top of page

ಕಾನೂನು ಭಯೋತ್ಪಾದನೆ [ಕಾನೂನು ಚಿಂತನ]


[ಜನರ ರಕ್ಷಣೆಗಾಗಿಯೇ ಕಾನೂನು ಎಂಬ ಪ್ರಕ್ರಿಯೆ ಜನ್ಮತಾಳಿದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕಾನೂನಿನ ಒಳಗಡೆ ಇರಬಹುದಾದ ದುರ್ಬಲ ಎಳೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಪೃವೃತ್ತಿ ಹಲವು ನೆಲೆಗಳಲ್ಲಿ, ಹಲವು ಕಾಲಗಳಿಂದ ನಡೆದು ಬಂದಿರುವುದು ಅಷ್ಟೇ ಸತ್ಯ. ಅದನ್ನು ಕಾನೂನು ಭಯೋತ್ಪಾದನೆಯೆಂದೇ ವ್ಯಾಖ್ಯಾನಿಸಲಾಗಿದೆ. ಈ ಅಂಶಗಳ ಕುರಿತು ಶ್ರೀ ರಾಮಕೃಷ್ಣರಾಜು ತೂದೂರು ಇವರು ವಿಶ್ಲೇ಼ಷಿಸಿರುವ ಈ ಲೇಖನ ತಮ್ಮ ಓದಿಗಾಗಿ – ಸಂಪಾದಕ]

*******


ಕಾನೂನು ಮತ್ತು ಭಯೋತ್ಪಾದನೆ ನೈಜ ಅರ್ಥದಲ್ಲಿ ಪರಸ್ಪರ ವಿರೋಧಾತ್ಮಕ ಧ್ವನಿಯನ್ನು ಅಭಿವ್ಯಕ್ತಿಸುವ ಶಬ್ದಗಳು. ಕಾನೂನು ಹುಟ್ಟಿದ್ದು ಸಮಾಜವನ್ನು ಕಾನೂನು ಬಾಹಿರ ಚಟುವಟಿಕೆಯಿಂದ ರಕ್ಷಿಸುವುದಕ್ಕಾಗಿ. ಕಾನೂನು ಎಂಬ ಅಸ್ತ್ರವು ನಾಗರಿಕ ರಕ್ಷಣೆಯ ಹರಿಕಾರನಾಗಿ ಅವನೊಂದಿಗೆ ಇದ್ದು ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಗಲೇ ಸಮಾಜ ನೆಮ್ಮದಿಯ ಉಸಿರಿಂದ ಜೀವಿಸಲು ಸಾಧ್ಯ.


ವಿರೋಧಾಭಾಸವೆಂದರೆ ಯಾವ ಕಾನೂನು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಜನ್ಮ ತಾಳಿತೊ ಅದೇ ಕಾನೂನು ಭಯಕ್ಕೆ ನೆರಳಾಗುವಂತೆ ಪರಿವರ್ತಿತವಾದರೆ ಅದನ್ನು ಯಾವ ಶಬ್ದದಿಂದ ಕರೆಯಬೇಕು? ಕಾನೂನಿನಡಿಯಲ್ಲಿ ಭಯದ ಛಾಯೆಯನ್ನು ಸೃಷ್ಟಿಸಿ ಜನ ಬದುಕುವಂತಾದರೆ ಅದೆಂತಹ ನ್ಯಾಯಯುತ ರಾಜ್ಯ ಸ್ಥಾಪಿಸಲು ಸಾಧ್ಯ? ಕಾನೂನಿನ ಅಡಿಯಲ್ಲಿ ನಿರಪರಾಧಿಗಳಿಗೆ ಅದ್ಹೇಗೆ ನ್ಯಾಯ ದೊರಕೀತು?. ಕಾನೂನಿನ ದುರುಪಯೋಗದ ಮೂಲಕ ನಿರಪರಾಧಿಗಳಿಗೆ ನೀಡುವ ಕಾನೂನು ಪ್ರಕ್ರಿಯೆಯನ್ನು ಕಾನೂನು ಭಯೋತ್ಪಾದನೆ ಎಂದು ಅರ್ಥೈಸಲಾಗುತ್ತಿದೆ.


