top of page

*ಕಾಡು ಸುತ್ತುವುದೆಂದರೆ...

ಹೆಂಡತಿ ಸುಜಾತ, 'ಈ ವರ್ಷ ನಮ್ಮನೆ ಮುರಗಲ ಮರಕ್ಕೆ ಕಾಯೇ ಬಂಜಿಲ್ಲೆ. ಬೆಟ್ಟದಲ್ಲಿ ಯಾವದಾದ್ರೂ ಮರಕ್ಕೆ ಬಂದಿತ್ತನ...' ಎಂದಾಗ ನನ್ನ ಬೆಟ್ಟ ತಿರುಗುವ, ಕಾಡು ಸುತ್ತುವ ಉಮ್ಮೇದು ಜಾಗೃತವಾಯಿತು. 'ಮರುಗದಿರು ಕಾಂತೆ...' ಎಂದು ಆಟದ ಡೈಲಾಗೊಂದನ್ನು ಹೊಡೆದು, ತಲೆಗೊಂದು ಪಾವಡ ಸುತ್ತಿಕೊಂಡು ಹೆಗಲಿಗೊಂದು ಬಟವೆ ನೇತಾಕಿಕೊಂಡು ಒಂದು ಕೈಲಿ ಕೊಕ್ಕೆ, ಇನ್ನೊಂದು ಕೈಲಿ ಕತ್ತಿ ಹಿಡಿದು ಥೇಟಾಥೇಟ್ ನನ್ನ ಕತೆಗಳಲ್ಲಿ ಬರುವ ಮರಾಟಿ ಟೀಕ್ರೂ, ಚಲವಾದಿ ಯಂಕೂರ ಜಾಪಿನಲ್ಲಿ ಹೊರಬಿದ್ದೆ. ನಮ್ಮ ಮನೆಯ ಆಸುಪಾಸಿನಲ್ಲಿ ಸಾಮಾನ್ಯ ಮಟ್ಟದ ಕಾಡೊಂದಿದೆ. ಮಂಗಗಳ ಆವಾಸಸ್ಥಾನ ಎಂಬ ಕಾರಣದಿಂದಲೋ, ಎರಡು-ಮೂರು ಮಹಾಮ್ಮೇರಿ ಕೊಡ್ಲುಗಳಿರುವ ನಾತೆಯಿಂದಲೋ ನಮ್ಮಿಡೀ ಪರಿಸರ 'ಮಂಗನಕೊಡ್ಲು' ಎಂದೇ ಅಭಿದಾನಿತವಾಗಿರುವುದು. ಮನೆ ಹಿಂದಿನ ಸಣ್ಣ ಕೊಡ್ಲನ್ನು ಹಾದು ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ ಕಾಯಂ ಆಗಿ ಕೊಯ್ಯುತ್ತಿದ್ದ ಜೋಡು ಮುರುಗಲು ಮರಗಳೆಡೆಗೆ ನನ್ನ ಗಮ್ಯ. ದೊಡ್ಡ ಕೊಡ್ಲು ಸಮೀಪಿಸಿದರೂ ಮುರುಗಲಯುಗ್ಮದ ದರುಶನವಿಲ್ಲ! ಹೆಂಡತಿಗೆ ಅಭಯ ನೀಡಿ ಬಂದದ್ದಾಗಿದೆ. ಉತ್ತರಕುಮಾರನಾಗದಿದ್ದರೆ ಸಾಕು ಎಂಬ ಅಳುಕು ಬೇರೆ ಹುಟ್ಟಿಕೊಳ್ಳಬೇಕೆ? ಒಂದು ಬೆಳಗ್ಗೆ ಏಳು-ಏಳೂವರೆಗೆ ಹೊರಟವನು ಕಾನನದಲ್ಲಿ ಸಾಮ್ರಾಜ್ಯವಾಗಿದ್ದ ಕೆಂದಿಗೆ, ಪರಿಗೆ, ಬಿದಿರು, ಚದರಂಗಿ ಇತ್ಯಾದಿ ಇತ್ಯಾದಿ ಮುಳ್ಳುಗಳನ್ನೂ ಹಳುಗಳನ್ನೂ ಓರೆ ಮಾಡಿಕೊಳ್ಳುತ್ತ ಜೋಡು ಮರಗಳನ್ನು ಕಾಣಿಸುವಷ್ಟರಲ್ಲಿ ಏಳು ಹನ್ನೊಂದಾಗಿತ್ತು! ಮರಗಳೇನೋ ಇದ್ದವು, ಮೊದಲಿಗಿಂತಲೂ ಬಿತ್ತರವಾಗಿಯೇ ಹೆರಳುಗಳನ್ನು ಚಾಚಿ ಚಪ್ಪರವಾಗಿದ್ದವು. ಆದರೆ ಹಣ್ಣುಗಳು? ಊಹೂಂ, ಒಂದೇ ಒಂದೂ ಇಲ್ಲ. ಮರದ ಚಪ್ಪರದಡಿಯಲ್ಲಿಯೇ ಅಂಡೂರಿ ಕುಳಿತು ಕವಳದ ಚಂಚಿ ಬಿಚ್ಚಿದೆ.


