ರವೀಂದ್ರರ ೧೬೦ ನೆಯ ಜನ್ಮದಿನದ ನೆನಪಿನಲ್ಲಿ
*************
ತಮ್ಮ ಗೀತಾಂಜಲಿಗೆ ನೋಬೆಲ್ ಪ್ರಶಸ್ತಿ ಪಡೆದ ರವೀಂದ್ರನಾಥ ಟಾಗೊರ್ ಅವರ ಕೆಲವು ಹನಿಗವನಗಳನ್ನು ನಮ್ಮ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರು ಕನ್ನಡಕ್ಕೆ ತಂದಿದ್ದಾರೆ. ಟಾಗೋರರ ,೧೬೦ ನೆಯ ಜನ್ಮ ದಿನದ ನಿಮಿತ್ತ ಅವರ ನೆನಪಿಗಾಗಿ ಅವರ " ಸ್ಪ್ರೇ ಬರ್ಡ್ಸ್" ದಿಂದ ಆಯ್ದ ಕೆಲ ಹನಿಗಳು.
*
ಹಕ್ಕಿ ಅಂದುಕೊಳ್ಳುತ್ತದೆ
" ನಾನು ಮೋಡವಾಗಬೇಕಿತ್ತು"
ಮೋಡಕ್ಕೆ ಅನಿಸುತ್ತದೆ
" ನಾನೊಂದು ಹಕ್ಕಿಯಾಗಬೇಕಿತ್ತು"
*
ಪ್ರೀತಿಯಲ್ಲಿ ಕಂಡುಕೋ ನಿನ್ನನ್ನು
ಸೌಂದರ್ಯವೆ,
ಕನ್ನಡಿಯ ಹೊಗಳಿಕೆಯಲ್ಲಲ್ಲ.
*
ಹೂವಿನಲ್ಲಿ
ನೆಲದ ಕಂಬನಿಗಳು
ತಮ್ಮ
ನಗೆಯನ್ನರಳಿಸುತ್ತವೆ.
*
"ಸಾಗರವೆ,
ಯಾವುದು ನಿನ್ನ ಭಾಷೆ?"
" ಚಿರಂತನ ಪ್ರಶ್ನೆ".
" ಓ ಆಗಸವೆ,
ಯಾವುದು ನಿನ್ನ ಭಾಷೆ?"
" ಚಿರಂತನ ಮೌನ".
*
ಬೇರುಗಳು
ಭೂಮಿಯಾಳದ ಟೊಂಗೆಗಳು
ಟೊಂಗೆಗಳು
ಗಾಳಿಯಲ್ಲಿನ ಬೇರುಗಳು.
*
ಮುಳುಗುತ್ತಿರುವ ಸೂರ್ಯ ಕೇಳಿದ-
" ಯಾರಿದ್ದಾರೆ ನನ್ನ ಕರ್ತವ್ಯ
ನೆರವೇರಿಸಲು?"
ನಮ್ರವಾಗಿ ನುಡಿಯಿತು
ಮೂಲೆಯ ಹಣತೆಯೊಂದು-
" ನನ್ನೊಡೆಯಾ,
ನನ್ನ ಕೈಲಾದಷ್ಟು
ನಾನು ಬೆಳಗಬಲ್ಲೆ"
ಸಂ.: ಎಲ್ಲೆಸ್ಸೆಸ್
Comments