top of page

ಜನಪದರ ಜೀವಪರ ಆಚರಣೆ- 'ಇಲಿಪೂಜೆ'

ಜನಪದರ ಜೀವನದಲ್ಲಿ ಹಬ್ಬ- ಹರಿದಿನ, ಜಾತ್ರೆ- ಉತ್ಸವ ಸೇರಿದಂತೆ ವಿವಿಧ ಆಚರಣೆಗಳು ಜೀವಂತವಾಗಿದ್ದು, ಜೀವಪರವಾಗಿವೆ. ನಮ್ಮ ಪೂರ್ವಿಕರು ತಮ್ಮ ಜೀವನದಲ್ಲಿ ಆಚರಣೆಗಳಿಗೆ  ಮಹತ್ವದ ಸ್ಥಾನ ನೀಡುತ್ತ ಬಂದಿದ್ದಾರೆ. ಜನಪದರ ಇಂಥ ಬಹುತೇಕ ಆಚರಣೆಗಳ ಹಿಂದೆ ಭಯ, ಭಕ್ತಿ, ನಂಬಿಕೆ, ಶ್ರದ್ಧೆ ಇರುವಂತೆ ಒಮ್ಮೊಮ್ಮೆ ಅಂಧಶ್ರದ್ಧೆಯೂ ಮೇಲ್ನೋಟಕ್ಕೆ ತೋರುತ್ತದೆ.


ಜನಪದರ ದೃಷ್ಟಿಯಲ್ಲಿ ಪ್ರಕೃತಿಯೇ ಪರಾಶಕ್ತಿ. ಪ್ರಕೃತಿದೇವಿ ಮುನಿಸಿಕೊಂಡರೆ ಮನುಷ್ಯನಿಗೆ ಉಳಿಗಾಲವಿಲ್ಲ ಎಂಬುದು ಖಚಿತ ಅವರ ನಂಬಿಕೆ. ಆದ್ದರಿಂದ ಪ್ರಕೃತಿಯ ಪ್ರಕೋಪಕ್ಕೆ ತುತ್ತಾಗದಂತೆ ಭಯಭೀತರಾಗಿ ಆ ಸೃಷ್ಟಿಚೈತನ್ಯವನ್ನು  ಆರಾಧಿಸುವುದು, ಪ್ರಕೃತಿ ನಮ್ಮಮೇಲೆ ಯಾವ ಕಾರಣಕ್ಕೂ ಮುನಿಸಿಕೊಳ್ಳದಿರಲೆಂದು ಮತ್ತು ಅದು ಸದಾ ಜೀವಪೋಷಕವಾಗಿರಲೆಂದು ಬೇಡಿಕೊಳ್ಳುವ ಉದ್ದೇಶಗಳೇ ಜನಪದರ ಬಹುತೇಕ ಆಚರಣೆಗಳ ಹಿಂದಿರುವ ಮೂಲ ಹೇತು. 


ಪ್ರಕೃತಿಪೂಜೆಗೆ ಆದ್ಯತೆ ನೀಡುವ ನಮ್ಮ ಜನಪದರು, ಅದರ ಭಾಗವಾಗಿ ಪ್ರಾಣಿಗಳಿಗೂ ಪೂಜೆ ಸಲ್ಲಿಸುವ ಪದ್ಧತಿಯನ್ನೂ ಅನುಸರಿಸುತ್ತ ಬಂದಿರುವುದನ್ನು ಕಾಣಬಹುದು.


ನಮ್ಮ‌ ಜನಪದರು ಪ್ರಾಣಿಭಯಮೂಲವಾಗಿ ಕಂಡುಕೊಂಡ ಆಚರಣೆಗಳಲ್ಲಿ 'ಇಲಿಪೂಜೆ'ಯೂ ಒಂದು. 

ವಿಘ್ನನಿವಾರಕ ಗಣಪತಿಯನ್ನು ಪ್ರತಿಷ್ಠಾಪಿಸುವ ಜನಪದರು ಗಣೇಶ ಚತುರ್ಥಿಯ ಮರುದಿವಸ ಇಲಿಗಳನ್ನು ಪೂಜಿಸುವ ಪದ್ಧತಿಯನ್ನು ಅನುಸರಿಸುತ್ತಾರೆ.

ಇಲಿಪೂಜೆಯನ್ನು 'ಇಲಿಹಬ್ಬ' ಅಥವಾ 'ಇಲಿಪಂಚಮಿ', 'ಇಲಿವಾರ' ಎಂದೂ ಕರೆಯುವ ವಾಡಿಕೆಯಿದೆ.


ಕೆಲವು ಆಚರಣೆಗಳು ಕೆಲವೇ ಸಮುದಾಯಗಳಿಗೆ ಮತ್ತು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವುದು ವಿಶೇಷ. ಇಲಿಪೂಜೆಯು ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮುಖ್ಯವಾಗಿ ನೇಕಾರ ಹಾಗೂ ಚಿತ್ರಗಾರ ಸಮುದಾಯಗಳಲ್ಲಿ ಕಂಡುಬರುತ್ತದೆ.


 * ಇಲಿಪೂಜೆಗೆ ಸಿದ್ಧತೆ * 


ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ವಡಗಾಂವ್, ಸೂಳೀಬಾವಿ, ಗೋಕಾಕ್, ರಾಮದುರ್ಗ; ಬಾಗಲಕೋಟೆ ಜಿಲ್ಲೆಯ ರಬಕವಿ, ಬನಹಟ್ಟಿ, ತೇರದಾಳ, ನಾಗರಾಳ,  ಗುಳೇದಗುಡ್ಡ, ಕಮತಗಿ, ಅಮೀನಗಡ, ಸೂಳೇಬಾವಿ, ಇಳಕಲ್ಲ; ವಿಜಯಪುರ ಜಿಲ್ಲೆಯ ಗೊಳಸಂಗಿ, ವಂದಾಲ;

ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ರಟ್ಟಿಹಳ್ಳಿ, ತುಮ್ಮೀನಕಟ್ಟಿ; ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಸೇರಿದಂತೆ ಅನೇಕ ಊರು, ಪಟ್ಟಣಗಳಲ್ಲಿ ವಾಸಿಸುವ ನೇಕಾರ ಮತ್ತು ಚಿತ್ರಗಾರ  ಸಮುದಾಯದವರಲ್ಲಿ ಇಲಿಪೂಜೆ ಆಚರಣೆಯನ್ನು ವಿಶೇಷವಾಗಿ ಕಾಣುತ್ತೇವೆ.

ಈ ಎರಡೂ ಸಮುದಾಯದವರು ಗಣೇಶ ಚತುರ್ಥಿಯನ್ನು ಎಷ್ಟು ಸಂಭ್ರಮ, ಸಡಗರದಿಂದ ಆಚರಿಸುವರೊ, ಅಷ್ಟೇ ಶ್ರದ್ಧೆಯಿಂದ ಇಲಿಪೂಜೆಯನ್ನೂ ಆಚರಿಸುತ್ತಾರೆ. ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ ಮರುದಿವಸ ಮಣ್ಣಿನಿಂದ ಇಲ್ಲವೇ ಗೋಧಿ ಹಿಟ್ಟಿನಿಂದ ಇಲಿಗಳನ್ನು ತಯಾರಿಸಲಾಗುತ್ತದೆ.


ಚಿತ್ರಗಾರರ ಮಕ್ಕಳು ತಾವು ಮಣ್ಣಿನಿಂದ ತಯಾರಿಸಿದ ಇಲಿ ಮೂರ್ತಿಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ನೇಕಾರರು ವಾಸಿಸುವ ಓಣಿಗಳ ಬೀದಿಗಳಲ್ಲಿ ಅಡ್ಡಾಡಿ "ಇಲಿ ಬೇಕೇನ್ರೀ ಇಲಿ....ಇಲಿ ಬೇಕೇನ್ರೀ ಇಲಿ...." ಎಂದು ಕೂಗುತ್ತಾ ಸಾಗುತ್ತಾರೆ. 

