top of page

ಕ್ರಿಯಾಶೀಲ ಪತ್ರಕರ್ತ ವೈ. ಎನ್. ಕೃಷ್ಣಮೂರ್ತಿ ( YNK)

ಇಂದು ಜನ್ಮದಿನ

***************************

ಬಹುಮುಖ ಆಸಕ್ತಿಯ ಕ್ರಿಯಾಶೀಲ ಪತ್ರಕರ್ತ

ವೈ. ಎನ್. ಕೃಷ್ಣಮೂರ್ತಿ ( YNK)

*****************†**********

ಫನ್ & ಪಂಚ್..

ಇದು ಪತ್ರಕರ್ತ ವೈಎನ್.ಕೆ. ಯವರ ವಿಶಿಷ್ಟ ಗುಣ. ಪತ್ರಿಕೆ, ಸಾಹಿತ್ಯ, ಸಿನಿಮಾ, ಸಂಗೀತ, ರಾಜಕೀಯ ಎಲ್ಲದರಲ್ಲೂ ಅವರ ಆಸಕ್ತಿ. ಎಲ್ಲ ಕ್ಷೇತ್ರಗಳ ಜನರೊಡನೆ ನಿಕಟ ಸಂಪರ್ಕ. ಶಬ್ದ ಚಮತ್ಕಾರಕ್ಕೆ ಹೆಸರಾದವರು. ಸಾಹಿತಿಗಳಿಗೆ ಪ್ರೇರಣೆ, ಸಂಗೀತಗಾರರಿಗೆ ಸ್ಫೂರ್ತಿ. ಸಿನಿಮಾಗಳ ಹೊಸ ಅಲೆಗೆ ಬೆಂಬಲ. ರಾಜಕೀಯ ನಾಯಕರಿಗೆ ಸಲಹೆ. ಹೀಗೆ ಅವರ ಕಾರ್ಯಕ್ಷೇತ್ರ ಹಲವು ರಂಗಗಳಿಗೆ ವ್ಯಾಪಿಸಿದ್ದು.

ವೈಎನ್ಕೆ ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಮುಳಂದೂರು ಹತ್ತಿರದ ಅಗರ್ ಎಂಬಲ್ಲಿ ೧೯೨೬ ಮೇ ೧೬ ರಂದು. ಮಹಾ ಜೀನಿಯಸ್. ಬಿಎಸ್ ಸಿ ಮಾಡಿ ಮೊದಲು ದೇಶಬಂಧು, ಛಾಯಾ ಮೊದಲಾದ ಪತ್ರಿಕೆಗಳಲ್ಲಿ ಕೆಲಸ ಮಾಡಿ ನಂತರ ಪ್ರಜಾವಾಣಿ ಬಳಗ ಸೇರಿ ಸಂಪಾದಕ ಹುದ್ದೆಯತನಕ ಹೋಗಿ ಆಮೇಲೆ ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ ಅವರು ತಾವಿದ್ದಲ್ಲೆಲ್ಲ ಪತ್ರಿಕೆಯ ಸಾಹಿತ್ಯಿಕ ಮೌಲ್ಯ ಹೆಚ್ಚಿಸಲು, ಯುವ ಪ್ರತಿಭಾವಂತ ಬರೆಹಗಾರರಿಗೆ ಉತ್ತೇಜನ ನೀಡಿ ಬೆಳಕಿಗೆ ತರಲು ಪ್ರಯತ್ನಿಸಿದರು.

ಭಾಷೆಯ ಮೇಲೆ ಅಸಾಧಾರಣ ಹಿಡಿತವಿದ್ದ ಅವರು ಶಬ್ದಗಳೊಡನೆ ಆಟವಾಡುವದನ್ನು ಇಷ್ಟಪಡುತ್ತಿದ್ದರು. ಅವರ wonder- ಥಂಡರ್, ವೊಂಡರ್- ಕಣ್ಣು, ವಂಡರ್- ಕಣ್ಣು, ವಂಡರ್ ಲ್ಯಾಂಪ್ ಮೊದಲಾದ ಅಂಕಣಗಳು ತುಂಬ ಜನಪ್ರಿಯವಾಗಿದ್ದವು. ಅವರ ಸುಮಾರು ೨೮ ಕೃತಿಗಳು ಹೊರಬಂದಿವೆ. ಅಡಿಗ, ಅನಂತಮೂರ್ತಿ, ಕಾರ್ನಾಡ, ಕಂಬಾರರ ಸಹಿತ ಹಲವರ ಒಡನಾಟವಿದ್ದ ಅವರು ನವ್ಯದ ಅಲೆಗೆ ಬೆಂಬಲವಾಗಿ ನಿಂತರು. ಹೊಸ ಅಲೆಯ ಸಿನಿಮಾಗಳ ನಿರ್ಮಾಣಕ್ಕೆ ಪ್ರೇರಣೆಯಿತ್ತರು. ( ವಂಶವೃಕ್ಷ, ಘಟಶ್ರಾದ್ಧ, ಸಂಸ್ಕಾರ, ಹಂಸಗೀತೆ, ಫಣಿಯಮ್ಮ ಇತ್ಯಾದಿ). ವಿಷ್ಣುವರ್ಧನ, ಅಂಬರೀಶ್, ಅನಂತನಾಗ ಶಂಕರ ನಾಗ ಮೊದಲಾದವರ ಕಲಾಯಾತ್ರೆಗೆ ಕಾರಣರಾದರು. ರಾಜಕೀಯ ರಂಗದಲ್ಲೂ ರಾಮಕೃಷ್ಣ ಹೆಗಡೆ, ಪಟೇಲ್, ನಜೀರಸಾಬ ಮೊದಲಾದ ನಾಯಕರು ಇವರ ಸಲಹೆ ಕೇಳುತ್ತಿದ್ದರು. ಅಂತಹ ಒಡನಾಟವಿತ್ತು.

ಬಾಲ್ಯದಲ್ಲೇ ಟಿ. ಪಿ. ಕೈಲಾಸಂ ರ ನಾಟಕಗಳೆಲ್ಲ ಅವರ ಬಾಯಲ್ಲಿದ್ದವಂತೆ. ಆ ಕಾಲಘಟ್ಟದ ಹಲವು ಬದಲಾವಣೆಗಳಿಗೆ ಅವರು ಸಾಕ್ಷೀಭೂತರಾಗಿದ್ದರು. ೧೯೯೯ ರ ಅಕ್ಟೋಬರ್ ೧೬ ರಂದು ಮದ್ರಾಸಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುವಾಗ ವಿಮಾನದಲ್ಲೇ ತೀವ್ರ ಹೃದಯಾಘಾತದಿಂದ ಅವರು ತಮ್ಮ ೭೩ ನೆಯ ವಯಸ್ಸಿನಲ್ಲಿ ನಿಧನ ಹೊಂದಿದರು.

ಅವರು ಹೇಗೆ ಶಬ್ದಗಳನ್ನು ಬಳಸುತ್ತ ಅಣಕು ಪದ್ಯ ಬರೆಯುತ್ತಿದ್ದರೆಂದರೆ ಅದಕ್ಕೊಂದು ಉದಾಹರಣೆ-

ಕರುಣಾಳು ಬಾ ಒಳಕೆ

ಮುಸುಕಿದೀ ಪಬ್ಬಿನಲಿ

ಕೈ ಹಿಡಿದು ಕುಡಿಸೆನ್ನನು...

( ಬಿಎಂಶ್ರೀ ಪದ್ಯದ ಅಣಕು).

- ಎಲ್. ಎಸ್. ಶಾಸ್ತ್ರಿ


9 views0 comments

Comments


bottom of page