ಮೊದಲಿನಿಂದಲೂ ದಿನಗಟ್ಟಲೆ ಬರಿದೇ ಕಾಡು ಸುತ್ತುವುದರಲ್ಲಿ ಖುಷಿ ಕಾಣುವ ನನಗೆ ಮುರುಗಲ ಹಣ್ಣುಗಳು ಸಿಗದಿದ್ದುದರಿಂದ ಬೇಸರವೇನೂ ಆಗಿರಲಿಲ್ಲ. ಈ ಕಾಡು ಸುತ್ತುವುದಿದೆಯಲ್ಲ, ನನ್ನ ಪ್ರಕಾರ ಈ ದ್ಯಾವಾ ಪೃಥಿವಿಯಲ್ಲಿ ಇದು ಕೊಡುವಂಥ ಸತ್ ಚಿತ್ ಆನಂದವನ್ನು ಇನ್ನಾವುದೂ ಕೊಡಲಿಕ್ಕಿಲ್ಲ. ಸುಮ್ಮನೇ ಯಾವುದಾರೊಂದು ದಟ್ಟವಾದ, ಅಗಮ್ಯವಾದ ಕಾಡನ್ನು ಹೊಕ್ಕು ಸುತ್ತಿನೋಡಿ. ನಿಬಿಡ ಕಾಂತಾರದ ಏಕಾಂತದಲ್ಲೊಮ್ಮೆ ಪ್ರಕೃತಿಯ ಶಿಶುವಾಗಿ, ನಾನು, ತಾನು ಎಂಬ ಎಲ್ಲ ಅಹಮಿಕೆಗಳನ್ನೂ ಕಳೆದೊಮ್ಮೆ ಬೆತ್ತಲ ಮಗುವಾಗಿ... ಆಗ ತೆರೆದುಕೊಳ್ಳುತ್ತ ಹೋಗುತ್ತದೆ ನೋಡಿ ಹೊಸತೊಂದು ಲೋಕ! ಕವಳದ ಪ್ರಕ್ರಿಯೆಯನ್ನು ಜಾರಿಯಲ್ಲಿಡುತ್ತಲೇ ಕಟ್ಟೆಬಂದು ಸಮೂಲ ಒಣಗಿನಿಂತಿದ್ದ ಬಿದಿರು ಮೆಳೆಗಳತ್ತ ದೃಷ್ಟಿ ಹಾಯಿಸಿದೆ. ನನಗರಿವಿಲ್ಲದೆ ಸುಸ್ಕಾರವೊಂದು ನನ್ನ ಬಾಯಿಂದ ಹೊರಬಿತ್ತು. ಛೇ, ಬನವೆಲ್ಲ ತಾನೇ ತಾನಾಗಿದ್ದ ಬಿದಿರು ಹಿಂಡುಗಳೆಲ್ಲ ಸತ್ತೊರಗಿರುವಾಗ ಮುಂದೆ ಗತಿಯೇನು? 'ಇದು ಬಿದಿರು...' ಎಂದು ಯಾವುದನ್ನು ತೋರಿಸೋಣ? ಎಂಬ ಹತಾಶ ಭಾವವೊಂದು ಮನೋಭಿತ್ತಿಯ ಮೇಲೆ ಹಾದು ಮರೆಯಾಯಿತು. ಕವಳ ಮೆದ್ದು ಬೇರೆಲ್ಲಾದರೂ ಮುರುಗಲ ಮರವನ್ನು ಅರಸೋಣವೆಂದುಕೊಂಡು ಕವಳ ತುಪ್ಪಲು ಅರುಗಾದೆ. ಎಲಾ ಪ್ರಕೃತಿಯ ಮಹಿಮೆಯೆ! ಸತ್ತುನಿಂತ ಬಿದಿರು ಮೆಳೆಯ ಸುತ್ತ ಅಂಗುಲದಷ್ಟೆತ್ತರದ ಭತ್ತದ ಅಗೆಯನ್ನು ಹರಡಿದಂತೆ ಬಿದಿರು ಸಸಿಗಳು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸೂಜಿಯ ಮೊನಚಿನಂತೆ ಎದ್ದು ನಿಂತಿವೆ! ಮಹರ್ಷಿ ಗೌತಮರಿಂದ ಬಡಕಲು ಗೋವುಗಳ ಮಂದೆಯೊಂದಿಗೆ ಅಡವಿಗೆ ಹೋದ ಜಾಬಾಲಿಯು ಅರಿತುಕೊಂಡ ಸೃಷ್ಟಿರಹಸ್ಯ ಇದೇ ಅಲ್ಲವೆ? ಹಳೆಯದರ ನಾಶ ಹೊಸ ಸೃಷ್ಟಿಗೆ ಮೂಲ!