ಹೀಗೆ ಅವರ ಕೂಗು ಕೇಳಿದ ಕೂಡಲೇ ನೇಕಾರರು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಇಲಿಗಳನ್ನು ಕೊಳ್ಳುತ್ತಾರೆ.  ಖರೀದಿ ಮಾಡಿದ ಇಲಿಗಳನ್ನು ಮನೆಯ ಅಟ್ಟದ ಮೇಲೆ ಇಡುವ ಪದ್ಧತಿ ಇದೆ.

ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ ನೇಕಾರರು ಅಂದಿನ ದಿನ ನೇಯ್ಗೆ ಕೆಲಸವನ್ನು ಬಿಡುತ್ತಾರೆ. 

ಮಂಟಪ, ಗಣಪತಿ ಇಡಲು ನಿಗದಿಪಡಿಸಿರುವ ಮಾಡದಲ್ಲಿ ಗಣಪತಿಯ ಎರಡೂ ಬದಿಗೂ ಇಲಿಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಮತ್ತೆ ಕೆಲವರು ಮಂಟಪಗಳಲ್ಲಿಯೂ ಇಲಿಗಳನ್ನು ಇರಿಸಿ ಪೂಜೆ ಸಲ್ಲಿಸುವ ವಾಡಿಕೆಯಿದೆ.


ಇನ್ನು ಕೆಲವು ಕಡೆ ಗೋಧಿ ಹಿಟ್ಟಿನಿಂದ ತಯಾರಿಸಿದ ಇಲಿಗಳನ್ನು ದೇವರ ಜಗುಲಿ ಮೇಲಿಟ್ಟು, ಬಿಳಿ ನೂಲಿನ ದಾರದ ಜನಿವಾರ ಹಾಕಿ, ಕೊಬ್ಬರಿ ಕಡುಬು, ಅನ್ನ, ತುಪ್ಪ ಇನ್ನಿತರೆ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಿ ಪೂಜಿಸುತ್ತಾರೆ. 

ಗಣೇಶನಿಗೆ ಮಾಡಿದ ಎಲ್ಲಾ ಬಗೆಯ ಖಾದ್ಯಗಳನ್ನೂ ಇಲಿಯಪ್ಪನಿಗೂ ನೈವೇದ್ಯ ಹಿಡಿದು ಅನಂತರ ಭೋಜನ ಮಾಡುತ್ತಾರೆ. 


"ಚಿತ್ರಕಾರರ ಸಮುದಾಯದವರು ಮೂಲತಃ ಕಲಾವಿದರು. ಸೆಗಣಿ  ಗೊಂಬೆ, ಸೆಗಣಿ ಮತ್ತು‌ ಮಣ್ಣಿನ ಗಣೇಶ ಹಾಗೂ ಇಲಿಗಳ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. 

ಇಲಿಪೂಜೆಗೆಂದು ಹಿಂದಿನ ಕಾಲದಿಂದಲೂ ಸೆಗಣಿಯ ಇಲಿ ಮೂರ್ತಿಗಳನ್ನು ತಯಾರಿಸಿ ಊರಿನ ಬೀದಿ ಬೀದಿಗಳಲ್ಲಿ ಮಾರಾಟ ಮಾಡುವ ಪದ್ಧತಿ ಇದೆ. ಕೊಪ್ಪಳ ಜಿಲ್ಲೆಯ ಕಿನ್ನಾಳ, ಭಾಗ್ಯಾನಗರ ಗೊಂಬೆಗಳ ಕುಶಲ ಕಲೆಯಲ್ಲಿ ಚಿತ್ರಕಾರರು ಈಗಲೂ ನಿರತರಾಗಿದ್ದಾರೆ. 

