top of page

ದಲಿತ ಆದಿ ಕವಿ ಪ್ರೊ.ಸಿದ್ಧಲಿಂಗಯ್ಯ

ದಲಿತ ಆದಿ ಕವಿಯೆಂದೇ ಖ್ಯಾತನಾಮರಾದ ಪ್ರೊ.ಸಿದ್ಧಲಿಂಗಯ್ಯ ಅವರು ವಿಧಿವಶರಾದ ಈ ಸಂದರ್ಭ ಸಾಹಿತ್ಯ ಲೋಕದಲ್ಲಿ ನಿರ್ವಾತ ಸೃಷ್ಟಿಯಾಗಿದೆ.

"ಇಕ್ಕ್ರಲಾ ಒದಿರ್ಲಾ ಈ ನನ್ ಮಕ್ಳ ಚರ್ಮಾ ಎಬ್ಬರಲಾ"ಎಂಬ ಬೈಗುಳಗಳ ಮೊದಲಿಕೆಯಿಂದಲೇ ಕಾವ್ಯ ಕಟ್ಟಿದ ಡಾ.ಸಿದ್ಧಲಿಂಗಯ್ಯನವರು ಅನ್ಯಾಯದ ವಿರುದ್ಧ ನಿಂತ ನೆಲದಲ್ಲಿ ಬಾಂಬ್ ನಂತೆ ಸ್ಫೋಟಗೊಂಡವರು.ಶೋಷಿತರ ಧ್ವನಿಯಾದ ಅವರು ರೈತಪರ ಹೋರಾಟ,ಕೃಷಿ ಕಾರ್ಮಿಕರ ಪರ ಹೋರಾಟ,ಪೌರಕಾರ್ಮಿಕರ ಪರ ಹೋರಾಟದಲ್ಲಿ ತಾವೂ ಒಬ್ಬ ಹೋರಾಟಗಾರರಾಗಿ,ಆ ಹೋರಾಟಗಳಿಗೆ ಸಮಯೋಚಿತ-ಅಗತ್ಯ ಹಾಡುಗಳನ್ನು ಬರೆಯುತ್ತ ಕವಿಯಾಗಿ ಬೆಳೆದವರು. ಆ ಮೂಲಕ ಎಪ್ಪತರ ದಶಕದ ಕನ್ನಡ ಕಾವ್ಯಕ್ಕೆ ಸ್ಫೋಟಕ ಶಕ್ತಿ ತುಂಬಿದವರು ಮಾತ್ರವಲ್ಲ,"ದಲಿತರು ಬಂದರು ದಾರಿ ಬಿಡಿ" ಎಂದು ಕೇಳುತ್ತಲೇ ಹಳ್ಳಿಯ ಕಾಲುದಾರಿಯಿಂದ ರಾಜಮಾರ್ಗ ಕೂಡಿಕೊಂಡು ಬೆಂಗಳೂರಿನ ವಿದ್ಯಾಸೌಧದಿಂದ ವಿಧಾನಸೌಧ ಪ್ರವೇಶಮಾಡಿ ಕಾನೂನಾತ್ಮಕ ಕ್ರಾಂತಿಯ ಕಹಳೆ ಮೊಳಗಿಸಿದವರು.ನಮ್ಮಂಥ ಹೊಸ ತಲೆಮಾರಿನ ಕನ್ನಡದ ಅಸಂಖ್ಯಾತ ಕವಿಗಳಿಗೆ,ಬರಹಗಾರರಿಗೆ ವಿರಾಟ್ ಮಾದರಿಯಾದವರು.

ಇಂದು ಸಿದ್ಧಲಿಂಗಯ್ಯವರ ಉಸಿರು ಮಾತ್ರ ನಿಂತಿದೆ,ಆದರೆ ಅವರ ಹೋರಾಟದ ಹಾಡುಗಳ ಮೂಲಕ ನೆಲ- ಮುಗಿಲು ಒಂದು ಮಾಡಿದ ಅವರ "ಧ್ವನಿ"ಕನ್ನಡದ ನೆಲದಲ್ಲಿ ನಿರಂತರವಾಗಿ ಕೇಳಿಸುತ್ತಲೇ ಇರುತ್ತದೆ.ಕನ್ನಡ ದಲಿತ ಕಾವ್ಯಕ್ಕೆ ಒಂದು ಸಂಚಲನ ಶಕ್ತಿ ತೊಂದುಕೊಟ್ಟು,ಹೋರಾಟದ ಹಾಡುಗಳಿಗೂ ಒಂದು ಅರ್ಥಬ್ರಹ್ಮಾ0ಡವನ್ನು-ನಾದಬ್ರಹ್ಮಾಂಡವನ್ನು ಸೃಷ್ಟಿಮಾಡಿದ ಕವಿವರ್ಯ ನಾಡೋಜ ಸಿದ್ಧಲಿಂಗಯ್ಯನವರು ಇಂದು ಈ ಬ್ರಹ್ಮಾಂಡವನ್ನೇ ಬಿಟ್ಟು ಹೋದದ್ದು ಯಾರಿಂದಲೂ ತುಂಬಿಕೊಡಲು ಆಗದ ನಷ್ಟ.

ಸಿದ್ಧಲಿಂಗಯ್ಯನವ ಮಹೋನ್ನತ ಕವಿ ಪ್ರತಿಭೆಯ ದಿವ್ಯಾತ್ಮ ಇಂದು ಬುದ್ಧಬೆಳದಿಂಗಳೊಂದಿಗೆ ಕೂಡಿಕೊಂಡಿದೆ.ಭಗವಾನ್ ಬುದ್ಧ ಅವರ ಆತ್ಮಕೆ ಚಿರಶಾಂತಿಯನ್ನು ನೀಡಲೆಂದು ಪ್ರಾರ್ಥಿಸುವೆ.


ಪ್ರೊ.ಮಟ್ಟಿಹಾಳ. N Y

6 views0 comments

Comments


bottom of page