ಕಾನೂನು ಮುಖ್ಯವಾಗಿ ನ್ಯಾಯ ನೀಡುವ ಉಪಕರಣ ಅಥವಾ ಸಾಧನ. ನ್ಯಾಯದಾನ ಸಮಾಜದ ಸುಸ್ಥಿರತೆಗೆ ಮತ್ತು ಪ್ರಗತಿಗೆ ಪೂರಕ. ಕಾನೂನು ಎಂಬುದು ನ್ಯಾಯ ವಿಲೇವಾರಿಗೆ ಅತ್ಯಂತ ಅವಶ್ಯಕ. ಅನ್ಯಾಯಯುತ ಕಾನೂನು ಕಾನೂನೇ ಅಲ್ಲ ಎಂಬ ಪ್ರಸಿದ್ಧ ಮಾತಿದೆ. [Law is essential for the administration of justice. Unjust law is no law at all.] ತಪ್ಪಿತಸ್ಥರಿಗೆ ಶಿಕ್ಪೆಯಾಗಲೇಬೇಕು, ಇದರಲ್ಲಿ ಎರಡು ಮಾತಿಲ್ಲ. ಆದರೆ ನಿರಪರಾಧಿಯು ಕಿರುಕುಳ, ಹಿಂಸೆ, ಬಂಧನ, ಸೆರೆವಾಸ, ಗಲ್ಲು ಶಿಕ್ಷೆಗೆ ಒಳಗಾಗಬಾರದು. ನ್ಯಾಯಾಲಯ ನಿರಪರಾಧಿಗೆ ರಕ್ಷಣೆ ನೀಡಬೇಕು. ಕಾನೂನು ಹಕ್ಕನ್ನು ನೀಡುವ ಬೆನ್ನಲ್ಲೆ ಕರ್ತವ್ಯವನ್ನೂ ಅಪೇಕ್ಷಿಸುತ್ತದೆ. ಅದರೆ ಹಕ್ಕಿನಡಿಯಲ್ಲಿ ಕಾನೂನಿನ ದುರುಪಯೋಗವೂ ಹುಟ್ಟಿಕೊಂಡು ಕಾನೂನು ಭಯೋತ್ಪಾದನೆಗೆ ಇಂಬುಗೊಟ್ಟಿರುವುದು ದೊಡ್ಡ ವಿಪರ್ಯಾಸ. ಈ ನೆಲದ ಮೂರು ಕಾನೂನುಗಳಾದ ಭಾರತೀಯ ದಂಡ ಸಂಹಿತೆ 1960 ರ 498 A, ಅಪರಾಧ ಸಂಹಿತೆ 41(1) [Cr PC], ಕಲಮು, ಕೌಟುಂಬಿಕ ದೌರ್ಜನ್ಯ ಕಾನೂನು [Domestic Violence Act 2005.] ವರದಕ್ಷಿಣೆ ನಿಷೇಧ ಕಾಯ್ದೆ, 1961 [Dowry Prohibition Act 1961] ರ ಅಡಿಯಲ್ಲಿ ಹಲವು ಸಂದರ್ಭಗಳಲ್ಲಿ ಕಾನೂನಿನ ದುರುಪಯೋಗಗಳು ಜರುಗಿ ನಿರಪರಾಧಿಗೆ ಭಯ ಹುಟ್ಟಿಸಿ ಭಯೋತ್ಪಾದನೆಗೆ ಕಾರಣವಾಗಿದೆ. ಈ ಮೂರು ಕಾಯ್ದೆಗಳ ದುರುಪಯೋಗ, ತಪ್ಪು ಬಳಕೆ ಭಯೋತ್ಪಾದಕ ಪ್ರವೃತ್ತಿಯ ಮತ್ತೊಂದು ಮುಖ. ಕಾನೂನಿನ ದುರುಪಯೋಗದಿಂದ ಆಘಾತಕಾರಿ ಪರಿಣಾಮ ನಿರಪರಾಧಿ ಪುರುಷರ ಮೇಲೆ ಅಗಿದ್ದು ಅವರು ನೋವು ಮತ್ತು ಸಂಕಷ್ಟ ಅನುಭವಿಸಿದ್ದು ನೋಡಿದಾಗ ಕಾನೂನು ಭಯೋತ್ಪಾದನೆಯ ಕಬಂಧ ಬಾಹುವಿನ ದರ್ಶನವಾಗುತ್ತದೆ. ನಮ್ಮ ನ್ಯಾಯಾಲಯ ಇದನ್ನು ಸರಿಪಡಿಸಲು ಶ್ರಮವಹಿಸಿದ್ದರೂ ಪೂರ್ಣ ಯಶಸ್ಸುಗಳಿಸಿಲು ಸಾಧ್ಯವಾಗದೆ ಇರುವುದು ದುರಂತವೇ ಸರಿ. ಹೆಣ್ಣುಮಕ್ಕಳ ಅತ್ಯಾಚಾರ ಪ್ರಕರಣ, ದೌರ್ಜನ್ಯ,ಲೈಂಗಿಕ ಅಪರಾಧ, ರೇಪ್, ಇತ್ಯಾದಿ ಜಾಸ್ತಿ ಯಾಗಿ 1983 ರಲ್ಲಿ ಭಾರತೀಯ ದಂಡ ಸಂಹಿತೆಗೆ ಹೊಸ ಕಲಮು 498 A ಸೇರಿಸಲಾಯಿತು. 2010 ರಲ್ಲಿ ಅಪರಾಧ ಸಂಹಿತೆಗೆ 41(1) ನನ್ನು ಸೇರಿಸಲಾಯಿತು. ಮದುವೆಯಾದ ಹೆಣ್ಣಿಗೆ ಅವಳ ಗಂಡ ಮತ್ತು ಆತನ ರಕ್ತಸಂಬಂಧದವರು ಮಾನಸಿಕ ಹಿಂಸೆ ನೀಡಿದರೆ, ದೈಹಿಕ ಅಥವಾ ಶಾರೀರಿಕ ಸಂಕಷ್ಟವನ್ನು ನೀಡಿದರೆ ಅದು ಅಪರಾಧ. ಇದು ಜಾಮೀನು ರಹಿತ ಅಪರಾಧ. ಅಂತಹ ಪರಕರಣದಲ್ಲಿ ಅಪರಾಧಗೈದ ವ್ಯಕ್ತಿಯನ್ನು ಬಂಧನಗೊಳಿಸಬಹುದು. ಅಷ್ಟೇ ಅಲ್ಲ ವಾರಂಟ್ ನೀಡದೆ ಅವನನ್ನು ಬಂಧಿಸಬಹುದು. ಅಂತಹ ಸಂದರ್ಭಗಳಲ್ಲಿ ನಿರೀಕ್ಷಣಾ ಜಾಮೀನು ಲಭ್ಯವಾಗುವ ಸಾಧ್ಯತೆ ತುಂಬ ವಿರಳ. ಸೆಕ್ಷನ್ 498 A ರ ಅಡಿಯಲ್ಲಿ ಕಠಿಣ ಶಿಕ್ಷೆಯನ್ನೂ ನ್ಯಾಯಾಲಯ ವಿಧಿಸಬಹುದಾಗಿದೆ. ಮೂರು ವರ್ಷ ಸೆರೆವಾಸ ಮತ್ತು ಜುಲ್ಮಾನೆಯನ್ನೂ ಸಹ ವಿಧಿಸಬಹುದು. ಸಮಾಜದ ಪಿಡುಗನ್ನು ಹೊರಹಾಕಲು ಕಠಿಣ ಶಿಕ್ಷೆ ನೀಡುವ ದೃಷ್ಟಿಯಲ್ಲಿ ಈ ರಕ್ಷಣೆಯನ್ನು ಸ್ತ್ರೀಗೆ ನೀಡಲಾಗಿದೆ.