ಗಣೇಶನ ವಾಹನ ಮೂಸಿಕ. 

ಇಡೀ ಜಗತ್ತನ್ನೇ ಪ್ರದಕ್ಷಿಣೆ ಹಾಕಲು ವಿಘ್ನೇಶ ಇಲಿಯನ್ನೆ ಅವಲಂಬಿಸಿದ್ದನು. ಗಣೇಶನ ಜೊತೆಗೆ ಇಲಿಯನ್ನೂ ಪೂಜಿಸುವುದರಿಂದ ಸಕಲ ಸೌಭಾಗ್ಯಗಳು  ದೊರಕುತ್ತವೆ ಎಂಬುದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ" ಎಂದು ಕಮತಗಿ ಪಟ್ಟಣದ ಜ್ಯೋತಿಷಿ ಡಾ. ಗಣೇಶ ಕುಬೇರಪ್ಪ ಚಿತ್ರಗಾರ (೪೦) ಅವರು ತಿಳಿಸುತ್ತಾರೆ.


"ವರ್ಷಕ್ಕೊಮ್ಮೆ ಇಲಿಯಪ್ಪನನ್ನು ಪೂಜೆ ಮಾಡೂದರಿಂದ ಮನ್ಯಾಗಿನ ನೂಲು, ದಾರ, ಸೀರೀ ಕಡಿದು ಹಾಳ ಮಾಡೂದಿಲ್ಲ. ಅದಕ... ಇಲಿರಾಯಗೂ ಪೂಜೆ ಮಾಡ್ಕೋತ ಬರ್ತೀವಿ" ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಲಕ್ಷ್ಮೀಬಾಯಿ ಸಿದ್ದಪ್ಪ ಗಣಿ(೬೦) ಅವರು ಹೇಳುವುದು ಗಮನಾರ್ಹ.


"ಇಲಿ ನಮ್ಮ ದೈನಂದಿನ ಜೀವನದಲ್ಲಿ ಕಂಡು ಬರುವ ಪ್ರಾಣಿ. ಆದರೆ ಅದು ಮಾಡುವ ಹಾನಿ ದೊಡ್ಡದು. ಸೀರೆ ತಯಾರಿಸಲು ಬೇಕಾದ ನೂಲನ್ನೇ ಕಡಿದು ಹಾಕಿ, ತೀವ್ರ ತೊಂದರೆ ಮಾಡುತ್ತದೆ. ಆ ಕಾರಣದಿಂದ ಇಲಿ ಪೂಜೆ ಮಾಡಿಕೊಂಡು ಬರಲಾಗುತ್ತದೆ" ಎನ್ನುತ್ತಾರೆ ಕಮತಗಿಯ ಸಂಗಮೇಶ ಹುಲ್ಲೂರು(೫೦).


"ಇಲಿಯನ್ನು ಪೂಜೆ ಮಾಡುವುದರಿಂದ ಮನೆಯಲ್ಲಿರುವ ನೂಲು, ಸೀರೆ, ಬಟ್ಟೆ ಮಗ್ಗದ ಇತರೆ ಸಾಮಗ್ರಿಗಳು ಹಾಳಾಗುವುದಿಲ್ಲ. ಅವುಗಳು ಇಲಿಯಿಂದ ರಕ್ಷಣೆಯಾಗುತ್ತವೆ ಎಂಬುದು ಪರಂಪರಾಗತ ನಂಬಿಕೆಯಷ್ಟೇ. ಈ ನಂಬಿಕೆ ಒಮ್ಮೊಮ್ಮೆ ಹುಸಿಯೂ ಆಗುತ್ತದೆ" ಎಂದು ಸೂಳೇಭಾವಿಯ ನೇಕಾರ ರಮೇಶ ವೀರಭದ್ರಪ್ಪ ಬಸರಕೋಡ (೪೯),

ಹಾಗೂ ಅಮೀನಗಡ ಪಟ್ಟಣದ ಬಸವರಾಜ ನಿಡಗುಂದಿ (೩೪) ಅವರ ಅಭಿಪ್ರಾಯವಾಗಿದೆ.


