ಕೀಲಿಕೈ

ಬಿದ್ದು ಸಿಕ್ಕಿದ ಸಣ್ಣ ಕೀಲಿಕೈಯೊಂದು

ಆಹಾ! ಎಷ್ಟು ಚಂದ

ಮಣ್ಣು ಹಿಡಿದಿದ್ದರೂ

ಅದರ ಗತ್ತು ಗಾಂಭೀರ್ಯ

ತನ್ನಿಂದಲೇ ಜಗತ್ತು ನಡೆಯುತ್ತಿದೆ ಎಂಬ ಭಾವ

ವಾಸನೆಯ ಹಾಗೆ ಅಡಗಿದ್ದ ಅಹಂಕಾರ


ಎದ್ದು ಕಾಣುತ್ತಿತ್ತು

ರಾಜಮುದ್ರೆಯ ಪ್ರತಿಷ್ಠೆ

ಪದವಿಭ್ರಷ್ಠ ಮಂತ್ರಿಯ ದೊಡ್ಡಸ್ತಿಕೆ

ಮೂಗುತಿಯೆ ಭಾರವೆಂಬಂಥ ಅಹಮಿಕೆ

ತಿಜೋರಿಯೆ ಪಾಲಕನಾದಂಥ ವಜನು!


ಕೈಗೆ ಬಂದದ್ದೆ ತಡ

ಅದೆಂಥ ತೂಕ ವರ್ಚಸ್ಸು

ಮುದ್ದು ಸರಿವಂತಿಕ್ಕು ಫಾಲಾಕ್ಷ

ವರ್ಧಿಸುವಂತಿಕ್ಕು ತಿರುಗುವಕ್ಷ

ಮಾತುಮಾತಿಗು ಉಘೇ ಉಘೇ ಎಂಬ ಘೋಷವಾಕ್ಯ!


ನನ್ನ ಎಡಬಲ ಜನ

ನನ್ನ ಹಿಂದೆಯು ಜನ

ನಡೆದಲ್ಲೆಲ್ಲ ನಾನೇ ಸೂರ್ಯ-

ಗ್ರಹ ಸುತ್ತುವಂತೆ ಕೇಂದ್ರದ ಸುತ್ತ

ಸದಾ ದೇವೇಂದ್ರನಾದಂತೆ ಚಿತ್ತ


ಅರರೆ! ಎಲ್ಲಿಂದ ಬಂತಿದು ಮಾಯೆ

ಪ್ರಾಗೈತಿಹಾಸದ ಯಾವುದೋ ಚಕ್ರವರ್ತಿಯ ಛಾಯೆ

ಯಾವ ಟಂಕಸಾಲೆಯ ಟಂಕಿತ ನಾಣ್ಯ

ತುಘಲಕ ಔರಂಗಜೇಬರ ಪೆಠಾರಿಯ ಕೀಲಿಕೈ

ಮೌರ್ಯರ ಗ್ರೀಕರ ಅಥವಾ ಅಸ್ಸೀರಿಯನ್ನರ

ಮೇಲುಪ್ಪರಿಗೆಯ ಕೊಪ್ಪರಿಗೆಯ ಮೊಳೆ


ಈಗ ನಾನೇ ರಾಜ

ಈ ಸಮಸ್ತ ರಾಜ್ಯಕೋಶಗಳಿಗೆಲ್ಲ ನಾನೇ ಒಡೆಯ

ಬಂದಿದೆ ಕೈಗೆ ಅಟ್ಟೆಗಗ್ಗರ ಖಡ್ಗ

ಅಧಿಕಾರದ ಪೇಟಕಿರೀಟ!


ದಂಡ ಹಿಡಿಸಿದರು

ಅರದಾಳ ಎರಚಿದರು

ಬೆಂಕಿಯುಗುಳುತ್ತ ರಂಗಕ್ಕೆ ಬಂದಾಗ

ಕಿರುಚಿದ್ದೇನೆ, ಯಾರಲ್ಲಿ..


ಭಾಗವತರು ಮೆಲ್ಲನುಸುರಿದರು:

ನೀವೇ ರಾಜ ಈ ಭೂಮಂಡಲಕ್ಕೆ

ಮಣ್ಣುಹಿಡಿದಿರುವ ಈ ಕೀಲಿಕೈ

ಇನ್ನೊಬ್ಬರಿಗೆ ದಾಟುವ ವರೆಗೆ!


-ಡಾ. ವಸಂತಕುಮಾರ ಪೆರ್ಲ

36 views0 comments