top of page

ದಾರಿಯಲಿ ನಿಂತವರಿಗೆ

*ದಾರಿಯಲೆ ನಿಂತವರಿಗೆ*

ದಾರಿಗಳಿವೆ ಇಲ್ಲಿ:ಬಾಳಿನಲಿ

ಒಂದೇ ಅಲ್ಲ,ನೂರಾರು,

ಇರುವ ದಾರಿಗಳನೂ ಹುಡುಕುವುದೆ, ಸುಮ್ಮನೆ!?

ಮೀನಿಗೆ ದಾರಿಯನು ಯಾರು ಕಾಣಿಸಿದವರು?

ಹಾರುತ್ತಿಲ್ಲವೆ ಹಕ್ಕಿ ಗಗನದಲಿ ಸ್ವಚ್ಚಂದ?

ಇರುವೆಯೂ ಹರಿಯುತ್ತದೆ ನೆಲದ ತುಂಬೆಲ್ಲ,

ನಡೆಯುವ,ಹರಿಯುವ,ಶಕ್ತಿ ಇರುವಷ್ಟೇ ಹಾರುವ--

--ನೀನೇಕೆ ತೆವಳುತಿಹೆ ಇಂದಿಗೂ ಇಲ್ಲಿ!?

ದಾರಿ ತೋರುವೆವೆಂಬ ನುಡಿಗಳನೆ ನಂಬಿ?

ಮೈಯ ಕಣಕಣದಲ್ಲಿ ಕಸುವಿಹುದು ಅಪಾರ,

ಮೊದಲದನು ಅರಿತುಕೋ ನಿನ್ನ ತಾಕತ್ತು,

ನಡೆ,ಓಡು,ಈಜು,ಹಾರು

ನಿನ್ನ ಅನ್ನದ ಮಾರ್ಗ ಹುಡುಕಿಕೋ ತಮ್ಮಾ.

ಕಣ್ಣೆದುರು ತೋರಿಸುವ ಎಂಜಲಿಗೆ ಸುರಿಸದಿರು:

ಕಟವಾಯಿ ತುಂಬೆಲ್ಲ ಜೊಲ್ಲಿನೊರತೆ,

ನಿನ್ನ ದಾರಿಗೆ ನೀನೇ ಗುರು,ನಡೆವವನು ನೀನೇ,

ಅರಿತುಕೋ ಮೊದಲಿದನು ತಡಮಾಡದೆ.

ನಿನಗೆ ನೀನೇ ಮೊದಲು ಗುರುವಾಗು--

--ತೆರೆದುಕೊಳ್ಳಲು ದಾರಿ ಸಾವಿರಾರು.

*ಗಣಪತಿ ಗೌಡ,ಹೊನ್ನಳ್ಳಿ*

*ಅಂಕೋಲಾ*

5 views0 comments

©Alochane.com 

bottom of page