top of page

ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ

Updated: Aug 29, 2020

ಹೆಜ್ಜೆ -2ಅಂದಿನ ತಾಳ ಮದ್ದಲೆ ಶಬ್ದಾತೀತವಾಗಿತ್ತು. ಇಂತಹ ಹಿನ್ನೆಲೆಯ ಪದ್ಯ ಹಾಗೂ ಮದ್ದಲೆಗಳ ವಿಶೇಷತೆಯನ್ನು ಊರಿನ ಜನ ಕೇಳಿಯೇ ಇರಲಿಲ್ಲ. ಅಂದು ಸೇರಿದ ಕಲಾವಿದರಾದ ಶ್ರೀದೇವರೂ ಹೆಗಡೆ ಮತ್ತು ವಡ್ಡಿ ರಾಜಾರಾಮ ಮಾಸ್ತರರ ಭೀಷ್ಮ ಮತ್ತು ಕೃಷ್ಣರ ಮಾತು ಕತೆ ರಸ ಪ್ರವಾಹವನ್ನೇ ಹರಿಸಿತ್ತು. ಮೂರೂರು ಶ್ರೀ ಈಶ್ವರ ಹೆಗಡೆಯವರ ಉತ್ತರನಂತೂ ನಗೆ ಗಡಲಲ್ಲಿ ತೇಲಿಸಿತ್ತು. ಮದ್ದಲೆ ಕಲಿಯ ಬೇಕೆಂದು ಹಲವರಿಗೆ ಆಸೆ ಮೂಡಿದ್ದೂ ಸತ್ಯ. ಸ್ನಾನದ ಮನೆಯಲ್ಲಿ ಭಾಗವತಿಗೆ ಮಾಡುವವರಿಗೂ ಹುಚ್ಚು ಹಿಡಿದದ್ದು ಸತ್ಯ.

ಅಂದಿನ ಕಾಲದಲ್ಲಿ ಟಿ. ವಿಯ ಕರ್ಕಶತೆ ಇರಲಿಲ್ಲ. ರೇಡಿಯೋನೂ ಇಲ್ಲ. ಆ ಊರಿಗೆ ಪತ್ರಿಕೆಯೂ ಬರುತ್ತಿರಲಿಲ್ಲ. ಮತ್ತೆ ಪ್ರಚಾರವಾಗುವುದು ಬಾಯಿಂದ ಬಾಯಿಗೆ. ಅಲ್ಲಿ ಎಂತಹ ಚೆಂದವಾಗಿತ್ತು ಗೊತ್ತಾ? ಹೀಗಾಗಿತ್ತು! ಬಾಯಿಂದ ಬಾಯಿಗೆ ಹೋಗುವಾಗ ಕಿವಿಯ ದೋಷದಿಂದ ಉತ್ಪ್ರೇಕ್ಷೆಯೂ ಆಗಬಹುದಿತ್ತು. ಟೀಕೆಯೂ ಆಗಬಹುದಿತ್ತು!!

ಹೆದ್ದಾರಿಯ ಆಕಡೆ ಇರುವ ಹದಿನಾಲ್ಕು ಕಿ. ಮಿ. ಅಂತರದಲ್ಲಿ ಗಂಗಾವಳಿಯ ನದಿಯ ಮೇಲೆ ಹರಡಿರುವ ಊರುಗಳು ಕೈಗಾಡಿ, ಶೇವ್ಕಾರ, ವೈದ್ಯಹೆಗ್ಗಾರ, ಕೋನಾಳ, ಕಲ್ಲೇಶ್ವರ, ಹಳವಳ್ಳಿ, ಕನಕನ ಹಳ್ಳಿ ಮುಂತಾದವು. ಆಗಲೇ ನೂರಾರು ಜನರಿಗೆ ವಿದ್ಯೆ ಕಲಿಯುವ ಆಸೆ ಉಂಟಾಗಿತ್ತು. ಅದು ಘಟ್ಟದ ಕೆಳಗಿನ ಸಂಪರ್ಕದಿಂದ! ನಮ್ಮದೂ ಘಟ್ಟದ ಕೆಳಗೆ!! ಆದರೆ ಘಟ್ಟದ ಮೇಲಿನ ಬೊರ್ಡರ್-ನಲ್ಲಿರುವುದರಿಂದ ಘಟ್ಟದ ಕೆಳಗಿನವರು ಘಟ್ಟದ ಮೇಲೆ ಅನ್ನುತ್ತಿದ್ದರು. ಘಟ್ಟದ ಮೇಲಿನವರು ಘಟ್ಟದ ಕೆಳಗೆ ಅನ್ನುತ್ತಿದ್ದರು.