ಮದುವೆ ಎನ್ನುವ ಶಬ್ದಕ್ಕೆ ಬೇರೆಯವರಿಗೆ ಹೊರತಾದ ಹೆಣ್ಣುಗಂಡುಗಳ ಸ್ವಯಂಪ್ರೇರಿತ ಒಕ್ಕೂಟ ಅಥವಾ ವೈವಾಹಿಕ ಸಂಬಂಧ ಎಂಬ ಅರ್ಥ ಹೊರಹೊಮ್ಮುತ್ತದೆ. [Marriage is a voluntary union for life of one man and òne woman to the exclusion of others.] ಹೆಣ್ಣು ದೇವತೆ; ಗೌರಿ ಸರಸ್ವತಿಯರಂತೆ ಪೂಜನೀಯರು, ಗೌರವಾನ್ವಿತರು. ಹೆಣ್ಣು ಅಂದರೆ ದೇವರಿಗೆ ನಾವು ತೋರುವ ಗೌರವ ಮತ್ತು ಭಕ್ತಿಯ ಸಂಕೇತ. ಅದಕ್ಕಾಗಿಯೇ ಹೆಣ್ಣು ಉಚ್ಛ ಸ್ಥಾನದಲ್ಲಿ ನಿಲ್ಲುತ್ತಾಳೆ. [ Woman, a symbol of respect and devotion to the gods and deserves highest honor and respect for the fairer sex.] ಹಾಗಿದ್ದರೂ ಕಳೆದ 25 ವರ್ಷಗಳಿಂದ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಹಿಂಸೆ ವರದಕ್ಷಿಣೆಯ ಸಾವು, ರೇಪ್ ಅನಾಚಾರ ಹೆಚ್ಚಾದ ಹಿನ್ನೆಲೆಯಲ್ಲಿ ವಿಧಿ 498 ನ್ನು ಭಾರತೀಯ ದಂಡ ಸಂಹಿತೆಗೆ ಸೇರಿಸಲಾಗಿದೆ. ಆದರೆ ಹೆಣ್ಣನ್ನು ದುಷ್ಟಶಕ್ತಿಗಳಿಂದ ರಕ್ಷಿಸುವ ಈ ಕಟ್ಟುನಿಟ್ಟಾದ ಕಾನೂನು ದುರುಪಯೋಗದ ಉಪದ್ರವಕ್ಕೆ ಎಡೆಮಾಡಿರುವುದು ನಿಜವಾಗಿಯೂ ದುರಂತವೇ ಸರಿ. ಒಬ್ಬರ ರಕ್ಷಣೆಯ ಅಡಿಯಲ್ಲಿ ಇನ್ನೊಬ್ಬ ಅಮಾಯಕರನ್ನು ಭಕ್ಷಿಸುವುದು ನಿಜವಾಗಿಯೂ ಖೇದದ ಮಾತಾಗಿದೆ. ವಿಧಿ 498 ರ ಅಡಿಯಲ್ಲಿ ಆರೋಪಿತನನ್ನು ವಾರೆಂಟ್ ಇಲ್ಲದೆ ಬಂಧಿಸಬಹುದಾಗಿದೆ. ಅಷ್ಟೇ ಅಲ್ಲಾ, ಇದು ಜಾಮೀನು ರಹಿತ ಅಪರಾಧ. ಹೆಂಡತಿಯು ಪೊಲೀಸರಿಗೆ ಅರ್ಜಿಸಲ್ಲಿಸಿದರೆ ಗಂಡ, ಮಾವ, ಅತ್ತೆ, ನಾದಿನಿ, ಭಾವ, ಮೈದುನ ಎಲ್ಲರನ್ನೂ ಬಂಧಿಸಬಹುದಾಗಿದೆ. ಇವರು ನಿರಪರಾಧಿಯಾದರೂ ಜೈಲಿನಲ್ಲಿ ಕೊಳೆಯಬೇಕು. ಅವಮಾನಿತನಾಗಿ ಗಂಡಸು ಕೆಲಸವನ್ನೂ ಕಳೆದುಕೊಳ್ಳಬಹುದು. ಹೆಣ್ಣಿನ ರಕ್ಷಣೆಯ ಕಾನೂನಿನ ನೆವದಲ್ಲಿ ಅದರ ದುರುಪಯೋಗ ಮೂಲಕ ಗಂಡಸಿಗೆ ನೋವು ಸಂಕಟಗಳು ಹೆಚ್ಚಾದ ಎಷ್ಟೋ ಪ್ರಕರಣಗಳು ಸಾಕ್ಷಿಯಾಗಿ ನಮ್ಮ ಮುಂದಿವೆ. ಅಮಾಯಕ ಗಂಡಸರಿಗೆ ಹಿಂಸೆ ಜಾಸ್ತಿಯಾಗುತ್ತಿರುವ ಘಟನೆಗಳು ಸಂಭವಿಸುತ್ತಿವೆ. ಕೆಲವು ಸಂದರ್ಭಗಳಲ್ಲಿ ಪೋಲೀಸರ ಅಧಿಕಾರ ಪಕ್ಷಪಾತ ಧೋರಣೆಯ ಮತ್ತು ಹೆಂಗಸರ ಪರವಾಗಿ ತನಿಖೆಯನ್ನು ಮಾಡಿದ ಪರಿಣಾಮವಾಗಿ ಇದು ಸಾರ್ವಜನಿಕ ಅಸಮಾಧಾನಕ್ಕೆ ಎಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಗಳು ನ್ಯಾಯಾಲಯದ ಬಾಗಿಲು ತಟ್ಟಿದ ಹಲವಾರು ಸನ್ನಿವೇಶಗಳು ನಮ್ಮ ಮುಂದೆ ಸಾಕ್ಷಿಯಾಗಿ ನಿಂತಿವೆ. ಇದರ ಪರಿಣಾಮವಾಗಿ ವಿಧಿ 498 ಅಸಂವಿಧಾನಿಕ, ಅದು ಸಂವಿಧಾನದ 14, 19 ಮತ್ತು 21 ಕ್ಕೆ ವಿರುದ್ದವಾಗಿದೆ ಎಂಬ ಕೂಗು ಹುಟ್ಟಿಕೊಂಡಿತು. ಆದರೆ ಅದನ್ನು ನ್ಯಾಯಾಲಯ ಒಪ್ಪಲೇ ಇಲ್ಲಾ. Inder Raj Malik Vs Sunita Malik, Sathyanarayn Vs Soundaravalli ಈ ಪ್ರಕರಣಗಳಲ್ಲಿ ಈ ವಿಷಯ ಪ್ರಸ್ತಾಪಿತವಾಗಿದೆ.. IPC 1860, DOMESTIC VIOLENCE ACT ಮತ್ತು Dowry Prohibition Act 1961 ರ ಪ್ರಕಾರ ಈ ಕಾನೂನು ಸರಿ ಇದೆಯೆಂದು ಊರ್ಜಿತ ಗೊಳಿಸಲಾಯಿತು. ಈ ಹಿಂದೆ ಜಸ್ಟೀಸ್ ಮಳೀಮಠ್ ರವರು ಈ ಬಗ್ಗೆ ಒಂದು ವಿಸ್ತೃತ ವರದಿ ಕೊಟ್ಟಿದ್ದರು. ಆದರೆ ಈ ವರದಿ ಕತ್ತಲೆಯ ಗರ್ಭದಲ್ಲಿ ಕೂತಿದೆ. ಸುಮಾರು 4 ಲಕ್ಷ ಕೇಸ್ ಗಳಲ್ಲಿ ಬಹುಮಂದಿ ನಿರಪರಾಧಿಗಳಾಗಿ ಬಿಡುಗಡೆ ಹೊಂದಿದ್ದಾರೆ. ಕೇವಲ 15% ಪ್ರಕರಣಗಳಲ್ಲಿ ಗಂಡಸರಿಗೆ ಶಿಕ್ಷೆಯಾಗಿದೆ. ಅಂದರೆ 85% ಆರೋಪಗಳು ಸುಳ್ಳು, ನಿರಾಧಾರ ಎಂಬುದು ಇದು ಸಾರುತ್ತದೆ. ಅನುಮಾನಾಸ್ಪದ ನಿಂದನೆಯ ಮೂಲಕ ಮದುವೆ ಎಂಬ ಸಂವೇದನಾಶೀಲ ಸಂಬಂಧವನ್ನು ಕೆಡಹುವ ದುಷ್ಟ ಮನಸ್ಸುಗಳೇ ಕಾನೂನಿನ ಭಯೋತ್ಪಾದನೆಗೆ ಕೆಂಪು ಹಾಸಿಗೆಯಿತ್ತು ಸ್ವಾಗತಿಸುವುದು ಕಾನೂನಿನ ಮೂಲಧರ್ಮವನ್ನೇ ನಾಶಗೊಳಿಸುವ ರಾಕ್ಷಸೀ ಧೋರಣೆಯಾಗಿಯೆಂಬುದು ಕ್ರೂರ ಸತ್ಯ.


ವರದಕ್ಷಿಣೆಯ ಸಾವು ಹೀನಾಯ ಅಪವಾದ. ಯಾರೂ ಇದನ್ನು ಬೆಂಬಲಿಸಬಾರದು. ಆದರೆ ಸಮನ್ವಯ ಇಲ್ಲದೆ ಗಂಡ ಹೆಂಡತಿಯ ಜಗಳ ಅತಿರೇಕ ಮಾಡಿ ಸಣ್ಣಪುಟ್ಟ ವಿವಾದವನ್ನು ಉಲ್ಬಣಗೊಳಿಸಿ ಅಮಾಯಕರಾದ ಗಂಡ, ವಯಸ್ಸಾದ ಅತ್ತೆ ಮಾವ ಮತ್ತು ರಕ್ತಸಂಬಂಧಿಯನ್ನು ಬಂಧಿಸಿ ಅವರಿಗೆ ಹಿಂಸಿಸುವದೂ ಅಲ್ಲಲ್ಲಿ ನಡೆಯುತ್ತಿರುವ ವಿದ್ಯಮಾನವಾಗಿದೆ. ಕಾನೂನಿನ ಅಸ್ತ್ರದಡಿಯಲ್ಲಿ ಎಸಗುವ ನೈಸರ್ಗಿಕ ಅಪರಾದ. Sushil Kumar Sharma vs Union of India 2005 6 SCC 266, Arnesh Kumar vs St of Bihar AIR 2003 SC 3828, ಆರೋಪಿತರ ಮೇಲೆ ಸುಳ್ಳು ಪ್ರಕರಣ ದಾಖಲಿಸಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ಅದಕ್ಕೆ ಪರಿಹಾರವನ್ನು ಸೂಚಿಸಿದೆ. ದಂಡಸಂಹಿತೆಯ ಸೆ.41(1) ರಲ್ಲಿ ಕೆಲವು ನಿರ್ದೇಶನ ನೀಡಿದ್ದು ಅದರನ್ವಯ ಪ್ರಥಮ ತನಿಖೆ ಮಾಡಬೇಕು. ಕೂಡಲೆ ಬಂಧಿಸಬಾರದು. ಕಾರಣಗಳನ್ನು ಕೂಡಲೆ ಆರೋಪಿಗೆ ತಿಳಿಸಬೇಕು. ನ್ಯಾಯವಾದಿ ಮಾತನಾಡಲು ಅವಕಾಶ ನೀಡಬೇಕು – ಮುಂತಾದ ಪ್ರಥಮ ಸಹಾಯದ ರೂಪದಲ್ಲಿ ಕೆಲವು ಸವಲತ್ತುಗಳನ್ನು ನೀಡಲಾಗಿದೆ. ರಾಜೇಶ ಕುಮಾರ ಪ್ರಕರಣದಲ್ಲಿ ಕೆಲವು ಶರತ್ತುಗಳನ್ನು ಅಳವಡಿಸುವಂತೆ ಆದೇಶಿಸಲಾಗಿದೆ. ಪೋಲೀಸರು ಕೂಡಲೆ ಬಂಧಿಸುವಂತಿಲ್ಲ. ದಂಡ ಸಂಹಿತೆಯ ಸೆ. 