ವಕ್ತೃಗಳ ಈ ಮೇಲಿನ  ಮಾತುಗಳು ಜನಪದರ ಆಚರಣೆಗಳ ಹಿಂದೆ ಅದರಲ್ಲೂ ಬಹುಮುಖ್ಯವಾಗಿ 'ಇಲಿಪೂಜೆ' ಆಚರಣೆಯ ಹಿಂದೆ ಗಾಢವಾದ ನಂಬಿಕೆ ಅಡಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.


ಇಲಿಗೆ ಪೂಜೆ ಸಲ್ಲಿಸಿದ ನಂತರ ನೇಕಾರರು ಇಲಿಗಳ ಮಣ್ಣಿನ ಮೂರ್ತಿಗಳನ್ನು ಮರುದಿನ ತಿಪ್ಪೆಯಲ್ಲಿ ಇಲ್ಲವೆ, ಹೂವಿನ ಕುಂಡದಲ್ಲಿ, ಗಿಡದ ಬುಡದಲ್ಲಿ ವಿಸರ್ಜನೆ ಮಾಡುತ್ತಾರೆ. ಗೋಧಿ ಹಿಟ್ಟಿನಿಂದ ತಯಾರಿಸಿದ ಇಲಿಗಳು ಸ್ವತಃ ಜೀವಂತ ಇಲಿಗಳಿಗೇ ಆಹಾರವಾಗುವುದೂ ಉಂಟು.


ಈ ಇಲಿಗಳು ದೇವರನ್ನೂ ಕೂಡ ಬಿಡದೇ ಕಾಡುತ್ತವೆ. ದೇವರನ್ನು ಫಜೀತಿ ಮಾಡಿದ ಘಟನೆಗಳು ಪುರಾಣಗಳಲ್ಲಿ ಉಲ್ಲೇಖವಾಗಿವೆ. 


*'ಇಲಿ 'ಪುರಾಣ *


ದ್ವಾಪರ ಯುಗದಲ್ಲಿ ವೈಕುಂಠದೊಳಗೆ ಇಲಿಗಳಿಗೂ ಹಾಗೂ ಜಯವಿಜಯರ ನಡುವೆ ಕಾಳಗ ನಡೆಯುತ್ತದೆ. ಆಗ ಇಲಿಗಳ ಉಪಟಳ ತಾಳಲಾರದೇ ಜಯವಿಜಯರು ವಿಷ್ಣುವಿನ ಮೊರೆಹೋದರು. ಆಗ ವಿಷ್ಣು ತಾನೇ ಸ್ವತಃ ಇಲಿಗಳನ್ನು ಕೊಲ್ಲಲು ಚಕ್ರಹಿಡಿದು ವೀರಾವೇಷದಿಂದ ಕದನ ಕಾದನು. ಆದರೂ ಇಲಿಗಳು ವಿಷ್ಣುವಿನಿಂದ ತಪ್ಪಿಸಿಕೊಂಡವು. ವಿಷ್ಣು ಬಿಡದೇ ಇಲಿಗಳ ಜೊತೆ ಕಾದಾಡಿ ಕಾದಾಡಿ ಸುಸ್ತಾಗಿ ಬಳಲಿ ಕೊನೆಗೆ ತಾನೇ ಪ್ರಜ್ಞೆತಪ್ಪಿ ನೆಲಕ್ಕೆ ಬಿದ್ದನು. ಆಗಲೂ ಇಲಿಗಳು ವಿಷ್ಣುವನ್ನು ಬಿಡದೇ ಮೈಮೇಲಿದ್ದ ಪೀತಾಂಬರವನ್ನು ಹರಿದು ಹಾಕಿ, ಆತನ ಚಕ್ರದ ಹಲ್ಲು ಮುರಿದವಂತೆ. 