ಅಲ್ಲಿ ಯಕ್ಷಗಾನದ ಪ್ರೀಯತೆ ಬೆಳೆದಿತ್ತು. ನಾಲ್ಕು ಜನ ಸೇರಿದರೆ ತಾಳಮದ್ದಲೆ ನಡೆಯುತ್ತಿತ್ತು. ಹುಟ್ಟಿದರೂ – ಸತ್ತರೂ ತಾಳಮದ್ದಲೆ ನಡೆಯುವಲ್ಲಿ ಸಂಶಯವಿರಲಿಲ್ಲ! ಕೆಲವರು ಇಸ್ಪೀಟ್ ಆಡಿದರು ದುಡ್ಡು ಹಾಕಿ ಆಡುವ ಪದ್ಧತಿ ಇರಲಿಲ್ಲ. ನಿಗ್ರೋ ಜನಾಂಗದವರು ಸೆಂಗ್ಯಾ-ಬಾಳ್ಯ ಆಡುತ್ತಿದ್ದರು. ಅವರ ಜೊತೆ ಹವ್ಯಕರೂ ಸೇರುತ್ತಿದ್ದರು ಎನ್ನುವುದು ವಿಶೇಷ. ಜಾತೀಯತೆಯ ಕಟ್ಟು-ನಿಟ್ಟು ಬಹಳವಾಗಿ ಇರಲಿಲ್ಲ. ಶ್ರೀ ಮಹಾಬಲೇಶ್ವರ ವೈದ್ಯರು ತಮ್ಮೂರಿಗೆ ಶಾಲೆ ಬರಲೆಂದು ತಮ್ಮ ಸ್ವಂತ ಜಾಗವನ್ನೇ ಕೊಟ್ಟು, ಹಣ ಕೊಟ್ಟು ಶಿಕ್ಷಕರನ್ನು ನಿಯಮಿಸಿದ್ದರು. ನಾವೆಲ್ಲ ನಾಲ್ಕನೆಯ ತರಗತಿಯವರೆಗೆ ಅಲ್ಲಿಯೇ ಓದಿದ್ದು!!

ನಮ್ಮ ಕುಟ್ಟಣ್ಣ ಬರಲು ಅಷ್ಟೇಕೆ ತಡವಾಯಿತು? ಆ ರಾತ್ರಿಯಲ್ಲಿ ಬರಲು ಯಾವ ವಾಹನವೂ ಇರಲಿಲ್ಲ. ಯು. ಕೇ. ಟಿ ಟ್ರಕ್ಕೊಂದು ತಿರುಗುತ್ತಿತ್ತು! ಅದರಲ್ಲಿ ತಿರುಗಾಡಲು ಎಂಟೆದೆ ಬೇಕಾಗಿತ್ತು! ಅದಕ್ಕೊಂದು ರೋಚಕ ಕಥೆಯೇ ಇತ್ತು.