41(1) (a) ರಿಂದ (i) ರಲ್ಲಿ ಹೇಳಿದ ನಿರ್ದೇಶನಗಳನ್ನು ಪಾಲಿಸಬೇಕು. ಎಲ್ಲಾ ವಿವರಗಳನ್ನು ಮಾಜಿಸ್ಟ್ರೇಟ್ ಗೆ ತಿಳಿಸಬೇಕು ಮತ್ತು ನೋಟೀಸ್ ಕೊಟ್ಟು ತದನಂತರ ವಿಚಾರಣೆಮಾಡಬೇಕು. ಈ ರೀತಿಯಲ್ಲಿ ಪೋಲೀಸರು ನಡೆದುಕೊಳ್ಳದಿದ್ದರೆ ಅವರ ಮೇಲೆ Departmental enquiry ಮಾಡಬೇಕು. ಪೊಲೀಸರಿಗೆ ತನಿಖೆಗೆ ಸೂಕ್ತವಾದ ತರಬೇತಿ ಕೊಡಬೇಕು. ಈ ಶರತ್ತುಗಳನ್ನು ನ್ಯಾಯದಾನದ ವಿಧಿ ನಿರ್ವಹಣೆಯಲ್ಲಿ ತಪ್ಪದೇ ಪಾಲಿಸಬೇಕು. ಇಲ್ಲವಾದರೆ ಸುಪ್ರೀಮ ಕೋರ್ಟಿನ ದೇಶದಂತೆ ಇಲಾಖಾ ವಿಚಾರಣಾ ನಡೆಸಿ ಅಪರಾಧಿಗಳಿಗೆ ಶಿಕ್ಷೆ ನೀಡುವಂತಾಗಬೇಕು. ಈ ಸಂಬಂಧದಲ್ಲಿ ಹಲವಾರು ಅರ್ಜಿಗಳು ನ್ಯಾಯಾಲಯದಲ್ಲಿ ನಡೆಯುತ್ತಿವೆ. ಮತ್ತೊಂದು ಪ್ರಕರಣ Manav Adhikar & Anor vs Union of India 265/ 2017 ರಲ್ಲಿ ಸರ್ವೋಚ್ಛ ನ್ಯಾಯಾಲಯವು ಕೆಲವು ಮಾರ್ಗ ನಿರ್ದೇಶನಗಳನ್ನು ನೀಡಿದೆ. ಇವೆಲ್ಲ ಬೆಳವಣಿಗೆಯ ಅಡಿಯಲ್ಲಿ ಸೆ.498 ಎ ಗೆ ಸೂಕ್ತ ತಿದ್ದಪಡಿ ತರುವುದು ಸ್ವಾಭಾವಿಕ ನ್ಯಾಯದ ಹಿನ್ನೆಲೆಯಲ್ಲಿ ಅವಶ್ಯವೆಂಬ ಅಭಿಪ್ರಾಯ ಹಲವಾರು ಬಾರಿ ವ್ಯಕ್ತವಾಗಿದೆ. ಹೆಣ್ಣಿಗೆ ಯಾವುದೇ ಅನ್ಯಾಯವಾಗಬಾರದು. ಆದರೆ ಅದೇ ಹೊತ್ತಿನಲ್ಲಿ ಅಮಾಯಕ ಗಂಡಸರಿಗೆ ಅನ್ಯಾಯವಾದರೆ ಅದು ನ್ಯಾಯ ವಿಲೇವಾರಿಯಲ್ಲಿ ಕುರುಡು ನೀತಿ ಅನುಸರಿಸಿದಂತೆ. ತಪ್ಪು ಮಾಡಿದ ಪುರುಷನಿಗೆ ಶಿಕ್ಷೆ ದೊರಕುವಂತಾಗುವುದು