ಹೀಗೆ ಇಲಿಗಳ ಕಾಟ ದೇವರನ್ನೂ ಬಿಟ್ಟಿಲ್ಲ ಎಂಬುದು ಮಾತ್ರ ವಿಚಿತ್ರ ಆದರೂ ಸತ್ಯ. ಇಂಥ ಮಿಥ್ ಗಳೇನೇ ಇದ್ದರೂ ಇಲಿಗಳಿಗೂ ಅದರದೇ ಆದ ರೀತಿಯಲ್ಲಿ ಬದುಕುವ ಹಕ್ಕು ಇದ್ದೇ ಇದೆ ಎಂಬುದೂ ಅಷ್ಟೇ ಸತ್ಯ.


ಈಗ ಸಾಮಾನ್ಯವಾಗಿ ನೇಕಾರಿಕೆ ವೃತ್ತಿ‌ ಕಣ್ಮರೆಯಾಗುತ್ತಿರುವುದರಿಂದ ಮಗ್ಗಗಳು ಕಡಿಮೆಯಾಗಿವೆ. ನೇಕಾರರು ಬೇರೆ ಬೇರೆ ಉದ್ಯೋಗಗಳತ್ತ ಮುಖಮಾಡುತ್ತಿದ್ದರೂ 'ಇಲಿಪೂಜೆ' ಮಾತ್ರ ಇನ್ನೂ ಜೀವಂತವಾಗಿದೆ. 


ಒಟ್ಟಾರೆ ನೇಕಾರರು ತಮ್ಮ ಮನೆಯಲ್ಲಿನ ನೂಲು, ಬಟ್ಟೆ, ದಾರ, ಸೀರೆಗಳನ್ನು  ನಾಶ ಮಾಡದೇ ಇರಲಿ ಎಂಬ ಉದ್ದೇಶದಿಂದ ಇಲಿಪೂಜೆಯನ್ನು ಮಾಡುತ್ತಿದ್ದರೂ, ಇಲ್ಲಿ ಭಯದ ಜೊತೆಗೆ ಜನಪದರ ಪ್ರಾಣಿಪ್ರೀತಿಯೂ ಅಡಗಿರಬಹುದೆಂದೂ ತೋರುತ್ತದೆ. 


ಈ ಹಿನ್ನೆಲೆಯಲ್ಲಿ ಜನಪದರ ಆಚರಣೆಗಳನ್ನು ಮಿಥ್ಗಳೆಂದು ಪೂರ್ವಾಗ್ರಹದ ಕಣ್ಣಿನಿಂದ ನೋಡದೇ,  ಜೀವಪರ ಎಂದು ತಿಳಿಯುವುದರಿಂದ ಹೆಚ್ಚು ಉಪಯುಕ್ತ. ಜನಪದರ ಈ ಆಚರಣೆ ಭಯಮೂಲದ್ದಾದರೂ, ನಂಬಿಕೆಮೂಲದ್ದಾದರೂ, ಮೂಢನಂಬಿಕೆಯಂತೂ ಅಲ್ಲ ಎಂಬುದು ಸುಸ್ಪಷ್ಟ. ಜನಪದರ ಈ ನಂಬಿಕೆ, ಆಚರಣೆ ಮುಖ್ಯವೂ, ಮಾದರಿಯೂ ಆಗಿದೆ.


(ಆಕರ : ಕರ್ನಾಟಕದ ಜನಪದ ಆಚರಣೆಗಳು. ಲೇಖಕರು:  ಪ್ರೊ. ಸ.ಚಿ. ರಮೇಶ, ಕುಲಪತಿಗಳು, ಕನ್ನಡ ವಿವಿ. ಹಂಪಿ)
ಡಾ. ಸಂಗಮೇಶ ಎಸ್. ಗಣಿ

ಕನ್ನಡ ಉಪನ್ಯಾಸಕರು, 

9743171324

36 views0 comments
bottom of page