ನಮ್ಮ ಊರಿನಲ್ಲಿ ನಿಗ್ರೋ ಜನಾಂಗದವರು ಧಾರಾಳವಾಗಿ ಇದ್ದಾರೆ. ಫೋರ್ತಗೀಸ್-ರು ಬರುವಾಗ ತಮ್ಮ ಸೇವೆ ಮಾಡಲು ಇವರನ್ನು ತಂದರು, ಮೂಲ ಆಪ್ರಿಕಾದವರು ಎಂದು ಇತಿಹಾಸ ಹೇಳುತ್ತದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಇವರ ವಾಸವಿದೆ

ನಿಗ್ರೋ ಜನಾಂಗದವರು ಚಿರತೆ-ಹುಲಿ-ಕರಡಿ-ನಾಗಿಣಿ ಮುಂತಾದ ಕ್ರೂರ ಪ್ರಾಣಿಗಳನ್ನು ನಿರ್ಭೀತರಾಗಿ ಕೊಲ್ಲುತ್ತಿದ್ದರು. ಹುಲಿ, ಚಿರತೆಯನ್ನು ಎಡ್ಸಲಿನಲ್ಲಿ [ಎಡ್ಸಲು ಇಲ್ಲವೇ ಮಾನ್ಸ ಎಂದರೆ ಯಾವುದೋ ಒಂದು ಪ್ರಾಣಿಯನ್ನು ಕಟ್ಟಿ, ಅದನ್ನು ತಿನ್ನಲು ಬಂದಾಗ, ಸಿಕ್ಕಿ ಬೀಳುವಂತೆ ಮಾಡುವುದು. ಹಳ್ಳಿಯಲ್ಲಿ ಹುಲಿಯನ್ನು ಹುಲಿಬೋನಿಗೆ ಬೀಳಿಸುವ ದೇಶಿಪದ್ಧತಿ. ಆಗ ಫೋರೆಸ್ಟ್ ಕಾಯದೆ ಇಷ್ಟು ಬಿಗುವಾಗಿರಲಿಲ್ಲ!] ಬೀಳುವಂತೆ ಮಾಡಿ ಅನಂತರ ಕೊಂದು ಊರಲ್ಲಿ ಮೆರವಣಿಗೆ ತೆಗೆಯುತ್ತಿದ್ದರು. ಆಗ ಅವರನ್ನು ಸಂಮಾನಿಸಲಾಗುತ್ತಿತ್ತು. ಆಶ್ಚರ್ಯವೆಂದರೆ ನಿಗ್ರೋ ಜನಾಂಗದವರು ಶುದ್ಧವಾಗಿ ಹವ್ಯಕ ಭಾಷೆಯಲ್ಲಿಯೇ ಮಾತನಾಡುತ್ತಿದ್ದರು. ಅವರು ನಿಷ್ಠಾವಂತರು. ಪ್ರಾಮಾಣಿಕರು.

ನಿಗ್ರೋ ನೋಡಲು ಕಪ್ಪು. ದಷ್ಟ-ಪುಷ್ಟರು. ಒಂದು ಅಡ್ಡ ಪಂಜೆ ಇಲ್ಲವೇ ಕಚ್ಚೆ, ಮೇಲೊಂದು ಬನಿಯನ್ನು ಅಥವಾ ಅಂಗಿ ಇದ್ದರೆ ಜಗತ್ತನ್ನೇ ತಿರುಗಾಡ ಬಲ್ಲರು. ಕೈಯಲ್ಲೊಂದು ಕತ್ತಿ, ಇಲ್ಲವೇ ಸೊಂಟಕ್ಕೆ ಕಟ್ಟಿದ ಉಡುಕೊಕ್ಕೆಗೆ ಕತ್ತಿ ಸಿಕ್ಕಿಸಿಯೇ ಅವರ ಪ್ರಯಾಣ.

ಅಂತಹ ಒಬ್ಬ ನಿಗ್ರೋ ನಮ್ಮ ಕುಟ್ಟಣ್ಣನಿಗೆ ಸಾಥಿಯಾದ. ಹೇಗೆಂದರೆ….

ಅವನನ್ನು ಕಂಡೇ ಕುಟ್ಟಣ್ಣನಿಗೆ ಭಯವಾಗಿತ್ತು. ಎಲ್ಲಿ ಇವನಿಗೇ… ಬಲಿಯಾಗುತ್ತೇನೋ ಎಂದು ನಡುಗಿದ್ದನಂತೆ! ಆದರೂ ಕುಟ್ಟಣ್ಣನ ಧೈರ್ಯಕ್ಕೆ ಮೆಚ್ಚಲೇ ಬೇಕು. ಅಪರಿಚಿತ ಸ್ಥಳ. ಉಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಬೇಕು. ಸಂಗಡ ಇರುವವ ನಿಗ್ರೋ.

‘ವೈದ್ಯಹೆಗ್ಗಾರಿನಲ್ಲಿ ಇಳಿಯಬೇಡಿ. ರಾಮನಗುಳಿಯಲ್ಲಿಯೇ ಇಳಿಯಿರಿ’ ಎಂದು ಕಂಡೆಕ್ಟರ್ ಹೇಳಿದ್ದರಿಂದ ರಾಮನಗುಳಿಯಲ್ಲಿ ಇಳಿದು ಕೊಂಡಿದ್ದ. ಅಲ್ಲಿ ದೋಣಿ ದಾಟಿ ಕಡೆ ಬಂದಾಗ ದೋಣಿ ದಾಟುವಾಗ ಇವನ ಸಂಗಡ ಇದ್ದ ನಿಗ್ರೋ ಇವನ ದಾರಿದೀಪವಾದ.

ಎಲ್ಲಿ ದೊಡ್ಡದಾಗಿ ತಾಳಮದ್ದಲೆ ನಡೆಯುವುದೋ ಅಲ್ಲಿ ನನ್ನನ್ನು ಕರೆದು ಕೊಂಡು ಹೋಗುವಿಯಾ ಎಂದು ಹತ್ತು ರೂಪಾಯಿ ಕೊಡಲು ಹೋಗಿದ್ದನಂತೆ! ‘ಓಡೆಯಾ! ನನಗೆ ನಿಮ್ಮ ದುಡ್ಡು ಬೇಡ. ಇಲ್ಲಿ ಮೂರುಕಡೆ ದೊಡ್ಡ ತಾಳಮದ್ದಲೆ ಆಗುವುದು. ಒಂದು ಹಳವಳ್ಳಿ ಹೆಬ್ಬಾರರ ಮನೆ. ಎರಡನೆಯದು ನಮ್ಮ ಅನಂತ ಹೆಗಡೇರ ಮನೆ ಕಲ್ಲೇಶ್ವರ. ಮೂರು ಮಾಚವೈದ್ಯರ ಮನೆ ವೈದ್ಯ ಹೆಗ್ಗಾರ. ಎಲ್ಲಿ ಕರೆದು ಕೊಂಡು ಹೋಗಲಿ ಹೇಳಿ’ ಎಂದನಂತೆ. ನಮ್ಮ ಕುಟ್ಟಣ್ಣನಿಗೆ ವೈದ್ಯರ ಮನೆ ಎನ್ನುವುದು ನೆನಪೇ ಬರಲಿಲ್ಲವಂತೆ! ಎಲ್ಲಿ ಒಯ್ಯುತ್ತಿಯೋ ಅಲ್ಲಿ ಒಯ್ಯಿ ಎಂದನಂತೆ! ‘ಹಂಗಾದ್ರೆ ಹಳವಳ್ಳಿಗೆ ಹೋಗೋಣ ಬನ್ನಿ’ ಎಂದು ನಿಗ್ರೋ ಹೇಳಿದನಂತೆ.