ಹೀಗೇ ಅಲೆಯುತ್ತ ಕಾನನದೊಂದಿಗೆ ಕಲೆಯುತ್ತ ಹೋಗಿ... ತರುಲತೆಗಳ ಮರ್ಮರ ನಾದ, ಗಿಡಗಂಟೆಯಾ ಕೊರಳೊಳಗಿಂದ ತೇಲಿ ಬರುವ ವಿಹಗ ವಿತಾನ, ಮಳೆಗಾಲವಾದರಂತೂ ತಲೆ ಚಿಟ್ಟುಹಿಡಿಸುವ ಮರಜಿರಲೆ, ಮಂಡೂಕ, ಗುಂಗಾಡುಗಳ ವಾದ್ಯಮೇಳ! ಗೊಂಡಾರಣ್ಯದಲ್ಲಿ ದಾರಿ ತಪ್ಪಿ ಅಲೆತೊಡಗಿದಾಗಲೇ ನಮ್ಮ ಬುದ್ಧಿವಂತಿಕೆ ಎಂಥದ್ದು, ನಮಗಿರುವ ಧೈರ್ಯವೆಷ್ಟು, ನಮ್ಮೊಳಗಿನ ಸಹನೆ, ಸಹಿಷ್ಣುತೆಗಳೆಷ್ಟು ಎಂಬೆಲ್ಲವೂ ಒರೆಗೆ ಹಚ್ಚಲ್ಪಡುತ್ತವೆ. ದಾಂಡೇಲಿಯ ನಿಬಿರಾಣ್ಯದಲ್ಲಿ ಹೀಗೆ ದಾರಿತಪ್ಪಿ ಭಯವಿಹ್ವಲಗೊಂಡು ಎಲ್ಲಿಗೋ ಹೋಗಬೇಕಾದವನು ಇನ್ನೆಲ್ಲಿಗೋ ಹೋದ, ಕಾಡುಪ್ರಾಣಿಗಳಿಗೆ ಬಾಡೂಟವಾಗುವೆನೆಂಬ ಭಯದಿಂದ ಒಪ್ಪತ್ತುಗಟ್ಟಲೆ ಮರಹತ್ತಿ ಕುಳಿತ ನೆನಪುಗಳು ನನ್ನಲ್ಲಿನ್ನೂ ಹಸುರಾಗಿವೆ. ಇಂತಹ ಸುತ್ತಾಟಗಳಲ್ಲಿಯೇ ನನಗೆ ಗುಂಡೊಳ್ಳಿ, ಗರಡೊಳ್ಳಿ, ಪುಟೋಳಿ, ಪ್ರಧಾನಿ ಇತ್ಯಾದಿ ಕಂಡು ಕೇಳರಿಯದಿದ್ದ ಕೊಪ್ಪಗಳ ದರ್ಶನವಾದದ್ದು. ಅಲೆದೂ ಅಲೆದೂ ಬಳಲಿ ಬೆಂಡಾಗಿ ಬಿಸಿಲೇರಿ ಬಾಯಾರಿದಾಗ ಮಲೆತು ನಿಂತ ಮಣಕು