮಾಡಿದಳು. ಯಶ ಸಿಗಲಿಲ್ಲ. ತೀರಾ ಕಂಗಾಲಾಗಿದ್ದ ಅವಳು " ಓ ಭಗವಂತಾ, ಅಲ್ಲಿ ನನ್ನ ಗಂಡ ಔಷಧಿಗಾಗಿ ಕಾಯುತ್ತಿದ್ದಾನೆ, ನನ್ನ ಸಹಾಯಕ್ಕೆ ಕಾರಿನ ಬಾಗಿಲು ತೆರೆಯುವ ಯಾರನ್ನಾದರೂ ಕಳಿಸಿಕೊಡಪ್ಪ" ಎಂದು ಆರ್ತಳಾಗಿ  ಮೊರೆಹೋದಳು. ಮುಂದೆ ಐದೇ  ನಿಮಿಷಗಳಲ್ಲಿ  ಎದುರಿನಿಂದ  ಮಧ್ಯ ವಯಸ್ಸಿನ ಕುರುಚಲು ಗಡ್ಡದ ಕೊಳಕು ಪ್ಯಾಂಟು ಮತ್ತು ಕೋಟು ತೊಟ್ಟು ಹಳೆಯ  ಮೋಟಾರು ಬೈಕಿನಲ್ಲಿ ಬಂದಿದ್ದ. " ನಾನು ನಿಮಗೇನಾದರೂ ಸಹಾಯ ಮಾಡಬಲ್ಲೆನೇ ಮ್ಯಾಡಮ್" ಎಂದು ಕೇಳಿದ. " ಹಾಂ ಹೌದೌದು, ನನ್ನ ಕಾರು ಒಳಗಿನಿಂದ ಲಾಕ್ ಆಗಿದೆ, ನಾನು ತುರ್ತಾಗಿ ಮನೆಗೆ  ಹೋಗಬೇಕಾಗಿದೆ. ಈ ಮುರುಕು ಹ್ಯಾಂಗರಿನಿಂದ ಬಾಗಿಲು ತೆರೆದು ಕೊಡಬಲ್ಲೆಯಾ ?" ಎಂದಳು. " ಒಹೋ ಅದಕ್ಕೇನು" ಎನ್ನುತ್ತ ಆತ  ಕಾರಿನತ್ತ ಹೋಗಿ ತತ್ಕ್ಷಣ ಬಾಗಿಲು ತೆರೆದುಕೊಟ್ಟ. ಮಹಿಳೆಗೆ ಪರಮಾನಂದವಾಗಿ " ಓ ದೇವರೇ ನೀನು ಕರುಣಾಮಯಿ. ನನ್ನ ಸಹಾಯಕ್ಕಾಗಿ   ಇಂತಹ ಸಹೃದಯಿಯನ್ನು ಕಳುಹಿಸಿಕೊಟ್ಟೆ" ಎನ್ನುತ್ತ,, ಅವನನ್ನು ಆಲಂಗಿಸಿ ಮುತ್ತಿಕ್ಕಿದಳು.

ಅವನಿಗೆ ಮುಜುಗರವಾಗಿ ಅವಳಿಂದ ಬಿಡಿಸಿಕೊಂಡು,"  ಮೇಡಂ, ನಾನು ನೀವು ತಿಳಿದ   ರೀತಿಯಲ್ಲಿ ಒಳ್ಳೆಯವನಲ್ಲ. ನಾನೊಬ್ಬ ಕಾರು ಕಳ್ಳ. ಆಪಾದನೆಯ ಮೇಲೆ ಶಿಕ್ಷೆ ಅನುಭವಿಸಿ ಈಗಷ್ಟೇ ಕಾರಾಗ್ರಹದಿಂದ ಬಿಡುಗಡೆಗೊಂಡು ಬರುತ್ತಿದ್ದೇನೆ" ಎಂದ.

ಸ್ವಲ್ಪವೂ ವಿಚಲಿತ ಆಗದ ಮಹಿಳೆ " ಓ ದೇವರೇ, ನೀನು ಅತ್ಯಂತ ಕರುಣಾಮಯಿ, ನನ್ನ ಕಾರಿನ ಬೀಗ ತೆರೆಯಲು ಅತ್ಯಂತ ಕಸುಬುದಾರನನ್ನೇ ಕಳಿಸಿದೆ" ಎನ್ನುತ್ತ,, ಅವನನ್ನು ಇನ್ನೂ ಬಲವಾಗಿ ತಬ್ಬಿ   ಮುತ್ತಿನ ಮಳೆಗರೆದಳು.                                       

                                                                                                                                                              [ಇಂಗ್ಲೀಷ್ ನಲ್ಲಿ ಹಿಂದೊಮ್ಮೆ ಎಲ್ಲಿಯೋ ಓದಿದ್ದು. ಅರ್ಥಪೂರ್ಣ ಅನಿಸಿತು. ಅದರ ಭಾವವನ್ನು ಕನ್ನಡದಲ್ಲಿ ಹಂಚಿಕೊಂಡಿದ್ದೇನೆ - ಲೇಖಕ ]       

 








ಸುರೇಶ ಹೆಗ್ಡೆ, ಹುಬ್ಬಳ್ಳಿ                                                                     

42 views0 comments

Comments


bottom of page