ಕುಟ್ಟಣ್ಣನ ಲೆಕ್ಕದಲ್ಲಿ ಘಟ್ಟದ ಕೆಳಗಿನ ಹಾಗೇ ಹತ್ತಿರ-ಹತ್ತಿರ ಕೇರಿ ಮನೆ ಇರಬಹುದೆಂದು ಭಾವನೆ. ಆದರೆ ಹಳವಳ್ಳಿಗೂ ವೈದ್ಯಹೆಗ್ಗಾರಿಗೂ ಕಾಲು ನಡಿಗೆಯಲ್ಲಿ ಸುಮಾರು ಹತ್ತು ಕಿ. ಮಿ. ನಡೆಯಬೇಕು. ಇವನು ಹಳವಳ್ಳಿಗೆ ಹೋದ. ಪುಣ್ಯಾತ್ಮ ಅಲ್ಲಿ ಯಾರಿಗೂ ತೋರಿಸಿಕೊಳ್ಳಲಿಲ್ಲ. ಯಾರಿಗೂ ಅವನ ಪರಿಚಯವೂ ಇದ್ದಿರಲಿಲ್ಲ! ಅಲ್ಲಿ ಶ್ರೀ ಕೃಷ್ಣ ಭಾಗವತರು, ಶ್ರೀ ದೇವರೂ ಹೆಗಡೆಯವರನ್ನು ಕಾಣದೇ ಅವರೆಲ್ಲಿ ಎಂದು ನಿಗ್ರೋವಿನಿಂದ ಕೇಳಿಸಿದನಂತೆ! ಅವರು ವೈದ್ಯಹೆಗ್ಗಾರು ಮಾಚ ವೈದ್ಯರ ಮನೆಗೆ ಬರುವರು ಎಂದು ಯಾರೋ ಹೇಳಿದರಂತೆ. ಹೆಬ್ಬಾರರ ಮನೆಯಲ್ಲಿ ಯಾರಾದರೂ ಕಂಡಿದ್ದರೆ ಅವನನ್ನು ಬಿಡುತ್ತಲೇ ಇರಲಿಲ್ಲ! ಏಕೆಂದರೆ ಹುಳಸೆಮಕ್ಕಿ ವೆಂಕಟ್ರಮಣ ಮಾಸ್ತರರು ಅಲ್ಲಿಗೆ ಬರುತ್ತಿದ್ದರು. ಅವರಿಗಂತೂ ಕುಟ್ಟಣ್ಣನ ಪರಿಚಯ ಸಿಗದೇ ಇರುತ್ತಿರಲಿಲ್ಲ!

ಹೆಬ್ಬಾರ ಮನೆ ಆತಿಥ್ಯಕ್ಕೆ ಹೆಸರುವಾಸಿ. ಅವರೆಂದೂ ಆದರಕ್ಕೆ ಕೊರತೆ ಮಾಡುವವರೇ ಅಲ್ಲ.

ಪುಣ್ಯಾತ್ಮ ಕುಟ್ಟಣ್ಣ ರಾಮನಗುಳಿಗೆ ಬಂದದ್ದು ಒಂಬತ್ತುವರೆ ಘಂಟೆಗೆ. ಆರಾಮಾಗಿ ಮಾಚವೈದ್ಯರ ಮನೆಗೆ ಹತ್ತೂವರೆಗೆ ಬಂದು ತಲುಪುತ್ತಿದ್ದ! ಈಗ ಹಳವಳ್ಳಿಯಿಂದ ಪುನಃ ವೈದ್ಯಹೆಗ್ಗಾರ ತಲುಪಬೇಕಿತ್ತು!! ಅದೇ ನಿಗ್ರೋನೇ ಪುನಃ ದಾರಿತೋರಿಸುವ ಸ್ನೇಹಿ ಆದ...


ಹಳವಳ್ಳಿಯಿಂದ ಬರುವಾಗ ಕಲ್ಲೇಶ್ವರದ ಮೂಲಕವೇ ಬರಬೇಕಿತ್ತು! ಮಲ್ಲಪ್ಪನ ಘಟ್ಟ[ಘಟಿಗೆಯಿಂದ]ದಿಂದ ಬರಬೇಕಿತ್ತು! ಅಲ್ಲಿ ಹಿಂದಿನ ದಿನ ಚಿರತೆಯೊಂದನ್ನು ಏಡ್ಸಲಿಗೆ ಕೆಡಗಿಸಲಾಗಿತ್ತು. ಅದನ್ನು ಹುಣ್ಣಿಮೆಯ ನಂತರ ಕೊಲ್ಲಬೇಕೆಂದು ನಿರ್ಧರಿಸಲಾಗಿತ್ತು! ಅಲ್ಲಿಗೆ ಬಂದ ಕೂಡಲೇ ನಿಗ್ರೋನ ಬಾಯಿ ತಡೆಯಲಿಲ್ಲ!