ಸ್ವಾಬಾವಿಕ ನ್ಯಾಯ. ಆದರೆ ಅಮಾಯಕ ಗಂಡು ಕಾನೂನಿನ ಅಡಿಯಲ್ಲಿ ಹೆಣ್ಣಿನ ಸುಳ್ಳು ದೂರಿನಡಿಯಲ್ಲಿ ಶಿಕ್ಷೆಗೆ ಬಲಿಯಾಗಬಾರದು. ಅದಕ್ಕೆಂದೇ ಸೆ.498ಎ ಸೂಕ್ತ ತಿದ್ದುಪಡಿ ತಂದು ಸುಳ್ಳು ಆರೋಪ ಗೈದ ಹೆಣ್ಣಿಗೂ ಶಿಕ್ಷೆ ನೀಡುವದಕ್ಕೆ ಅವಕಾಶವಾಗಬೇಕು.

ಈ ಹಿನ್ನೆಲೆಯಲ್ಲಿ ಸರ್ವೋಚ್ಛ ನ್ಯಾಯಾಯಲಯವು ಕಾನೂನು ತಿದ್ದಪಡಿಯತ್ತ ಶಾಸಕಾಂಗಕ್ಕೆ ಸಲಹೆ ಸೂಚನೆ ನೀಡದೇ ಇರುವುದರ ಪರಿಣಾಮವಾಗಿ ಕಾನೂನು ಭಯೋತ್ಪಾದನೆಯ ಮೋಡ ಮುಸುಕಿದ ವಾತಾವರಣ ಮುಂದುವರಿದಿದೆ. ಭಾರತೀಯ ದಂಡ ಸಂಹಿತೆಯ ಕಲಮು 498ಎ, ಅಪರಾಧ ದಂಡ ಸಂಹಿತೆಯ ಕಲಮು 41(1) ಮತ್ತು Domestic Violence Act, 2005 ರ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳು ಕಾರ್ಯಗತವಾಗುವ ವರೆಗೆ ಕಾನೂನು ಭಯೋತ್ಪಾದನೆಯ ವಿರುದ್ಧದ ಕೂಗಿಗೆ ನ್ಯಾಯದ ಅಭಯಹಸ್ತ ಗಗನ ಕುಸುಮವಾಗಿಯೇ ಉಳಿಯುತ್ತದೆ.

-ರಾಮಕೃಷ್ಣ ರಾಜ್ ತೂದೂರುಶ್ರೀ ರಾಮಕೃಷ್ಣ ರಾಜ್ ತೂದೂರು ಇವರು ಮೂಲತಃ ತೀರ್ಥಹಳ್ಳಿ ತಾಲ್ಲೂಕಿನವರು. ನ್ಯಾಶನಲ್ ಲಾ ಕಾಲೇಜ್ ನಲ್ಲಿ ಕಾನೂನು ಪದವಿ ಪಡೆದ ನಂತರ ಅವರು ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸಹಾಯಕ ಪ್ರಧಾನ ಪ್ರಬಂಧಕ( ಕಾನೂನು) ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತದಲ್ಲಿ ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ನಡೆಸುತ್ತಿರುವ ಇವರು ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.-ಸಂಪಾದಕ

40 views1 comment
bottom of page