ನೀರೇ ಬಿಸ್ಲೇರಿ ವಾಟರ್ರು! ಕಾಗೆ ಕುಕ್ಕಿಬಿಟ್ಟ ಹಲಸಿನ ಹಣ್ಣೇ ಪಿಜ್ಜಾ-ಬರ್ಗರ್ರು! ಕಾಡಿನಿಂದ, ನಿಸರ್ಗದಿಂದ ಮನುಷ್ಯನು ಕಲಿಯಬೇಕಾದ ಪಾಠಗಳು ತುಂಬ ಇವೆ. ಅಂಕೋಲಾ ತಾಲ್ಲೂಕಿನ ಬ್ರಹ್ಮೂರು, ವಾಡಗಾರು ಮುಂತಾದ ಎಡೆಯ ನಿಸರ್ಗದಿಂದಲೂ ಪಾಠ ಕಲಿತದ್ದಿದೆ. ಕೇರಾಫ್ ಮಾಬಗೆ ಅಡವಿಯಾಗಿದ್ದ ಸಿದ್ದಿಯೊಬ್ಬನ ಮಗಳಿಗೆ ವಿದ್ಯಾರ್ಥಿ ವೇತನ ಕೊಡಿಸಲೋಸುಗ ಅವನ ಮನೆಯನ್ನರಸುತ್ತ ತಾಸುಗಟ್ಟಲೆ ನಡೆದೂ ನಡೆದೂ ಸುಸ್ತಾಗಿ ಇನ್ನೇನು ಹಿಂದಿರುಗಬೇಕೆಂದಿರುವಾಗ ಸಾಗವಾನಿ ಎಲೆಯ ಕೊಟ್ಟೆಯ ತುಂಬ ಚಗಳಿ ಮೊಟ್ಟೆಗಳನ್ನು ಹಿಡಿದು ನನಗಿಂತಲೂ ಕೆಂಪಾದ (ಕಪ್ಪಾದ?) ಹಲ್ಲುಗಳನ್ನು ತೋರುತ್ತ ನಿಂತ ಸಿದ್ದಿಯನ್ನೂ ಕಂಡಿದ್ದೇನೆ. ಹೀಗಾಗಿ ಕಾಡು ಸುತ್ತುವುದೆಂದರೆ... ಕಾಣದ ಲೋಕವೊಂದನ್ನು ಕಾಣಲು ಹೋದಂತೆ.... ಹಿಂದೆಂದೂ ಕಂಡು ಕೇಳಿರದ ನವೀನ ಅನುಭವಗಳಿಗೆ ನಮ್ಮನ್ನು ನಾವು ಒಡ್ಡಿಕೊಂಡಂತೆ...


- ಹುಳಗೋಳ ನಾಗಪತಿ ಹೆಗಡೆ

12 views0 comments

©Alochane.com 

bottom of page