‘ಓಡೆಯಾ! ನಿನ್ನೆ ಇಲ್ಲಿ ಹುಲಿಯನ್ನು ಹಿಡಿಯಲಾಗಿತ್ತು! ಇದಕ್ಕೆ ಮಲ್ಲಪ್ಪನ ಘಟ್ಟ ಎಂದು ಏಕೆ ಕರೆಯುವರು. ಇಲ್ಲಿ ಮಲ್ಲಪ್ಪ ಎಂಬ ಮಹಾಸಾಹಸಿ ಇದ್ದ. ಅವನು ಬರಿಗೈಯಿಂದಲೇ ಹುಲಿ, ಚಿರತೆ, ನಾಗಿಣಿಗಳನ್ನು ಕೊಂದು ಬಿಡುತ್ತಿದ್ದನಂತೆ! ಈಗ ಇಲ್ಲಿ ತಿರುಗಾಡುವುದು ದೆವ್ವಮಾತ್ರ. ಹಾಗಾಗಿ ಎದೆ ಗಟ್ಟಿ ಇಲ್ಲದವರು ಒಬ್ಬೊಬ್ಬರೇ ತಿರುಗುವುದಿಲ್ಲ! ಹೆಂಗಸರಂತೂ ಹಗಲಿಗೂ ಒಬ್ಬರೇ ತಿರುಗಾಡುವುದಿಲ್ಲ. ಇಲ್ಲೊಂದು ಕೆರೆ ಇದೆ. ನೋಡಿ! ಅದೇ!! ಅಲ್ಲಿ ನೀರು ಕುಡಿಯಲು ಪ್ರಾಣಿಗಳು ಬರುತ್ತವೆ. ಗಮಯ [ಕಾಡಕೋಣ] ಬಂದರೆ ಅದು ನೀರು ಕುಡಿಯುವುದು ಮೈಲು ದೂರ ಕೇಳುತ್ತದೆ. ಎರಡು ಗಮಯ ಕುಸ್ತಿಗೆ ಇಳಿದರು ಎಂದರೆ ನಾವು ನಿಗ್ರೋಗಳು ಕುಸ್ತಿ ಹಿಡಿದ ಹಾಗೇ! ಒಂದು ಗಮಯ ಸಾಯಬೇಕು. ಕುಸ್ತಿ ಮುಗಿಯ ಬೇಕು’. ಮಾತಾಡುತ್ತಲೇ ಇದ್ದನಂತೆ ನಿಗ್ರೋ!!

ಆಗ ಕುಟ್ಟಣ್ಣನ ಹೃದಯದ ಅವಸ್ಥೆ ಏನಾಗಿರ ಬೇಡ? ನೀವೇ ಯೋಚಿಸಿ. ಅಂತೂ ಇಂತೂ ಹೃದಯವನ್ನು ಕೈಯಲ್ಲಿ ಹಿಡಿದುಕೊಂಡು ನಿಗ್ರೋನ ಜೊತೆ ನಡೆಯುತ್ತಾ ವೈದ್ಯಹೆಗ್ಗಾರ ತಲುಪಿದ!!

ರಾತ್ರಿ ಒಂದೆರಡು ಗಂಟೆಗೆ ಬರಲು ಕಾರಣ ಇದಾಗಿತ್ತು!

ಇವಿಷ್ಟೂ ಕಥೆಯನ್ನು ಮರುದಿನ ಕುಟ್ಟಣ್ಣ ನನಗೆ ಹೇಳಿದ. ಶ್ರೀ ಮಹಾಬಲೇಶ್ವರ ವೈದ್ಯರ ಮನೆಯವರೂ ಕೇಳಿಸಿಕೊಂಡರು. ಆ ನಿಗ್ರೋನನ್ನು ಕರೆದು ವೈದ್ಯರು ನೀನು ಹೀಗೆಲ್ಲಾ ಮಾಡುವುದೋ ಎಂದು ಗದ್ದರಿಸಿದರು. ಆದರೆ ಆಗುವುದು ಆಗಿ ಹೋಗಿತ್ತು! ಕುಟ್ಟಣ್ಣನಿಗೆ ದೃಷ್ಟಿತೆಗೆಸಿ ಉಪಚಾರ ಮಾಡಿದರು ವೈದ್ಯರು!!

