ಕಾಲ ಕೆಲಸ !!
ಕೆಲೊರಿ ಕಡಿತಕ್ಕಾಗಿ
ಕ್ಲಿನಿಕ್ಕಾಧೀಶರ
ಕಟ್ಟು ನಿಟ್ಟಿನ ಕರೆ ..
ಕೊಡಿ ಹೆಚ್ಚು ಕೆಲಸ ಕಾಲಿಗೆ
ಬರಿದೆ ಕುಳಿತಿರದಿರಲಿ
ಕುಳಿತು ಕಾಯಿಸದಿರಲಿ
ಕಾದು ಕೊಬ್ಬು ಊದದಿರಲಿ
ಕಾಲು ಹೊತ್ತು ಓಡಾಡಲಿ ಕಾಯವನ
ಕಾಯುವವನಿದ್ದರೂ ನೀವೇ ಕಾಯಬೇಕು
ನಿಮ್ಮ ಕಾಯವ, ಜೊತೆಗೆ ಕಾಯಕವ ..
ತಪ್ಪಾರದು ? .. ಕಾಲಿನದೋ .. ಕಾಯದೋ ?
ಕಾಯವನ್ನು ಕಾಯ್ದುಕೊಳ್ಳದಿರುವವನದೋ ?
ಕಾಲು ಹೊರಟಿತು ಕೆರೆದಂಟಿನತ್ತ
ಮಣ ಕಾಯ ಹೊತ್ತು..
ಕಾಯದ ಹೊರೆ ಕರಗಿಸಲು ..
ಕಾಲು ಮುಂದೆ ಮುಂದೆ, ಜೊತೆಗೆ ಕಾಲವೂ
ಕಾಲು ಕಾಲ ಸಮವೇಗದಲಿ.. ಮುಂದೆ ಮುಂದೆ ..
ಕಾಲು ನಿಂತರೂ ಕಾಲ ನಿಲ್ಲಬೇಕಲ್ಲ ?
ಕೆಲ ಕಾಲವೂ ನಿಲ್ಲದು ಈ ಕಾಲ .. !!
ಕಾಲು ಚಲಿಸುತಿದೆ ಕಾಯವ ಹೊತ್ತು
ದಿನ ದಿನವೂ , ಕೆರೆದಂಡೆ ಗುಂಟ ..
ಕಾಲಗಳೂ ಬದಲಾದವು
ಕಾಯ ಕರಗುತಿಹುದು
ದಣಿದ ಕಾಲು ಹಗುರವಾಗಿಹುದು
ಮನವೂ ನಿರಾಳ
ಕಾಯ ಕರಗಿಸಿದ ಕಾಲಿಗೆ ಸಂತೃಪ್ತಿ
ಕಾಲ ಮುಂದೋಡಿದರೂ ,
ಕಾಲನನ್ನೂ ಮುಂದೋಡಿಸಬಹುದು !!
ಕಿರಣ ಅಂಕ್ಲೇಕರ
Commentaires