ಹರಳೆಣ್ಣೆ ಪ್ರಿಯ ಕುಟ್ಟಣ್ಣ

****************

ಕುಟ್ಟಣ್ಣ ತಲೆಗೆ ತೆಂಗಿನ ಎಣ್ಣೆ ಹಾಕುತ್ತಿರಲಿಲ್ಲ! ಹರಳೆಣ್ಣೆ ಹಾಕಿ ತಲೆ ಬಾಚಿ ಕೊಳ್ಳುತ್ತಿದ್ದ! ತಲೆಗೆ ತಂಪು. ಕಣ್ಣಿಗೆ ಹಿತ. ಇದನ್ನು ಹಾಕಿಕೊಂಡರೆ ಆಯುಷ್ಯವೂ ವೃದ್ಧಿಸುತ್ತದೆ ಎನ್ನುವುದು ಕುಟ್ಟಣ್ಣನ ಬಲವಾದ ನಂಬಿಗೆ. ಶುಭ್ರವಸ್ತ್ರ ತೊಟ್ಟು ಸ್ವಲ್ಪ ಪೌಡರು ಮುಖಕ್ಕೆ ಬಳಿದು ಕೊಂಡರೆ ಅವನ ತಯಾರಿ ಮುಗಿಯಿತು.

ಏನೋ ಅವ್ಯಕ್ತ ಗೌರವ ನನಗೆ ಅವನ ಮೇಲೆ ಮೂಡಿತು. ಬಹುವಚನದಿಂದ ಏಕವಚನಕ್ಕೆ ನಮ್ಮ ಬಾಂಧವ್ಯ ತಿರುಗಿತು. ನನ್ನ ಮೇಲಿನ ವಾತ್ಸಲ್ಯದಿಂದ ಆತ ಅಂದು ನನ್ನ ಜೊತೆಯೇ ಇದ್ದ!

ಅಂದು ರಾತ್ರಿ ಯಲ್ಲಾಪುರದಲ್ಲಿ ಟಿ. ಎಸ್. ಎಸ್ ತಾಳಮದ್ದಲೆ. ಶ್ರೀ ಕೃಷ್ಣ ಭಾಗವತರು ಬಾಳೆಹದ್ದ ಅವರ ಭಾಗವತಿಕೆ. ಹಾಗೂ ಶ್ರೀ ದುರ್ಗಪ್ಪ ಗುಡಿಗಾರ ಅವರ ಮದ್ದಲೆ. ಯಲ್ಲಾಪುರದಲ್ಲಿ ಶ್ರೀ ಕೃಷ್ಣ ಭಾಗವತ ನಂದೊಳ್ಳಿಯವರ ಮೆರೆತದ ಕಾಲವದು. ಅವರು ಮಾಚವೈದ್ಯರ ಸ್ನೇಹಿತರೇ! ಅವರದು ಒಂದು ಅಡಿಕೆ ಮಂಡಿ ಇದ್ದಿತ್ತು! ತಾವು ಬೆಳೆದ ಅಡಿಕೆಯನ್ನೆಲ್ಲ ವೈದ್ಯರು ಅವರ ವಖಾರಿಗೇ ಹಾಕುವುದಾಗಿತ್ತು. ಅವರ ಅಧ್ಯಕ್ಷತೆ! ಪ್ರಸಂಗ ‘ಭೀಷ್ಮಾರ್ಜುನ’. ಹುಳಸೆಮಕ್ಕಿ ವೆಂಕಟ್ರಮಣ ಮಾಸ್ತರರ ಭೀಷ್ಮ. ಗೋಕರ್ಣದ ಪರಮೇಶ್ವರ ಭಟ್ಟ ಬೈಲಕೇರಿ ಕೃಷ್ಣ.

ಬಾಳೆಹದ್ದದವರು ಸಂಗೀತದ ಆಳ-ಎತ್ತರವನ್ನು ತಿಳಿದವರು. ಪಿಟಿಲು ವಾದಕರು. ದುರ್ಗಪ್ಪಣ್ಣ ಮದ್ದಲೆಯ ಜೊತೆ ಜೀವನೋಪಾಯಕ್ಕಾಗಿ ಕಾರೂ ಓಡಿಸುತ್ತಿದ್ದ! ಅಂದು ಅರ್ಥ ಕಡಿಮೆ. ಪದ್ಯವೇ ಹೆಚ್ಚು. ಸುಸು ಮಾಡಲೂ ದುರ್ಗಪ್ಪಣ್ಣನಿಗೆ ಪುರಸೊತ್ತು ಇರಲಿಲ್ಲ! ಕುಟ್ಟಣ್ಣನನ್ನು ಕರೆದು ಸುಸು ಮಾಡಿ ಬರುತ್ತೇನೆ, ಅಲ್ಲಿಯವರೆಗೆ ಬಾರಿಸು ಎಂದು ಎದ್ದು ಹೋದ. ಕುಟ್ಟಣ್ಣ ಮದ್ದಲೆ ಬಾರಿಸುತ್ತಿದ್ದಾಗ ನಂದೊಳ್ಳಿ ಭಾಗವತರು ದೊಡ್ಡದಾಗಿ ದುರ್ಗಪ್ಪ ಎಲ್ಲಿದ್ದೀಯೋ ಎಂದು ಕರೆದರು. ಬಾಳೆಹದ್ದದವರು ‘ಚೆನ್ನಾಗಿ ಬಾರಿಸುತ್ತಾನೆ’ ಎಂದರೂ ಕೇಳಲಿಲ್ಲ! ದುರ್ಗಪ್ಪಣ್ಣ ಓಡೋಡಿ ಬಂದ!

ನನಗೆ ಒಂದೆಡೆ ಸಿಟ್ಟು ಇನ್ನೊಂದೆಡೆ ನಗು! ದುರ್ಗಪ್ಪಣ್ಣ ಸುಸು ಮಾಡದೇ ಬಂದುದಕ್ಕೆ ನಗು. ಒಂದು ಪದ್ಯಕ್ಕೂ ಕುಟ್ಟಣ್ಣನನ್ನು ತಡೆದು ಕೊಳ್ಳಲಾಗಿಲ್ಲವಲ್ಲ ಎಂದು ಸಿಟ್ಟು.

ಕುಟ್ಟಣ್ಣನಿಗೆ ದುಃಖವೂ ಆಗಲಿಲ್ಲ! ಅವಮಾನವೂ ಆಗಲಿಲ್ಲ! ಎಂತಹ ಸ್ಥಿತಪ್ರಜ್ಞ! ನನ್ನಂಥವನ ಜೊತೆ ಮಾತ್ರ ಮನಬಿಚ್ಚಿ ಮಾತನಾಡುವವ. ಇನ್ನೊಬ್ಬರ ಜೊತೆ ಮಾತನಾಡುವುದೇ ಕಡಿಮೆ. ಮಾತನಾಡಿದರೂ ಇನ್ನೊಬ್ಬರಿಗೆ ಮನಸ್ಸಿಗೆ ನೋವಾಗುತ್ತಾ ಎಂದು ಯೋಚಿಸುತ್ತಲೇ ಮಾತನಾಡುವವ. ಒಂದು ನಮಸ್ಕಾರ. ಹೆಸರು ಗೊತ್ತಿದ್ದರೆ ಬಹುವಚನದಿಂದ ಕರೆಯುವುದು. ಹಸನ್ಮಖ ಇಷ್ಟು ಅವನ ದೈನಂದಿನ ಆಸ್ತಿ.

[ ಮುಂದುವರಿಯುತ್ತದೆ ]


ಅನಂತ ವೈದ್ಯ , ಯಲ್ಲಾಪುರ

17 views0 comments

Kommentare


bottom of page